Translate in your Language

Tuesday, July 29, 2014

ಟಿ. ಪಿ. ಕೈಲಾಸಂ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಜನನ: ಜುಲೈ 29, 1884- ನಿಧನ: 23 ನವೆಂಬರ್ 1946
ಕನ್ನಡಕ್ಕೊಬ್ಬರೇ ಕೈಲಾಸಂ” ಎಂಬುದು ಪ್ರಸಿದ್ಧ ಮಾತು. ಒಮ್ಮೆ ಕೈಲಾಸಂರ ಆತ್ಮೀಯರೂ, ಅಭಿಮಾನಿಯೂ ಆಗಿದ್ದ ಅ.ನ.ಕೃ ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರಿತು ಅವರು ಜಗತ್ತಿನ ನಾಟಕ ಸಾಹಿತ್ಯದಲ್ಲಿ ಶ್ರೇಷ್ಠ ವಿಡಂಬನಕಾರರ ಪೈಕಿ ಆರನೆಯ ಸ್ಥಾನದಲ್ಲಿದ್ದಾರೆ ಎಂದು ಹೇಳಿ, ಉಳಿದವರು ಮೊಲಿಯರ್, ಅರಿಸ್ಟೋಫೆನಿಸ್, ವಾಲ್ಟೇರ್, ಸ್ವಿಫ್ಟ್ ಹಾಗೂ ಬರ್ನಾಡ್ ಷಾ ಎಂದು ಬರೆದಿದ್ದರು. ಇದಕ್ಕೆ ಉದಾಹರಣೆಯಾಗಿ ಅವರು ಕೈಲಾಸಂ ಅವರ ‘ನಮ್ ಬ್ರಾಹ್ಮಣ್ಕೆ’, ‘ಟೊಳ್ಳುಗಟ್ಟಿ’, ‘ತಾಳೀ ಕಟ್ಟೋಕ್ಕೂಲೀನೇ?’, ‘ಬಂಡ್ವಾಳ್ವಿಲ್ಲದ ಬಡಾಯಿ’, ‘ಹೋಂರೂಲು’ ನಾಟಕಗಳ ಹಲವಾರು ಸನ್ನಿವೇಶಗಳನ್ನು ಉದ್ಘರಿಸುತ್ತಿದ್ದರು. 

ಕೈಲಾಸಂ ಅವರು ಈ ಲೋಕವನ್ನಗಲಿ ಸುಮಾರು ಏಳು ದಶಕಗಳೇ ಕಳೆದಿವೆ. ಅಂದರೆ ಇಂದಿನ ವೃದ್ಧರಲ್ಲೂ ಬಹಳಷ್ಟು ಜನ ಅವರ ಕಾಲದಲ್ಲಿ ಇರಲಿಲ್ಲ. ಹಾಗಿದ್ದರೂ ಕೈಲಾಸಂ ಅವರ ಕುರಿತ ಬರಹಗಳು, ಅವರು ಜೋಕುಗಳು, ಉತ್ಸಾಹ ಉಕ್ಕಿಸುವ ಪದ್ಯದ ಧಾಟಿಗಳು ಇವುಗಳೆಲ್ಲದರಿಂದ ಅವರು ಒಂದು ಪ್ರೀತಿಪಾತ್ರ ಕಥಾನಕವಾಗಿ ನಮ್ಮ ನಡುವೆ ಉಳಿದಿದ್ದಾರೆ. 

ಅಮರಶಿಲ್ಪಿ ಜಕ್ಕಣಚಾರ್ಯ

ಬೇಲೂರು, ಹಳೆಬೀಡು ಮತ್ತು ಸೋಮನಾಥಪುರಗಳ ವಾಸ್ತು ಶಿಲ್ಪ, ಮೂರ್ತಿಶಿಲ್ಪಗಳು ಎಷ್ಟು ಆಶ್ಚರ್ಯಕರವಾಗಿರುವವೋ, ಅಷ್ಟೇ ಆಶ್ಚರ್ಯಕರ ಶಿಲ್ಪಿ ಜಕ್ಕಣಚಾರ್ಯರ ಜೀವನ ಸಂಗತಿಗಳು. ಭಾರತದ ಶಿಲ್ಪಿಗಳು ವೈಯುಕ್ತಿಕ ಅಭಿವೃದ್ದಿ, ಹಣ ಮತ್ತು ಕೀರ್ತಿಗಳಾಸೆಗೆ ಎಂದೂ ಒಳಗಾಗಿಲ್ಲ. ಹಾಗಂತಲೇ ಬಹಳ ಶಿಲ್ಪಿಗಳು ತಾವು ನಿರ್ಮಿಸಿದ ಶಿಲ್ಪಕೃತಿಗಳ ಮೇಲೆ ತಮ್ಮ ನಾಮ ಲಿಖಿತ ಬಳಸಿಕೊಂಡಿಲ್ಲ, ಕಾರಣವಿಷ್ಟೆ " ಮಾಡುವುದನ್ನು ಮಾಡಿಬಿಟ್ಟೆ" ಎಂಬ ತೃಪ್ತ ಮನೋಭಾವದ ಜೀವನವೇ ಅವರಿಗೆ ಬೇಕಾಗಿದ್ದಿತು. ಹೆಸರಿನ ಭ್ರಮೆ, ಕೀರ್ತಿ ಇವು ಅವರಿಗೆ ಅಮುಖ್ಯ.


ಶಿಲ್ಪದಲ್ಲಿ ಚಾರಿತ್ರಿಕ ಅಂಶವಿದೆ ಮತ್ತು ತಾದಾತ್ಮೆಯ ತಪಸ್ಸೂ ಇರುತ್ತದೆ ಶೀಲ+ಸಮಾಧೌ = ಶಿಲ್ಪ, ಕಾಯಾ, ವಾಚಾ, ಮನಸಾ ಪರಿಶುದ್ದತೆಯನ್ನು ಕಾಯ್ದುಕೊಂಡು ಶಿಲ್ಪ-ಕೆತ್ತನೆಯಲ್ಲಿ ತೊಡಗಿದಾಗ ಸಮಾಧಿ ಸ್ತಿತಿಯನ್ನ ತಲುಪಿಬಿಡುವ ಸಾಧ್ಯತೆಯ ಕಾರಣ ಶಿಲ್ಪಿ ಆಧ್ಯಾತ್ಮ ಸಾಧಕನಾಗಿಬಿಡುತ್ತಾನೆ. ಶಿಲ್ಪಿಯು ತನ್ನ ತಪ್ಪಸ್ಸಿನ ಶಕ್ತಿಯನ್ನೆಲ್ಲಾ ತಾನು ಕೆತ್ತುವ ಮೂರ್ತಿಯಲ್ಲಿ ಧಾರೆಯೆರೆದಿರುತ್ತಾನೆ, ಹಾಗಂತ ಆ ಮೂರ್ತಿ ವರ ನೀಡುವ ಶಕ್ತಿಯನ್ನು ಪಡೆದಿರುತ್ತದೆ ಅಂತಲೇ ಅರ್ಥ.

Monday, July 28, 2014

ಬಿ.ಆರ್. ಪಂತುಲು ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಜನನ: 1911 ಜುಲೈ 28 - ನಿಧನ: ಅಕ್ಟೋಬರ್ 8, 1974

“ಸ್ವಾಮಿ ದೇವನೆ ಲೋಕಪಾಲನೆ ತೇನಮೋಸ್ತು ನಮೋಸ್ತುತೆ” ಎಂದು ಮಕ್ಕಳಿಗೆ ಪಾಠ ಹೇಳಿಕೊಟ್ಟು ನಮಗೆ ಇಷ್ಟವಾಗಿರುವ ಮೇಷ್ಟರ ಹಾಗೆ ಇವರೂ ಕೂಡಾ ಎಂದು ಭಾವ ಹುಟ್ಟಿಸಿದ ‘ಸ್ಕೂಲ್ ಮಾಸ್ಟರ್’ ಎಂದೇ ಪ್ರಿಯರಾದ ಬಿ.ಆರ್. ಪಂತುಲು ಅವರು ಕನ್ನಡಿಗರಿಗೆ ಮಾತ್ರವಲ್ಲ, ದಕ್ಷಿಣ ಭಾರತ ಚಿತ್ರರಂಗಕ್ಕೇ ಒಂದು ಅವಿಸ್ಮರಣೀಯ ನೆನಪು. ಅವರು ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ಮಂತ್ರಿ ತಿಮ್ಮರಸುವಾಗಿ ಕಂಗೊಳಿಸಿದ ರೀತಿ ಅವಿಸ್ಮರಣೀಯವಾದುದು. “ಒಂದರಿಂದ ಇಪ್ಪತ್ತೊಂದರವರೆಗೆ ಜಂಜಾಟ, ಬಂಡಾಟ” ಎಂದು ಅವರ ಮೊದಲ ತೇದಿಯಲ್ಲಿ ಮೂಡಿದ ಹಾಡು, ಅಂದಿನ ಎಲ್ಲಾ ಮಧ್ಯಮ ಮತ್ತು ಕೆಳವರ್ಗದ ಜನಕ್ಕೆ ಇದು ನಮ್ಮ ಜೀವನವೇ ಎಂದು ಅನ್ವಯಿಸಿಕೊಳ್ಳುವಷ್ಟು ಪ್ರಖ್ಯಾತವಾಗಿತ್ತು. ಕರ್ಣನಂತಹವನಿಗೇ ಹೀಗಾಯಿತಲ್ಲಾ ಎಂದು ಸ್ವಯಂ ಕೃಷ್ಣನೇ ಶೋಕಿಸುವ ಈ ಸೃಷ್ಟಿಯ ಪರಿ ಆತ್ಮೀಯವಾಗಿತ್ತು. ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರ, ಬೆಳ್ಳಿತೆರೆಯ ಗಾರುಡಿಗರೆಂದೇ ಅವರು ಪ್ರಸಿದ್ಧಿ. 

Friday, July 25, 2014

ಎಚ್ ಎಲ್ ಎನ್ ಸಿಂಹ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ


ಜನನ:ಜುಲೈ 25, 1906


ಡಾ. ರಾಜ್ ಕುಮಾರ್ ಅಲ್ಲದೆ ಡಾ. ಜಿ.ವಿ.ಅಯ್ಯರ್, ನರಸಿಂಹ ರಾಜು, ರಾಜಾ ಸುಲೋಚನ, ಡಾ. ಹೊನ್ನಪ್ಪ ಭಾಗವತರ್, ರಾಜಾ ಶಂಕರ್, ಬಿ, ಹನುಮಂತಾಚಾರ್ ಇಂತಹ ಮಹಾನ್ ಪ್ರತಿಭೆಗಳ ಗಣಿಗಳನ್ನು ಸಹಾ ಸಿಂಹರು ಚಿತ್ರರಂಗಕ್ಕೆ ತಂದರು.

ಎಚ್ ಎಲ್ ಎನ್ ಸಿಂಹ ಅವರು ಜನಿಸಿದ್ದು ಜುಲೈ ೨೫, ೧೯೦೬ರ ವರ್ಷದಲ್ಲಿ. ಊರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿ ಗ್ರಾಮ. ತಂದೆ ನರಸಿಂಹಯ್ಯನವರು ಮತ್ತು ತಾಯಿ ಲಕ್ಷ್ಮಮ್ಮನವರು.

ಸಿಂಹರು ಶಾಲೆಯಲ್ಲಿ ಓದಿದ್ದಕ್ಕಿಂತ ರಂಗದಲ್ಲಿ ಕಲಿತದ್ದೇ ಹೆಚ್ಚು. ನಾಟಕ ಶೀರೋಮಣಿ ವರದಾಚಾರ್ಯರ ನಾಟಕ ಕಂಪನಿಯಲ್ಲಿ ಬಾಲನಟನಾಗಿ ಅಭಿನಯಿಸತೊಡಗಿದ ಅವರು ಭಕ್ತ ಮಾರ್ಕಂಡೇಯ ನಾಟಕದಲ್ಲಿ ಮಾರ್ಕಂಡೇಯನಾಗಿ ಅದ್ಭುತ ನಟನಾಕೌಶಲ ಪ್ರದರ್ಶಿಸಿದ್ದರು.

ಯುವಕರಾಗಿದ್ದ ಸಿಂಹ ಅವರು ತಾವೇ ಹಲವಾರು ನಾಟಕಗಳನ್ನು ಬರೆದು ಪ್ರಸಿದ್ಧ ರಂಗಭೂಮಿ ಕಲಾವಿದರಾದ ಮಹಮ್ಮದ್ ಪೀರ್ ಅವರೊಂದಿಗೆ ರಂಗಪ್ರದರ್ಶನಗಳಿಗೆ ಅಳವಡಿಸಿದರು. ಮುಂದೆ ಟೈಗರ್ ವರದಾಚಾರ್ಯರ ಕಂಪೆನಿಯನ್ನು ಸೇರಿದ ಸಿಂಹರು ಹಲವಾರು ಸಣ್ಣ ಸಣ್ಣ ಪಾತ್ರಗಳಲ್ಲಿ ಅಭಿನಯಿಸತೊಡಗಿದರು. ಈ ಈರ್ವರು ಸೇರಿ ಸ್ಥಾಪಿಸಿದ ಸಂಸ್ಥೆ 'ಚಂದ್ರಕಲಾ ನಾಟಕ ಮಂಡಳಿ'. ನಂತರದಲ್ಲಿ ಸಿ.ಬಿ. ಮಲ್ಲಪ್ಪ, ಗುರುಕರ್, ಗುಬ್ಬಿ, ಪೀರ್ ಮುಂತಾದ ನಾಟಕ ಕಂಪೆನಿಗಳಲ್ಲಿ ಸೇರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವುದರೊಂದಿಗೆ ಸಿಂಹರು ಪ್ರತಿಷ್ಟಿತ ನಟರಾಗಿ ಜನಪ್ರಿಯರಾದರು.

Thursday, July 24, 2014

ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಜನನ: 24 ಜುಲೈ, 1923 – ನಿಧನ:11 ಜುಲೈ, 1979
ಅಭಿನಯ ಹಾಸ್ಯದ ಮೂಲಕವೇ ಕನ್ನಡಚಿತ್ರ ರಸಿಕರನ್ನು ನಕ್ಕುನಗಿಸಿದ ಧೀಮಂತ ನಟ ನರಸಿಂಹರಾಜು. ಕನ್ನಡಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನರಸಿಂಹರಾಜು ಅವರು ಪ್ರಮುಖರು. 1926ರಿಂದ 1979ರವರೆಗೆ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ನರಸಿಂಹರಾಜು ಹಾಸ್ಯನಟರಾಗಿ ಎಷ್ಟರ ಮಟ್ಟಿಗೆ ಬೆಳೆದರೆಂದರೆ, ರಾಜ್ ಕುಮಾರ್ ನಾಯಕ ನಟರಾದರೆ, ಅವರ ಗೆಳೆಯನ ಪಾತ್ರಕ್ಕೆ ನರಸಿಂಹರಾಜು ಆಯ್ಕೆಯಾಗುತ್ತಿದ್ದರು. ನಾಯಕನ ಗೆಳೆಯ, ಸಹೋದ್ಯೋಗಿ, ಸಹಾಯಕ ಹೀಗೆ ಯಾವುದಾದರೂ ಒಂದು ಪಾತ್ರ ಸೃಷ್ಟಿಸಿ ನರಸಿಂಹ ರಾಜು ಅವರಿಗೆ ಅವಕಾಶ ನೀಡಲಾಗುತ್ತಿತ್ತು.

ನರಸಿಂಹರಾಜು ಅವರು ಹುಟ್ಟಿದ್ದು ತುಮಕೂರು ಜಿಲ್ಲೆ ತಿಪಟೂರಿನಲ್ಲಿ.  ಚಿಕ್ಕಪ್ಪನ ಪ್ರೋತ್ಸಾಹದಿಂದ ಚಿಕ್ಕಂದಿನಲ್ಲಿಯೇ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ಬಾಲನಟನಾಗಿ ಖ್ಯಾತಿ ಪಡೆದರು. 1954ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನರಸಿಂಹ ರಾಜು ನಟಿಸಿದ ಮೊದಲ ಚಿತ್ರ ಬೇಡರಕಣ್ಣಪ್ಪ. ರಾಜ್ ಕುಮಾರ್ ನಾಯಕ ನಟರಾದ ಮೊದಲ ಚಿತ್ರವೂ ಆದ ಬೇಡರ ಕಣ್ಣಪ್ಪದಲ್ಲಿ  ಕಾಶಿ ಪಾತ್ರದಲ್ಲಿ ಕಾಣಿಸಿಕೊಂಡ ನರಸಿಂಹ ರಾಜು ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

Friday, July 4, 2014

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹುಟ್ಟು ಹಬ್ಬದ ನೆನಪಿನಲ್ಲಿ

Goruru Ramaswamy Ayyengar
ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್  ಅವರು 1904ರ ಜುಲೈ 4ರಂದು ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಜನಿಸಿದರು.  ಅವರ ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷಮ್ಮನವರು.  ತಮ್ಮ ಹಳ್ಳಿಯಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಗೊರೂರರು ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧೀಜಿಯ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು.

 ಅನಂತರ ಅವರು ಗಾಂಧೀಜಿಯ ಆಶ್ರಮವನ್ನು ಸೇರಿ, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾದರು.  ಬಳಿಕ ಮದ್ರಾಸಿನ "ಲೋಕಮಿತ್ರ" ಮತ್ತು "ಭಾರತಿ" ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು.  ಹರಿಜನೋದ್ಧಾರ ಅದರ ಮುಖ್ಯ ಕಾರ್ಯವಾಗಿತ್ತು.   ಅದನ್ನು ಗೊರೂರರು ಶ್ರದ್ಧೆಯಿಂದ ನಿರ್ವಹಿಸಿದರು.  ಆಮೇಲೆ ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದ ಸಂಚಾಲಕರಾದರು.  ಅಲ್ಲಿಯೇ ಅವರ ಸಾಹಿತ್ಯ ಸೇವೆ ಮೊದಲಾಯಿತು.  1933ರಲ್ಲಿ ಗೊರೂರರು ತಮ್ಮ ಗ್ರಾಮಕ್ಕೆ ಮರಳಿ, ಮೈಸೂರು ಗ್ರಾಮ ಸೇವಾಸಂಘವನ್ನು ಸ್ಥಾಪಿಸಿ, ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರು.  1942ರ "ಚಲೇ ಜಾವ್" ಚಳವಳಿಯಲ್ಲಿ ಅವರು ಭಾಗವಹಿಸಿ, ತುರಂಗವಾಸವನ್ನು ಅನುಭವಿಸಿದರು.  ಸ್ವಾತಂತ್ರ್ಯ ಬಂದ ಮೇಲೆ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು.  ಅದು ಸ್ಥಾಪಿತವಾದ ಮೇಲೆ ಸುಮಾರು ಹನ್ನೆರಡು ವರ್ಷ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.  ಈ ಅವಧಿಯಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಅವರು ದುಡಿದರು.