Translate in your Language

Wednesday, November 27, 2013

ತೀ ನಂ ಶ್ರೀ ಅವರು ಹುಟ್ಟಿದ ದಿನದ ಸವಿ ನೆನಪಿನಲ್ಲಿ

Ti. Na.Srikanthaiah
(ನವಂಬರ್ ೨೬, ೧೯೦೬ - ಸಪ್ಟಂಬರ್ ೭, ೧೯೬೬) ಪ್ರೊಫೆಸರ್ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು, ಹಾಗೂ ಕನ್ನಡದ ಶ್ರೇಷ್ಠ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು. ಸೃಜನಶೀಲ ಲೇಖಕರಾಗಿದ್ದ ಅವರ ಸಂಶೋಧನಾತ್ಮಕ ಬರವಣಿಗೆಗಳಲ್ಲಿಯೂ ಕಾವ್ಯಸ್ಪರ್ಶವನ್ನು ಕಾಣಬಹುದಾಗಿತ್ತು. 

ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿದ್ದುದಲ್ಲದೆ ಕಲಾನಿಕಾಯದ ಡೀನ್ ಆಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಆಗಿದ್ದರು. 

ಅವರು ಆದರ್ಶ ಪ್ರಾಧ್ಯಾಪಕರು ಮತ್ತು ಶ್ರೇಷ್ಠ ವಾಗ್ಮಿಯೆಂದು ಪ್ರಸಿದ್ಧರಾಗಿದ್ದರು. ಇಂದು ಜೀವನದ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಜನ ಮೇಧಾವಿಗಳು ತೀ.ನಂ.ಶ್ರೀ ಅವರ ಶಿಷ್ಯರಾಗಿದ್ದವರು. ತೀ.ನಂ.ಶ್ರೀ ಅವರು ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ಛಂದಸ್ಸು, ಕಾವ್ಯ, ಪ್ರಬಂಧ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಂಥ ಸಂಪಾದನೆ ಮತ್ತು ಭಾಷಾವಿಜ್ಞಾನ - ಈ ವಿಷಯಗಳಲ್ಲಿ ವಿಶೇಷವಾದ ತಜ್ಞತೆಯನ್ನು ಪಡೆದಿದ್ದು, ಈ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ್ದಾರೆ.

Saturday, November 23, 2013

ಪಿ.ಶೇಷಾದ್ರಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

P Sheshadri

ಶೇಷಾದ್ರಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ ದಂಡಿನಶಿವರದಲ್ಲಿ 1963 ನವೆಂಬರ್ 23ರಂದು. 

ಇವರು ಈಗಾಗಲೇ ಏಳು ಚಿತ್ರಗಳನ್ನು ನಿರ್ದೇಶಿಸಿದ್ದು, ಈ ಏಳೂ ಚಿತ್ರಗಳೂ ರಾಷ್ಟ್ರಪ್ರಶಸ್ತಿ ಪಡೆದಿವೆ.

‘ಮುನ್ನುಡಿ' ಪಿ. ಶೇಷಾದ್ರಿ ಅವರು ನಿರ್ದೇಶಿಸಿದ ಮೊದಲ ಚಲನಚಿತ್ರ. 2000ದ ಇಸವಿಯಲ್ಲಿ ತೆರೆಗೆ ಬಂದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಹು ಚರ್ಚಿತವಾದ ಚಿತ್ರ. ರಾಷ್ಟ್ರಮಟ್ಟದಲ್ಲಿ ಎರಡು, ರಾಜ್ಯಮಟ್ಟದಲ್ಲಿ ಆರು ಪ್ರಶಸ್ತಿಗಳನ್ನು ಪಡೆದು, ಹಲವಾರು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಯಿತು.

ಮರುವರ್ಷವೇ ಬಂದ ಪ್ರಕಾಶ್ ರೈ ಅಭಿನಯದ `ಅತಿಥಿ' ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ಪಡೆಯಿತು.

2004ರಲ್ಲಿ ಬಂದ `ಬೇರು' ಮೂರನೇ ರಾಷ್ಟ್ರಪ್ರಶಸಿ ಪಡೆದು, ಸತತ ಮೂರು ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಎಂಬ ಖ್ಯಾತಿಗೆ ಕಾರಣವಾಯಿತು. ನಂತರ 2005ರಲ್ಲಿ ತೆರೆಗೆ ಬಂದ ಜಯಮಾಲ ನಿರ್ಮಾಣದ `ತುತ್ತೂರಿ' ಮಕ್ಕಳ ಚಿತ್ರ ಕೂಡ ರಾಷ್ಟ್ರಪ್ರಶಸ್ತಿ ಪಡೆಯಿತಲ್ಲದೆ, ಜಪಾನ್ ದೇಶದ ಟೋಕಿಯೋ ಚಿತ್ರೋತ್ಸವದಲ್ಲಿ `ಅರ್ಥ್‌ವಿಷನ್ ಪ್ರಶಸ್ತಿ' ಪಡೆಯಿತು.

Thursday, November 21, 2013

ಕನ್ನಡದ ಮೊದಲ ಕಾದಂಬರಿ "ಮಾಡಿದ್ದುಣ್ಣೋ ಮಹರಾಯ" ಬರೆದ "ಎಮ್ ಎಸ್ ಪುಟ್ಟಣ್ಣ" ಅವರ ಹುಟ್ಟಿದ ದಿನದ ಸವಿ ನೆನಪಿನಲ್ಲಿ


ಎಂ. ಎಸ್. ಪುಟ್ಟಣ್ಣ ಕನ್ನಡದ ಮುನ್ನಡೆಗಾಗಿ ದುಡಿದ ಹಿರಿಯ ಮಹನೀಯರಲ್ಲಿ ಒಬ್ಬರು. ಅವರು ಜನಿಸಿದ್ದು ನವೆಂಬರ್ 21, 1854ರಲ್ಲಿ. ಚಿಕ್ಕಮಗುವಾಗಿರುವಾಗಲೇ ತಾಯಿ ತೀರಿಕೊಂಡರು. ತಂದೆ ಜಿಗುಪ್ಸೆಯಿಂದ ಕಾಶಿಗೆ ಹೋಗಿ ಸನ್ಯಾಸಿಯಾದವರು ಮಗನನ್ನು ನೋಡಲು ಬರಲೇ ಇಲ್ಲ. ಬಂಧುಗಳ ಆಶ್ರಯದಲ್ಲಿ ಬೆಳೆದರು. ಅವರ ನಿಜ ನಾಮಧೇಯ ಲಕ್ಷ್ಮೀನರಸಿಂಹ ಶಾಸ್ತ್ರಿ. ಎಲ್ಲರೂ ಮಗುವಾಗಿದ್ದಾಗ ಪುಟ್ಟಣ್ಣ ಎನ್ನುತ್ತಿದ್ದುದು ಹಾಗೇ ಉಳಿಯಿತು. ಸಂಪ್ರದಾಯ ಕುಟುಂಬದ ಹಿನ್ನಲೆಯಲ್ಲಿ ವಿದ್ಯಾಬ್ಯಾಸದ ಪ್ರಾರಂಭ ಪಂತರ ಖಾಸಗಿ ಮಠಗಳಲ್ಲಿ ನಡೆಯಿತು. ಅನಂತರ ರಾಜಾ ಸ್ಕೂಲಿನಲ್ಲಿ (ಇಂದಿನದ ಮಹಾರಾಜಾ ಕಾಲೇಜು) ಎಫ್. ಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೋಲಾರದ ಪ್ರೌಢಶಾಲೆಯಲ್ಲಿ ಸಹೋಧ್ಯಾಪಕರಾಗಿ ನೇಮಕಗೊಂಡರು. ವೃತ್ತಿಯೊಂದಿಗೆ ಅಧ್ಯಯನಕ್ಕೂ ಮನಸ್ಸು ಕೊಟ್ಟು ಮದರಾಸಿನಲ್ಲಿ ಬಿ.ಎ. ಪದವಿ ಪಡೆದರು. ಮುಂದೆ ಅಧ್ಯಾಪಕ ಪದವಿ ಬಿಟ್ಟು ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ (ಈಗಿನ ಹೈಕೋರ್ಟಿನಲ್ಲಿ) ಭಾಷಾಂತರಕಾರರಾಗಿ ದುಡಿದರು. 1897ರಲ್ಲಿ ಅವರನ್ನು ಚಿತ್ರದುರ್ಗದ ಅಮಲ್ದಾರನ್ನಾಗಿ ನೇಮಿಸಲಾಯಿತು. ಮುಂದೆ ರಾಜ್ಯದ ಹಲವೆಡೆಗಳಲ್ಲಿ ಅಮಲ್ದಾರರಾಗಿ ಸೇವೆ ಸಲ್ಲಿಸಿದರು. ಬೆಂಗಳೂರಿನ ತೆರೆಗೆದಾರರ ಸಂಘಟಕರಾಗಿದ್ದ ಅವರು ಆ ದಿನಗಳಲ್ಲಿಯೇ ದಾಖಲೆಗಳನ್ನು ಕನ್ನಡದಲ್ಲಿ ಮೂಡಿಸಲು ಕಾರಣರಾದರು.

Monday, November 11, 2013

"ರಘು ದೀಕ್ಷಿತ್" ಎಂಬ ಅಪ್ರತಿಮ ಗಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳು

ಮೈಸೂರಿನಲ್ಲಿ ಹುಟ್ಟಿ ಬೆಳೆದ ಈ ಅದ್ಭುತ ಸಂಗೀತ ಮಾಂತ್ರಿಕ ಹುಟ್ಟಿದ್ದು ನವೆಂಬರ್ 11, 1974 ರಲ್ಲಿ
"ನಿನ್ನಾ ಪೂಜೆಗೆ ಬಂದೇ ಮಾದೇಶ್ವರಾ," ಎಂಬ ಹಾಡಿನಿಂದ ಕನ್ನಡಿಗರಿಗೆ ಪರಿಚಿತವಾದ ಕಂಚಿನ ಕಂಠದ "ರಘು ದೀಕ್ಷಿತ್" ಎಂಬ  ಅಚ್ಚ ಕನ್ನಡ ಪ್ರತಿಭೆ ನಮ್ಮ ರಾಜ್ಯ/ದೇಶದ ಗಡಿಗಳನ್ನು ದಾಟಿ ಈಗ ಅಂತರರಾಷ್ಟೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ತೋರಿಸಲು ಹೊರಟಿದ್ದಾರೆ. ಅವರು ಅನೇಕ ದೇಶಗಳಲ್ಲಿ ಈಗಾಗಲೇ ನಮ್ಮ ಕನ್ನಡದ "ಶಿಶುನಾಳ ಷರೀಫ"ರ ಹಾಡುಗಳನ್ನು ಪಾಶ್ಚಿಮಾತ್ಯ ಸಂಗೀತದ ಧಾಟಿಯಲ್ಲಿ ಪ್ರಚಾರ ಪಡಿಸಿದ್ದಾರೆ.