ಟಿ ಪಿ ಕೈಲಾಸಂ (1884 - 1946) ರ 133ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ
""ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ""
."ಕರ್ನಾಟಕ ಪ್ರಹಸನ ಪಿತಾಮಹ". ತ್ಯಾಗರಾಜ ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವನ್ನು ಆಯಾಮಗಳನ್ನು ತಂದು ಕೊಟ್ಟ ಹಿರಿಮೆ ಅವರದು.
ಬಾಲ್ಯ
ಕೈಲಾಸಂರವರು ತಮಿಳು ಮೂಲದ ಉನ್ನತ ಮಟ್ಟದ ಮನೆತನದಿಂದ ಬಂದವರು. ಅವರ ತಂದೆ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದ ಜಸ್ಟಿಸ್ ಪರಮಶಿವ ಅಯ್ಯರ್, ತಾಯಿ ಕಮಲಮ್ಮ. ಬೆಂಗಳೂರಿನಲ್ಲಿ ಹುಟ್ಟಿದ ಕೈಲಾಸಂ ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ವಿದ್ಯಾಭ್ಯಾಸ ನಡೆದುದು ಬೆಂಗಳೂರು, ಮೈಸೂರು, ಹಾಸನಗಳಲ್ಲಿ. ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದು ಮದರಾಸಿನ ಹಿಂದು ಹೈಸ್ಕೂಲಿನಲ್ಲಿ.