Translate in your Language

Tuesday, February 18, 2014

ಎಂ. ಗೋಪಾಲಕೃಷ್ಣ ಅಡಿಗ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

(ಜನನ:18 ಫೆಬ್ರುವರಿ 1918 - ನಿಧನ:4 ನವಂಬರ್ 1992)
M Gopala Krishna Adiga
ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತಂತೆ. "ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಕೈ ಹಾಕಿದೆನೆಂದು ತೋರುತ್ತದೆ. ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದ ಪದ್ಯಗಳನ್ನು ರಚಿಸುತ್ತಿದ್ದೆ" ಎಂದು ಅವರೇ ಹೇಳಿದ್ದಾರೆ.

ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಬಿ.ಎ.(ಆನರ್ಸ್), ಎಂ.ಎ.(ಇಂಗ್ಲೀಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಅವರು ಮೈಸೂರು ಶಾರದಾವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಬುಕ್ ಟ್ರಸ್ಟ್‌ನ ನಿರ್ದೇಶಕರಾಗಿ, ಸಿಮ್ಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದರು. ಐವತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಹಾಗೂ ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. "ಸಾಕ್ಷಿ" ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು.

Thursday, February 13, 2014

ಕ್ರಿಕೆಟ್ ದಿಗ್ಗಜ ಜಿ ಆರ್ ವಿಶ್ವ ನಾಥ್ ಅವರಿಗೆ 66ನೇ ಹುಟ್ಟು ಹಬ್ಬದ ಶುಭ ಹಾರೈಕೆಗಳು.

ಗುಂಡಪ್ಪ ರಂಗನಾಥ ವಿಶ್ವನಾಥರು ಹುಟ್ಟಿದ್ದು ಫೆಬ್ರವರಿ 12, 1949 ರಂದು ಭದ್ರಾವತಿಯಲ್ಲಿ. ಒಬ್ಬ ಬಡ ಮೇಷ್ಟರ ಮಗನಾಗಿ ಹುಟ್ಟಿದ ಈ ಹುಡುಗ ಕ್ರಿಕೆಟ್ಟಿನಂತಹ ಪೈಪೋಟಿಯ ಆಟದಲ್ಲಿ ಮುಂದೆ ಬಂದ ಎಂದರೆ ಅಂದಿನ ದಿನದಲ್ಲಿ ಕ್ರಿಕೆಟ್ ಆಟದಲ್ಲೂ ಇದ್ದ ಒಂದಷ್ಟು ನೈತಿಕತೆಯ ಬಗ್ಗೆ ಉಂಟಾಗುವ ಮೆಚ್ಚುಗೆಯ ಜೊತೆಗೆ ಈತನ ಆಟದಲ್ಲಿದ್ದ ಮೋಡಿ ಸಹಾ ಅದೆಷ್ಟು ಪ್ರಬಲವಾಗಿದ್ದಿರಬಹುದೆಂಬುದರ ಅಚ್ಚರಿ ಸಹಾ ಜೊತೆ ಜೊತೆಗೇ ಮೂಡುತ್ತದೆ. 

1969ರಲ್ಲಿ ನಾನು ಪುಟ್ಟವನಿದ್ದಾಗ ಇಡೀ ನನ್ನ ಸುತ್ತಲಿನ ಲೋಕವೇ ಆಸ್ಟ್ರೇಲಿಯಾದಂತಹ ಪ್ರಬಲ ತಂಡದ ಮುಂದೆ ನಮ್ಮ ಪುಟ್ಟ ಪೋರ ವಿಶ್ವನಾಥ ಕಾನ್ಪುರದಲ್ಲಿ ತನ್ನ ಮೊದಲನೇ ಟೆಸ್ಟಿನಲ್ಲೇ ಸೆಂಚುರಿ ಬಾರಿಸಿ, ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಗೆಲ್ಲುವುದನ್ನು ತಪ್ಪಿಸಿದ ಎಂದು ಕುಣಿದಾಡಿ ಹಬ್ಬ ಆಚರಿಸಿದ್ದು ಕಣ್ಣಿಗೆ ಕಟ್ಟಿದಂತಿದೆ. ಮುಂದೆ 1974-75ರಲ್ಲಿ ವೆಸ್ಟ್ ಇಂಡೀಜ್ ಭಾರತಕ್ಕೆ ಬಂದಾಗ ವಿಶ್ವನಾಥ್ ಆ ಸರಣಿಯ ಪೂರ್ತಿಯಾಗಿ ಏಕೈಕಿ ಎಂಬಂತೆ ಬ್ಯಾಟುಗಾರನಾಗಿ ನಿಂತು ಆಡಿದ ಆಟ ನಮ್ಮ ಜೀವಮಾನದಲ್ಲೇ ಚಿರಸ್ಮರಣೀಯ. ವಿಶಿ ಅವರು ಮದರಾಸಿನಲ್ಲಿ ಗಳಿಸಿದ ಅಜೇಯ 97ರನ್ನುಗಳು ಭಾರತದ ಒಟ್ಟು ಇನ್ನಿಂಗ್ಸ್ ಮೊತ್ತವಾದ 190ರನ್ನುಗಳಲ್ಲಿ ಸಿಂಹಪಾಲಾಗಿದ್ದು ಅದು ಭಾರತದ ವಿಜಯದ ಕಥೆ ಕೂಡಾ ಆಯಿತು. ವಿಸ್ಡೆನ್ ದಾಖಲಿಸಿರುವ ನೂರು ಪ್ರಮುಖ ಬ್ಯಾಟಿಂಗ್ ಪ್ರದರ್ಶನಗಳಲ್ಲಿ ಇದು 38ನೆಯ ಸ್ಥಾನ ಪಡೆದಿದ್ದು, ಸೆಂಚುರಿಯಲ್ಲದ ಬ್ಯಾಟಿಂಗ್ ಪ್ರದರ್ಶನದ ದೃಷ್ಟಿಯಲ್ಲಿ ಎರಡನೇ ಶ್ರೇಷ್ಠ ಆಟವೆನಿಸಿದೆ. ಅದೇ ಸರಣಿಯ ಅದರ ಹಿಂದಿನ ಟೆಸ್ಟಿನಲ್ಲಿ ಕೂಡಾ ಕಲ್ಕತ್ತೆಯಲ್ಲಿ ಶತಕ ಬಾರಿಸಿ ಭಾರತಕ್ಕೆ ವಿಜಯ ತಂದುಕೊಟ್ಟಿದ್ದರು ನಮ್ಮ ವಿಶಿ. ಕೊನೆಯ ಟೆಸ್ಟಿನಲ್ಲಿ ವಿಶಿ 95 ರನ್ನು ಗಳಿಸಿದರೂ ವೆಸ್ಟ್ ಇಂಡೀಜ್ 3-2ರಲ್ಲಿ ಭಾರತವನ್ನು ಸೋಲಿಸಿತು. ಹಾಗಿದ್ದಾಗ್ಯೂ ವಿಶಿ ಅವರ ಬ್ಯಾಟಿಂಗ್, ಚಂದ್ರು, ಪ್ರಸನ್ನರ ಶ್ರೇಷ್ಠ ಬೌಲಿಂಗ್, ಏಕನಾಥ ಸೋಲ್ಕರ್ ಅವರ ಕ್ಯಾಚಿಂಗ್, ಪಟೌಡಿ ಅವರ ಶ್ರೇಷ್ಠ ನಾಯಕತ್ವ ಮತ್ತು ವೆಸ್ಟ್ ಇಂಡೀಜ್ ತಂಡದಲ್ಲಿ ಅಂದಿದ್ದ ಶ್ರೇಷ್ಠ ಆಟಗಾರರಾದ ಲಾಯ್ಡ್, ಯಾಂಡಿ ರಾಬರ್ಟ್ಸ್, ವಿವಿಯನ್ ರಿಚರ್ಡ್ಸ್ ಮುಂತಾದ ಅತಿರಥ ಮಹಾರಥರ ತಂಡದ ದೃಷ್ಟಿಯಿಂದ ಅದೊಂದು ಮನಮೋಹಕ ಸರಣಿಯಾಗಿ ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನಿಂತಿದೆ.

Sunday, February 9, 2014

ಹುಣಸೂರು ಕೃಷ್ಣ ಮೂರ್ತಿ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

Born on 9th Feb 1914, Died on 13th Jan 1989
Hunsur Krishnamurthy
ಹುಟ್ಟಿದ್ದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ. ತಂದೆ ರಾಜಾರಾಯರು, ತಾಯಿ ಪದ್ಮಾವತಮ್ಮ. ತಾಯಿ ಹೇಳುತ್ತಿದ್ದ ಪೌರಾಣಿಕ ಕಥೆಗಳಿಂದ ಆದ ಪ್ರಭಾವ. ಹೈಸ್ಕೂಲಿಗೆ ಸೇರಿದ್ದು ಮೈಸೂರು. ಪಠ್ಯೇತರ ಚಟುವಟಿಕೆಗಳಲ್ಲೇ ಆಸಕ್ತಿ. ಸ್ಕೂಲ್ ಡೇ ಕಾರ್ಯಕ್ರಮದಲ್ಲಿ ನಾಟಕಾಭಿನಯಕ್ಕೆ ಪಡೆದ ೧೦೧ ರೂ. ಬಹುಮಾನ. ಓದಿಗಿಂತ ನಾಟಕದ ಕಡೆ ಹೆಚ್ಚಿನ ಗಮನ. ಬಣ್ಣದ ಗೀಳುಹತ್ತಿ ನಡೆದುದು ಮುಂಬಯಿಗೆ. ಚಿಕ್ಕಪುಟ್ಟ ಪಾತ್ರಗಳ ಜೊತೆಗೆ ‘ಬಾಲಗಂಧರ್ವ ನಾಟಕ ಸಭಾ’ದ ಕೃಷ್ಣರಾವ್ ಬಳಿ ಕಲಿತದ್ದು ಹಾಡುಗಾರಿಕೆ ಮತ್ತು ವಾದ್ಯ ಸಂಗೀತ. ಪೆಂಡಾರ್ ಕರ್, ಸರ್ ನಾಯಕ್ ಮುಂತಾದವರ ವೃತ್ತಿ ನಾಟಕ ಕಂಪನಿಯಲ್ಲಿ ಅಭಿನಯ ಕಲೆ ಮತ್ತು ನಾಟಕದ ಇತರ ವಿಭಾಗದ ಕೆಲಸ ಕಲಿಕೆ. ಪ್ರಸಿದ್ಧ ನಟನಟಿಯರಾದ ಅಶೋಕ್‌ಕುಮಾರ್, ದೇವಿಕಾರಾಣಿ, ವಿ. ಶಾಂತಾರಾಮ್, ಹಿಮಾಂಶು ರಾಯ್ ಮುಂತಾದವರೊಡನೆ ನಿಕಟ ಸಂಪರ್ಕ.

ಗರೂಡ ಸದಾಶಿವರಾಯರ "ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಲಿ" ಗದಗ ಮುಂಬಯಿಗೆ ಬಂದಾಗ ಅಲ್ಲಿ ಪ್ರವೇಶ ಪಡೆದು ಅಭಿನಯಿಸಿದ್ದು ಹಲವಾರು ನಾಟಕಗಳು. ಪೀರ್ ಸಾಹೇಬರ ಚಂದ್ರಕಲಾ ನಾಟಕ ಮಂಡಲಿ ಕಂಪನಿಯಲ್ಲಿ ನಟ ಹಾಡುಗಾರರಾಗಿ ಗಳಿಸಿದ ಜನಮೆಚ್ಚುಗೆ. ವೀರ್ ಸಾಹೇಬರ ನಿಧನಾ ನಂತರ ಹೊತ್ತ ಕಂಪನಿಯ ಜವಾಬ್ದಾರಿ. ಗುಬ್ಬಿವೀರಣ್ಣನವರ "ಶ್ರೀ ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ನಾಟಕ ಸಂಘ"ದಲ್ಲಿ ನಟರಾಗಿ, ಸಾಹಿತಿಯಾಗಿ. ರಾಜಾಗೋಪಿಚಂದ್, ನಾಟಕದ ಸಂಭಾಷಣೆಯಿಂದ ಗಳಿಸಿದ ಖ್ಯಾತಿ. ರಾಜಮನ್ನಣೆಗಳಿಸಿದ ನಾಟಕ. ಟಿ.ಪಿ. ಕೈಲಾಸಂ, ಎಚ್.ಎಲ್.ಎನ್. ಸಿಂಹ ರವರುಗಳ ಸಮೀಪವರ್ತಿಯಾಗಿ ಗಳಿಸಿದ ಅನುಭವ. ಚಿತ್ರರಂಗದಲ್ಲೂ ದುಡಿಮೆ. ಹತ್ತಿದ ರಂಗಭೂಮಿ ಗೀಳಿನಿಂದ, ಭಾರತ ನಾಟಕ ಸಂಸ್ಥೆಯಲ್ಲಿ ಸಂಸಾರ ನೌಕದಲ್ಲಿ ನಟಿಸುತ್ತಲೇ ಧರ್ಮರತ್ನಾಕರ ನಾಟಕ ರಚನೆ. ಮತ್ತೊಂದು ಮಹೋನ್ನತ ನಾಟಕ ಗೌತಮ ಬುದ್ಧ ರಚನೆ.

Friday, February 7, 2014

ಜಿ. ಎಸ್. ಶಿವರುದ್ರಪ್ಪ. ಅವರ. ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

Born: 7 February1926, , Died on 23 December 2013
Dr. G S Shivarudrappa

ಜಿ ಎಸ್ ಶಿವರುದ್ರಪ್ಪ -(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ)(ಫೆಬ್ರುವರಿ ೭,೧೯೨೬ - ಡಿಸೆಂಬರ್ ೨೩, ೨೦೧೩) ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಜೊತೆಗೆ ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತಗಾರ. ಕುವೆಂಪು ಅವರ ಮೆಚ್ಚಿನ ಶಿಷ್ಯ. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ ೧,೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು.



ಓದು/ವಿದ್ಯಾಭ್ಯಾಸ
ಡಾ.ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗಜಿಲ್ಲೆಯ ಶಿಕಾರಿಪುರದ ಹತ್ತಿರವಿರುವ ಈಸೂರುಗ್ರಾಮದಲ್ಲಿ ಫೆಬ್ರುವರಿ ೭, ೧೯೨೬ ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.ತಾಯಿ ವೀರಮ್ಮ. ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳ ಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣವನ್ನು,ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ (೧೯೪೯) ಪದವಿ ಪಡೆದರು. ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಂ.ಎ. (೧೯೫೩) ಪ್ರ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು.

Wednesday, February 5, 2014

ಹಾ. ಮಾ. ನಾಯಕ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

Dr H M Naik with Goruru
ಡಾ. ಹಾ. ಮಾ. ನಾಯಕರ ಪೂರ್ತಿ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ಹಾಮಾನಾ ಎಂಬುದು ಅವರ ಕಾವ್ಯನಾಮ. ಅವರ ಒಟ್ಟು ಬದುಕಿನ ಕಾಯಕದಲ್ಲಿ, ಸಿಂಹಪಾಲು ಕನ್ನಡದ ಕೈಂಕರ್ಯಕ್ಕೆ, ಪರಿಚಾರಿಕೆಗೆ ಮೀಸಲು. ‘ಕನ್ನಡ ನನ್ನ ಮೊದಲ ಪ್ರೀತಿ, ಎರಡನೆಯ ಪ್ರೀತಿಯೂ ಅದೇ’ ಎಂಬುದು ಅವರ ನಿಲುವು. ಅವರ ಬದುಕು ಕೂಡ ಅಂತಹುದೆ.

ವಿಶಾಲ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ ಹಾರೋಗದ್ದೆ ನಾಯಕರ ಒಂದೇ ಮನೆಯ ಹಳ್ಳಿ; ಹುಟ್ಟಿದ್ದು 1931 ಫೆಬ್ರವರಿ 5. ತಾಯಿ-ತಂದೆ ಇಟ್ಟ ಹೆಸರು ಮಾನಪ್ಪ. ತಾಯಿ ರುಕ್ಮಿಣಿಯಮ್ಮ. ತಂದೆ ಶ್ರೀನಿವಾಸ ನಾಯಕ. ಅವರದು ರೈತಾಪಿ ಕುಟುಂಬ; ಪೂರ್ವದಿಂದಲೂ ವ್ಯವಸಾಯಗಾರರ ಮನೆತನ. ಪ್ರಾಥಮಿಕ ಓದು ಆಗುಂಬೆಯ ಹತ್ತಿರದ ನಾಲೂರಿನಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ಮೇಗರವಳ್ಳಿ, ಪ್ರೌಢಶಾಲೆ ಮುಗಿಸಿದ್ದು ತೀರ್ಥಹಳ್ಳಿ, ಇಂಟರ್ ಮೀಡಿಯಟ್ ಶಿವಮೊಗ್ಗ, ಬಿ.ಎ. ಆನರ್ಸ್ ಮೈಸೂರು ಮಹಾರಾಜ ಕಾಲೇಜು. ಕನ್ನಡ ಅಧ್ಯಾಪಕರಾಗಿ ತುಮಕೂರು, ಶಿವಮೊಗ್ಗಗಳಲ್ಲಿದ್ದು 1961ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸೇರಿದರು.