ಕನಕದಾಸರೆಂದರೆ ನೆನಪಾಗುವುದು ಸಂಗೀತದ ಮೂಲಕ ಕರ್ಣಾಮೃತ ಒದಗಿಸುವ ಅವರ ನೂರಾರು ರಚನೆಗಳು. ಮೊದಲು ಸಂಸಾರಿಯಾಗಿದ್ದ ಅವರ ಮೂಲ ಹೆಸರು ತಿಮ್ಮಪ್ಪ ನಾಯಕ. ಕನಕದಾಸರು ಹದಿನೈದು – ಹದಿನಾರನೇ ಶತಮಾನಗಳಲ್ಲಿದ್ದ ಜನಪ್ರಿಯವಾದ ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಪುರಂದರದಾಸರ ಸಮಕಾಲೀನರಾಗಿದ್ದು ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಅಮೂಲ್ಯ ಕಾಣಿಕೆಗಳನ್ನಿತ್ತವರು.
ಕನಕದಾಸರು ಜನಿಸಿದ್ದು ಧಾರವಾಡ ಜಿಲ್ಲೆಯ ಬಾಡ ಎಂಬಲ್ಲಿ. ನಂತರ ಕಾಗಿನೆಲೆಯಲ್ಲಿ ನೆಲೆಸಿದಂತೆ ತೋರುತ್ತದೆ. ಅದು ಈಗ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿದೆ. ಕನಕದಾಸರ ಕೀರ್ತನೆಗಳೆಲ್ಲವೂ ಕಾಗಿನೆಲೆಯ ಆದಿಕೇಶವನ ಅಡಿದಾವಾರೆಗಳಿಗೇ ಅರ್ಪಿತ. ಅವರು ತಮಗೆ ದೊರೆತ ನಿಧಿಯಿಂದ ಕಾಗಿನೆಲೆಯ ನರಸಿಂಹ ದೇವಾಲಯವನ್ನು ಜೀರ್ಣೋದ್ದಾರ ಮಾಡಿದರು. ಬಾಡ ಗ್ರಾಮದಲ್ಲಿದ್ದ ಆದಿಕೇಶವ ಮೂರ್ತಿಯನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಟಾಪನೆ ಮಾಡಿದರೆಂದು ತಿಳಿದು ಬರುತ್ತದೆ. ಈ ರೀತಿ ತಿಮ್ಮಪ್ಪ ನಾಯಕನಾಗಿದ್ದವರು ತಮಗೆ ದೊರೆತ ನಿಧಿಯಿಂದ ಕನಕನಾಯಕರೆಂಬ ಹೆಸರನ್ನು ಪಡೆದು ಮುಂದೆ ಕನಕದಾಸರಾಗಿ ಕಂಗೊಳಿಸಿದರು. ಕನಕರು ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ’ ಎಂದು ಎಲ್ಲ ಜಾತಿ ಪದ್ಧತಿಗಳ ಮೂಲವನ್ನೇ ಪ್ರಶ್ನಿಸಿದವರು. ಕನಕದಾಸರು ವ್ಯಾಸರಾಯರ ನೆಚ್ಚಿನ ಶಿಷ್ಯರೂ ಹೌದು.
ಕನಕದಾಸರು ರಚಿಸಿರುವ ನೂರಾರು ಕೀರ್ತನೆಗಳು ಮತ್ತು ಅವರ ಕಾವ್ಯಕೃತಿಗಳಾದ ‘ಮೋಹನತರಂಗಿಣಿ’, ‘ನಳಚರಿತ್ರೆ’, ‘ರಾಮಧಾನ್ಯಚರಿತ್ರೆ ಮತ್ತು ‘ಹರಿಭಕ್ತಿಸಾರ’ ಇವುಗಳು ಅಂದಿನಿಂದ ಇಂದಿನವರೆಗೆ ಜನಮಾನಸದಲ್ಲಿ ನಿರಂತರ ಗಂಗೆಯಾಗಿ ಹರಿದು ಬಂದಿದೆ. ಅವರ ಮತ್ತೊಂದು ಕಾವ್ಯಕೃತಿ ‘ನೃಸಿಂಹಸ್ತವ’ ಈಗ ಉಪಲಬ್ಧವಿಲ್ಲ.
ಕನಕದಾಸರ ಈ ಸುಂದರ ರಚನೆ ಅವರ ಅಗಾಧ ಪಾಂಡಿತ್ಯ ಮತ್ತು ಕೃತಿ ಸೌಂದರ್ಯಕ್ಕೊಂದು ಶ್ರೇಷ್ಠ ಉದಾಹರಣೆ.
ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೊ
ಬಯಲು ಆಲಯದೊಳಗೊ, ಆಲಯವು ಬಯಲೊಳೊಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ
ಕನಕದಾಸರ ಭಕ್ತಿ ಪ್ರೀತಿಗಳಿಂದ ಕಂಗೊಳಿಸುವ ಹಲವಾರು ಹಾಡುಗಳಲ್ಲಿ ಅತಿ ಜನಪ್ರಿಯವಾದ ಹಾಡು ‘ತಲ್ಲಣಿಸದಿರು ಕಂಡ್ಯ ತಾಳು ಮನವೆ’. ಈ ಹಾಡು ನೀಡುವ ಸಂದೇಶ ಹೃದಯದ ಕದವನ್ನು ತಟ್ಟುವಂತದ್ದು.
ತಲ್ಲಣಸಿದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆ
ಗಟ್ಯಾಗಿ ಸಲಹುವನು ಇದಕೆ ಸಂಶಯ ಬೇಡ
ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ
ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲಿಗೆ ಆಹಾರವಿತ್ತವರು ಯಾರೊ
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ಹೀಗೆ ಶ್ರೇಷ್ಠ ಭಕ್ತಪಂಥದ ಹಿರಿಮೆಯಲ್ಲಿ ಶಾಶ್ವತವಾಗಿ ನಿಲ್ಲುವಂತಹ ಕೀರ್ತನೆಗಳನ್ನು ನೀಡಿರುವ ಪೂಜ್ಯ ಕನಕದಾಸರು ನಮ್ಮ ಹೃದಯಗಳಲ್ಲೂ ಶಾಶ್ವತ ಸ್ಥಾನ ಪಡೆದವರಾಗಿದ್ದಾರೆ.
ಕನಕದಾಸರ ಕುರಿತ ಹತ್ತು ಹನ್ನೊಂದು ಕತೆಗಳಿದ್ದು ಆ ಕತೆಗಳನ್ನು ಬಹಳಷ್ಟು ವೇಳೆ ಜನರು ತಮ್ಮ ಹಿರಿಮೆಗಳಿಗಾಗಿಯೇ ಬಳಸಿಕೊಳ್ಳುವುದು ಹೆಚ್ಚಾಗಿರುವುದರಿಂದ, ಆ ಎಲ್ಲ ಕತೆಗಳ ಪರಿಧಿಯಾಚೆಗೆ ಅವರ ಸಾಹಿತ್ಯ ಕಾಯಕದಲ್ಲಿನ ಕೊಡುಗೆಯನ್ನು ಗುರುತಿಸುವುದು ನಾವು ಅವರಿಗೆ ಸಲ್ಲಿಸುವ ದೊಡ್ಡ ಗೌರವವಾಗುತ್ತದೆ.
No comments:
Post a Comment