ಅನಂತನಾಗ್ ಅನಂತಸಾಧ್ಯತೆಗಳ ಮೇರು ಕಲಾವಿದ. 1973ರ ವರ್ಷದ ‘ಸಂಕಲ್ಪ’ ಚಿತ್ರದಿಂದ ಮೊದಲ್ಗೊಂಡು ಇಂದಿನವರೆಗೆ ತೋರುತ್ತಾ ಬಂದಿರುವ ಪ್ರತಿಭೆ ಅಸಾಮಾನ್ಯವಾದದ್ದು.
ಅನಂತನಾಗ್ ಅವರು 1948ರ ಸೆಪ್ಟೆಂಬರ್ 4ರಂದು ಜನಿಸಿದರು. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಅವರ ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ ನಡೆಯಿತು. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು.
ಚಿತ್ರರಂಗದಲ್ಲಿ ಅವರಿವರನ್ನು ‘ಓ, ಅವರು ಪಂಚ ಭಾಷಾ ತಾರೆ ಎಂದು ಕೆಲವರನ್ನು ಕರೆಯುವುದುಂಟು’. ಅನಂತನಾಗ್ ಅವರ ಮುಂದೆ ಅದೆಲ್ಲಾ ಏನೂ ಲೆಕ್ಕಕ್ಕಿಲ್ಲ. ಅವರು ಸಪ್ತಭಾಷಾ ತಾರೆ. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿ ಎಲ್ಲೆಲ್ಲೂ ವಿಜ್ರಂಭಿಸಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ. ಅನಂತನಾಗ್ ಎಲ್ಲವನ್ನೂ ಸದ್ದುಗದ್ದಲವಿಲ್ಲದೆ ಮಾಡುತ್ತಾ ನಡೆಯುತ್ತಾರೆ.