ಬ್ರಿಟಿಷ್ ಪಾರ್ಲಿಮೆಂಟಿನ ಎದಿರು, ಥೇಮ್ಸ್ ನದಿಯ ದಡದಲ್ಲಿ ಐತಿಹಾಸಿಕ ಅಲ್ಬರ್ಟ್ ಎಂಬ್ಯಾಂಕ್ಮೆಂಟ್ ಮೇಲೆ ಸ್ಥಾಪನೆಯಾಗಲಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ 'ನಡೆದಾಡುವ ದೇವರು' ಎಂದೇ ಖ್ಯಾತಿ ಗಳಿಸಿರುವ ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿ ಅವರು ನಮನ ಸಲ್ಲಿಸಿದ್ದಾರೆ ಮತ್ತು ಪ್ರತಿಮೆ ಪ್ರತಿಷ್ಠಾಪನೆಗೆ ಶುಭಾಶಯ ಹೇಳಿದ್ದಾರೆ. ಹನ್ನೆರಡನೇ ಶತಮಾನದ ಕ್ರಾಂತಿಕಾರಿ ರಾಜಕಾರಣಿ ಅಣ್ಣ ಬಸವಣ್ಣನವರ ಮೂರು ಅಡಿ ಎತ್ತರದ ಕಪ್ಪು ಕಂಚಿನ ಸುಂದರ ಮೂರ್ತಿಯ ಪ್ರತಿಷ್ಠಾಪನೆಯ ಜವಾಬ್ದಾರಿ ಹೊತ್ತಿರುವ ಡಾ. ನೀರಜ್ ಪಾಟೀಲ್ ಅವರು, 22ನೇ ಏಪ್ರಿಲ್ ದಿನಾಂಕದಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿ 107 ವರ್ಷ ವಯಸ್ಸಿನ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಭೇಟಿ ಪ್ರತಿಷ್ಠಾಪನೆಯಾಗಬೇಕಾಗಿರುವ ಪ್ರತಿಮೆಯನ್ನು ಶ್ರೀಗಳಿಗೆ ತೋರಿಸಿದರು.
ವಿದೇಶದಲ್ಲಿ ಮೊಟ್ಟಮೊದಲ ಬಾರಿಗೆ ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪನೆಯಾಗುತ್ತಿದೆ. ಪುತ್ಥಳಿಯ ಗ್ರಾನೈಟ್ ಅಡಿಪೀಠ ನಿರ್ಮಿಸಲು ಲಂಡನ್ ಬರೋ ಆಫ್ ಲ್ಯಾಂಬೆತ್ ಪುರಸಭೆ 2012ರ ಏಪ್ರಿಲ್ 2ರಂದು ಅನುಮತಿ ನೀಡಿತ್ತು. ಗುಲಬರ್ಗ ಮೂಲದ ವೈದ್ಯ ಡಾ. ನೀರಜ್ ಪಾಟೀಲ್ ಅವರು ಲಂಡನ್ ಬರೋ ಆಫ್ ಲ್ಯಾಂಬೆತ್ನ ಮೇಯರ್ ಆಗಿದ್ದರು. [ಬ್ರಿಟನ್ನಿನಿಂದ ಬಸವೇಶ್ವರ ಮೂರ್ತಿ ಸ್ಥಾಪನೆಗೆ ಒಪ್ಪಿಗೆ] ಕಂಚಿನಿಂದ ತಯಾರಿಸಲಾಗಿರುವ ಬಸವಣ್ಣನ ಬೃಹತ್ ಪುತ್ಥಳಿಯನ್ನು ಸ್ಥಾಪಿಸಲು ಬ್ರಿಟನ್ನಿನ ಸಂಸ್ಕೃತಿ ಮಾಧ್ಯಮ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ಕೂಡ 2012ರ ಜುಲೈ ತಿಂಗಳಲ್ಲಿ ಅನುಮತಿ ನೀಡಿದ್ದಾರೆ. ಈ ಪ್ರತಿಮೆ ಸ್ಥಾಪನೆಗೆ ಬ್ರಿಟನ್ನಿನ ಎಲ್ಲ ಮತಬಾಂಧವರು ಸಹಕಾರ ತೋರಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಠದ ಅಧಿಕಾರಿ ವಿಶ್ವನಾಥ್, ಕಿರಿ ಸ್ವಾಮೀಜಿ ಸಿದ್ದಲಿಂಗ ಸ್ವಾಮೀಜಿ, ನೀಲಕಾಂತ್ ಕಲ್ಕಿ ಮತ್ತು ಬಿಎಸ್ ಪರಮಶಿವಯ್ಯ ಮುಂತಾದವರು ಉಪಸ್ಥಿತರಿದ್ದರು. ಲಂಡನ್ನಿನಲ್ಲಿ ಪ್ರತಿಮೆ ಸ್ಥಾಪನೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಜಗತ್ತಿನ ಅತಿ ಹಳೆಯ ಪ್ರಜಾಪ್ರಭುತ್ವ ಹೊಂದಿರುವ ಯುನೈಟೆಡ್ ಕಿಂಗಡಂನಲ್ಲಿ ಪ್ರಜಾಪ್ರಭುತ್ವದ ಕಲ್ಪನೆ ಹುಟ್ಟಿಕೊಳ್ಳುವ ಮೊದಲೇ 12ನೇ ಶತಮಾನದಲ್ಲಿ ತತ್ತ್ವಜ್ಞಾನಿ, ಕನ್ನಡ ಕವಿ ಬಸವೇಶ್ವರ ಅವರು ಪ್ರಜಾಪ್ರಭುತ್ವ, ಮಾನವ ಹಕ್ಕು, ಲಿಂಗ ಸಮಾನತೆಯನ್ನು ಬೆಂಬಲಿಸಿ ಕ್ರಾಂತಿ ಉಂಟುಮಾಡಿದ್ದರು ಎಂದು ಪಾರ್ಲಿಮೆಂಟಿನ ಸ್ಪೀಕರ್ ಜಾನ್ ಬರ್ಕೌ ಅವರು ಬಸವಣ್ಣನನ್ನು ಶ್ಲಾಘನೆ ಮಾಡಿದ್ದರು. 2012ರ ಜೂನ್ ತಿಂಗಳಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಲ್ಯಾಂಬೆತ್ಗೆ ಭೇಟಿ ನೀಡಿ, ಬಸವೇಶ್ವರನ ಮೂರ್ತಿ ಸ್ಥಾಪನೆಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಲಂಡನ್ನಿನಲ್ಲಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಲು ಇಲ್ಲಿನ ಕನ್ನಡಿಗರು ಶ್ರಮಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದರು.
ಕೊನೆಗೂ ಬಸವಣ್ಣ ನವರ ಈ ಪ್ರತಿಮೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದಲೇ ದಿನಾಂಕ ೧೪ನೇ ನವೆಂಬರ್ ೨೦೧೪ರಂದು ಪ್ರತಿಷ್ಠಾಪನೆಯಾಗುವುದರಲ್ಲಿ ಸಂಪನ್ನವಾಯಿತು