Translate in your Language

Monday, August 20, 2012

ಎಸ್.ಎಲ್. ಭೈರಪ್ಪನವರಿಗೆ ಜ್ಞಾನಪೀಠಕ್ಕೆ ಸಮಾನಾಂತರ ಸಮ್ಮಾನ

ಕನ್ನಡದ ಜನಪ್ರಿಯ ಕಾದಂಬರಿಕಾರ ಡಾ. ಎಸ್‌.ಎಲ್‌.ಭೈರಪ್ಪ ಅವರಿಗೆ 2010ನೇ ಸಾಲಿನ 'ಸರಸ್ವತಿ ಸಮ್ಮಾನ್‌' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಪ್ರಥಮ ಬಾರಿಗೆ 'ಸರಸ್ವತಿ ಸಮ್ಮಾನ್' ಪ್ರಶಸ್ತಿ ದೊರೆಕಿಸಿಕೊಟ್ಟ ಕೀರ್ತಿ ಈ ಮೇರು ಲೇಖಕರಿಗೆ ಸಲ್ಲುತ್ತದೆ.

ಭೈರಪ್ಪ ಅವರು 2002ರಲ್ಲಿ ಬರೆದ 'ಮಂದ್ರ' ಕಾದಂಬರಿಯನ್ನು ಸುಪ್ರೀಂಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಜಿಬಿ ಪಟ್ನಾಯಕ್ ನೇತೃತ್ವದ ಸಮಿತಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಮಾಡಿ ಕೆಕೆ ಬಿರ್ಲಾ ಫೌಂಡೇಶನ್‌ ಗೆ ಶಿಫಾರಸ್ಸು ಮಾಡಲಾಗಿತ್ತು.

ರಾಜ್ಯಸಭೆ ಸದಸ್ಯ ಕರಣ್‌ ಸಿಂಗ್‌ ಮತ್ತು ಕೆ.ಕೆ.ಬಿರ್ಲಾ ಪ್ರತಿಷ್ಠಾನದ ಅಧ್ಯಕ್ಷೆ ಶೋಭನಾ ಭಾರ್ತಿಯಾ ಅವರು ಭೈರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸರಸ್ವತಿ ಸಮ್ಮಾನ್ ಪ್ರಶಸ್ತಿ: ಈ ಪ್ರಶಸ್ತಿಯು 7.5 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. 25 ಭಾರತೀಯ ಭಾಷೆಗಳಲ್ಲಿ, ಕಳೆದ 10 ವರ್ಷಗಳಲ್ಲಿ ರಚಿತಗೊಂಡ ಕಾದಂಬರಿಗಳ ನಡುವೆ ಸ್ಪರ್ಧೆಯಿತ್ತು. ಅಂತಿಮವಾಗಿ 'ಮಂದ್ರ' ಕಾದಂಬರಿಯನ್ನು ಶ್ರೇಷ್ಠ ಕೃತಿಯಾಗಿ ಆರಿಸಲಾಗಿದೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಓದುಗರನ್ನು ಹೊಂದಿರುವ ಕಾದಂಬರಿಕಾರ ಎಂಬ ಖ್ಯಾತಿಯನ್ನು ಭೈರಪ್ಪ ಅವರು ಹೊಂದಿದ್ದಾರೆ. ಒಟ್ಟು 22 ಕಾದಂಬರಿ ರಚಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ 'ಕವಲು' ಕಾದಂಬರಿ 18 ಬಾರಿ ಮುದ್ರಣಗೊಂಡು ದಾಖಲೆ ಬರೆದಿದೆ.

ಸರಸ್ವತಿ ಸಮ್ಮಾನ ಪಡೆದ ಭೈರಪ್ಪ ಹೊರಳಿದ್ದು ಸಂತೇಶಿವರದ ಕಡೆಗೆ....
ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿ ಡಾ. ಎಸ್ ಎಲ್ ಭೈರಪ್ಪ ಅವರು ಮಾಡಿದ ಭಾಷಣ ಹೀಗಿದೆ...

ಮಾನ್ಯ ಡಾ. ಕರಣಸಿಂಹರೆ, ಕೆ.ಕೆ. ಬಿರ್ಲಾ ಪ್ರತಿಷ್ಠಾನದ ಅಧ್ಯಕ್ಷರೆ, ಅದರ ನಿರ್ದೇಶಕರಾದ ಭಟ್ಟಾಚಾರ್ಯರೆ, ನನ್ನ ಕಾದಂಬರಿ `ಮಂದ್ರ'ವನ್ನು 2010ರ ಸರಸ್ವತಿ ಸಮ್ಮಾನಕ್ಕೆ ಆರಿಸಿದ ಸಮಿತಿಗೆ ಧನ್ಯವಾದಗಳು.

ಹಾಗೆಯೇ ಮೊದಲಿನಿಂದಲೂ ಭಾರತದ ಹಲವಾರು ಭಾಷೆಗಳಲ್ಲಿ ನನ್ನ ಸಾಹಿತ್ಯ ಜೀವನದ ಬೆನ್ನೆಲುಬಾಗಿರುವ ಅಸಂಖ್ಯ ಓದುಗರಿಗೆ ನಾನು ಋಣಿಯಾಗಿದ್ದೇನೆ. ನನ್ನ ಜೀವನವನ್ನು ನೆನಸಿಕೊಳ್ಳದೆ ನನ್ನ ಸಾಹಿತ್ಯದ ಉಗಮ ಮತ್ತು ಬೆಳವಣಿಗೆಯನ್ನು ಕುರಿತು ಮಾತನಾಡುವುದು ಸಾಧ್ಯವಿಲ್ಲ.

ಕರ್ನಾಟಕದ ಒಂದು ಹಿಂದುಳಿದ ಹಳ್ಳಿಯ ತೀರ ಬಡತನದ ಕುಟುಂಬದಲ್ಲಿ ನಾನು ಹುಟ್ಟಿದೆ. ದುಡಿಮೆ ಮತ್ತು ಪಾಲನೆಗಳೆಲ್ಲ ನನ್ನ ತಾಯಿಯದಾಗಿತ್ತು. ತಂದೆಯು ಅತ್ಯಂತ ಬೇಜವಾಬ್ದಾರಿಯ ಮನುಷ್ಯ.

ನಾನು ಹತ್ತು ವರ್ಷದವನಾಗಿದ್ದಾಗ ನನಗೆ, ಹದಿನೈದು ದಿನದ ಹಿಂದೆ ಮದುವೆಯಾಗಿದ್ದ ಅಕ್ಕನಿಗೆ ಮತ್ತು ನನಗಿಂತ ಎರಡು ವರ್ಷಕ್ಕೆ ಹಿರಿಯನಾದ ಅಣ್ಣನಿಗೆ ಪ್ಲೇಗು ಬಡಿದು ಅವರಿಬ್ಬರೂ ಒಂದು ಗಂಟೆಯ ಅಂತರದಲ್ಲಿ ಸತ್ತುಹೋದರು. ಹೇಗೋ ನಾನು ಉಳಿದುಕೊಂಡೆ.

ಎರಡು ವರ್ಷಗಳ ನಂತರ ತಾಯಿಯೂ ಪ್ಲೇಗಿನಿಂದ ಸತ್ತಳು. ನಾನು ನಾಲ್ಕು ಮೈಲಿ ದೂರದ ಒಂದು ಊರಿನಲ್ಲಿ ವಾರಾನ್ನ ಮಾಡಿಕೊಂಡು ಓದನ್ನು ಮುಂದುವರೆಸಿದೆ. ನನಗೆ ಹದಿನಾಲ್ಕು ವರ್ಷವಾಗಿದ್ದಾಗ ನಾಲ್ಕು ವರ್ಷ ವಯಸ್ಸಿನ ತಂಗಿ ಕಾಲರಾದಿಂದ ಸತ್ತಳು.

ನನಗೆ ಹದಿನೈದು ವರ್ಷವಾಗಿದ್ದಾಗ ಆರು ವರ್ಷ ವಯಸ್ಸಿನ ನನ್ನ ತಮ್ಮನು ಗೊತ್ತಿಲ್ಲದ ಒಂದು ಕಾಯಿಲೆಯಿಂದ ಸತ್ತು ನಾನೇ ಅವನ ಹೆಣವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಒಯ್ದು ಊರಿನ ತೋಟಿಯ ಸಹಾಯದಿಂದ ಸೌದೆಯನ್ನು ಒಟ್ಟಿ ಅವನನ್ನು ಸುಟ್ಟು ಹತ್ತಿರದ ಒಂದು ತೋಟದ ಬಾವಿಯಲ್ಲಿ ಸ್ನಾನ ಮಾಡಿದೆ.

ಈ ಅನುಭವಗಳೆಲ್ಲ ನನ್ನಲ್ಲಿ ಸಾವು ಎಂದರೇನು? ಅದರ ಅರ್ಥವೇನು? ಅದು ಯಾಕೆ ಬರುತ್ತದೆ? ಎಂಬ ಪ್ರಶ್ನೆಗಳಾಗಿ ಕಾಡತೊಡಗಿದವು.

ನಾನು ಮೈಸೂರಿನಲ್ಲಿ ಇಂಟರ್‌ಮೀಡಿಯೆಟ್ ಓದುವಾಗ ತತ್ತ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಯಾಮುನಾಚಾರ್ಯರನ್ನು ಕಂಡು ನನ್ನ ಈ ಪ್ರಶ್ನೆಗಳನ್ನು ತೋಡಿಕೊಂಡೆ.

ಅವರು ಸಠೀಕಾ ಕಠೋಪನಿಷತ್ತಿನ ಕನ್ನಡ ಅನುವಾದದ ಒಂದು ಪುಸ್ತಕವನ್ನು ಕೊಟ್ಟು ಓದಲು ಹೇಳಿದರು. ಮುಂದೆ...

ಭೈರಪ್ಪ ಅವರ ದೃಷ್ಟಿಯಲ್ಲಿ ಸಾಹಿತ್ಯ ಎಂದರೆ ಏನು...?
ಎಷ್ಟು ಏಕಾಗ್ರತೆಯಿಂದ ಓದಿದರೂ ಅದು ನನ್ನ ಸಮಸ್ಯೆಗೆ ಉತ್ತರ ಕಾಣಿಸಲಿಲ್ಲ; ಯಮನು ನಚಿಕೇತನಿಗೆ ಬೋಧಿಸಿದ ಯಾವ ತತ್ತ್ವವೂ ಅರ್ಥವಾಗಲಿಲ್ಲ. ಪ್ರಾಧ್ಯಾಪಕರನ್ನು ಮತ್ತೆ ಕಂಡು ಇದನ್ನು ಹೇಳಿದಾಗ ಅವರು, "ಇವೆಲ್ಲ ತತ್ತ್ವ ಶಾಸ್ತ್ರವನ್ನು ಕ್ರಮವಾಗಿ ಅಧ್ಯಯನ ಮಾಡಿದರೆ ಮಾತ್ರ ಅರ್ಥವಾಗುವ ವಿಷಯಗಳು. ನೀನು ಬಿ.ಎ.ಗೆ ತತ್ತ್ವ ಶಾಸ್ತ್ರವನ್ನು ತೆಗೆದುಕೊ" ಎಂದರು.

ಹೀಗೆ ನಾನು ತತ್ತ್ವಶಾಸ್ತ್ರದಲ್ಲೇ ಬಿ.ಎ. ಮತ್ತು ಎಂ.ಎ.ಗಳನ್ನು ಮಾಡಿದೆ. ಹೀಗೆ ಒಟ್ಟು ಹನ್ನೆರಡು ವರ್ಷ, ವಿದ್ಯಾರ್ಥಿಯಾಗಿ ನಾಲ್ಕು ವರ್ಷ, ಅಧ್ಯಾಪಕ ಮತ್ತು ಸಂಶೋಧಕನಾಗಿ ಎಂಟು ವರ್ಷ, ತತ್ತ್ವ ಶಾಸ್ತ್ರದಲ್ಲೇ ಮುಳುಗಿದ್ದೆ.

ಅಷ್ಟರಲ್ಲಿ ನನಗೆ ಪ್ರಿಯವಾಗಿದ್ದ, ತತ್ತ್ವಶಾಸ್ತ್ರದ ಒಂದು ಶಾಖೆಯಾದ ಸೌಂದರ್ಯ ಮೀಮಾಂಸೆಯಲ್ಲಿ ಆಸಕ್ತಿ ಬೆಳೆದು ಸತ್ಯ ಮತ್ತು ಸೌಂದರ್ಯವನ್ನು ಕುರಿತು ಸಂಶೋಧನೆ ಮಾಡಿ ಅನಂತರ ಸೌಂದರ್ಯ ಮತ್ತು ನೀತಿಯ ಅಧ್ಯಯನದಲ್ಲಿ ತೊಡಗಿದೆ.
ಅಷ್ಟರಲ್ಲಿ ಎರಡು ವಿಷಯಗಳು ನನಗೆ ಅರಿವಾದವು.
(1) ಭಾರತ ಮತ್ತು ಪ್ರಾಚೀನ ಗ್ರೀಸ್‌ಗಳೆರಡರಲ್ಲೂ ವಿಶ್ವ ಅಥವಾ ಬ್ರಹ್ಮಾಂಡ ಮೀಮಾಂಸೆ, ಜ್ಞಾನಮೀಮಾಂಸೆ, ಮನಶ್ಶಾಸ್ತ್ರ ಮತ್ತು ನೀತಿ ಶಾಸ್ತ್ರಗಳನ್ನು ಒಳಗೊಂಡಿದ್ದ ತತ್ತ ಶಾಸ್ತ್ರವು ಆಧುನಿಕ ಕಾಲದಲ್ಲಿ ಅವುಗಳೆಲ್ಲವನ್ನೂ ಕಳಚಿಕೊಂಡಿವೆ.

ಖಭೌತ ವಿಜ್ಞಾನ, ಆಧುನಿಕ ಮನೋವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮಾನವ ಜನಾಂಗ ಶಾಸ್ತ್ರ, ನ್ಯಾಯಶಾಸ್ತ್ರ, ವೈದ್ಯ ವಿಜ್ಞಾನ, ತೌಲನಿಕ ಮತ ಧರ್ಮ ಶಾಸ್ತ್ರ ಮೊದಲಾದ ಜ್ಞಾನದ ಶಾಖೋಪಶಾಖೆಗಳ ಬೆಳವಣಿಗೆಯಿಂದ ತತ್ತ ಶಾಸ್ತ್ರವು ತನ್ನ ವ್ಯಾಪ್ತಿಯನ್ನು ಕಳೆದುಕೊಂಡು ಮೌಲ್ಯ ಮೀಮಾಂಸೆಗೆ ಅಡಕಗೊಂಡಿದೆ.

(2) ವೇದ ಮತ್ತು ಉಪನಿಷತ್ತುಗಳು ಭಾರತದ ತತ್ತ ಶಾಸ್ತ್ರಕ್ಕೆ ಆಧಾರವಾಗಿದ್ದರೂ ನಮ್ಮ ರಾಷ್ಟ್ರದ ಜೀವನಾದರ್ಶಗಳನ್ನು ಜಿಜ್ಞಾಸೆಗೆ ಒಳಪಡಿಸಿ ಅವುಗಳಿಗೆ ಮೂರ್ತಸ್ವರೂಪ ಕೊಟ್ಟದ್ದು ರಾಮಾಯಣ ಮಹಾಭಾರತಗಳು.

ವೇದಪಾರಮ್ಯವನ್ನು ತಿರಸ್ಕರಿಸುವ ಜೈನ ಬೌದ್ಧ ಧರ್ಮಗಳು ಕೂಡ ಉಪನಿಷತ್ತು ಯುಗಧರ್ಮದ ಜಿಜ್ಞಾಸೆಯಿಂದ ಹುಟ್ಟಿದವೇ. ಅವುಗಳು ಕೂಡ ತಮ್ಮವೇ ದೃಷ್ಟಿಯಲ್ಲಿ ರಾಮಾಯಣ ಮಹಾಭಾರತಗಳಿಂದ ಮೂರ್ತಗೊಂಡ ಮೌಲ್ಯಗಳನ್ನು ವಿನ್ಯಾಸಗೊಳಿಸಿಕೊಂಡವು.

ಇವುಗಳನ್ನು ಅರ್ಥಮಾಡಿಕೊಳ್ಳುವ ವೇಳೆಗೆ ನಾನು ನನ್ನ ಪ್ರಥಮ ಮಹತ್ತ ದ ಕೃತಿ 'ವಂಶವೃಕ್ಷ'ವನ್ನು ಬರೆದಿದ್ದೆ. ಈ ಸಾಹಿತ್ಯ ಸೃಷ್ಟಿಯ ಅನುಭವವು, ನಮ್ಮ ರಾಷ್ಟ್ರದ ಜೀವನಾದರ್ಶಗಳಿಗೆ ಮೂರ್ತ ಸ್ವರೂಪ ಕೊಟ್ಟದ್ದು ಸಾಹಿತ್ಯಕೃತಿಗಳಾದ ರಾಮಾಯಣ ಮಹಾಭಾರತಗಳು ಎಂಬ ಅರಿವಿನಲ್ಲಿ ಬೆರೆತು ಜೀವನದ ಅರ್ಥವನ್ನು ಹುಡುಕಲು ನನಗೆ ಸಾಹಿತ್ಯವೇ ತಕ್ಕ ಮಾಧ್ಯಮ.

ತರಗತಿಯಲ್ಲಿ ನಾನು ಪಾಠ ಮಾಡುತ್ತಿದ್ದ ಶುಷ್ಕ ಪಾಂಡಿತ್ಯದ ತತ್ತ್ವಶಾಸ್ತ್ರವಲ್ಲ ಎಂಬ ದಾರಿಯನ್ನು ತೋರಿಸಿತು.

ನಾನು ಬರೆಯಲು ಆರಂಭಿಸಿದಾಗಿನಿಂದ ಇದುವರೆಗೂ ಸಾಹಿತ್ಯ ನಿರ್ಮಿತಿಯು ಬದಲಾವಣೆ, ಆಧುನಿಕತೆ ಮತ್ತು ಹಿಂದುಳಿದವರನ್ನು ಮೇಲೆತ್ತುವ ಪ್ರಯತ್ನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು, ಹಾಗೆ ತೊಡಗಿಸಿಕೊಳ್ಳದ ಬರೆಹವು ಕೇವಲ ಬೂಸಾ ಎಂಬ ಒತ್ತಡವನ್ನು ಹಲವು ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳು ಹಾಕುತ್ತಿವೆ.
ಭೈರಪ್ಪ ಅವರ ದೃಷ್ಟಿಯಲ್ಲಿ ಸಾಹಿತ್ಯ ಎಂದರೆ ಏನು...?
ತತ್ತ್ವ ಶಾಸ್ತ್ರದ, ಅದರಲ್ಲೂ ಮೌಲ್ಯ ಮೀಮಾಂಸೆಯ ಹಿನ್ನೆಲೆಯುಳ್ಳ ನನಗೆ ಬದಲಾವಣೆ, ಆಧುನಿಕತೆ ಮತ್ತು ಹಿಂದುಳಿದವರನ್ನು ಮೇಲೆತ್ತುವ ಮೌಲ್ಯಗಳಲ್ಲಿ ನಂಬಿಕೆ ಇದೆ,

ಬದ್ಧತೆಯೂ ಇದೆ. ಆದರೆ ಸಾಹಿತ್ಯವೆಂಬ ಮೌಲ್ಯವನ್ನು ಈ ಬೇರೆ ಮೌಲ್ಯಗಳಿಗೆ ಅಡಿಯಾಳು ಮಾಡಿ ದುಡಿಸಹೊರಟರೆ ಸಾಹಿತ್ಯವು ಸಾಹಿತ್ಯವಾಗಿ ಉಳಿಯುವುದಿಲ್ಲ,

ಅಲ್ಲದೆ ಅದು ಪ್ರಚಾರಸಾಹಿತ್ಯವಾಗಿ ತೀರ ಅಲ್ಪಾಯುಷಿಯಾಗುತ್ತದೆ, ಎಂಬುದು ನನ್ನ ವಿಮರ್ಶಿತ ಶ್ರದ್ಧೆಯಾಗಿದೆ. ಸಾಹಿತ್ಯವೆಂಬುದೇ ಮೌಲ್ಯಾನ್ವೇಷಣಕ್ಕೆ ಅತ್ಯಂತ ವಿಶಾಲವಾದ ಸಾಧ್ಯತೆಗಳ ಕ್ಷೇತ್ರ.

ಅದು ರಾಜಕೀಯ ಪಕ್ಷಗಳು ಮತ್ತು ಸಕ್ರಿಯವಾದಿಗಳು ಒತ್ತಾಯಿಸುವ ಮೌಲ್ಯಗಳನ್ನು ಅವುಗಳಿಗಿಂತ ಎತ್ತರವಾದ ಹಂತದಲ್ಲಿ ನಿಂತು ಜೀವನದ ಇತರ ಮೌಲ್ಯಗಳೊಡನೆ ಅವುಗಳ ಸಂಬಂಧವನ್ನು ಪರಿಶೀಲಿಸಿ ಬೆಳಕು ಚೆಲ್ಲಬೇಕು.

ಸಾಹಿತ್ಯ ನಿರ್ಮಿತಿಯೊಂದರಿಂದಲೇ ಜೀವನದ ಅಶನವಸನಗಳ ನ್ಯಾಯ ಅನ್ಯಾಯಗಳ ವಾಸ್ತವ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ಸಾಹಿತಿಯು ಸಕ್ರಿಯನಾಗಬಾರದೆಂಬ ನಿಷೇಧವಿಲ್ಲ.

ಆದರೆ ಸಕ್ರಿಯನಾಗದವನು, ಸಕ್ರಿಯತೆಗೆ ಸಾಹಿತ್ಯ ನಿರ್ಮಿತಿಯನ್ನು ಅಡಿಯಾಳಾಗಿಸದವನು ನಿರ್ಮಿಸುವುದು ಸಾಹಿತ್ಯವೇ ಅಲ್ಲವೆಂಬ ಅಂಥ ಪ್ರಣಾಲಿಯಲ್ಲಿ ನನಗೆ ನಂಬಿಕೆ ಇಲ್ಲ. ತಮ್ಮ ಪ್ರಣಾಳಿಗೆ ಒಳಪಡದವರನ್ನು ಸಕ್ರಿಯವಾದಿಗಳು ಬೂರ್ಜ್ವಾ, ಬಲಪಂಥೀಯ ಎಂಬ ಹೆಸರುಗಳಿಂದ ಹಳಿಯುತ್ತಾರೆ;

ಸಾಮಾಜಿಕ ಸಮಸ್ಯೆಗಳು ಒಂದೆರಡು ದಶಕಗಳಲ್ಲಿ ಬದಲಾಗಿ, ಅವುಗಳಿಗೆ ಪರಿಹಾರವೆಂಬಂತೆ ಬರೆಯುವ ಸಾಹಿತ್ಯವು ಅನಂತರ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆಂಬುದನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ.

ಉದ್ದಕ್ಕೂ ನಾನು ಗಟ್ಟಿಯಾಗಿ ನಿಂತು ನನ್ನ ಬೌದ್ಧಿಕ ಮತ್ತು ಸೃಷ್ಟಿಶೀಲತೆಯ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದೇನೆ.

ಸರಸ್ವತೀ ಸಮ್ಮಾನವು ನನ್ನ ಇತ್ತೀಚಿನ ಕೃತಿಗಳಲ್ಲಿ ಮಂದ್ರವನ್ನು ಆರಿಸಿರುವುದು ನನಗೆ ಸಂತೋಷವನ್ನುಂಟು ಮಾಡಿದೆ. ಒಬ್ಬ ಸಂಗೀತಗಾರ, ಅವನ ಸುತ್ತಮುತ್ತಣ ಘಟನೆ ಹಾಗು ಪಾತ್ರಗಳ ಮೂಲಕ ಕಲೆಗೂ ಜೀವನದ ಇತರ ಮೌಲ್ಯಗಳಿಗೂ ಇರುವ ಸಂಬಂಧವನ್ನು ನಾನು ಈ ಕಾದಂಬರಿಯಲ್ಲಿ ಅನ್ವೇಷಿಸಿದ್ದೇನೆ.

ಇಡೀ ಕಾದಂಬರಿಯಲ್ಲಿ ಸಂಗೀತವೇ ಒಂದು ಮುಖ್ಯ ಪಾತ್ರವಾಗಿದೆ. ಸಂಗೀತವೇ ಅತ್ಯಂತ ಶುದ್ಧವಾದದ್ದು. ಇತರ ಕಲೆಗಳಾದ ಚಿತ್ರ, ಶಿಲ್ಪ, ಸಾಹಿತ್ಯ ಮೊದಲಾದವುಗಳ ತುಲನೆಯಲ್ಲಿ ಭಾವ ಮತ್ತು ರಸಗಳನ್ನು ಪರಿಶುದ್ಧ ಅಂದರೆ ಹಸಿಯಾದ, ಆದ್ದರಿಂದ ಅತ್ಯಂತ ಶಕ್ತವಾದ ಸ್ವರೂಪದಲ್ಲಿ ವ್ಯಕ್ತಪಡಿಸುವಂಥದು. ಅದು ಎಲ್ಲ ಮೂಲ ಮತ್ತು ಮಿಶ್ರ ರಸಗಳನ್ನು ಸೃಷ್ಟಿಸಿಕೊಂಡು ಮಂದ್ರದ ಆಳದಿಂದ ತಾರತಾರದ ಎತ್ತರಕ್ಕೆ ಸಂಚರಿಸುತ್ತದೆ.

ಮಂದ್ರವು ಸಮಗ್ರ ಅಂತರ್ಮುಖತೆಯ ಸ್ಥಿತಿ; ಎಂದರೆ ಧ್ಯಾನ.
-ನಮಸ್ಕಾರ
ಎಸ್.ಎಲ್ ಭೈರಪ್ಪ


No comments:

Post a Comment