Triveni |
ತ್ರಿವೇಣಿಯವರು ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರರು. ಅವರು ತಮ್ಮ ಕಥೆ ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬರಹಗಾರ್ತಿಯರಲ್ಲಿ ಪ್ರಮುಖರು. ಸುಮಾರು ಒಂದು ದಶಕದ ಅವಧಿಯಲ್ಲಿ ರಚಿತವಾದ ಅವರ ಕಥೆ-ಕಾದಂಬರಿಗಳು ಕನ್ನಡದಲ್ಲಿ ಓದುಗರ ಒಂದು ವರ್ಗವನ್ನೇ ಸೃಷ್ಟಿಸಿತು.
ಬಿ. ಎಂ. ಶ್ರೀ ಅವರ ತಮ್ಮ ಬಿ. ಎಂ. ಕೃಷ್ಣಸ್ವಾಮಿಯವರ ಎರಡನೆಯ ಮಗಳಾದ ತ್ರಿವೇಣಿ ಅವರು ಜನಿಸಿದ್ದು ಸೆಪ್ಟೆಂಬರ್ 1, 1928ರಲ್ಲಿ. ಅವರ ಹುಟ್ಟು ಹೆಸರು ಭಾಗೀರಥಿ. ಅವರು ಶಾಲೆಗೆ ಸೇರಿದಾಗ ಅವರ ಹೆಸರು ‘ಅನಸೂಯ’ ಎಂದಾಯಿತು. ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಅಂದಿನ ದಿನಗಳಲ್ಲಿ ನಮಗೆ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀ ಶಂಕರ್ ಅವರ ಪತಿ. ಮದುವೆಯ ನಂತರ ‘ಅನಸೂಯ ಶಂಕರ್’ ಆದರು. ಮನೆಯೊಳಗಿನ ಅನಸೂಯ ಶಂಕರ್ ಸಣ್ಣಕಥೆಗಳ ಮೂಲಕ ಕನ್ನಡ ಸಾಹಿತ್ಯ ರಂಗವನ್ನು ಪ್ರವೇಶಿಸಿ ಕಾದಂಬರಗಾರ್ತಿಯಾಗಿ ‘ತ್ರಿವೇಣಿ’ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದರು.
‘ಶರಪಂಜರ, ‘ಬೆಳ್ಳಿಮೋಡ’, ‘ಕೀಲುಗೊಂಬೆ, ‘ಹೃದಯ ಗೀತೆ, ‘ಬೆಕ್ಕಿನಕಣ್ಣು’, ‘ಬಾನುಬೆಳಗಿತು, ‘ಅವಳ ಮನೆ’, ‘ಕಾಶೀಯಾತ್ರೆ, ‘ಹಣ್ಣೆಲೆ ಚಿಗುರಿದಾಗ’, ‘ಹೂವು ಹಣ್ಣು’, ‘ಮುಕ್ತಿ’, ‘ದೂರದ ಬೆಟ್ಟ’, ‘ಅಪಸ್ವರ’, ‘ಅಪಜಯ’, ‘ತಾವರೆ ಕೊಳ’, ‘ಸೋತು ಗೆದ್ದವಳು’, ‘ಕಂಕಣ’, ‘ಮುಚ್ಚಿದ ಬಾಗಿಲು’, ‘ಮೊದಲ ಹೆಜ್ಜೆ’, ‘ವಸಂತಗಾನ’, ‘ಅವಳ ಮಗಳು’ ಇವು ತ್ರಿವೇಣಿಯವರ ಕಾದಂಬರಿಗಳಾಗಿವೆ.
‘ಎರಡು ಮನಸ್ಸು, ‘ಸಮಸ್ಯೆಯ ಮಗು’, ‘ ಹೆಂಡತಿಯ ಹೆಸರು’ ಇವು ತ್ರಿವೇಣಿ ಅವರ ಕಥಾಸಂಕಲನಗಳಾಗಿವೆ. ಇವುಗಳಲ್ಲಿ ಒಟ್ಟು ನಲವತ್ತೊಂದು ಕಥೆಗಳಿವೆ. ಮಾನಸಿಕ, ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚಿತ್ರಿಸುವ ಅವರ ‘ಹೆಂಡತಿಯ ಹೆಸರು’, ‘ಚಂಪಿ’, ‘ಅತಿಥಿ ಬರಲಿಲ್ಲ’, ‘ಸಮಸ್ಯೆಯ ಮಗು’, ‘ಸಲಹೆ’ ಮತ್ತು ಎರಡು ಮನಸ್ಸು’ ಮೊದಲಾದ ಕಥೆಗಳು ಗಮನ ಸೆಳೆಯುತ್ತವೆ.
ತ್ರಿವೇಣಿಯವರ ಸಣ್ಣ ಕತೆಗಳ ಸಂಕಲನವಾದ ‘ಸಮಸ್ಯೆಯ ಮಗು’ವಿಗೆ 1962ರಲ್ಲಿ ‘ದೇವರಾಜ ಬಹದ್ದೂರ್ ಪ್ರಶಸ್ತಿ’ ಮತ್ತು 1960ರಲ್ಲಿ ‘ಅವಳ ಮನೆ’ ಕಾದಂಬರಿಗೆ ರಾಜ್ಯ ಪ್ರಶಸ್ತಿ ದೊರಕಿದವು. ‘ಅಪಸ್ವರ’ ಮತ್ತು ‘ಅಪಜಯ’ ಕಾದಂಬರಿಗಳನ್ನು ಮತ್ತು ‘ತ್ರಿವೇಣಿ ಸಪ್ತಕ್’ ಎಂಬ ಹೆಸರಿನಲ್ಲಿ ಏಳು ಸಣ್ಣ ಕತೆಗಳನ್ನು ಹಿಂದಿಗೆ ಎಸ್.ಎಮ್.ರಾಮಸ್ವಾಮಿ ಅವರು ಅನುವಾದ ಮಾಡಿದ್ದಾರೆ. ಮೀರಾ ನರ್ವೆಕರ್ ಎನ್ನುವವರು ‘ಶರಪಂಜರ’ವನ್ನು ‘The mad women’ ಎಂಬ ಹೆಸರಿನಲ್ಲಿ ಇಂಗ್ಳೀಷ್ ಗೆ ಅನುವಾದಿಸಿದ್ದಾರೆ. ‘ಬೆಕ್ಕಿನ ಕಣ್ಣು’ ಕಾದಂಬರಿಯನ್ನು ಶರ್ವಾಣಿಯವರು ತೆಲುಗಿಗೆ ಅನುವಾದಿಸಿದ್ದಾರೆ.
ತ್ರಿವೇಣಿಯವರ ‘ಹಣ್ಣೆಲೆ ಚಿಗುರಿದಾಗ’, ‘ಬೆಳ್ಳಿಮೋಡ’, ‘ಶರಪಂಜರ’, ‘ಮುಕ್ತಿ’, ‘ಹೂವು ಹಣ್ಣು’ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರೇಕ್ಷಕವರ್ಗದಲ್ಲಿ ಅವರನ್ನು ಅಮರವಾಗಿಸಿವೆ.
ತ್ರಿವೇಣಿ ಅವರು ಬರೆದ ಮೊದಲ ಕಾದಂಬರಿ ‘ಅಪಸ್ವರ’ವಾದರೂ ಮೊದಲು ಪ್ರಕಟವಾದದ್ದು ‘ಹೂವು ಹಣ್ಣು’. ವಿಧವೆಯಾಗಿ ಬಡತನಕ್ಕೆ ಸಿಕ್ಕಿದ ಅನಾಥೆಯೊಬ್ಬಳು ತನ್ನ ವಂಶದ ಕುಡಿಯನ್ನು ಸಾಕಲು ನಡೆಸುವ ಹೋರಾಟದ ಬದುಕು, ಆ ಹಾದಿಯಲ್ಲಿ ಆಕೆ ಒಳಪಡುವ ಶೋಷಣೆ ಮತ್ತು ದಾರುಣ ಪರಿಸ್ಥಿತಿಗಳನ್ನು ಈ ಕಾದಂಬರಿ ಚಿತ್ರಿಸುತ್ತದೆ. ಸ್ವಾವಲಂಬಿಯಾಗಿ, ಸ್ವತಂತ್ರಳಾಗಿ ಬಾಳಬೇಕೆಂಬ ಹಿರಿಯಾಸೆ ಹೊತ್ತು ಬಂದ ಹೆಣ್ಣು ಪರಾವಲಂಬಿಯಾದರೆ ಅವಳ ಬಾಳು ಎಷ್ಟು ಅಸಹನೀಯವಾಗುತ್ತದೆ ಎಂಬುದನ್ನು ‘ಅಪಸ್ವರ’, ‘ಅಪಜಯ’ ಕಾದಂಬರಿಗಳು ಚಿತ್ರಿಸುತ್ತವೆ.
‘ಗೃಹಿಣಿಯ ಬದುಕೇ ಹೆಣ್ಣಿನ ಆದರ್ಶ’ ಎಂಬುದನ್ನು ತ್ರಿವೇಣಿ ಅವರ ಕಾದಂಬರಿಗಳು ತೀರ ಸರಳವಾಗಿ ಚಿತ್ರಿಸುತ್ತವೆ. ಒಲವಿನ ಪತಿ, ತಾಯ್ತನದ ಹಿಗ್ಗು, ತನ್ನದೇ ಆದ ಪುಟ್ಟ ಮನೆ-ಇವನ್ನು ಹೆಣ್ಣು ಎಷ್ಟರಮಟ್ಟಿಗೆ ಬಯಸುತ್ತಾಳೆ ಎಂಬುದನ್ನು ಹೆಣ್ಣಿನ ದೃಷ್ಟಿಯಿಂದ ನಿರೂಪಿಸುವ ಅವರ ಕೆಲವು ಕಾದಂಬರಿಗಳು ಕೇವಲ ಮನೋರಂಜನೆಯನ್ನು ಮಾತ್ರ ನೀಡುತ್ತವೆ. ‘ವಸಂತ ಗಾನ’, ‘ಬಾನು ಬೆಳಗಿತು’, ಅವಳ ಮನೆ’, ‘ಹೃದಯ ಗೀತೆ’ ಇವು ಈ ಬಗೆಯ ಕಾದಂಬರಿಗಳು.
ಆಸ್ತಿಗಾಗಿ ಮದುವೆಯಾಗುವುದಾಗಿ ಮಾತು ಕೊಟ್ಟು ಆಸ್ತಿಗೆ ಹಕ್ಕುದಾರ ಬಂದಾಗ ಕೊಟ್ಟ ಮಾತಿನಿಂದ ಹಿಂಜರಿದ ಸ್ವಾರ್ಥಿ ಯುವಕನಿಂದ ಭಗ್ನ ಪ್ರೇಮಿಯಾದ ಸರಳ ಸ್ವಭಾವದ ಮುಗ್ಧಯುವತಿಯ ಮನಸ್ಸನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಕಾದಂಬರಿ ‘ಬೆಳ್ಳಿ ಮೋಡ’.
ಕಾಮದ ಅರಗಿಣಿಯಾಗಿ ಬಾಳೆಲ್ಲ ಕಣ್ಣೀರಿನಿಂದ ತೊಳೆಯುವ ಹೆಣ್ಣಿನ ಅಸಹಾಯಕ ಚಿತ್ರಣ ‘ಕೀಲುಗೊಂಬೆ’ ಕಾದಂಬರಿಯಲ್ಲಿದೆ. ‘ಮೊದಲ ಹೆಜ್ಜೆ’ಯಲ್ಲಿ ಪುರುಷ ಪ್ರಧಾನ ಸಮಾಜದ ಕಪಿಮುಷ್ಟಿಗೆ ಸಿಲುಕಿ ಬಾಳಿನಲ್ಲಿ ಕಹಿಯನ್ನೇ ಉಂಡ ದುರ್ದೈವಿ ಹೆಣ್ಣಿನ ಚಿತ್ರಣವಿದೆ.
‘ತಾವರೆ ಕೊಳ’ ಗಂಭೀರವಾದ ವಸ್ತುವನ್ನುಳ್ಳ ಕಾದಂಬರಿ. ಮನುಷ್ಯ ಕೇವಲ ಅನ್ನ, ನೀರು, ಗಾಳಿಯಿಂದ ಮಾತ್ರವೇ ಜೀವಿಸಲಾರ, ಅವನ ಜೀವನ ಹಸನಾಗಬೇಕಾದರೆ ಅವನಿಗೆ ಪ್ರೀತಿ, ವಿಶ್ವಾಸ ಅತ್ಯವಶ್ಯಕವಾಗಿ ಬೇಕು ಎಂಬುದನ್ನು ಈ ಕಾದಂಬರಿ ಧ್ವನಿಸುತ್ತದೆ.
ನಿವೃತ್ತರಾದ ರಾಯರ ಸಂಸಾರದ ಸುತ್ತ ರಚಿತವಾದ ಒಂದು ಸುಂದರ ಕಾದಂಬರಿ ‘ಹಣ್ಣೆಲೆ ಚಿಗುರಿದಾಗ’. ವಯಸ್ಸಾದರೂ ಮಕ್ಕಳಂತಾಡುವ, ನಾಲಿಗೆ ಚಪಲ ಬಿಡದ, ಮರೆವಿನ ಸ್ವಭಾವದ ರಾಯರ ಪಾತ್ರ ಪುಟದಿಂದ ಪುಟಕ್ಕೆ ಹಾಸ್ಯದ ಹೊನಲನ್ನು ಹರಿಸುತ್ತಾ ಬೆಳೆದು ಬಂದಿದೆ. ತ್ರಿವೇಣಿಯವರಿಗೆ ಪಾತ್ರ ಚಿತ್ರಣದ ಕಲೆ ಸಿದ್ಧಿಸುತ್ತಿತ್ತು ಎಂಬುದರ ಕುರುಹು ಈ ಕಾದಂಬರಿಯ ರಾಯರ ಪಾತ್ರ ಚಿತ್ರಣದಿಂದ ಗೋಚರವಾಗುತ್ತದೆ. ಎರಡು ಮೂರು ತಲೆಮಾರಿನವರಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ಚಿತ್ರಿಸುವುದು ಈ ಕಾದಂಬರಿಯ ಉದ್ದೇಶ.
ಮನೋವೈಜ್ಞಾನಿಕ ಸಮಸ್ಯೆಗಳನ್ನು ತಮ್ಮ ಕಾದಂಬರಿಯ ವಸ್ತುವನ್ನಾಗಿ ಆಯ್ದುಕೊಂಡು ತ್ರಿವೇಣಿಯವರು ಕನ್ನಡದ ಕಥೆ-ಕಾದಂಬರಿಗಳಿಗೆ ಹೊಸ ತಿರುವನ್ನು ಕೊಟ್ಟರು. ದೈಹಿಕ ಸ್ವಾಸ್ಥ್ಯದೊಂದಿಗೆ ಮಾನಸಿಕ ಸ್ವಾಸ್ಥ್ಯವೂ ಸೇರಿದಾಗ ವ್ಯಕ್ತಿಯ ಬಾಳು ಸಹನೀಯ ಎಂದು ತಮ್ಮ ಮನೋವೈಜ್ಞಾನಿಕ ಕಾದಂಬರಿಗಳ ಮೂಲಕ ತೋರಿಸಿಕೊಟ್ಟರು. ‘ಬೆಕ್ಕಿನ ಕಣ್ಣು’, ‘ದೂರದ ಬೆಟ್ಟ’, ‘ಮುಚ್ಚಿದ ಬಾಗಿಲು’, ಮತ್ತು ‘ಶರಪಂಜರ’ ಮೊದಲಾದ ಕಾದಂಬರಿಗಳಲ್ಲಿ ಕೆಲವು ರೀತಿಯ ಮನೋವೈಪರೀತ್ಯಗಳನ್ನು ಚಿಕಿತ್ಸಕ ದೃಷ್ಟಿಯಿಂದ ಕಂಡಿದ್ದಾರೆ.
“ಮನಶ್ಯಾಸ್ತ್ರ ಮನುಷ್ಯನ ಅಧ್ಯಯನದ ವಿಶಿಷ್ಟ ಕ್ಷೆತ್ರವಾಗುವ ಮುನ್ನವೇ ಸಾಹಿತ್ಯ ರಚನೆ ಮಾಡಿದ ಕವಿಗಳು ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದರು. ಸಾಹಿತ್ಯ ಕೃತಿಯಲ್ಲಿ ಪಾತ್ರಗಳ ಸ್ವಭಾವ, ನಡೆನುಡಿಯಲ್ಲಿ ಜೀವನವನ್ನು ಎದುರಿಸುವ ಅಥವಾ ಎದುರಿಸಲು ಹಿಂಜರಿಯುವ ರೀತಿಯಲ್ಲಿ ಪ್ರಕಟವಾಗಬೇಕು ಎಂಬುದು ನೆನಪಿಡಬೇಕಾದ ಅಂಶ. ತ್ರಿವೇಣಿಯವರು ಮನಶ್ಯಾಸ್ತ್ರವನ್ನು ಕ್ರಿಯೆಯಲ್ಲಿ ಅರಗಿಸಿಕೊಳ್ಳಲು ಶಕ್ತರಾದಾಗ ಯಶಸ್ವಿಯಾಗುತ್ತಾರೆ. ‘ಬೆಕ್ಕಿನ ಕಣ್ಣು’, ‘ಶರಪಂಜರ’ ಇಂತಹ ಕಾದಂಬರಿಗಳಲ್ಲಿ ಈ ಅಭಿಪ್ರಾಯ ಸಮಂಜಸವೆನಿಸುತ್ತದೆ” ಎಂಬ ಡಾ. ಎಲ್. ಎಸ್. ಶೇಷಗಿರಿರಾಯರ ಅಭಿಪ್ರಾಯಗಳು ಉಲ್ಲೇಖನೀಯವಾಗಿವೆ.
ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ ಮನೋವಿಜ್ಞಾನವನ್ನು ಬಳಸಿದುದರಿಂದ ಅವರು ಹೊಸ ಹಾದಿಯಲ್ಲಿ ನಡೆದರು. ಎಂದು ತೋರಿದರೂ ಅವರ ಕಾದಂಬರಿಗಳ ಮೌಲ್ಯಗಳು ಅಂದಿನವರೆಗೆ ಕಂಡು ಬಂದಿದ್ದ ಮೌಲ್ಯಗಳಿಂದ ಬಿನ್ನವಾಗಿರಲಿಲ್ಲ ಕನ್ನಡ ಕಾದಂಬರಿ, ಕಥೆಗಳ ಚರಿತ್ರೆಯಲ್ಲಿ ಮಹಿಳೆಯರ ಉತ್ಸಾಹದ ಅಧ್ಯಾಯವನ್ನೇ ಅವರು ತೆರೆದರು ಎನ್ನಬೇಕು. ಸಾಮಾನ್ಯವಾಗಿ ಕೌಟುಂಬಿಕ ಜೀವನ ಇವರ ಕಥಾವಸ್ತು. ಹೃದಯದ ಶ್ರೀಮಂತಿಕೆ ಇವರ ವಸ್ತು.
ಜೀವನದಲ್ಲಿ ಹೆಣ್ಣಿಗೆ ಇರಬೇಕಾದ ಸುಖ, ಸಂಪತ್ತು, ಭೋಗ ಭಾಗ್ಯಗಳು ತ್ರಿವೇಣಿಯವರಿಗೆ ಹೇರಳವಾಗಿದ್ದವು. ಅವರಿಗೆ ಜೀವನದಲ್ಲಿ ಆಸಕ್ತಿ, ಮೋಹವಿತ್ತು. ಇದು ಅವರ ಕೃತಿಗಳಲ್ಲಿ ಉದ್ದಕ್ಕೂ ಕಾಣುತ್ತದೆ. ಒಲವಿನ ಪತಿ, ತಮ್ಮದೇ ಆದ ಮನೆ, ಪ್ರೀತಿಸುವ ಬಂಧು ಬಾಂಧವರು, ಆತ್ಮೀಯ ಸ್ನೇಹಿತರ ಬಳಗ, ಜನಪ್ರಿಯತೆ, ಅಚ್ಚುಮೆಚ್ಚಿನ ವಾಚಕ-ವರ್ಗ ಇಷ್ಟೆಲ್ಲಾ ಇದ್ದರೂ “ತಾನು ತಾಯಿಯಾಗಲಿಲ್ಲ, ತಾವು ಸೇರಿದ ಮನೆಗೆ ಬೆಳಕಾಗಿ ಒಂದು ಮಗುವನ್ನು ಕೊಡಲಿಲ್ಲ” ಎಂಬ ಕೊರಗು ಅವರನ್ನು ಬಾಧಿಸುತ್ತಿತ್ತು. ದೈಹಿಕವಾಗಿ ದುರ್ಬಲರಾಗಿದ್ದ ತ್ರಿವೇಣಿ ಮೂರು ಸಲ ಗರ್ಭಿಣಿಯಾದಾಗಲೂ ನಿರೀಕ್ಷಿಸಿದ ಅತಿಥಿ ಬರದೆ ತಪ್ಪಿಸಿಕೊಂಡು ಹೋದ ಕಾರಣ ಅವರಿಗೆ ನಿರಾಶೆ ಇಮ್ಮಡಿಸುತ್ತಿತ್ತು. ಈ ಸಮಯದಲ್ಲಿ ಅವರು ಅನುಭವಿಸಿದ ನಿರಾಶೆ, ಕಾತರ, ದುಃಖ, ಹೆರಿಗೆಯ ನೋವು, ಮೂಕ ಸಂಕಟ – ಇವೆಲ್ಲವನ್ನೂ ಅವರ ‘ಅತಿಥಿ ಬರಲಿಲ್ಲ’ ಎಂಬ ಸಣ್ಣಕಥೆಯಲ್ಲಿ ಹೃದಯಸ್ಪರ್ಶಿಯಾಗಿ ಬಣ್ಣಿಸಿದ್ದಾರೆ. ಸ್ವಾನುಭವದ ಮೂಸೆಯಿಂದ ಮೂಡಿಬಂದಿರುವ ಈ ಕಥೆ ಓದುಗರ ಮನಸ್ಸನ್ನು ಕಲಕುತ್ತದೆ.
ತಾಯಿಯಾಗಲೆಬೇಕೆಂಬ ಹಠದಿಂದ ‘ಮಗು ಕೊಡು’ ಎಂದು ವಿಧಿಗೆ ಸವಾಲಾಗಿ ನಿಂತ ಅವರು ನಾಲ್ಕನೆಯ ಬಾರಿಗೆ ಗರ್ಭಿಣಿಯಾದಾಗ, ಅವರು ಬಹುದಿನದಿಂದ ಕಾತರಿಸುತ್ತಿದ್ದ ಅತಿಥಿಯೇನೋ ಕಡೆಗೂ ಬಂದಳು. ಆದರೆ ಅವಳನ್ನು ಸ್ವಾಗತಿಸಿದ ಕೆಲವೇ ದಿನಗಳಲ್ಲಿ ಅತಿಥೇಯಳು ಕಣ್ಮರೆಯಾದುದು ದುರಂತ. ತಮ್ಮ ಬೆಲೆಯುಳ್ಳ ಬರಹದ ಬಾಳಿನ ಅಂತಿಮ ಅಧ್ಯಾಯವನ್ನೇ ಕಡೆಯ ಕಾದಂಬರಿಯ ವಸ್ತುವಾಗುವಂತೆ ಬಿಟ್ಟುಹೋದರು. ತಾರುಣ್ಯದ ಹೆಬ್ಬಯಕೆಗಳು ಇನ್ನೂ ಚಿಗುರೊಡೆಯುತ್ತಿರುವಾಗಲೇ ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿ 29 ಜುಲೈ 1963ರಲ್ಲಿ ನಿಧನರಾದರು. ಹೀಗೆ ಕನ್ನಡ ಕಾದಂಬರಿಯ ಸಾಹಿತ್ಯದಲ್ಲಿ ಬಹುಬೇಗ ವಿಶಿಷ್ಟ ಸ್ಥಾನ ಗಳಿಸಿಕೊಂಡ ತ್ರಿವೇಣಿ ಜನಪ್ರಿಯ ಸಾಹಿತಿ ಆಗಿಹೋದರು.
ತ್ರಿವೇಣಿಯವರಿಂದ ಇನ್ನೂ ಮಹತ್ವದ ಕೃತಿಗಳು ಬರುತ್ತವೆ ಎನ್ನುವ ನಿರೀಕ್ಷೆಗಳಿದ್ದ ಸಮಯದಲ್ಲಿ ಅವರು ಈ ಲೋಕವನ್ನಗಲಿದ್ದು ಕನ್ನಡನಾಡಿಗಾದ ನಷ್ಟ. ಅಂತಹ ಶ್ರೇಷ್ಠತೆಗೆ ಬೇಕಾದ ಸಕಲ ಉಪಕರಣಗಳೂ ತ್ರಿವೇಣಿ ಅವರಲ್ಲಿತ್ತು ಎಂಬುದು ವಿದ್ವಾಂಸರ ಅಭಿಮತ. ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸಕಾರರು ತ್ರಿವೇಣಿಯವರನ್ನು ‘ಪ್ರತಿಭಾವಂತ ಲೇಖಕಿ’, ‘ಜನಪ್ರಿಯ ಲೇಖಕಿ’ ಎಂದು ಗುರುತಿಸಿ ಅವರಿಗೆ ಸಲ್ಲಬೇಕಾದ ಗೌರವಯುತ ಸ್ಥಾನವನ್ನು ನೀಡಿದ್ದಾರೆ. ಬದುಕನ್ನು ಒಳ್ಳೆಯ ನಿಲುವಿನಿಂದ ನೋಡುವ ಆರೋಗ್ಯಕರ ಧೋರಣೆಯನ್ನು ಪ್ರತಿಪಾದಿಸುವ ಅವರ ಕೃತಿಗಳು ಬಹಳ ಕಾಲದವರೆಗೆ ಕನ್ನಡಿಗರ ಹೃದಯಗಳಲ್ಲಿ ನೆಲೆಸಿರುತ್ತವೆ. ಈ ಮಹಾನ್ ಲೇಖಕಿಯ ನೆನಪಿಗೆ ನಮ್ಮ ಗೌರವಯುತ ನಮನ.
(ಆಧಾರ: ಎಸ್. ವಿ. ವಿಮಲ ಅವರ ತ್ರಿವೇಣಿ ಅವರ ಕುರಿತ ಬರಹವನ್ನು ಈ ಲೇಖನ ಆಧರಿಸಿದೆ)
No comments:
Post a Comment