ನಮ್ಮ, ಕುಂಬ್ಳೆ ಅವರು ಹುಟ್ಟಿದ ದಿನ ಅಕ್ಟೋಬರ್ 17, 1970. ಕುಂಬ್ಳೆ ಎಂದರೆ ಅದೆಂತದ್ದೋ ರೋಮಾಂಚನ. ಬಾಲ್ ಹಿಡಿದು ಜಿಂಕೆಯಂತೆ ಚಿಮ್ಮುವ ಅವರ ಬೌಲಿಂಗ್ ವೈಖರಿಯನ್ನು ನೋಡುವುದೇ ಒಂದು ಸೊಗಸು. ಬ್ಯಾಟಿಂಗ್ನಲ್ಲಿ ಕೂಡ ಭಾರತದ ಏಳು ವಿಕೆಟ್ ಪತನವಾಗಿದ್ದರೂ, ಇನ್ನೂ ಕುಂಬ್ಳೆ ಇದ್ದಾರೆ ನೋಡೋಣ ಇರಿ, ಎಂಬಷ್ಟು ಭರವಸೆ ಹುಟ್ಟಿಸುತ್ತಿದ್ದ ಆಟಗಾರ. ಒಂದೆರಡು ವರ್ಷದ ಹಿಂದೆ, ಭಾರತ ವಿಶ್ವ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಸ್ಥಾನದಲ್ಲಿ ಅಲಂಕೃತವಾಗಿತ್ತು ಎಂದರೆ, ಕುಂಬ್ಳೆ ಅಂತಹ ಬೌಲರ್ ಕಳೆದ ಎರಡು ದಶಕಗಳಲ್ಲಿ ನೀಡಿದ ಅಮೋಘ ಕೊಡುಗೆ ಕೂಡ ಅದಕ್ಕೆ ಉತ್ತಮ ಬುನಾದಿ ಹಾಕಿದೆ ಎಂಬುದು ಎಲ್ಲ ಕ್ರೀಡಾಭಿಮಾನಿಗಳೂ ಒಪ್ಪುವ ವಿಷಯ. ಇತ್ತೀಚಿನ ವರ್ಷದಲ್ಲಿ ವಿದೇಶದಲ್ಲಿ ನಡೆದ ಟೆಸ್ಟ್ ಸರಣಿಗಳಲ್ಲಿ ಸೋತು ಸುಣ್ಣವಾದ ಬಾರತ ತಂಡ, ಕುಂಬ್ಳೆ ಅಂಥಹ ಬೌಲರ್ ನಮ್ಮಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ನಿರೂಪಿಸಿದ ನೈಜ ಸ್ಥಿತಿ ಕೂಡಾ ಹೌದು.
ಅಂದಿನ ದಿನದಲ್ಲಿ ಭಾರತದ ಪ್ರಮುಖ ಸ್ಪಿನ್ನರುಗಳೆಲ್ಲ ನಿವೃತ್ತಿ ಹೊಂದಿದಾಗ, ಅಂದಿನ ದಿನದಲ್ಲಿ ಆಯ್ಕೆದಾರರಾದ ರಾಜ್ ಸಿಂಗ್ ದುರ್ಗಾಪುರ್ ಅವರು ಆಶ್ಚರ್ಯವೋ ಎಂಬಂತೆ ಅನಿಲ್ ಕುಂಬ್ಳೆ ಅವರನ್ನು ಶ್ರೀಲಂಕಾ ವಿರುದ್ಧದ ಏಕ ದಿನ ಪಂದ್ಯ ಮತ್ತು ಇಂಗ್ಲೆಂಡ್ ಪ್ರವಾಸದ ಟೆಸ್ಟ್ ತಂಡಕ್ಕೆ ಹೆಸರಿಸಿದ್ದರು. ಅಂದಿನ ಆ ಆಯ್ಕೆಯನ್ನು ಅತ್ಯಂತ ಸಮರ್ಥವಾಗಿ ಕಾಯ್ದುಕೊಂಡು ಬಂದ ಕುಂಬ್ಳೆ ಅವರು, ನಂತರ ತಾವಾಗಿಯೇ ಮೂರು ವರ್ಷದ ಹಿಂದೆ ನಿವೃತ್ತಿ ಘೋಷಿಸುವವರೆಗೆ ಹಿಂದಿರುಗಿ ನೋಡಿದ್ದೇ ಇಲ್ಲ. ಮೊದಲ ಸುತ್ತಿನಲ್ಲಿ ಸೋತು ಸುಣ್ಣವಾಗಿದ್ದ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡವನ್ನು ತಮ್ಮ ಸತ್ವಶಾಲಿ ನಾಯಕತ್ವ ಮತ್ತು ಬೌಲಿಂಗ್ನಿಂದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಫೈನಲ್ ವರೆಗೆ ತಂದು ಪ್ರತಿಷ್ಟಿತ ತಂಡವನ್ನಾಗಿ ಮುನ್ನಡೆಸಿದವರು ಕೂಡಾ ಕುಂಬ್ಳೆ ಅವರೇ. ಮುಂದೆ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಕುಂಬ್ಳೆ ಮಾರ್ಗದರ್ಶಕರಾಗಿದ್ದ ಕುಂಬ್ಳೆ ಇತ್ತೀಚಿನ ಐಪಿಎಲ್ ಮತ್ತು ಚಾಲೆಂಜರ್ಸ್ ಟ್ರೋಫಿ ಪಂದ್ಯಾವಳಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್ ತಂಡದ ಮಾರ್ಗದರ್ಶಕರಲ್ಲೊಬ್ಬರಾಗಿದ್ದಾರೆ.