Translate in your Language

Thursday, April 24, 2014

ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು.

೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.

Monday, April 21, 2014

ತ.ರಾ.ಸು ಅವರ ಹುಟ್ಟು ಹಬ್ಬದ ನೆನಪಿನಲ್ಲಿ

Ta Ra Subbarao
ಕನ್ನಡದ ಮೇರು ಲೇಖಕರಾದ ತ.ರಾ.ಸು  ಅವರು ಏಪ್ರಿಲ್ 21, 1920ರಲ್ಲಿ ಅಂದು ಚಿತ್ರದುರ್ಗ ಜಿಲ್ಲೆಯಲ್ಲಿದ್ದು ಇಂದು ದಾವಣಗೆರೆ ತಾಲ್ಲೂಕಿನಲ್ಲಿರುವ ಮಲೆಬೆನ್ನೂರಿನಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು.

ಪ್ರತಿ ಕಲ್ಲೂ ಇತಿಹಾಸದ ವೀರರ ಕಥೆಯನ್ನೂ ಇತಿಹಾಸದ ದುರಂತ ಕಥೆಯನ್ನೂ ಸಾರಿ ಹೇಳುವ ಅಂದಿನ  ಚಿತ್ರದುರ್ಗದಲ್ಲಿ ಹುಟ್ಟಿದ ಸುಬ್ಬರಾಯರು ಆ ಸ್ಥಳದೊಂದಿಗೆ ಅತ್ಯಂತ ಆತ್ಮೀಯವಾದ ಸಂಬಂಧವನ್ನೂ ಬೆಳೆಸಿಕೊಂಡರು.  ತಮ್ಮ ಕೊನೆಯ ಕಾದಂಬರಿ ‘ದುರ್ಗಾಸ್ತಮಾನ’ದ ಮುನ್ನುಡಿಯಲ್ಲಿ ಅವರು ಹೀಗೆ ಬರೆದರು:  “ಚಿತ್ರದುರ್ಗದ ಜನರಿಗೆ ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ,  ತಮ್ಮ ಕರುಳಿಗೆ ಹೊಂದಿಕೊಂಡು ಬೆಳೆದ ಜೀವಂತ ವಸ್ತು.”  ಚಿತ್ರದುರ್ಗದ ಉತ್ಸಾಹೀ ಇತಿಹಾಸಕಾರರಾದ ಹುಲ್ಲೂರು ಶ್ರೀನಿವಾಸ ಜೋಯಿಸರು ಹುಡುಗನ ಚಿತ್ರದುರ್ಗದ ಅಭಿಮಾನಕ್ಕೆ ನೀರೆರೆದರು.  ಮುಂದೆ ತ.ರಾ.ಸು ಐತಿಹಾಸಿಕ ಕಾದಂಬರಿಗಳನ್ನು ಒಂದು ವಿಶಿಷ್ಟ ಮಾಧ್ಯಮ ಮಾಡಿಕೊಳ್ಳಲು ಇದು ಕಾರಣವಾದದ್ದಷ್ಟೇ ಅಲ್ಲ ಸಾಮಾನ್ಯ ಜನರನ್ನು ಮೀರಿ ನಿಂತ, ಸಿಡಿಲಿನ ಚೈತನ್ಯವನ್ನು ತುಂಬಿಕೊಂಡ, ಅಸಾಧಾರಣ ಭಾವಗಳ-ರಾಗಗಳ ದೈತ್ಯವ್ಯಕ್ತಿಗಳು ಇದರಿಂದ ತ.ರಾ.ಸು ಗೆ ವಾಸ್ತವಿಕ ಸ್ತ್ರೀ ಪುರುಷರಾದರು.  ಅವರ ಕಾದಂಬರಿಗಳ ಪಾತ್ರಗಳ ಸೃಷ್ಟಿಯ ಮೇಲೆ ಇದು ಪ್ರಭಾವವನ್ನು ಬೀರಿತು.

Wednesday, April 16, 2014

ಆನಂದಕಂದ - ಡಾ.ಬೆಟಗೇರಿ ಕೃಷ್ಣಶರ್ಮ

Anandakanda
"ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು" ಎಂದು ಹಾಡಿದವರು ನಮ್ಮ ಆನಂದಕಂದರು.  ಆನಂದಕಂದರು ತಮ್ಮ ಕವನ, ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶುಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ ಮತ್ತು ಪತ್ರಿಕಾ ಸಂಪಾದನೆಗಳಂತಹ ನಿರಂತರ ಕಾಯಕಗಳ ಮೂಲಕ ಇಡೀ ನಾಡನ್ನು ಬೆಳಗಿ ಕನ್ನಡ ನಾಡಿನ ಅಸಂಖ್ಯಾತ ಪ್ರತಿಭೆಗಳನ್ನೂ ಹುಟ್ಟುಹಾಕಿದರು.  ಭಾರತದ ಸ್ವಾತಂತ್ರ್ಯ ಪ್ರಾಪ್ತಿ, ಕರ್ನಾಟಕತ್ವದ ಜಾಗೃತಿ ಮತ್ತು ಕರ್ನಾಟಕ ಏಕೀಕರಣಗಳಿಗೆ ತಮ್ಮ ಶಕ್ತಿ ಸರ್ವಸ್ವವನ್ನೂ ಧಾರೆಯೆರೆದು ದುಡಿದ ಕನ್ನಡ ಸಾಹಿತಿಗಳಲ್ಲಿ ಇವರದು ಸಿಂಹಪಾಲು.

"ಆನಂದಕಂದ" ಕನ್ನಡ ನಾಡಿನ ಸಾಹಿತಿಗಳಲ್ಲಿ ಅಗ್ರಗಣ್ಯರು.    ಬೆಟಗೇರಿ ಕೃಷ್ಣಶರ್ಮ ನಾಮಧೇಯ.  "ಆನಂದಕಂದ" ಇವರ ಕಾವ್ಯನಾಮ.  ಅವರು 1900ನೆಯ ಏಪ್ರಿಲ್ ತಿಂಗಳ 16ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನಿಸಿದರು.  ತಂದೆ ಶ್ರೀನಿವಾಸರಾವ್.  ತಾಯಿ ರಾಧಾಬಾಯಿ.  ಬೆಳೆಯುವ  ವಯಸ್ಸಿನಲ್ಲೇ ಮಾತಾಪಿತೃ ವಿಯೋಗ.  ಹಲವಾರು ಬಾರಿ ವಿಷಮಶೀತಜ್ವರ, ಪ್ಲೇಗ್ ರೋಗಗಳಿಗೆ ಸ್ವಯಂ ತುತ್ತಾಗಿ ನಮ್ಮ ನಾಡಿನ ಪುಣ್ಯದಫಲವಾಗಿ ಪವಾಡವೆಂಬಂತೆ ಬದುಕುಳಿದರು. ಪ್ಲೇಗಿನ ಪರಿಣಾಮದಿಂದ ಅವರ ಕೈಕಾಲುಗಳ ಮೇಲೆ ಶಾಶ್ವತ ಪರಿಣಾಮ ಬೀರಿ ನಡೆಯುವಿಕೆಗೆ ಮತ್ತು ಬರೆಯುವಿಕೆಗೆ ತೀವ್ರ ಅಡಚಣೆಗಳನ್ನು ಒಡ್ಡಿದ್ದವು.  ಆದರೆ ಅವರ ಚೈತನ್ಯ, ದುಡಿಮೆಯ ಹಾದಿಯಲ್ಲಿ ಇವ್ಯಾವುವನ್ನೂ ಲೆಖ್ಖಿಸದೆ ನಿರಂತರವಾಗಿ ಮುಂದುವರೆದಿರುವುದನ್ನು ಅವರ ಅಸಂಖ್ಯಾತ ಸಾಧನೆಗಳ ರೂಪದಲ್ಲಿ ಕಾಣಬಹುದಾಗಿದೆ.