Ta Ra Subbarao |
ಕನ್ನಡದ ಮೇರು ಲೇಖಕರಾದ ತ.ರಾ.ಸು ಅವರು ಏಪ್ರಿಲ್ 21, 1920ರಲ್ಲಿ ಅಂದು ಚಿತ್ರದುರ್ಗ ಜಿಲ್ಲೆಯಲ್ಲಿದ್ದು ಇಂದು ದಾವಣಗೆರೆ ತಾಲ್ಲೂಕಿನಲ್ಲಿರುವ ಮಲೆಬೆನ್ನೂರಿನಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು.
ಪ್ರತಿ ಕಲ್ಲೂ ಇತಿಹಾಸದ ವೀರರ ಕಥೆಯನ್ನೂ ಇತಿಹಾಸದ ದುರಂತ ಕಥೆಯನ್ನೂ ಸಾರಿ ಹೇಳುವ ಅಂದಿನ ಚಿತ್ರದುರ್ಗದಲ್ಲಿ ಹುಟ್ಟಿದ ಸುಬ್ಬರಾಯರು ಆ ಸ್ಥಳದೊಂದಿಗೆ ಅತ್ಯಂತ ಆತ್ಮೀಯವಾದ ಸಂಬಂಧವನ್ನೂ ಬೆಳೆಸಿಕೊಂಡರು. ತಮ್ಮ ಕೊನೆಯ ಕಾದಂಬರಿ ‘ದುರ್ಗಾಸ್ತಮಾನ’ದ ಮುನ್ನುಡಿಯಲ್ಲಿ ಅವರು ಹೀಗೆ ಬರೆದರು: “ಚಿತ್ರದುರ್ಗದ ಜನರಿಗೆ ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ, ತಮ್ಮ ಕರುಳಿಗೆ ಹೊಂದಿಕೊಂಡು ಬೆಳೆದ ಜೀವಂತ ವಸ್ತು.” ಚಿತ್ರದುರ್ಗದ ಉತ್ಸಾಹೀ ಇತಿಹಾಸಕಾರರಾದ ಹುಲ್ಲೂರು ಶ್ರೀನಿವಾಸ ಜೋಯಿಸರು ಹುಡುಗನ ಚಿತ್ರದುರ್ಗದ ಅಭಿಮಾನಕ್ಕೆ ನೀರೆರೆದರು. ಮುಂದೆ ತ.ರಾ.ಸು ಐತಿಹಾಸಿಕ ಕಾದಂಬರಿಗಳನ್ನು ಒಂದು ವಿಶಿಷ್ಟ ಮಾಧ್ಯಮ ಮಾಡಿಕೊಳ್ಳಲು ಇದು ಕಾರಣವಾದದ್ದಷ್ಟೇ ಅಲ್ಲ ಸಾಮಾನ್ಯ ಜನರನ್ನು ಮೀರಿ ನಿಂತ, ಸಿಡಿಲಿನ ಚೈತನ್ಯವನ್ನು ತುಂಬಿಕೊಂಡ, ಅಸಾಧಾರಣ ಭಾವಗಳ-ರಾಗಗಳ ದೈತ್ಯವ್ಯಕ್ತಿಗಳು ಇದರಿಂದ ತ.ರಾ.ಸು ಗೆ ವಾಸ್ತವಿಕ ಸ್ತ್ರೀ ಪುರುಷರಾದರು. ಅವರ ಕಾದಂಬರಿಗಳ ಪಾತ್ರಗಳ ಸೃಷ್ಟಿಯ ಮೇಲೆ ಇದು ಪ್ರಭಾವವನ್ನು ಬೀರಿತು.
ತಳುಕಿನ ವೆಂಕಣ್ಣಯ್ಯನವರ ಮನೆತನಕ್ಕೆ ಸಾಹಿತ್ಯ ಸಂಸ್ಕೃತಿಗಳಲ್ಲಿ ವಿಶೇಷ ಅಭಿಮಾನ. ಇವರ ಹಿರಿಯರು ಯಕ್ಷಗಾನದಲ್ಲಿ ತೀವ್ರ ಆಸಕ್ತಿಯಿದ್ದವರು. ದೊಡ್ಡಪ್ಪ ವೆಂಕಣ್ಣಯ್ಯನವರು ವಿದ್ವಾಂಸರು. ಸದಭಿರುಚಿಯ ತೂಕದ ಮಾತಿನ ವಿಮರ್ಶಕರು. ತಂದೆ ರಾಮಸ್ವಾಮಿಯವರಿಗೆ ಸಾಹಿತ್ಯದಲ್ಲಿ ಆಸಕ್ತಿ. ಚಿಕ್ಕಪ್ಪ ಶಾಮರಾಯರು ವಿದ್ವಾಂಸರು, ಒಳ್ಳೆಯ ವಿಮರ್ಶಕರು.
ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿರದಿಂದ ಕಂಡವರು, ಅನಂತರ ಅದರಲ್ಲಿ ಭಾಗವಹಿಸಿ ಸೆರೆಮನೆವಾಸವನ್ನು ಅನುಭವಿಸಿದವರು ತ.ರಾ.ಸು. ಬೆಂಗಳೂರಿಗೆ ಬಂದು ಪತ್ರಿಕಾವೃತ್ತಿಯನ್ನು ಆರಿಸಿಕೊಂಡರು. ಸೇರಿದ್ದು ‘ವಿಶ್ವಕರ್ನಾಟಕ’ ಪತ್ರಿಕೆಯ ಕಚೇರಿಯನ್ನು. ಅದು ಸ್ವಾತಂತ್ರ್ಯದ ಹೋರಾಟದಲ್ಲಿ ತಮ್ಮ ಆಸ್ತಿಯನ್ನೆಲ್ಲಾ ಕಳೆದು ಆದರ್ಶದ ಬೆನ್ನುಹತ್ತಿ ಧೀರಜೀವನ ನಡೆಸುತ್ತಿದ್ದ ತಿರುಮಲೆ ತಾತಾಚಾರ್ಯ ಶರ್ಮರ ಪತ್ರಿಕೆ. ಜೊತೆಗೆ ಮತ್ತೊಂದು ಧೀರ ಜೀವ ಸಿದ್ಧವನಹಳ್ಳಿ ಕೃಷ್ಣಶರ್ಮ. ಇಬ್ಬರದೂ ಶಕ್ತಿಯುತವಾದ ತೇಜಸ್ವಿ ಶೈಲಿ. ತ.ರಾ.ಸು ಕೃಷ್ಣಶರ್ಮರಿಗೆ ಹತ್ತಿರವಾದರೂ, ಅವರ ಧ್ಯೇಯಗಳನ್ನೂ ಜೀವನ ರೀತಿಯನ್ನೂ ಬರಹವನ್ನೂ ಮೆಚ್ಚಿಕೊಂಡರು. ಅವರಂತೆಯೇ, ಬರಹವನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಪತ್ರಿಕೋದ್ಯಮಿಯಾಗಿ ಅರೆಹೊಟ್ಟೆ ಊಟಮಾಡಿ ಆದರ್ಶತ್ವ ಕೇಳುವ ಬೆಲೆಯನ್ನು ತೆತ್ತರು.
ತ.ರಾ.ಸು ಬೆಂಗಳೂರಿಗೆ ಬಂದು ‘ವಿಶ್ವ ಕರ್ನಾಟಕ’ ಸೇರಿದ ದಿನಗಳಲ್ಲಿ ಅ.ನ.ಕೃ ಪ್ರಗತಿಶೀಲ ಪಂಥವನ್ನು ನಿರ್ಮಿಸುತ್ತಿದ್ದರು. ಅ.ನ.ಕೃ ಅವರು ತ.ರಾ.ಸು ಮೇಲೆ ಗಾಢವಾದ ಪ್ರಭಾವ ಬೀರಿದರು. ತರುಣ ಸಾಹಿತಿಗಳಿಗೆ ಪ್ರೋತ್ಸಾಹ ಕೊದುವುದರಲ್ಲಿ ಸಂತೋಷವನ್ನು ಕಾಣುತ್ತಿದ್ದ ಅ.ನ.ಕೃ ಈ ತರುಣ ಪ್ರತಿಭೆಯನ್ನು ಮೆಚ್ಚಿಕೊಂಡರು. ತ.ರಾ.ಸು ಅ.ನ.ಕೃ ಅವರಲ್ಲಿ ಗಾಢವಾದ ಗೌರವವನ್ನು ಬೆಳೆಸಿಕೊಂಡರು. ಪ್ರಗತಿಶೀಲ ಪಂಥದ ದೃಷ್ಟಿ, ಆದರ್ಶಗಳು ಅವರಿಗೆ ಮೆಚ್ಚಿಗೆಯಾದವು. ಆ ಚಳವಳಿಯ ಅತಿರಥಮಹಾರಥರಲ್ಲಿ ಒಬ್ಬರಾದರು.
1946ರಲ್ಲಿ ತ.ರಾ.ಸು ಅವರ ಮೊದಲನೆಯ ಕಥಾಸಂಕಲನ ‘ರೂಪಸಿ’ ಪ್ರಕಟವಾಯಿತು. ಇದೇ ಸರಿಸುಮಾರಿಗೆ ಅವರ ಮೊದಲನೆಯ ಕಾದಂಬರಿ ‘ಮನೆಗೆ ಬಂದ ಮಹಾಲಕ್ಷ್ಮಿ’ ಪ್ರಕಟವಾಯಿತು. ಈ ಕಥೆಗಳನ್ನು ಹೇಳುವಾಗ ತ.ರಾ.ಸು ಒಬ್ಬ ಹುಟ್ಟು ಕಥೆಗಾರನಾಗಿಯೂ, ಉದ್ದೇಶಪೂರ್ಣ ಕಲೆಗಾರನಾಗಿಯೂ ಕಾಣುತ್ತಾರೆ. ಇಲ್ಲಿಂದ ಮುಂದೆ ಮುವ್ವತ್ತಾರು ವರ್ಷಗಳ ಕಾಲ ತ.ರಾ.ಸು ಸಾಹಿತ್ಯ ರಚನೆ ಮಾಡಿದರು. ಅತ್ಯಂತ ಜನಪ್ರಿಯ ಬರಹಗಾರರಲ್ಲಿ ಒಬ್ಬರಾದರು. ಒಟ್ಟು ಅವರ ಹೆಸರನ್ನು ಹೊತ್ತ ಕೃತಿಗಳು ತೊಂಬತ್ತಾರು. ಈ ಸಂಖ್ಯೆಯಲ್ಲಿ ಅವರು ಸಂಪಾದಕರಾಗಿ ಸಿದ್ಧಮಾಡಿದ ಕೃತಿಗಳೂ ಇವೆ. ನಾಲ್ಕು ಕಥೆಗಳ ಸಂಗ್ರಹಗಳು ಎಪ್ಪತ್ತು ಕಾದಂಬರಿಗಳು. ಅ.ನ.ಕೃ ಅವರನ್ನು ಮುಕ್ತವಾಗಿ ಪ್ರಶಂಸಿಸುವ ‘ಅ.ನ.ಕೃ’, ‘ಮದಾಂಬವರಿ’ ಭಾಷಾಂತರ, ಮೂರು ರೇಡಿಯೋ ರೂಪಕಗಳ ಸಂಗ್ರಹ, ‘ಮಹಾಶ್ವೇತೆ’, ‘ಮೃತ್ಯು ಸಿಂಹಾಸನ’ ಎನ್ನುವ ಐತಿಹಾಸಿಕ ನಾಟಕಗಳು ಇಂತಹ ಹಲವಾರು ಕೃತಿಗಳೂ ಅವರ ಲೇಖನಿಯಿಂದ ಮೂಡಿಬಂದವು.
ತ.ರಾ.ಸು ಅವರ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿ ಲಕ್ಷಾಂತರ ಮಂದಿ ಪ್ರೇಕ್ಷಕರ ಮೆಚ್ಚಿಗೆಯನ್ನು ಗಳಿಸಿದವು. ‘ಹಂಸಗೀತೆ’ಯು ಹಿಂದಿಯಲ್ಲಿ ‘ಬಸಂತ ಬಹಾರ್’ ಆಗಿ ಅಖಿಲ ಭಾರತ ಮಟ್ಟದಲ್ಲಿ ಮೆಚ್ಚಿಗೆಯನ್ನು ಗಳಿಸಿತು. ‘ಹಂಸಗೀತೆ’ ಕನ್ನಡದಲ್ಲೂ ಚಿತ್ರವಾಗಿತ್ತು. ‘ನಾಗರಹಾವು’ ಗಳಿಸಿದ ಅಪಾರ ಯಶಸ್ಸು, ಕನ್ನಡ ಚಿತ್ರರಂಗದಲ್ಲಿ ಮೂಡಿಸಿದ ಹಲವಾರು ಪ್ರತಿಭೆ ವೈಶಿಷ್ಟ್ಯಗಳು ಇತ್ಯಾದಿಗಳು ಅಜರಾಮರವಾದದ್ದು. ಅವರ ಇನ್ನೂ ಬಹಳಷ್ಟು ಕಾದಂಬರಿಗಳು ಕೂಡಾ ಚಲನಚಿತ್ರಗಳಾಗಿದ್ದವು ಎಂಬುದು ನಾಡಿನ ಜನತೆಗೆ ತಿಳಿದಿರುವ ಸಂಗತಿ. ತ.ರಾ.ಸು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅವರನ್ನು ಸನ್ಮಾನಿಸಿತು. ಅವರ ‘ದುರ್ಗಾಸ್ತಮಾನ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿತು. (ಈ ಮನ್ನಣೆಯಿಂದ ಸಂತೋಷಪಡಲು ಅವರು ಬದುಕಿರಲಿಲ್ಲ ಎನ್ನುವುದೇ ವಿಷಾದದ ಸಂಗತಿ).
ತ.ರಾ.ಸು ಹಲವಾರು ಕಥೆಗಳನ್ನು ಬರೆದರೂ ಅದೇ ಅವರ ಮುಖ್ಯ ಮಾಧ್ಯಮವಾಗಲಿಲ್ಲ. ‘೦-೦=೦’, ‘ಒಂದು ತುಂಡು ಸುದ್ಧಿ’, ‘ಇನ್ನೊಂದು ಮುಖ’ ಇವು ತ.ರಾ.ಸು ಸಣ್ಣಕಥೆಯ ಮಾಧ್ಯಮದ ಮೇಲೆ ಪ್ರಭುತ್ವಕ್ಕೆ ಸಾಕ್ಷಿ. ಆದರೆ ಮುಖ್ಯವಾಗಿ ಅವರ ಮಾಧ್ಯಮ ಕಾದಂಬರಿ. ಮತ್ತೊಂದು ಪ್ರಮುಖ ವಿಚಾರವೆಂದರೆ, ಪ್ರಾಯಶಃ ಬಹು ಶ್ರೇಷ್ಠ ನಾಟಕಕಾರರಾಗಬಹುದಾಗಿದ್ದ ತ.ರಾ.ಸು ತಮ್ಮ ಕಾಲದ ಸಂದರ್ಭದಲ್ಲಿ ಕಾದಂಬರಿ ಮಾಧ್ಯಮವನ್ನು ಬಳಸಿಕೊಂಡರು ಎನ್ನುವ ಮಾತನ್ನು ಹೇಳಬೇಕು. ಅವರ ಕಾದಂಬರಿಗಳಲ್ಲಿ ಕಥಾವಸ್ತು ಸಾಗುವುದು ಶಕ್ತಿಯುತವಾದ ದೃಶ್ಯಗಳ ಮೂಲಕ. ಪಾತ್ರ-ಪಾತ್ರಗಳ ಪರಸ್ಪರ ಪ್ರತಿಕ್ರಿಯೆ, ಪ್ರಭಾವ ಅಥವಾ ಘರ್ಷಣೆ ಈ ದೃಶ್ಯಗಳಲ್ಲಿ ಸ್ಪಷ್ಟವಾಗುತ್ತದೆ.
ತ.ರಾ.ಸು ಅವರ ಕಾದಂಬರಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು. ಮೊದಲನೆಯದು, ಪ್ರಗತಿಶೀಲ ಪಂಥದ ಉತ್ಸಾಹೀ ಅತಿರಥರಾಗಿ ಬರೆದ ಕಾದಂಬರಿಗಳು. ‘ಕೇದಿಗೆ ವನ’, ‘ಜೀತದ ಜೀವ’, ‘ಪುರುಷಾವತಾರ’, ‘ಬೆಂಕಿಯ ಬಲೆ’, ‘ಬಿಡುಗಡೆಯ ಬೇಡಿ’, ‘ಮುಂಜಾವಿನ ಮುಂಜಾವು’, ‘ರಕ್ತತರ್ಪಣ’ ಇವೆಲ್ಲಾ ಈ ವರ್ಗದ ಕೃತಿಗಳು.
ಎರಡನೆಯದು ಐತಿಹಾಸಿಕ ಕಾದಂಬರಿಗಳು. ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’, ‘ತಿರುಗುಬಾಣ’, ‘ಮೃತ್ಯು ಸಿಂಹಾಸನ’, ‘ದುರ್ಗಾಸ್ತಮಾನ’ ಇವೆಲ್ಲಾ ಚಿತ್ರದುರ್ಗದ ಉಜ್ವಲ ಚರಿತ್ರೆಗೆ ಮುಡಿಪು. ಇವಲ್ಲದೆ ‘ನೃಪತುಂಗ’, ‘ವಿಜಯೋತ್ಸಾಹ’, ‘ಶಿಲ್ಪಶ್ರೀ’, ‘ಸಿಡಿಲಮೊಗ್ಗು’, ‘ಕೀರ್ತಿನಾರಾಯಣ’, ಇಂತಹ ಚಾರಿತ್ರಿಕ ಕಾದಂಬರಿಗಳನ್ನು ಬರೆದರು.
ಮೂರನೆಯದು ಇತರ ಕಾದಂಬರಿಗಳು. ಈ ಸ್ವರೂಪದ ಕಾದಂಬರಿಗಳು ಬಹುಮಟ್ಟಿಗೆ ಪ್ರಗತಿಶೀಲ ಪಂಥದ ಕಕ್ಷೆಯಲ್ಲಿ ಬರುತ್ತವೆ. ಅವರ ಬಹು ಜನಪ್ರಿಯ ಕೃತಿಗಳಲ್ಲಿ ಹಲವು ‘ನಾಗರಹಾವು’, ‘ಚಂದನದ ಗೊಂಬೆ’, ‘ಚಂದವಳ್ಳಿಯ ತೋಟ’, ‘ಚಕ್ರತೀರ್ಥ’, ‘ಹಂಸಗೀತೆ’ ಇತ್ಯಾದಿ. ಈ ಕಾದಂಬರಿಗಳಲ್ಲಿ ವ್ಯಕ್ತಿ-ವ್ಯಕ್ತಿಗಳ ಸಂಬಂಧ, ವ್ಯಕ್ತಿತ್ವ ರೂಪುಗೊಳ್ಳುವುದು ಅಲ್ಲಿನಮುಖ್ಯ ಆಸಕ್ತಿಯಾಗಿ ಹೊರಹೊಮ್ಮುತ್ತವೆ.
ತ.ರಾ.ಸು ಅವರ ಐತಿಹಾಸಿಕ ಕಾದಂಬರಿಗಳ ಪ್ರಾತಿನಿಧಿಕವಾಗಿ ‘ದುರ್ಗಾಸ್ತಮಾನ’ವನ್ನೇ ಪರಿಗಣಿಸಬಹುದು. ಅವರ ಎಲ್ಲ ಐತಿಹಾಸಿಕ ಕಾದಂಬರಿಗಳಂತೆ ಇದೂ ಘಟನೆಗಳಿಂದ ತುಂಬಿಹೋಗಿವೆ. ಇಡೀ ಕೃತಿ ಪೌರುಷದ ಜಯಘೋಷವಾಗಿ, ಅಗ್ನಿಪರ್ವತವೊಂದು ಪುರುಷರೂಪ ತಾಳಿ ನಾಯಕನಾಗಿ ಬಂದಂತೆ ಭಾಸವಾಗುತ್ತದೆ. ಅಂತಹ ಚೈತನ್ಯಮಯ ಮನುಷ್ಯ ಮದಕರಿನಾಯಕ. ದುರ್ಗ-ನಾಯಕರ ಅವಿನಾಭಾವ ಕೃತಿಯಲ್ಲಿ ರೂಪ ತಾಳುತ್ತದೆ. ದುರ್ಗವೇ ನಾಯಕ. ನಾಯಕನೇ ದುರ್ಗ. ಇಡೀ ರಾಜ್ಯದ ಹಂಬಲ ಅವನನ್ನು ಬೆಳೆಸುತ್ತದೆ. ಅವನು ರಾಜ್ಯದ ಅಂತರ್ ಶಕ್ತಿಯ ಮೂರ್ತಿಯಾಗುತ್ತಾನೆ. ಅವನ ಅವನತಿ ಪ್ರಾರಂಭವಾಗುವುದು ರಾಜ್ಯದ ಮತ್ತು ರಾಜಮನೆತನದ ಕಲ್ಯಾಣವನ್ನೇ ಬಯಸುವ ದಾರ್ಮಿಕ ಗುರುಗಳಿಬ್ಬರಿಂದಲೂ ದೂರವಾದಾಗ. ಇದರ ನಂತರ ಅವನ ಇಂದ್ರಿಯ ಸಂಯಮವೂ ಸಡಿಲಾಗುತ್ತದೆ. ‘ಕೀಚಕತನ’ ಪ್ರಕಟವಾಗುತ್ತದೆ ಅತ್ಯಂತ ಬುದ್ಧಿವಂತನಾದ ಪ್ರಧಾನಿಯೂ ದೂರವಾಗುತ್ತಾನೆ. ಒಂದು ಧರ್ಮ ಸೂಕ್ಷ್ಮಕ್ಕೆ ಸಿಲುಕಿದಾಗ (ಹೈದರಾಲಿ ದುರ್ಗವನ್ನು ಮುತ್ತಿದಾಗ ‘ಪಂಜಾ’ ತೊಳೆಯಲು ತಾವು ಊರ ಹೊರಕ್ಕೆ ಹೋಗಬೇಕೆಂದು ಕೆಲವರು ಮುಸ್ಲಿಮರು ಪ್ರಾರ್ಥನೆಯನ್ನು ಸಲ್ಲಿಸಬೇಕೆ?) ಸರಿಯಾದ ಮಾರ್ಗದರ್ಶನ ಮಾಡುವವರಿಲ್ಲದೆ ತಪ್ಪು ಹೆಜ್ಜೆ ಇಡುತಾನೆ. ಅಪಾತ್ರಕ್ಕೆ ತೋರಿದ ಉದಾತ್ತತೆಯ ದುರಂತವಾಗುತ್ತದೆ ಅವನ ಬಾಳು. ಪೌರುಷಕ್ಕೆ ನೀತಿ, ವ್ಯವಹಾರ ಜ್ಞಾನ ಎರಡೂ ಜೊತೆಗಾರರಾಗಬೇಕು . ಈ ಜೊತೆ ತಪ್ಪಿದಾಗ ದುರಂತ ಅನಿವಾರ್ಯ.
ಶಿವರಾಮ ಕಾರಂತರು ದುಡಿಮೆಯನ್ನು ಮೌಲ್ಯ ಮಾಡಿದಂತೆ ತ.ರಾ.ಸು ಪೌರುಷವನ್ನು ಒಂದು ಮೌಲ್ಯವನ್ನಾಗಿ ಮಾಡಿದರು.
ತ.ರಾ,ಸು ಅವರ ಇತರ ಕಾದಂಬರಿಗಳಲ್ಲಿ ಮಾನವೀಯ ಸಂಬಂಧಗಳೇ ಮುಖ್ಯ. ‘ಚಂದವಳ್ಳಿಯ ತೋಟ’, ‘ಚಂದನದ ಗೊಂಬೆ’, ‘ಚಕ್ರತೀರ್ಥ’, ಮೊದಲಾದ ಕಾದಂಬರಿಗಳಲ್ಲೆಲ್ಲ ಕಾಣುವುದು ಅಂತಃಕರಣದ ಮಹತ್ವ, ಪಾವಿತ್ರ್ಯ. ಈ ವರ್ಗದ ಬಹುಮಟ್ಟಿನ ಕಾದಂಬರಿಗಳಲ್ಲಿ ಅತಿ ಅಹಂಭಾವ, ಛಲ ಇವು ಸುಂದರಾವಾದ ಬಾಳನ್ನು ಕೆಡಿಸುತ್ತವೆ. ಈ ವರ್ಗದಲ್ಲಿ ‘ಹಂಸಗೀತೆ’ ಒಂದು ವಿಶಿಷ್ಟ ಕೃತಿ. ಪರಿಪಕ್ವತೆಗೆ ಗಟ್ಟಿತನದ ಯಾತ್ರೆ ಇದು. ಈ ಯಾತ್ರೆಯ ಹಾದಿ ಸಂಗೀತ. ಬಂಡೆಯಂತಹ ವ್ಯಕ್ತಿತ್ವದ ವೆಂಕಟಸುಬ್ಬಯ್ಯ ಕ್ರಮೇಣ ಮನುಷ್ಯನಾಗಿ, ಕಡೆಗೆ ದೇವರಿಗೇ ಮೀಸಲಾದ ಚೇತನವಾಗಿ ಬೆಳೆಯುವ ಪ್ರಕ್ರಿಯೆ ಕಾದಂಬರಿಯ ವಸ್ತು. ಕಥೆಯನ್ನು ಬೇರ ಬೇರೆ ಸ್ಥಳಗಳ ಮತ್ತು ಸ್ತರಗಳ ಪಾತ್ರಗಳಿಂದ ಹೇಳಿಸುವ ತಂತ್ರದಿಂದಾಗಿ ಕಥೆ ಭೂತ-ವರ್ತಮಾನಗಳ ನಡುವೆ ತೂಗುವಂತಾಗುತ್ತದೆ. ವಸ್ತುವನ್ನು ಸಾಕಷ್ಟು ದೂರದಿಂದ ಹಲವು ಕೋನಗಳಿಂದ ನೋಡುವುದು ಸಾಧ್ಯವಾಗುತ್ತದೆ.
ತ.ರಾ.ಸು ಅವರ ಒಟ್ಟು ಕಾದಂಬರಿಗಳ ಬಗ್ಗೆ ಹೇಳುವುದಾದರೆ ಉತ್ಕಟತೆ, ಭಾವತೀವ್ರತೆ ಅವರ ಸಾಹಿತ್ಯದಲ್ಲಿ ಎದ್ದು ಕಾಣುವ ಲಕ್ಷಣ. ಈ ಗುಣವೇ ಅವರ ಸ್ನೇಹ, ಪ್ರೇಮ, ವಿಶ್ವಾಸ, ಅಭಿಮಾನಗಳ ತಂಪನ್ನೂ, ಸತ್ವವನ್ನೂ ಒಂದು ಸನ್ನಿವೇಶದಲ್ಲಿ ಹಿಡಿದಿರುವುದನ್ನು ಸಾಧ್ಯಮಾಡಿತು. ಎಲ್ಲಕ್ಕಿಂತ ಮೊದಲಾಗಿ ತ.ರಾ.ಸು ಹೃದಯವಂತಿಕೆಯ ಕಾದಂಬರಿಕಾರ. ಅವರ ಐತಿಹಾಸಿಕ ಕಾದಂಬರಿಗಳಲ್ಲಂತೂ ಮುಖ್ಯ ಪಾತ್ರಗಳು ಜೀವನದಲ್ಲಿ ನಾವು ಕಾಣುವ ಮನುಷ್ಯರನ್ನು ಮೀರಿದವು. ಇತರ ಕಾದಂಬರಿಗಳಲ್ಲೂ ಒಬ್ಬ ವೆಂಕಟಸುಬ್ಬಯ್ಯನಾಗಲಿ, ಒಬ್ಬ ರಾಮಾಚಾರಿಯಾಗಲಿ ಇಂತಹ ಪಾತ್ರವೇ. ಪೌರುಷ, ಅಂತಃಕರಣ ಇವಿದ್ದರೆ ಮನುಷ್ಯ ಎಂತಹ ಎತ್ತರಕ್ಕೆ ಬೆಳೆಯಬಲ್ಲ ಎಂಬ ಕನಸು ಅವರ ಅನೇಕ ಕಾದಂಬರಿಗಳ ಕೇಂದ್ರದಲ್ಲಿದೆ.
ತ.ರಾ.ಸು ಅವರು ತಮ್ಮ ಬರವಣಿಗೆಯಲ್ಲಿ ಗಾದೆಯ ಮಾತಿನಂತೆ ಕೆಲವೇ ಮಾತುಗಳಲ್ಲಿ ಗಾಢ ಭಾವನೆಯನ್ನೋ, ಜೀವನದ ಪ್ರತಿಕ್ರಿಯೆಯನ್ನೋ ಅಡಗಿಸಬಲ್ಲವರು. ಅದೃಶ್ಯವಾದ ಆದರೆ ನಾಡಿನ ಜೀವನದಲ್ಲಿ ಪ್ರಭಾವಶಾಲಿಯಾದ ಜನತೆಯ ಸಂಸ್ಕೃತಿಗೆ ಹತ್ತಿರವಾಗಿದ್ದವರು ಅವರು. ಉದಾತ್ತತೆಯನ್ನು, ತ್ಯಾಗವನ್ನು, ಹೃದಯವಂತಿಕೆಯನ್ನು ಮೆಚ್ಚುವ ಸಂಸ್ಕೃತಿ ಇದು. ಇದರಿಂದಲೇ ಸಾಮಾನ್ಯ ಓದುಗ ತ.ರಾ.ಸು ಬರಹಕ್ಕೆ ರೋಮಾಂಚನಗೊಂಡ. ವಾಸ್ತವಿಕತೆ, ರೊಮ್ಯಾಂಟಿಸಿಸಂ, ಆದರ್ಶತ್ವ ಮೂರರ ಸಂಗಮ ತ.ರಾ.ಸು. ಅವರ ಸಾಹಿತ್ಯಸೃಷ್ಟಿ.
ತ.ರಾ.ಸು ಅವರು 1984ರ ಏಪ್ರಿಲ್ 10ರಂದು ಈ ಲೋಕವನ್ನಗಲಿದರು.
ಈ ಶ್ರೇಷ್ಠ ಕಾದಂಬರಿಕಾರರಿಗೆ ನಮ್ಮ ಶ್ರದ್ಧಾಪೂರ್ಣ ನಮನ.
(ಆಧಾರ: ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರು ಬರೆದಿರುವ ತ.ರಾ.ಸು ಅವರ ಕುರಿತ ಲೇಖನ)
No comments:
Post a Comment