Dr. Anupama Niranjan |
ಕನ್ನಡ ನಾಡಿನಲ್ಲಿ ಪ್ರಸಿದ್ಧ ಬರಹಗಾರ್ತಿಯಾಗಿ, ವೈದ್ಯರಾಗಿ ಜನಾನುರಾಗಿಗಳಾಗಿ ಅಪಾರವಾದ ಪ್ರಸಿದ್ಧಿ ಪಡೆದು ಅನುಪಮ ಬಾಳ್ವೆ ನಡೆಸಿದ ಡಾ. ಅನುಪಮಾ ನಿರಂಜನ ಅವರು 1934ರ ಮೇ 17ರಂದು ತೀರ್ಥಹಳ್ಳಿಯಲ್ಲಿ ಜನಿಸಿದರು. ಆನುಪಮಾ ಅವರ ಮೊದಲಿನ ಹೆಸರು ವೆಂಕಟಲಕ್ಷ್ಮಿ.
ವೃತ್ತಿಯಲ್ಲಿ ವೈದ್ಯರಾದ ಅನುಪಮಾ ಅವರು,
ಕನ್ನಡ ಕಾದಂಬರಿ ಕ್ಷೇತ್ರವು ತನ್ನ ಆಳ ಅಗಲಗಳನ್ನು ವಿಸ್ತರಿಸಿಕೊಂಡು ಮುನ್ನಡೆಯುತ್ತಿರುವ ಸಂಧರ್ಭದಲ್ಲಿ ಆ ಕ್ಷೇತ್ರಕ್ಕೆ ಕಾಲಿಟ್ಟರು. ಒಬ್ಬ ಒಳ್ಳೆಯ ವೈದ್ಯರಾಗುವುದರ ಜೊತೆಗೆ ಗಟ್ಟಿ ಸಾಹಿತಿಯಾಗಿ ಬೆಳೆದುನಿಂತರು. ಕುಳಕುಂದ ಶಿವರಾಯರೆಂದೇ ಚಿರಪರಿಚಿತರಾಗಿದ್ದ ನಿರಂಜನ ಅವರೊಂದಿಗೆ ನಡೆದ ವಿವಾಹ, ಅವರಿಗೆ ಲೇಖಕಿಯಾಗಿ ತಮ್ಮ ಗುರಿಯನ್ನು ಸಾದಿಸುವಲ್ಲಿ ಮತ್ತಷ್ಟು ಸಹಕಾರಿಯಾಯಿತು. ಡಾ.ಅನುಪಮಾ ನಿರಂಜನ ಅವರು ಬುದ್ದಿವಿಕಾಸಕ್ಕೆ ಪ್ರೇರಕವಾಗಬಲ್ಲ ವಿಚಾರ ಸಾಹಿತ್ಯದ ಜೊತೆಗೆ ವೈದ್ಯಕೀಯ ಗ್ರಂಥಗಳನ್ನು ಸಹ ರಚಿಸಿದರು.
ಕನ್ನಡ ಕಾದಂಬರಿ ಕ್ಷೇತ್ರವು ತನ್ನ ಆಳ ಅಗಲಗಳನ್ನು ವಿಸ್ತರಿಸಿಕೊಂಡು ಮುನ್ನಡೆಯುತ್ತಿರುವ ಸಂಧರ್ಭದಲ್ಲಿ ಆ ಕ್ಷೇತ್ರಕ್ಕೆ ಕಾಲಿಟ್ಟರು. ಒಬ್ಬ ಒಳ್ಳೆಯ ವೈದ್ಯರಾಗುವುದರ ಜೊತೆಗೆ ಗಟ್ಟಿ ಸಾಹಿತಿಯಾಗಿ ಬೆಳೆದುನಿಂತರು. ಕುಳಕುಂದ ಶಿವರಾಯರೆಂದೇ ಚಿರಪರಿಚಿತರಾಗಿದ್ದ ನಿರಂಜನ ಅವರೊಂದಿಗೆ ನಡೆದ ವಿವಾಹ, ಅವರಿಗೆ ಲೇಖಕಿಯಾಗಿ ತಮ್ಮ ಗುರಿಯನ್ನು ಸಾದಿಸುವಲ್ಲಿ ಮತ್ತಷ್ಟು ಸಹಕಾರಿಯಾಯಿತು. ಡಾ.ಅನುಪಮಾ ನಿರಂಜನ ಅವರು ಬುದ್ದಿವಿಕಾಸಕ್ಕೆ ಪ್ರೇರಕವಾಗಬಲ್ಲ ವಿಚಾರ ಸಾಹಿತ್ಯದ ಜೊತೆಗೆ ವೈದ್ಯಕೀಯ ಗ್ರಂಥಗಳನ್ನು ಸಹ ರಚಿಸಿದರು.
ಡಾ.ಅನುಪಮಾ ಅವರ ಕಾದಂಬರಿಗಳಲ್ಲಿ "ಮಾಧವಿ" ಯಂತಹ ಪೌರಾಣಿಕ ಕಾದಂಬರಿಯನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಕಾದಂಬರಿಗಳಲ್ಲಿ ಸಾಮಾಜಿಕ ವಸ್ತುವೇ ಪ್ರಧಾನವಾಗಿದೆ. "ಅನಂತಗೀತ", "ಶ್ವೇತಾಂಬರಿ", "ಹಿಮದಹೂ, "ಸ್ನೇಹ ಪಲ್ಲವಿ" ಮುಂತಾದ ಕಾದಂಬರಿಗಳು ಸಾಮಾಜಿಕ ಹರವನ್ನು ಅಬಿವ್ಯಕ್ತಿಸುವ ಕಾದಂಬರಿಗಳಾಗಿದ್ದು ವಸ್ತು-ಪಾತ್ರ-ನಿರೂಪಣೆಯ ದೃಷ್ಟಿಯಿಂದ ವೈವಿಧ್ಯಪೂರ್ಣವಾಗಿದೆ. "ಕಲ್ಲೋಲ" ಇವರ ನಾಟಕ. "ಕಣ್ಮಣಿ", "ರೂವಾರಿಯ ಲಕ್ಷ್ಮಿ", "ಪುಷ್ಪಕ" ಇವು ಇವರ ಕಥಾಸಂಕಲನಗಳು, "ಸ್ನೇಹಯಾತ್ರೆ", "ಅಂಗೈಯಲ್ಲಿ ಯೂರೋ ಅಮೆರಿಕ" ಪ್ರವಾಸ ಕಥನಗಳಾಗಿವೆ. ಅವರ 'ಋಣಮುಕ್ತಳು' ಕಾದಂಬರಿ ಪುಟ್ಟಣ್ಣನವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿಬಂತು.
"ದಿನಕ್ಕೊಂದು ಕಥೆ" ಎಂಬ ಕಥಾಮಾಲಿಕೆ ಶಿಶುಸಾಹಿತ್ಯಕ್ಕೆ ಅನುಪಮಾ ಅವರ ಅನುಪಮ ಕೊಡುಗೆಯಾಗಿದೆ. ದಿನಕ್ಕೊಂದು ಕಥೆ ಕನ್ನಡದಲ್ಲಿ ಪುರಾಣ ಕಥೆಗಳನ್ನು, ಇತರ ದೇಶಗಳ ಕಥೆಗಳನ್ನು, ಜಾನಪದ ಕಥೆಗಳನ್ನು ಒಟ್ಟುಗೂಡಿಸಿ ಸರಳವಾಗಿ ಹೆಣೆಯಲಾದ ಸಂಪುಟಗಳ ಮಾಲಿಕೆ. ವರ್ಷವಿಡೀ ದಿನಕ್ಕೊಂದು ಕಥೆಯಂತೆ ಓದಿಕೊಂಡು ಹೋಗಬಲ್ಲಂತೆ 365 ಕಥೆಗಳಿವೆ. "ಹೇಗೂ ನೂರಾರು ಕಥೆ ಬರೀತೀರಿ. ಮುನ್ನೂರ ಅರವತ್ತೈದೇ ಬರೆದ್ಬಿಡಿ. ದಿನಕ್ಕೊಂದು ಕಥೆಯಾಗ್ತದೆ" ಎಂದರು ಶ್ರೀ ನಿರಂಜನ, ಈ ರೀತಿ 'ದಿನಕ್ಕೊಂದು ಕಥೆ'ಯ ಉದಯವಾಯಿತು" ಎಂದು ಈ ಕತೆಗಳಲ್ಲಿನ ಮುನ್ನುಡಿಯಲ್ಲಿ ಡಾ. ಅನುಪಮ ನಿರಂಜನ ಬರೆದಿದ್ದಾರೆ.
"ಕೇಳು ಕಿಶೋರಿ, "ತಾಯಿ ಮಗು', "ಆರೋಗ್ಯದರ್ಶನ, "ಶಿಶುವೈದ್ಯ ದೀಪಿಕೆ", "ಆರೋಗ್ಯಭಾಗ್ಯಕ್ಕೆ ವ್ಯಾಯಾಮ" ಇವು ಡಾ. ಅನುಪಮಾ ನಿರಂಜನ ಅವರ ಪ್ರಮುಖ ವೈದ್ಯಕೀಯ ಸಾಹಿತ್ಯ ಕೃತಿಗಳಾಗಿವೆ. ಇವರ ಹಲವಾರು ಕಥೆ ಹಾಗೂ ಕಾದಂಬರಿಗಳು ಭಾರತೀಯ ಇತರ ಭಾಷೆಗಳಿಗೆ ಅನುವಾದಗೊಂಡಿವೆ.
ಸಾಹಿತ್ಯ ಅಕಾಡೆಮಿ ಪುರಸ್ಕಾರ ಹಾಗೂ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿಗಳು ಅನುಪಮಾ ಅವರಿಗೆ ಸಂದವು. ಕಾಸರಗೋಡು ಮಹಿಳಾ ಸಮ್ಮೇಳನದ ಅಧ್ಯಕ್ಷತೆ, ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಹಾ ಅವರು ವಹಿಸಿದ್ದರು.
ಪ್ರಗತಿಶೀಲರ ಪ್ರಗತಿಪರ ಧೋರಣೆ, ಬಂಡಾಯ ಮನೋಭಾವ, ನವ್ಯರ ಆತ್ಮಶೋಧನೆ ಮತ್ತು ಕಲಾತ್ಮಕತೆ ಹೀಗೆ ವಿವಿಧ ಸಾಹಿತ್ಯಕ ಮನೋಧರ್ಮಗಳು ಡಾ.ಅನುಪಮಾ ನಿರಂಜನರ ಕಾದಂಬರಿಗಳಲ್ಲಿ ಮೇಳೈಸಿವೆ. ಪ್ರಗತಿಶೀಲ, ನವ್ಯ, ನವ್ಯೋತ್ತರಕ್ಕೆ ಪರಿಚಯವಿಲ್ಲದ ವೈದ್ಯಕೀಯ ಕ್ಷೇತ್ಯದ ಅನುಭವಗಳು, ಮನೋವೈಜ್ಞಾನಿಕ ವಿಶ್ಲೇಷಣೆಗಳು ಸಹಾ ಇವರ ಬರವಣಿಗೆಗಳಲ್ಲಿ ವಿಜೃಂಬಿಸುವುದರಿಂದ ಡಾ.ಅನುಪಮಾರವರು ಎಲ್ಲ ಕಾಲದ ಲೇಖಕರ ನಡುವೆಯೂ ಪ್ರಮುಖರಾಗಿ ಗಮನ ಸೆಳೆಯುತ್ತಾರೆ. ಅನುಪಮಾ ಅವರ ಕಾದಂಬರಿಗಳಲ್ಲಿ ಕಾಣುವ ವಸ್ತುನಿಷ್ಟತೆ, ಮನೋವೈಜ್ಞಾನಿಕ ವಿಶ್ಲೇಷಣೆ, ವೈಚಾರಿಕತೆ, ಬಂಡಾಯ ಪ್ರವೃತ್ತಿ, ಮಾನವೀಯ ಸಂಭಂಧಗಳ ನಿರೂಪಣೆ ಇವೆಲ್ಲಾ ಕಾದಂಬರಿ ಕ್ಷೇತ್ರಕ್ಕೆ ಹೊಸ ಮಜಲುಗಳನ್ನು ಕೊಟ್ಟಿವೆ. ಈ ಎಲ್ಲಾ ಹಿನ್ನೆಲೆಗಳಲ್ಲಿ ಡಾ.ಅನುಪಮಾ ಅವರು ಕನ್ನಡದಲ್ಲಿ ವಿಶಿಷ್ಟ ಲೇಖಕಿಯಾಗಿ ನಿಲ್ಲುತ್ತಾರೆ.
ಸಾಹಿತ್ಯಕವಾಗಿ, ವೃತ್ತಿಪೂರ್ವಕವಾಗಿ ಮತ್ತು ಸಾಮಾಜಿಕವಾಗಿ ಮಹತ್ವದ ಸಾಧನೆಗಳನ್ನು ಮಾಡಿದ ಡಾ. ಅನುಪಮಾ ನಿರಂಜನ ಅವರು 1991ರ ವರ್ಷದಲ್ಲಿ ನಿಧನರಾದರು. ಸಹೃದಯ ಮನೋಭಾವ, ಶ್ರೇಷ್ಠ ಮಾನವೀಯಗುಣ, ಹಲವು ಪ್ರತಿಭೆಗಳ ಸಂಗಮರಾದ ಡಾ. ಅನುಪಮಾ ನಿರಂಜನ ಅವರ ಚೇತನಕ್ಕೆ ನಮ್ಮ ಗೌರವಪೂರ್ಣ ನಮನಗಳು.
(ಆಧಾರ: ಕಣಜ.ಇನ್ ಮತ್ತು ವಿಕಿಪೀಡಿಯಾದ ಕೆಲವು ಲೇಖನಗಳ ಸಹಾಯವನ್ನು ಈ ಲೇಖನಕ್ಕೆ ಕೃತಜ್ಞತೆಗಳೊಂದಿಗೆ ಬಳಸಿಕೊಂಡಿದ್ದೇನೆ)
No comments:
Post a Comment