ಶಾಲೆಯ ಮೆಟ್ಟಿಲೇರದೆ ಗಣಿತ ಕರಗತ ಮಾಡಿಕೊಂಡ ಅಸಾಮಾನ್ಯ ಸಾಧಕಿ ಶಕುಂತಲಾದೇವಿ!!
‘ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾದ ಶಕುಂತಲಾದೇವಿಯವರು 1929 ನವೆಂಬರ್ 4ರಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರ ತಂದೆ ಸಂಪ್ರದಾಯ ದತ್ತವಾಗಿ ಬಂದ ದೇವಸ್ಥಾನದ ಪೂಜವೃತ್ತಿಯನ್ನು ಧಿಕ್ಕರಿಸಿ ಸರ್ಕಸ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಸರ್ಕಸ್ ಕಂಪನಿಯಲ್ಲಿ ಟ್ರಪೀಜ್ ಹುದ್ದೆ, ಟೈಟ್ ರೋಪ್ ಪ್ರದರ್ಶನ, ಸಿಂಹ ಪಳಗಿಸುವ ವಿದ್ಯೆ ಮತ್ತು ಮಾನವ ಕ್ಯಾನನ್ಬಾಲ್ ಹುದ್ದೆಗಳನ್ನು ನಿರ್ವಹಿಸುತ್ತಿದ್ದರು. ಶಕುಂತಲದೇವಿಯವರು ಮೂರು ವರ್ಷದವರಿದ್ದಾಗಲೇ ತಂದೆಯ ಜೊತೆ ಸರ್ಕಸ್ ಕಂಪನಿಗೆ ಹೋಗಲು ಪ್ರಾರಂಭಿಸಿದರು. ಆ ಚಿಕ್ಕ ವಯಸ್ಸಿನಲ್ಲಿಯೇ ಇಸ್ಪೀಟಿನೆಲೆಯ ಟ್ರಿಕ್ಸ್-ನಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದರು. ಇಸ್ಪೀಟಿನೆಲೆಯನ್ನು ಕಲೆಸಿ ಬೇಕೆಂದ ಎಲೆಯನ್ನು ಕ್ಷಣಾರ್ಧದಲ್ಲಿ ಎತ್ತಿಕೊಂಡು ಮಗಳ ಚಾಣಾಕ್ಷತೆ ಮತ್ತು ಅಗಾಧ ಜ್ಞಾಪಕಶಕ್ತಿಯನ್ನು ಕಂಡ ತಂದೆ ಅಚ್ಚರಿಗೊಂಡರು.
ಅವರು ತಮ್ಮ ವೃತ್ತಿಗೆ ಗುಡ್ ಬೈ ಹೇಳಿ ಮಗಳೊಂದಿಗೆ ಬೀದಿಗಳನ್ನು ಸುತ್ತಿ ಶಕುಂತಲದೇವಿಯವರ ಚಾಕಚಕ್ಯತೆಯ ಪ್ರದರ್ಶವನ್ನು ಜನರಿಗೆ ತೋರಿಸಿದ್ದರು. ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ಸಾಮರ್ಥ್ಯ ಹೊಂದಿದ್ದ ಶಕುಂತಲದೇವಿಯವರಿಗೆ ತಂದೆಯೇ ಗುರು, ಹಸಿವೆಯೇ ಪಠ್ಯ, ಬೀದಿಯೇ ಪಾಠಶಾಲೆಯಾಯಿತು.