Translate in your Language

Tuesday, November 4, 2014

ಶಕುಂತಲಾದೇವಿ!! ಅವರ ೮೫ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಶಾಲೆಯ ಮೆಟ್ಟಿಲೇರದೆ ಗಣಿತ ಕರಗತ ಮಾಡಿಕೊಂಡ ಅಸಾಮಾನ್ಯ ಸಾಧಕಿ ಶಕುಂತಲಾದೇವಿ!!
ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾದ ಶಕುಂತಲಾದೇವಿಯವರು 1929 ನವೆಂಬರ್ 4ರಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರ ತಂದೆ ಸಂಪ್ರದಾಯ ದತ್ತವಾಗಿ ಬಂದ ದೇವಸ್ಥಾನದ ಪೂಜವೃತ್ತಿಯನ್ನು ಧಿಕ್ಕರಿಸಿ ಸರ್ಕಸ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಸರ್ಕಸ್ ಕಂಪನಿಯಲ್ಲಿ ಟ್ರಪೀಜ್ ಹುದ್ದೆ, ಟೈಟ್ ರೋಪ್ ಪ್ರದರ್ಶನ, ಸಿಂಹ ಪಳಗಿಸುವ ವಿದ್ಯೆ ಮತ್ತು ಮಾನವ ಕ್ಯಾನನ್ಬಾಲ್  ಹುದ್ದೆಗಳನ್ನು ನಿರ್ವಹಿಸುತ್ತಿದ್ದರು. ಶಕುಂತಲದೇವಿಯವರು ಮೂರು ವರ್ಷದವರಿದ್ದಾಗಲೇ ತಂದೆಯ ಜೊತೆ ಸರ್ಕಸ್ ಕಂಪನಿಗೆ ಹೋಗಲು ಪ್ರಾರಂಭಿಸಿದರು. ಆ ಚಿಕ್ಕ ವಯಸ್ಸಿನಲ್ಲಿಯೇ ಇಸ್ಪೀಟಿನೆಲೆಯ ಟ್ರಿಕ್ಸ್-ನಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದರು. ಇಸ್ಪೀಟಿನೆಲೆಯನ್ನು ಕಲೆಸಿ ಬೇಕೆಂದ ಎಲೆಯನ್ನು ಕ್ಷಣಾರ್ಧದಲ್ಲಿ ಎತ್ತಿಕೊಂಡು ಮಗಳ ಚಾಣಾಕ್ಷತೆ ಮತ್ತು ಅಗಾಧ   ಜ್ಞಾಪಕಶಕ್ತಿಯನ್ನು ಕಂಡ ತಂದೆ ಅಚ್ಚರಿಗೊಂಡರು. 

   ಅವರು ತಮ್ಮ ವೃತ್ತಿಗೆ ಗುಡ್ ಬೈ ಹೇಳಿ ಮಗಳೊಂದಿಗೆ ಬೀದಿಗಳನ್ನು ಸುತ್ತಿ ಶಕುಂತಲದೇವಿಯವರ ಚಾಕಚಕ್ಯತೆಯ ಪ್ರದರ್ಶವನ್ನು ಜನರಿಗೆ ತೋರಿಸಿದ್ದರು. ಅಂತಾರಾಷ್ಟ್ರೀಯ  ಮಟ್ಟಕ್ಕೆ ಬೆಳೆಯುವ ಸಾಮರ್ಥ್ಯ ಹೊಂದಿದ್ದ ಶಕುಂತಲದೇವಿಯವರಿಗೆ ತಂದೆಯೇ ಗುರು, ಹಸಿವೆಯೇ ಪಠ್ಯ, ಬೀದಿಯೇ ಪಾಠಶಾಲೆಯಾಯಿತು.


  ಶಕುಂತಲದೇವಿಯವರನ್ನು ಬೆಂಗಳೂರಿನ ಚಾ೧೨೨೨ಮರಾಜಪೇಟೆಯಲ್ಲಿರುವ ಶಾಲೆಗೆ ಸೇರಿಸಿದರು. ಆದರೆ ಶಾಲೆಯ ಶುಲ್ಕ ೨ ರೂಪಾಯಿಯನ್ನಕಟ್ಟಲಾದದ್ದರಿಂದ ಶಾಲೆಯಿಂದ ಹೊರದಬ್ಬಲ್ಪಟ್ಟರು. ದೊಡ್ಡ ಸಂಖ್ಯೆಯನ್ನು ಮನಸ್ಸಿನೊಳಗೆ ನೆನಪಿಟ್ಟುಕೊಂಡು ಗಣಿತದ ಸೂತ್ರ ಬಳಸಿ ಉತ್ತರಿಸುವ ವಿದ್ಯೆ ಇವರಿಗೆ ದೈವದತ್ತವಾಗಿ ಬಂದಿತ್ತು. ಈ ಸಾಮರ್ಥ್ಯದಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಮಾನವ ಕಂಪ್ಯೂಟರ್ ಎಂದು ಕರೆಸಿಕೊಳ್ಳುತ್ತಿದ್ದರು. ಇವರು ತಮ್ಮ ಪ್ರತಿಭೆಯನ್ನು ೬ನೇ ವಯಸ್ಸಿನಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಮತ್ತು ೮ನೆಯ ವಯಸ್ಸಿನಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಪ್ರದರ್ಶಿಸಿದರು.

     ಇವರಿಗೆ ಅಮೆರಿಕದ ಡಲ್ಲಾಸ್ ವಿಶ್ವವಿದ್ಯಾಲಯದಲ್ಲಿ ೨೦೧ ಅಂಕಿಗಳನ್ನು ಹೊಂದಿರುವ ಒಂದು ಸಂಖ್ಯೆಯ :       (91674867620039158098660927585380162483106680144308622407126516427934657040867096593279205767480806790072783016354924852380335745316935111903596577547340075681688305620821016129132845564805780158806771) ೨೩ನೇ ವರ್ಗಮೂಲ ಹೇಳಲು ಕೇಳಿದಾಗ ಮನಸ್ಸಿನಲ್ಲೇ ನೆನಪಿಟ್ಟುಕೊಂಡು ಲೆಕ್ಕಾಚಾರ ಮಾಡಿ ೫೦ ಸೆಕೆಂಡ್-ಗಳಲ್ಲಿ ಉತ್ತರಿಸಿದರು! ಈ ಲೆಕ್ಕಾಚಾರಕ್ಕೆ ಯೂನಿವ್ಯಾಕ್ ೧೧೦೮ ಕಂಪ್ಯೂಟರ್ ಉತ್ತರಿಸಲು ತೆಗೆದುಕೊಂಡ ಸಮಯ ೬೦ಸೆಕೆಂಡ್-ಗಳು.

     
೧೯೮೦ ಜೂನ್ ೧೮ರಂದು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಕಂಪ್ಯೂಟರ್ ವಿಭಾಗವರು ೧೩ ಅಂಕಿಗಳ ೨ ಸಂಖ್ಯೆಯನ್ನು ಗುಣಕಾರ (7,686,369,774,870*2,465,099,745,779) ಮಾಡಲು ಕೊಟ್ಟಾಗ ಇವರು ೨೮ಸೆಕೆಂಡ್-ಗಳಲ್ಲಿ ಉತ್ತರಿಸಿದರು! ಈ ಪ್ರದರ್ಶವನ್ನು ೧೯೯೫ರ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್-ನಲ್ಲಿ ದಾಖಲಿಸಲಾಯಿತು. ಜ್ಯೋತಿಷ್ಯ ಶಾಸ್ತ್ರದಲ್ಲು ಪಾಂಡಿತ್ಯ ಹೊಂದಿದ್ದೈವರು ಹುಟ್ಟಿದ ಸಮಯ ಮತ್ತು ದಿನಾಂಕದ ಆಧಾರದ ಮೇಲೆ ಹಲವಾರು ಗಣ್ಯರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಇವರು ಪಝಲ್ಸ್ ಟು ಪಝಲ್ಸ್ ಯು, ಮೋರ್ ಪಝಲ್ಸ್ ಟು ಪಝಲ್ಸ್ ಯು, ಬುಕ್ ಆಫ್ ನಂಬರ್ಸ್, ಆಸ್ಟ್ರಾಲಜಿ ಫಾರ್ ಯು ಇನ್ನೂ ಇತರೆ ಪುಸ್ತಕಗಳನ್ನು ಬರೆದಿದ್ದಾರೆ. ಇವರು ಕನ್ನಡ, ಇಂಗ್ಲಿಷ್ ಹಿಂದಿ ಹಾಗು ಸ್ಪಾನಿಶ್ ಭಾಷೆಗಳನ್ನು ಬಲ್ಲವರಾಗಿದ್ದಾರು. ಇವರು ೨೦೧೩ರ ಏಪ್ರಿಲ್ ೨೧ರಂದು ಬೆಂಗಳೂರಿನಲ್ಲಿ ಶ್ವಾಸಕೋಶ ಸಮಸ್ಯೆಯಿಂದ ನಿಧನರಾದರು.

No comments:

Post a Comment