ಬಿಜೆಪಿಯ ಸೌಮ್ಯವಾದಿ ನಾಯಕ, ಅಜಾತಶತ್ರು ಮತ್ತು ವಾಗ್ಮಿಯಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಸ್ವಾತಂತ್ರ್ಯ ಸೇನಾನಿ, ಶಿಕ್ಷಣತಜ್ಞ ದಿವಂಗತ ಮದನ್ ಮೋಹನ್ ಮಾಳವೀಯ (ಮರಣೋತ್ತರ) ಅವರನ್ನು ಈ ಬಾರಿಯ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತರತ್ನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಿಜೆಪಿಯ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಾಜಪೇಯಿ 1998ರಿಂದ 2004ರ ಅವಧಿಯಲ್ಲಿ ಸರಕಾರ ನಡೆಸಿದವರು. ಬಿಜೆಪಿಯ 'ಜಾತ್ಯತೀತ ಮುಖ'ವಾಗಿ ಗಮನ ಸೆಳೆದ ಅವರು, ಅಜಾತ ಶತ್ರುವೆಂದೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದಾರೆ. 23 ರಾಜಕೀಯ ಪಕ್ಷಗಳ ಮೈತ್ರಿಕೂಟದ ಸರಕಾರವನ್ನು ನಿಭಾಯಿಸಿದ ಅವರು, ಮೈತ್ರಿಧರ್ಮದ ಅನುಪಾಲನೆಯಲ್ಲಿ ಆದರ್ಶ ಮಾದರಿ ಎಂದೆನಿಸಿಕೊಂಡಿದ್ದರು. 1957ರಿಂದ 2009ರವರೆಗೆ ಅವರು ಲೋಕಸಭಾ ಸದಸ್ಯರಾಗಿದ್ದರು.