ನಮ್ಮ ದೇಶದ ಖ್ಯಾತ ನಟರಾದ ರಾಜಕಪೂರ್, ಕಮಲಹಾಸನ್, ರಜನಿಕಾಂತ, ಆಮಿರಖಾನ್, ಅಷ್ಟೇ ಏಕೆ ಜಗತ್ತಿನ ಅದ್ವಿತೀಯ ನಟರಿಗೆಲ್ಲಾ ಮೆಚ್ಚುವ ಜಗತ್ತಿನ ಏಕೈಕ ನಟ/ನಿರ್ದೇಶಕ/ನಿರ್ಮಾಪಕ "ಚಾರ್ಲಿ ಚಾಪ್ಲಿನ್" ಈ ಶತಮಾನ ಕಂಡ ಜಗತ್ತಿನ ಅತ್ಯಂತ ಶ್ರೇಷ್ಟ ಹಾಸ್ಯ ಚಕ್ರವರ್ತಿ.
ಅದ್ಭುತ ನಟನೆ, ವಿಚಿತ್ರ ಮ್ಯಾನರಿಸಂ ಮತ್ತು ಹಾವಭಾವಗಳಿಂದ ಇಡೀ ಜಗತ್ತನ್ನು ನಕ್ಕು ನಲಿಸಿದ ಹಾಸ್ಯ ಚಕ್ರವರ್ತಿ (ಸರ್ ಚಾರ್ಲ್ಸ್ ಸ್ಪೆನ್ಸರ್ ಚಾರ್ಲಿ ಚಾಪ್ಲಿನ್) ಚಾರ್ಲಿ ಚಾಂಪ್ಲಿನ್ ಹುಟ್ಟಿ ಏಪ್ರಿಲ್ 16ಕ್ಕೆ ಭರ್ತಿ 126 ವರ್ಷ. ಚಾಪ್ಲಿನ್ ಜನಿಸಿದ್ದು 1889ರ ಏಪ್ರಿಲ್ 16ರಂದು ಲಂಡನ್ ನಲ್ಲಿ. ಚಾಪ್ಲಿನ್ ಇಂದಿಗೂ ಜೀವಂತ. ಎಂದಿಗೂ ನಕ್ಕುನಗಿಸುತ್ತಲೇ ಇರುತ್ತಾರೆ ಅವರ ಚಿತ್ರಗಳ ಮುಖಾಂತರ. ಮೂಕಿ ಚಿತ್ರದಿಂದ ಟಾಕಿ ಚಿತ್ರದವರೆಗೂ ಹಾಸ್ಯ ನಟ ಮತ್ತು ಚಿತ್ರ ನಿರ್ದೇಶಕನಾಗಿ ಬೆಳೆದ ಪರಿ ಅಮೋಘ. ಅವನು ಸಂಗೀತ ನಿರ್ದೇಶಕ ಕೂಡ ಆಗಿದ್ದ. ಮನದೊಳಗೆ ನೋವಿನ ಸಾವಿರ ಕಂತೆಗಳನ್ನಿಟ್ಟುಕೊಂಡರೂ ಜನಮಾನಸದಲ್ಲಿ ನಗುವಿನ ಹಣತೆಯನ್ನು ಮೂಡಿಸಿದ ಅವನಿಗೆ ಇಡೀ ಜಗತ್ತೇ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದೆ. ಸೀರಿಯಸ್ ಟ್ರಾಂಪ್ ಚಾರ್ಲಿಗೆ ಶುಭಾಶಯ ಹೇಳುತ್ತಿರುವ ನಮ್ಮ ಜತೆ ನೀವೂ ಸೇರಿಕೊಳ್ಳಿರಿ. ಪುಟ್ಟಮಕ್ಕಳಿಂದ ಹಿಡಿದು ಮುದುಕರವರೆಗೂ ಚಾಪ್ಲಿನ್ ನನ್ನು ಇಷ್ಟಪಡದವರು ಇರಲಿಕ್ಕಿಲ್ಲ. ಸಮಾಜದ ಅಂಕುಡೊಂಕುಗಳನ್ನು, ಯಾಂತ್ರಿಕ ಬದುಕನ್ನು, ಮುಖವಾಡಗಳನ್ನು ಬೆತ್ತಲೆಗೊಳಿಸುವುದರಲ್ಲಿ ಚಾರ್ಲಿ ನಿಸ್ಸೀಮ. ದಿ ಸರ್ಕಸ್ ಎಂಬ ಸಿನಿಮಾದಲ್ಲಿ ಸಿಂಹದ ಬೋನಿನೊಳಗೆ ಸಿಕ್ಕಿ ಅನುಭವಿಸಿದ ಪರಿಪಾಟಲು, ದಿ ಗ್ರೇಟ್ ಡಿಕ್ಟೇಟರ್ ಚಿತ್ರದಲ್ಲಿ ಹಿಟ್ಲರ್ ನ ಬಗ್ಗೆ ಒಂದು ಬಲೂನ್ ಮೂಲಕ ಮಾಡಿದ ವಿಡಂಬನೆ, ಸರ್ಕಸ್ ಸಿನಿಮಾದಲ್ಲಿನ ಅತ್ಯದ್ಬುತ ನಟನೆ ನಾವಂತೂ ಮರೆಯುವುದಿಲ್ಲ. ಚಾಪ್ಲಿನ್ ಪ್ರಮುಖ ಚಿತ್ರಗಳೆಂದರೆ ದಿ ಕಿಡ್(1920), ಗೋಲ್ಡ್ ರಷ್(1924), ದಿ ಸರ್ಕಸ್(1928), ಸಿಟಿ ಲೈಟ್ಸ್(1931), ಮಾಡರ್ನ್ ಟೈಮ್ಸ್(1936), ದಿ ಗ್ರೇಟ್ ಡೈರೆಕ್ಟರ್(1940) ಲಥಮ್ ಲೈಟ್(1952). ಇವರು 1940ರವರೆಗೆ ಕೇವಲ ಮೂಕಿ ಚಿತ್ರದಲ್ಲೇ ಜಗತ್ತನ್ನು ನಗಿಸಿದರು. "ನಮ್ಮ ಸಮಸ್ಯೆಯಂತೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ", "ಬದುಕಿನಲ್ಲಿ ನಗದ ದಿನ ವ್ಯರ್ಥ" ಮತ್ತು "ನನಗೆ ಮಳೆಯಲ್ಲಿ ನಡೆಯಲು ಇಷ್ಟ, ಯಾಕೆಂದರೆ ನಾನು ಅಳುವುದು ಯಾರಿಗೂ ಕಾಣದು" ಎಂಬುದು ಆತ ಉದುರಿಸಿದ ಕೆಲವು ಅಣಿಮುತ್ತುಗಳು.
No comments:
Post a Comment