… ಹಿರಣ್ಣಯ್ಯ ಅವರ ಕುರಿತು ಒಂದಷ್ಟು…
ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ 15, 1934ರಂದು ಮೈಸೂರಿನಲ್ಲಿ ಜನಿಸಿದರು. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. 1952ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. 1953ರಲ್ಲಿ ತಂದೆಯವರು ನಿಧನರಾದಾಗ, ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ತಾವೇ ವಹಿಸಿಕೊಂಡು ನಿರಂತರವಾಗಿ ಮುನ್ನಡೆಸಿದರು.
ಮಾಸ್ಟರ್ ಹಿರಣ್ಣಯ್ಯನವರು ನಾಟಕಗಳಲ್ಲಿ ಪ್ರಖ್ಯಾತರಾಗಿ, ತಮ್ಮ ನಾಟಕಗಳ ಮೂಲಕ ಸಾರ್ವಜನಿಕ ವಲಯದಲ್ಲಿ, ಸಮಾಜದ ರಾಜಕೀಯದ ಅಂಕು ಡೊಂಕುಗಳ ಬಗ್ಗೆ ವಿಚಾರ ಕ್ರಾಂತಿ ಮೂಡಿಸಿದವರು. ಅದಕ್ಕೂ ಮಿಗಿಲಾಗಿ ಅವರ ವಿರುದ್ಧ ಕಿರುಕುಳ ನೀಡಲು ನಿಂತವರ ಮುಂದೆ ಸೊಪ್ಪು ಹಾಕದೆ ತಮ್ಮ ಕೆಲಸವನ್ನು ನಿರಂತರವಾಗಿ ಮುಂದುವರೆಸಿದವರು. ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ಪ್ರಧಾನಿ ಇಂದಿರಾ ಗಾಂಧೀ ಜೊತೆಗೆ ಅನೇಕ ರಾಜಕೀಯ ನಾಯಕರು, ವಿವಿಧ ಹಂತಗಳ ಪುಡಾರಿಗಳು ಇವರ ಟೀಕಾ ಪ್ರಹಾರವನ್ನು ತಡೆದುಕೊಳ್ಳಲಾರದೆ ಅವರ ಚಟುವಟಿಕೆಗಳನ್ನು ಮಟ್ಟ ಹಾಕಲು ನಡೆಸಿದ ಪ್ರಯತ್ನಗಳನ್ನೆಲ್ಲಾ ಧೈರ್ಯವಾಗಿ ಮೆಟ್ಟು ನಿಂತ ಧೀರರಾಗಿ ಅವರು ತಮ್ಮ ಕಲೆಯನ್ನು ಬೆಳಗಿದ ರೀತಿ ಅನನ್ಯ. ಅದೆಷ್ಟು ಬಾರಿ ಕೋರ್ಟ್ ಹತ್ತಿದರೋ ಈ ಪುಣ್ಯಾತ್ಮ. ಸುಪ್ರೀಂ ಕೋರ್ಟಿಗೆ ಹೋಗಿ ನ್ಯಾಯ ಪಡೆದರು. ಆದರೆ ಅನ್ಯಾಯವಂತರೆದುರು ಎಂದೂ ತಲೆತಗ್ಗಿಸಲಿಲ್ಲ. ಅವರ ಸಾಮಾಜಿಕ ಕಾಳಜಿ, ಅನ್ಯಾಯದ ವಿರುದ್ಧ ನಿರ್ದಾಕ್ಷಿಣ್ಯ ಮಾತು, ಅಂತೆಯೇ ಕನ್ನಡದ ಬಗ್ಗೆ, ಕನ್ನಡದ ಸಾಮಾನ್ಯ ಜನತೆಗೆ ಅವರು ತೋರುತ್ತ ಬಂದಿರುವ ಪ್ರೀತಿ, ಸರಳ ಸಜ್ಜನಿಕೆ, ಇವೆಲ್ಲಾ ಅನುಪಮವಾದದ್ದು.