ನಮ್ಮ ನಿಮ್ಮೆಲ್ಲರ ಅಚ್ಚು-ಮೆಚ್ಚಿನ , ಗಜ, ಸಾರಥಿ, ಜಗ್ಗು-ದಾದ, ಐರಾವತ, ಚಾಲೆಂಜಿಂಗ್ ಸ್ಟಾರ್ದರ್ಶನ್
ನಮ್ಮ ಕನ್ನಡ ಚಿತ್ರರಂಗದಲ್ಲಿ ಹತ್ತು ಹಲವು ನಿಟ್ಟಿನಲ್ಲಿ ಚಿರಪರಿಚಿತ ಹೆಸರು. ಅಂದು ಕನ್ನಡ ಚಿತ್ರರಂಗದಲ್ಲಿ ತೂಗುದೀಪ ಶ್ರೀನಿವಾಸ್ ಪ್ರಸಿದ್ಧ ಖಳನಟರು. ಹಲವಾರು ಚಿತ್ರಗಳಲ್ಲಿ ಪೋಷಕ ನಟರಾಗಿ ಕೂಡ ಅದ್ಭುತವಾಗಿ ನಟಿಸಿದವರು. ತೂಗುದೀಪ ಶ್ರೀನಿವಾಸರ ಪುತ್ರರಾದ ದರ್ಶನ್ ಚಿತ್ರರಂಗದಲ್ಲಿ ಪ್ರಾರಂಭದಲ್ಲಿ ‘ದರ್ಶನ್ ತೂಗುದೀಪ’ ಎಂದೇ ಪರಿಚಿತರಾದವರು. ದರ್ಶನ್ ಜನಿಸಿದ್ದು ಫೆಬ್ರುವರಿ 16, 1977 ರಲ್ಲಿ.
ತೂಗುದೀಪ ಶ್ರೀನಿವಾಸರು ಅಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದರಾದರೂ ಅವರ ಬದುಕು ಹೂವಿನ ಹಾಸಿಗೆಯದಾಗಿರಲಿಲ್ಲ.
ಹೀಗೆ ಕಷ್ಟವನ್ನರಿತು ಮೇಲೆ ಬಂದ ದರ್ಶನ್ ಸ್ಟಾರ್ ಆಗಿಯೇ ಚಿತ್ರರಂಗಕ್ಕೆ ಬಂದವರಲ್ಲ. ಅವರು ಇಂದು ಗಳಿಸಿರುವ ಸ್ಟಾರ್ ಗಿರಿಯು ಕೂಡಾ ಅವರು ಎದುರಿಸಿ ಬಂದ ಚಾಲೆಂಜುಗಳಿಂದ ವೃದ್ಧಿಸಿದ್ದು. ನಟರಾಗುವುದಕ್ಕೆ ಮುಂಚೆ ಅವರು ಲೈಟ್ ಬಾಯ್ ಕೆಲಸವೂ ಸೇರಿದಂತೆ ಹೊಟ್ಟೆಪಾಡಿನ ಹಲವು ಮಜಲುಗಳನ್ನು ದಾಟಿ ಬಂದವರು.
2000ದ ವರ್ಷದಲ್ಲಿ ‘ಮೆಜೆಸ್ಟಿಕ್’ ಚಿತ್ರದಿಂದ ನಾಯಕನಾಗಿ ನಟನೆ ಆರಂಭಿಸಿದ ದರ್ಶನ್ ಕಲಾಸಿಪಾಳ್ಯ, ಗಜ, ದತ್ತ, ಕರಿಯ, ಸಾರಥಿ, ಸಂಗೊಳ್ಳಿ ರಾಯಣ್ಣ, ಬುಲ್ ಬುಲ್, ಅಂಬರೀಶ ಮುಂತಾದ ಜಯಭೇರಿ ಭಾರಿಸಿದ ಚಿತ್ರಗಳೂ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ನಟರಾಗಿ ಜೊತೆಗೆ ನಿರ್ಮಾಪಕರಾಗಿ ಮುನ್ನಡೆಯುತ್ತಿದ್ದಾರೆ. ತಮ್ಮ ಕುಟುಂಬಕ್ಕೆ ಸೇರಿದ ಚಿತ್ರಗಳಲ್ಲೆಲ್ಲಾ ತಾವೇ ಪ್ರಧಾನವಾಗಿ ಮಿಂಚಲೇಬೇಕೆಂಬ ಇರಾದೆಯಿಲ್ಲದೆ ‘ಜೊತೆ ಜೊತೆಯಲಿ’ ಅಂತಹ ಯಶಸ್ವೀ ಚಿತ್ರ ತಮ್ಮ ಬ್ಯಾನರಿನಿಂದ ಮೂಡಿ ಬರುವಂತಹ ಬುದ್ಧಿಶಕ್ತಿ ಕೂಡಾ ತೋರಿದ್ದಾರೆ. ದರ್ಶನರ ತಮ್ಮ ದಿನಕರ ತೂಗುದೀಪ, ಅವರ ನಿರ್ಮಾಣಗಳಲ್ಲಿ ನಿರ್ದೇಶಕನಾಗಿ ಯಶಸ್ವಿಯಾಗಿದ್ದು ಅವರ ಕುಟುಂಬದ ಸದಸ್ಯರು ಚಿತ್ರ ನಿರ್ಮಾಣದ ಕಾಯಕದಲ್ಲಿ ಅವರ ಜೊತೆ ಜೊತೆಯಾಗಿ ಸಾಗಿದ್ದಾರೆ.
ಸಿನಿಮಾಗಳ ಪರಿಧಿಯಾಚೆಯಲ್ಲಿ ತಾನೇ ಸ್ವಂತವಾಗಿ ನಿರ್ಮಿಸಿರುವ ಮೃಗಾಲಯ ಮುಂತಾದ ಆಸಕ್ತಿಗಳಿಂದ ಕೂಡಾ ದರ್ಶನ್ ಜನಪ್ರಿಯರಾಗಿದ್ದಾರೆ. ‘ಸಂಗೊಳ್ಳಿ ರಾಯಣ್ಣ’ ಅಂತಹ ಕ್ರಾಂತಿಕಾರಕ ಮಹಾನುಭಾವನನ್ನು ತೆರೆಯ ಮೇಲೆ ಬಿಂಬಿಸಿದ್ದಾರೆ. ಆ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಕೂಡ ಅವರದ್ದಾಗಿದೆ.
ಎಲ್ಲೋ ಮರೆಯಾಗುತ್ತಿದೆ ಕನ್ನಡತನ ಅನಿಸುತ್ತಿರುವ ಈ ದಿನಗಳಲ್ಲಿ, ಕನ್ನಡ ಚಿತ್ರರಂಗವನ್ನು ಕಂಡಾಗ “ನಮಗೆ ಬೇಕಿರುವ ಕನ್ನಡ ತನ ಇದೇನಾ” ಎಂಬ ಪ್ರಶ್ನೆ ಮತ್ತೂ ಭೀಕರವೆನಿಸುತ್ತದೆ. ಕನ್ನಡದ ಯಶಸ್ವೀ ಹುಡುಗರಾದ ದರ್ಶನ್ ಅಂತಹವರು ಇಂತಹ ನಿಟ್ಟಿನಲ್ಲಿ ಆಲೋಚಿಸಿ ಕನ್ನಡ ಚಿತ್ರರಂಗದಲ್ಲಿ ಮತ್ತು ಕನ್ನಡ ನಾಡಿನಲ್ಲಿ ಉತ್ತಮ ಯುಗ ಕಾಣುವಂತೆ ಮಾಡಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳೋಣ.
No comments:
Post a Comment