Translate in your Language

Saturday, September 3, 2016

ಜಿ. ವಿ. ಅಯ್ಯರ್ ಅವರ 100ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ


ಕನ್ನಡದ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ  ಜಿ. ವಿ. ಅಯ್ಯರ್ ಅವರು ಜನಿಸಿದ್ದು ಅಂದಿನ ಮೈಸೂರು ರಾಜ್ಯದ ನಂಜನಗೂಡಿನನ್ನಲ್ಲಿ 3ನೇ ಸೆಪ್ಟೆಂಬರ್ 1917 ರಂದು.
ಇನ್ನೂ ಚೆನ್ನಾಗಿ ನೆನಪಿದೆ.  ಅದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣಾ ಸಮಾರಂಭ.  ಆ ವರ್ಷ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದವರು ಅಖಿಲ ಭಾರತ ಮಟ್ಟದಲ್ಲಿ ಪ್ರಖ್ಯಾತರಾದ  ಕೆ. ಬಾಲಚಂದರ್.  ಕೆ. ಬಾಲಚಂದರ್ ಅವರು ಆ ವರ್ಷದ ಶ್ರೇಷ್ಠ ಚಲನಚಿತ್ರವಾದ ‘ಆದಿ ಶಂಕರಚಾರ್ಯ’ ಚಿತ್ರದ ಹೆಸರು ಹೇಳುತ್ತಾ, ಈ ಚಿತ್ರಕ್ಕೆ  ‘ಸ್ವರ್ಣಕಮಲ’ಕ್ಕಿಂತ ದೊಡ್ಡ ಪ್ರಶಸ್ತಿ ನೀಡಲು ಸಾಧ್ಯವಿದ್ದಿದ್ದರೆ ಚೆನ್ನಿತ್ತು ಎನಿಸುತ್ತಿದೆ ಎಂದರು.  ಆ ಚಿತ್ರದ ನಿರ್ದೇಶಕರು ನಮ್ಮ  ಜಿ. ವಿ. ಅಯ್ಯರ್.   ಜಿ. ವಿ. ಅಯ್ಯರ್ ಅವರು ಇಡೀ ಚಲನಚಿತ್ರರಂಗದಲ್ಲಿ ಮಾಡಿದ ಸಾಧನೆ ಅಂತಿಂತದ್ದಲ್ಲ.  ಇಡೀ ಭಾರತದ ಶ್ರೇಷ್ಠತೆಯನ್ನೇ ಚಲನಚಿತ್ರರಂಗದಲ್ಲಿ ಮೂಡಿಸಲು ಪ್ರಯತ್ನಿಸಿದ ಅದ್ವಿತೀಯರವರು.  ಎಲ್ಲ ರೀತಿಯಲ್ಲೂ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ ಆಚಾರ್ಯರವರು.
ಗಣಪತಿ ವೆಂಕಟರಮಣ ಅಯ್ಯರ್ ಅವರು ಸೆಪ್ಟೆಂಬರ್ 3, 1917ರಂದು ನಂಜನಗೂಡಿನಲ್ಲಿ ಜನಿಸಿದರು.  ಜಿ. ವಿ. ಅಯ್ಯರ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಎಂ. ವಿ. ರಾಜಮ್ಮನವರು ನಿರ್ಮಿಸಿದ ರಾಧಾರಮಣ ಚಿತ್ರದಿಂದ.  ಅದೇ ಚಿತ್ರ ಬಾಲಕೃಷ್ಣ ಅವರನ್ನೂ ತೆರೆಗೆ ಪರಿಚಯಿಸಿತು.  ಅದಕ್ಕೂ ಮುನ್ನ ಮೈಸೂರಿನ ‘ಸದಾರಮೆ’ ನಾಟಕ ಕಂಪನಿಯಲ್ಲಿ, ಹಾಗು ಗುಬ್ಬಿ ನಾಟಕ ಕಂಪನಿಯಲ್ಲಿ ಪರಿಚಾರಕರಾಗಿ, ಪೋಸ್ಟರ್ ಬರೆಯುವವರಾಗಿ ಹೀಗೆ ವಿದವಿದದಲ್ಲಿ ಅಯ್ಯರ್ ಚಾಕರಿ ಮಾಡಿದ್ದರು.   ಆ ನಂತರ ಅವಕಾಶಗಳನ್ನರಸಿ ಪುಣೆಗೆ ಹೋದ ಅಯ್ಯರ್, ಅಲ್ಲಿ ಹೋಟೆಲ್ ಮಾಣಿಯಾಗಿದ್ದುಕೊಂಡೇ ಚಿತ್ರರಂಗದಲ್ಲಿನ ಅವಕಾಶಗಳಿಗೆ ಪ್ರಯತ್ನಿಸಿದರು.   ಅದು ಫಲಕಾರಿಯಾಗದೆ ಕರ್ನಾಟಕಕ್ಕೆ ಹಿಂದಿರುಗಿದರು. 

1954ರಲ್ಲಿ ರಾಜ್ ಕುಮಾರ್ ಮತ್ತು ನರಸಿಂಹರಾಜು ಅವರಿಗೆ ಪ್ರಾರಂಭ ಒದಗಿಸಿದ ಎಚ್ ಎಲ್ ಎನ್ ಸಿಂಹರ ಬೇಡರ ಕಣ್ಣಪ್ಪ  ಚಿತ್ರ ಜಿ.ವಿ. ಅಯ್ಯರ್ ಅವರಿಗೂ ಪ್ರಸಿದ್ಧಿ ತಂದಿತು.  ಚಲನಚಿತ್ರ ಮತ್ತು ರಂಗಭೂಮಿ ಎರಡೂ ಕ್ಷೇತ್ರಗಳಲ್ಲಿ ಜಿ. ವಿ. ಅಯ್ಯರ್ ಮುಂದುವರೆಯ ತೊಡಗಿದರು.  ‘ಸೋದರಿ’, ‘ಮಹಾಕವಿ ಕಾಳಿದಾಸ’, ‘ಹರಿಭಕ್ತ’, ‘ಹೇಮಾವತಿ’ ಅಯ್ಯರ್ ಅವರು ಅಭಿನಯಿಸಿದ ಇತರ ಕೆಲವು ಚಿತ್ರಗಳು.  ಹವ್ಯಾಸಿ ರಂಗಭೂಮಿಯಲ್ಲೂ ಆಸಕ್ತಿ ತಳೆದಿದ್ದ ಅಯ್ಯರ್ ಅಂದಿನ ದಿನಗಳಲ್ಲಿ ಪ್ರಸಿದ್ಧವಾಗಿದ್ದ ‘ಸತ್ತವರ ನೆರಳು’ ಅಂತಹ ನಾಟಕಗಳಲ್ಲಿ ಕೂಡಾ ನಟಿಸಿದ್ದರು ಎಂಬುದು ಗಮನಾರ್ಹ. 

1955ರಲ್ಲಿ ತೆರೆಕಂಡ ಸೋದರಿ ಚಿತ್ರದ ಮೂಲಕ ಜಿ. ವಿ. ಅಯ್ಯರ್ ಅವರ ಲೇಖನಿ  ಚಿತ್ರರಂಗದಲ್ಲಿ ಕಾರ್ಯಾರಂಭ ಮಾಡಿತು.  ಆ ಚಿತ್ರದಲ್ಲಿ ಅಯ್ಯರ್ ಗೀತೆಗಳನ್ನೂ ಸಂಭಾಷಣೆಗಳನ್ನೂ ಬರೆದರು.  ಮುಂದೆ ಅಯ್ಯರ್ ಬಹಳಷ್ಟು ಶ್ರೇಷ್ಠ ಗೀತೆಗಳನ್ನು ಬರೆದರು.  ವಾಲ್ಮೀಕಿ ಚಿತ್ರದ ‘ಜಲಲ ಜಲಲ ಜಲ ಧಾರೆ’, ದಶಾವತಾರ ಚಿತ್ರದ ‘ಗೋದಾವರಿ ದೇವಿ ಮೌನವಾಗಿಹೆ ಏಕೆ, ವೈದೇಹಿ ಏನಾದಳು’, ಎಮ್ಮೆ ತಮ್ಮಣ್ಣ ಚಿತ್ರದ ‘ನೀನಾರಿಗಾಧೆಯೋ ಎಲೆ ಮಾನವ’, ಕಿತ್ತೂರು ಚೆನ್ನಮ್ಮ ಚಿತ್ರದ ‘ಸನ್ನೆ ಏನೇನೋ ಮಾಡಿತು ಕಣ್ಣು’, ರಣಧೀರ ಕಠೀರವ ಚಿತ್ರದ ‘ಕರುನಾಡ ಕಣ್ಮಣಿಯೇ ಕಠೀರವ’, ರಾಜಶೇಖರ ಚಿತ್ರದ ‘ಮುತ್ತಂತ ಮಗನಾಗಿ ಹೆತ್ತವಳ ಸಿರಿಯಾಗಿ’, ಸಂಧ್ಯಾರಾಗದ ‘ನಂಬಿದೆ ನಿನ್ನ ನಾದ ದೇವತೆಯೇ’, ‘ಕನ್ನಡತಿ ತಾಯೆ ಬಾ’, ಕಣ್ತೆರೆದು ನೋಡು ಚಿತ್ರದ ‘ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ’,  ಗಾಳಿಗೋಪುರ ಚಿತ್ರದ  ‘ಗಾಳಿಗೋಪುರ ನಿನ್ನಾಶಾ ತೀರ ನಾಳೆ ಕಾಣುವ’, ‘ನನ್ಯಾಕೆ ನೀ ಹಾಗೇ ನೋಡುವೆ ಮಾತಾಡೇ ಬಾಯಿಲ್ಲವೇ’, ಪೋಸ್ಟ್ ಮಾಸ್ಟರ್ ಚಿತ್ರದ ‘ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ’, ತಾಯಿ ಕರುಳು ಚಿತ್ರದ ‘ಬಾ ತಾಯೆ ಭಾರತಿಯೇ ಭಾವ ಭಾಗೀರಥಿಯೇ’  ಇಂತಹ ಅನೇಕ ಮನೋಜ್ಞ ಗೀತೆಗಳನ್ನು ಅಯ್ಯರ್ ಬರೆದಿದ್ದಾರೆ. 

1962ರ ವರ್ಷದಲ್ಲಿ ಜಿ. ವಿ. ಅಯ್ಯರ್ ಭೂದಾನ ಚಿತ್ರ ನಿರ್ದೇಶಿಸಿದರು.  ಆ ಚಿತ್ರ ರಾಷ್ಟ್ರಪ್ರಶಸ್ತಿ ಗಳಿಸಿತು.  ಕನ್ನಡದ ಕಲಾವಿದರು ಸಂಕಷ್ಟದಲ್ಲಿದ್ದಾಗ ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಇವರನ್ನೊಡಗೂಡಿ ಕನ್ನಡ ಕಲಾವಿದರ ಸಂಘವನ್ನು ಸ್ಥಾಪಿಸಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡ ಚಿತ್ರೋದ್ಯಮ ನೆಲೆ ನಿಲ್ಲಲು ಶ್ರಮಿಸಿದ್ದಲ್ಲದೆ  ಈ ಸಂಘದ ಗೆಳೆಯರೊಡನೆ ರಣಧೀರ ಕಂಠೀರವ ಚಲನಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದರು. ತಾಯಿಕರುಳು, ಲಾಯರ್ ಮಗಳು, ಬಂಗಾರಿ, ಪೋಸ್ಟ್ ಮಾಸ್ಟರ್, ಕಿಲಾಡಿ ರಂಗ,  ರಾಜಶೇಖರ, ಮೈಸೂರು ಟಾಂಗ, ಚೌಕದ ದೀಪ ಮುಂತಾದವು ಅಯ್ಯರ್ ಅವರು 1969ರ ವರ್ಷದವರೆಗೆ ನಿರ್ಮಿಸಿ ನಿರ್ದೇಶಿಸಿದ ಇನ್ನಿತರ ಚಿತ್ರಗಳು. 

1972ರಲ್ಲಿ ಜಿ. ವಿ. ಅಯ್ಯರ್ ಡಾ. ಎಸ್. ಎಲ್. ಭೈರಪ್ಪನವರ ಪ್ರಸಿದ್ಧ ಕಾದಂಬರಿ ‘ವಂಶವೃಕ್ಷ’ವನ್ನು ಆಧರಿಸಿ ಅದೇ ಹೆಸರಿನ  ಚಿತ್ರವನ್ನು ಬಿ. ವಿ. ಕಾರಂತ ಮತ್ತು ಗಿರೀಶ್ ಕಾರ್ನಾಡ್ ಜೋಡಿ ನಿರ್ದೇಶನದಲ್ಲಿ ನಿರ್ಮಿಸಿದರು.  ಆ ಚಿತ್ರ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗಕ್ಕೆ ಪ್ರತಿಷ್ಠಿತ ಸ್ಥಾನ ದೊರಕಿಸಿಕೊಟ್ಟಿತಲ್ಲದೆ ಈ ಹಿಂದೆ  ‘ಸಂಸ್ಕಾರ’ ಚಿತ್ರದಿಂದ ಪ್ರಾರಂಭಗೊಂಡಿದ್ದ ಹೊಸ ಅಲೆಯ ಚಿತ್ರಗಳ ನಿರ್ಮಾಣಕ್ಕೆ ಹೊಸ ಭಾಷ್ಯ ಬರೆಯಿತು.  ಕನ್ನಡದ ಪ್ರಸಿದ್ಧ ನಟರಾದ ವಿಷ್ಣುವರ್ಧನ ಅವರು ಈ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. 

1975ರ ವರ್ಷದಲ್ಲಿ ಜಿ. ವಿ. ಅಯ್ಯರ್ ಅವರು ನಿರ್ದೇಶಿಸಿದ ‘ಹಂಸಗೀತೆ’ ಭಾರತೀಯ ಚಿತ್ರರಂಗದಲ್ಲಿ ನಾದದ ಅಲೆಗಳನ್ನೇ ಹೊರಹೊಮ್ಮಿಸಿತು.  ತರಾಸು ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರ ಬಾಲಮುರಳಿಕೃಷ್ಣ, ಬಿ. ವಿ. ಕಾರಂತ, ಎಂ. ಎಲ್ ವಸಂತಕುಮಾರಿ, ಪಿ. ಲೀಲಾ, ಬಿ. ಕೆ ಸುಮಿತ್ರ ಅಂತಹವರ ಸಂಗೀತ ವೈವಿಧ್ಯವನ್ನು ಕಟ್ಟಿಕೊಟ್ಟಿತು.    ಈ ಚಿತ್ರ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಅನಂತ ನಾಗ್ ಅವರಿಗೆ ಕನ್ನಡದಲ್ಲಿ ಕೀರ್ತಿಯನ್ನು ಕೊಟ್ಟು  ಕನ್ನಡದಲ್ಲಿ ಹೆಚ್ಚು  ನೆಲೆ ನಿಲ್ಲಲು ಪ್ರೇರಕವಾದ  ಚಿತ್ರವೂ ಹೌದು.   ‘ಹಂಸಗೀತೆ’ಯಲ್ಲಿ ಚಿತ್ರದುರ್ಗದ ಕೋಟೆಗಳ ನಡುವೆ  ಹೊರಹೊಮ್ಮುವ ನಾದಮಯ ಸಂಗೀತ, ಭಾರತೀಯ ಹೃನ್ಮನಗಳನ್ನು ಬೆಳಗಿದ ರೀತಿ ಅನನ್ಯವಾದುದು. 

‘ವಂಶವೃಕ್ಷ’ ಮತ್ತು ‘ಹಂಸಗೀತೆ’ಗಳಿಂದ ಪ್ರಾರಂಭಗೊಂಡಂತೆ  ಜಿ. ವಿ. ಅಯ್ಯರ್ ಅವರು ತಮ್ಮನ್ನು ವ್ಯಾಪಾರೀ ಚಿತ್ರಗಳ   ಪರಿಧಿಯಿಂದ ಹೊರಗಿಟ್ಟುಕೊಂಡರು.  ಒಂದು ರೀತಿಯಲ್ಲಿ ಹೇಳಬೇಕೆಂದರೆ ಅವರು ಮಾರುಕಟ್ಟೆಯನ್ನಾಗಲಿ, ಯಾರನ್ನಾದರೂ ಮೆಚ್ಚಿಸಬೇಕೆಂದಾಗಲೀ ಚಿತ್ರಗಳನ್ನು ನಿರ್ಮಿಸುವುದನ್ನು ಬಿಟ್ಟು ‘ಕರ್ಮಯೋಗಿ’ಯಂತೆ ತಮ್ಮ ಮನದಾಳದ ಕೂಗಿಗೆ ಅನ್ವಯವಾಗಿ ಚಿತ್ರ ನಿರ್ದೇಶನ ನಿರ್ಮಾಣಗಳಲ್ಲಿ ನಿರತರಾದರು. 

1979ರಲ್ಲಿ ‘ನಾಳೆಗಳನ್ನು ಮಾಡುವವರು’ ಎಂಬ ಚಿತ್ರ ನಿರ್ದೇಶಿಸಿದ ಅಯ್ಯರ್ ಮುಂದೆ ವಿಶ್ವಪ್ರಸಿದ್ಧರಾದದ್ದು 1983ರಲ್ಲಿ ಅವರು ಸಂಸ್ಕೃತ ಭಾಷೆಯಲ್ಲಿ ಪ್ರಪ್ರಥಮವಾಗಿ ನಿರ್ದೇಶಿಸಿದ ‘ಆದಿ ಶಂಕರಾಚಾರ್ಯ’ ಚಿತ್ರದಿಂದ.  ಅಂದಿನ ದಿನಗಳಲ್ಲಿ ಆ ಚಿತ್ರ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರೂ ವ್ಯಾಪಾರೀ ಮಾಧ್ಯಮಗಳಾದ ಚಿತ್ರಮಂದಿರಗಳು ಆ ಚಿತ್ರವನ್ನು ಆಧರಿಸಲಿಲ್ಲ.  ಹೀಗಾಗಿ ಅಯ್ಯರ್ ಈ ಚಿತ್ರದ ಪ್ರದರ್ಶನವನ್ನು ವಿದ್ವಾಂಸರು ಅರ್ಥ ವಿವರಿಸುವುದರೊಂದಿಗೆ ಕಲ್ಯಾಣ ಮಂಟಪಗಳಂತಹ ಜಾಗಗಳಲ್ಲಿ ಪ್ರದರ್ಶನ ಏರ್ಪಡಿಸಿ ಸಹೃದಯ ಜನತೆಗೆ ಆ ಮಹಾನ್ ಚಿತ್ರವನ್ನು ಸವಿಯಲು ಅವಕಾಶ ಮಾಡಿಕೊಟ್ಟಿದ್ದರು.  ‘ಮಂಕುತಿಮ್ಮನ ಕಗ್ಗ’ದ ವ್ಯಾಖ್ಯಾನಗಳಿಗೆ ಪ್ರಖ್ಯಾತರಾದ ವಿದ್ವಾಂಸ ಮತ್ತು ಪ್ರಾಧ್ಯಾಪಕ ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ವ್ಯಾಖ್ಯಾನದೊಂದಿಗೆ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಈ ಚಿತ್ರವನ್ನು ನೋಡಿದ ಅನುಭವ ನನ್ನಲ್ಲಿ ಇನ್ನೂ ನೆಲೆನಿಂತಿದೆ.  ಒಬ್ಬ ಜರ್ಮನ್ ಮಹಾವಿದ್ವಾಂಸರು ಈ ಚಿತ್ರದ ಕುರಿತು ವ್ಯಾಖ್ಯಾನಪೂರ್ಣ ಗ್ರಂಥವನ್ನೇ ರಚಿಸಿದ್ದಾರೆ.  ಈ ಲೇಖನದ ಪ್ರಾರಂಭದಲ್ಲಿ ಹೇಳಿದ ಹಾಗೆ ಈ ಚಿತ್ರ ಅತ್ಯುತ್ತಮ ಚಿತ್ರಕ್ಕಾಗಿನ ಸ್ವರ್ಣ ಕಮಲ ಪ್ರಶಸ್ತಿಯಷ್ಟೇ ಅಲ್ಲದೆ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ಶ್ರವಣ ತಂತ್ರಜ್ಞತೆಗಾಗಿನ ರಾಷ್ಟ್ರಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.  

ಶಂಕರರ ಜೀವನ ಮತ್ತು ಚಿಂತನೆಗಳನ್ನು ಅಧ್ಯಾತ್ಮಿಕವೇ ಅಲ್ಲದೆ ವೈಜ್ಞಾನಿಕ ತಳಹದಿಯ ಮೇಲೆ ಕೂಡಾ ಚಿತ್ರರೂಪಕವಾಗಿಸಿದ ಜಿ. ವಿ. ಅಯ್ಯರ್ ಅವರು ತಮ್ಮ ಕಾಯಕವನ್ನು ಶಂಕರರ ‘ಅದ್ವೈತ’ ಚಿಂತನೆಗೆ ಮಾತ್ರವೇ ಸೀಮಿತಗೊಳಿಸಲಿಲ್ಲ.  1986ರಲ್ಲಿ ಕನ್ನಡದಲ್ಲಿ ‘ಮಧ್ವಾಚಾರ್ಯ’ರನ್ನು ತೆರೆಗೆ ತರುವ ಮೂಲಕ ಅಯ್ಯರ್ ‘ದ್ವೈತ’ ಚಿಂತನೆಗಳ ಬಗೆಗೆ  ಜನತೆಗೆ ಅರಿವನ್ನು ಮೂಡಿಸಿದರು.  ಮುಂದೆ 1989ರ ವರ್ಷದಲ್ಲಿ ಅಯ್ಯರ್ ಅವರು ತಮಿಳು ಮೂಲದವರಾದ ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ  ರಾಮಾನುಜರ ಕಥೆಯನ್ನು, ಅದೇ ಭಾಷೆಯಲ್ಲೇ ಮೋಹಕ ರೀತಿಯಲ್ಲಿ ತೆರೆಗೆ ತಂದರು. 

ಮುಂದೆ 1993ರಲ್ಲಿ ಅಯ್ಯರ್ ಭಗವದ್ಗೀತೆಯನ್ನು ಮನೋಜ್ಞರೀತಿಯಲ್ಲಿ ಚಿತ್ರಮಾಧ್ಯಮದಲ್ಲಿ ತಂದು ಅಚ್ಚರಿ ಮೂಡಿಸಿದರು.  ಈ ಚಿತ್ರ ಕೂಡಾ ರಾಷ್ಟ್ರಪ್ರಶಸ್ತಿ ಮತ್ತು ಬೋಗೋಟ ಅಂತರರಾಷ್ಟ್ರೀಯ ಚಿತ್ರೋತ್ಸವಗಳ ಪ್ರಶಸ್ತಿಯ ಗೌರವಗಳನ್ನು ತನ್ನದಾಗಿಸಿಕೊಂಡಿತು. 


ಸಮೇತನ ಹಳ್ಳಿ ರಾಮರಾಯರ ಕೃತಿಯನ್ನು ಆಧರಿಸಿದ ‘ನಾಟ್ಯ ರಾಣಿ ಶಾಂತಲ’ ಎಂಬ ಕನ್ನಡ ಮತ್ತು ಹಿಂದಿ ಭಾಷೆಗಳ  ದೂರದರ್ಶನ ಧಾರಾವಾಹಿ;  ಹೇಮಾಮಾಲಿನಿ, ಮಿಥುನ್ ಚಕ್ರವರ್ತಿ, ಸರ್ವರ್ದಮನ್ ಬ್ಯಾನರ್ಜಿ ಮುಂತಾದ  ಪ್ರಸಿದ್ಧ ಕಲಾವಿದರನ್ನು  ಒಳಗೊಂಡ ‘ವಿವೇಕಾನಂದ’; ‘ಶ್ರೀಕೃಷ್ಣ ಲೀಲಾ’ ಎಂಬ ಕಿರುತೆರೆಯ  ಧಾರಾವಾಹಿ ಮುಂತಾದವು ಅಯ್ಯರ್ ಅವರು ನೀಡಿದ ಇತರ ಕೊಡುಗೆಗಳು. 

ರಾಮಾಯಣವನ್ನು ತೆರೆಗೆ ತರಬೇಕು ಎಂದು ಆ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಸಂಜಯ ದತ್ ಅವರನ್ನು ಒಪ್ಪಿಸಲು ಮುಂಬೈಗೆ ತೆರಳಿದ್ದ ಅಯ್ಯರ್ ಡಿಸೆಂಬರ್ 2003ರ ವರ್ಷದಲ್ಲಿ ನಿಧನರಾದರು. 

ನಟರಾಗಿ, ಚಿತ್ರ ಸಾಹಿತಿಯಾಗಿ, ಗೀತ ರಚನೆಕಾರರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಇವೆಲ್ಲಕ್ಕೂ ಮಿಗಿಲಾಗಿ ಭಾರತೀಯ ಸಂಸ್ಕೃತಿಯ ಪ್ರವರ್ತಕರಾಗಿ ಜಿ.ವಿ. ಅಯ್ಯರ್ ಅವರು ಸಲ್ಲಿಸಿದ ಸೇವೆ ಅದ್ವೀತಿಯವಾದದ್ದು.  ಶಂಕರಾಚಾರ್ಯ ಚಿತ್ರ ನಿರ್ಮಿಸಿದ ಮೇಲೆ ಪಾದರಕ್ಷೆಗಳನ್ನು  ಧರಿಸುವುದನ್ನೂ ಸಹಾ ಬಿಟ್ಟುಬಿಟ್ಟ ಅಯ್ಯರ್ ಸಂತರಂತೆಯೇ ಬದುಕಲು ಪ್ರಾರಂಭಿಸಿದರು.  ಅವರ ಮನೆ ಕೂಡ ಭಾರದ್ವಾಜ ಆಶ್ರಮ ಎನಿಸಿತು.   ಅಯ್ಯರ್ ಅವರ ಭಾಷಣಗಳನ್ನು ಆಲಿಸಿದವರಿಗೆ ಅವರ ಮಾತುಗಳು ಮಹಾದರ್ಶನದ ಅನುಭಾವ ದೊರಕಿಸಿಕೊಂಡ ಯೋಗಿಯೊಬ್ಬನ ಮಾತುಗಳಂತೆ ಭಾಸವೆನಿಸುತ್ತಿದ್ದವು. 

ಅಯ್ಯರ್ ಅವರು  ನಿಧನರಾದಾಗ ಒಂದು ಪತ್ರಿಕೆ ಬರೆಯಿತು ‘a saint who walked alone’ ಎಂದು.  ಚಿತ್ರರಂಗದಲ್ಲಿ ಮಾತ್ರವಲ್ಲ ಇಂದಿನ ಲೋಕದಲ್ಲಿ ಕೂಡಾ ಜಿ. ವಿ. ಅಯ್ಯರ್ ಅಪರೂಪದ ಸಂತರೇ ಹೌದು.  ಈ ಮಹಾನ್ ಚೇತನದ ಕಲಾದರ್ಶನ, ಮಾತುಗಳು, ಉಪಸ್ಥಿತಿ, ಮತ್ತು ದಿಗ್ದರ್ಶನವನ್ನು ಕಂಡು ಕಿಂಚಿತ್ತು ಸವಿಯಲು  ಶಕ್ಯರಾದ ನಮ್ಮ ಭಾಗ್ಯವು ಕೂಡಾ ದೊಡ್ಡದೇ. 

ಸಾಮಾನ್ಯವಾಗಿ ನಾವು ಒಬ್ಬ ವ್ಯಕ್ತಿಯನ್ನು ಬರೆಯುವಾಗ ಆತನನ್ನು ಒಳ್ಳೆಯವನೆಂದೋ ಇಲ್ಲವೇ ಕೆಡುಕನೆಂದೋ ಚಿತ್ರಿಸುವುದು ಸಾಮಾನ್ಯವಾದ ವಾಡಿಕೆ.  ಇದು ಎಷ್ಟರ ಮಟ್ಟಿಗೆ ನಿಜ ಎಂಬುದರ ಬಗ್ಗೆ  ಆಗಾಗ ಗೊಂದಲಗಳು ಹುಟ್ಟುವುದುಂಟು.  ಜಿ ವಿ ಅಯ್ಯರ್ ಅವರ ಬಗ್ಗೆ  ಗಿರೀಶ್ ಕಾರ್ನಾಡರ ‘ಆಡಾಡತ ಆಯುಷ್ಯ’ ಪುಸ್ತಕವನ್ನು ಓದುತ್ತಾ ಹೋದಂತೆ ಜಿ ವಿ ಅಯ್ಯರ್ ಅವರ ಬದುಕಿನ ಬಗೆಗೆ ಹಲವಾರು ವೈಪರೀತ್ಯದ ಸಂಗತಿಗಳು ತೆರೆದುಕೊಂಡಂತೆ ಅನಿಸತೊಡಗಿತು.  ಆದರೆ ಜಿ ವಿ ಅಯ್ಯರ್ ಅವರ ಬದುಕಿನ ಒಳಿತು ಕೆಡುಕುಗಳನ್ನೆಲ್ಲಾ ತೆರೆದಿಡುವ ಗಿರೀಶ್ ಕಾರ್ನಾಡ್ ಕೊನೆಯ ಮಾತು ಹೇಳುತ್ತಾರೆ “ನಾನು ನನ್ನ ಇಡಿಯ  ಜೀವನದಲ್ಲಿ ಭೆಟ್ಟಿಯಾದ ಅತ್ಯಂತ ಚಾಣಾಕ್ಷ, ಬುದ್ಧಿವಂತ, ಸೃಷ್ಟಿಶೀಲ, ಪ್ರಯೋಗಶೀಲರಲ್ಲಿ ಅಯ್ಯರ್ ಒಬ್ಬರು”.


ಜಿ ವಿ ಅಯ್ಯರ್ ಡಿಸೆಂಬರ್ 21, 2003ರಂದು ಈ ಲೋಕವನ್ನಗಲಿದರು.  ಈ ಮಹಾನ್ ಜಿ. ವಿ. ಅಯ್ಯರ್ ಎಂಬ ಸಾಧನೆಯ  ಪರ್ವತಕ್ಕೆ ನಮ್ಮ ನಮನ.

No comments:

Post a Comment