‘ನಾಯಿಗ್ಹಾಕಿದ್ನಿನ್ಜನ್ಮದುಚ್ಚಿಷ್ಠಾನ್ನರೀಗ್ಹಾಕ”
‘ಸಾಬೋನ್ಹಾಕ್ತಿಕ್ಕೊಂಡ್ರೇನೆ ಸುಣ್ಣ ಬಳ್ದ್ಹಾಗೆ ಬೆಳ್ಗಾಗಾಗತ್ಮ್ಪೆ ಅಂತ ತಿಳ್ಕೊಂಡಿದೀರಾ?’
‘ನಾಟ್ಕದ್ವಿಚಾರನ್ನೇ ಮರತ್ಬಿಟ್ಟು ಧ್ವಜ ಸ್ತಂಬ್ಹ್ದಾಗೆ ನೆಟ್ಕೊಂಡಕ್ಷತ್ರಗಳ ಕೀಳ್ತಿದ್ದೀಯಾ?’
ಹೌದು ಈ ರೀತಿಯಿಂದ ವಾಕ್ಯ ರಚನೆ ಮಾಡ್ತಿದ್ದದು, ಮಾಡೊಕ್ಕಾಗಿದ್ದು ಕೈಲಾಸಂರಿಂದಲೇ...
“ಕನ್ನಡ ಕವಿ ತಿಲಕಂ ಗುಂಡಂ”
“ಕವಿ ಮಂಡಲಾಗ್ರೇಸರ ಚಂಡ, ಪ್ರಚಂಡ ಗುಂಡೂ”
‘ಕನ್ನಡ ಪ್ರಹಸನ ಪ್ರಪಿತಾಮಹ ಕೈಲಾಸಂ”
ಎಂದು ಸ್ವಯಂ ಘೋಷಿಸಿಕೊಂಡ ಕೈಲಾಸಂ ನಾಟಕಗಳ ಡೈಲಾಗೂ ತುಂಬಾ ಸ್ವೀಡೂ, ಪ್ರಾಸಬದ್ದವೂ ಆಗಿದ್ದವು. ಭಾಷೆ ಬಹಳ ಕಠಿಣವಾಗಿರುತ್ತಿದ್ದವು. ಕೈಲಾಸಂರ ನಿಜ ಬದುಕಿನ ಸಂಭಾಷಣೆಯೂ ಹೀಗೆಯೇ ಇರುತ್ತಿದ್ದವು. ಇದಕ್ಕೆ ನಿದರ್ಶನವಾಗಿ ಬಿ.ಎಸ್.ಕೇಶವ್‌ರಾವ್‌ರವರು ಬರೆದಿರುವ ‘ಕನ್ನಡಕೊಬ್ಬನೇ ಕೈಲಾಸಂ’ನ ಒಂದು ಸನ್ನಿವೇಶ ಹೀಗಿದೆ.
1937-38ರ ಸಮಯ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕೈಲಾಸಂರ ಭಾಷಣವನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಕೈಲಾಸಂ, ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣದ ಬದಲು, ರಾಮಾಯಣ ಮಹಾಭಾರತಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಲು ಹೇಳಿದರು.