‘ನಾಯಿಗ್ಹಾಕಿದ್ನಿನ್ಜನ್ಮದುಚ್ಚಿಷ್ಠಾನ್ನರೀಗ್ಹಾಕ”
‘ಸಾಬೋನ್ಹಾಕ್ತಿಕ್ಕೊಂಡ್ರೇನೆ ಸುಣ್ಣ ಬಳ್ದ್ಹಾಗೆ ಬೆಳ್ಗಾಗಾಗತ್ಮ್ಪೆ ಅಂತ ತಿಳ್ಕೊಂಡಿದೀರಾ?’
‘ನಾಟ್ಕದ್ವಿಚಾರನ್ನೇ ಮರತ್ಬಿಟ್ಟು ಧ್ವಜ ಸ್ತಂಬ್ಹ್ದಾಗೆ ನೆಟ್ಕೊಂಡಕ್ಷತ್ರಗಳ ಕೀಳ್ತಿದ್ದೀಯಾ?’
ಹೌದು ಈ ರೀತಿಯಿಂದ ವಾಕ್ಯ ರಚನೆ ಮಾಡ್ತಿದ್ದದು, ಮಾಡೊಕ್ಕಾಗಿದ್ದು ಕೈಲಾಸಂರಿಂದಲೇ...
“ಕನ್ನಡ ಕವಿ ತಿಲಕಂ ಗುಂಡಂ”
“ಕವಿ ಮಂಡಲಾಗ್ರೇಸರ ಚಂಡ, ಪ್ರಚಂಡ ಗುಂಡೂ”
‘ಕನ್ನಡ ಪ್ರಹಸನ ಪ್ರಪಿತಾಮಹ ಕೈಲಾಸಂ”
ಎಂದು ಸ್ವಯಂ ಘೋಷಿಸಿಕೊಂಡ ಕೈಲಾಸಂ ನಾಟಕಗಳ ಡೈಲಾಗೂ ತುಂಬಾ ಸ್ವೀಡೂ, ಪ್ರಾಸಬದ್ದವೂ ಆಗಿದ್ದವು. ಭಾಷೆ ಬಹಳ ಕಠಿಣವಾಗಿರುತ್ತಿದ್ದವು. ಕೈಲಾಸಂರ ನಿಜ ಬದುಕಿನ ಸಂಭಾಷಣೆಯೂ ಹೀಗೆಯೇ ಇರುತ್ತಿದ್ದವು. ಇದಕ್ಕೆ ನಿದರ್ಶನವಾಗಿ ಬಿ.ಎಸ್.ಕೇಶವ್‌ರಾವ್‌ರವರು ಬರೆದಿರುವ ‘ಕನ್ನಡಕೊಬ್ಬನೇ ಕೈಲಾಸಂ’ನ ಒಂದು ಸನ್ನಿವೇಶ ಹೀಗಿದೆ.
1937-38ರ ಸಮಯ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕೈಲಾಸಂರ ಭಾಷಣವನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಕೈಲಾಸಂ, ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣದ ಬದಲು, ರಾಮಾಯಣ ಮಹಾಭಾರತಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಲು ಹೇಳಿದರು.
ಆ ಪ್ರಶ್ನೆಗಳಿಗೆ ಕೈಲಾಸಂ ಕೊಟ್ಟ ಚಮತ್ಕಾರಿಕ ಉತ್ತರಗಳು ಹೀಗಿವೆ.
ಒಬ್ಬ: ಸಾರ್, ರಾಮಾಯಣದಲ್ಲಿ ಹನುಮಂತ ಲಂಕೆಗೆ ಹಾರಿದ ಅಂತಿದ್ಯಲ್ಲ. ಹಾಗಾದ್ರೆ, ಆ ಪಾಟಿ ಶಕ್ತಿ ಬರಬೇಕಿದ್ರೆ ಹನುಮಂತ ಅದೇ ನನ್ನುಡೀತಿದ್ದ ಸಾರ್.
ಕೈಲಾಸಂ: ಹನುಮಂತನೇ? ನಮ್ಮ ಹನುಮು ಕುಡೀತಿದ್ದದ್ದು ಹಾರ್ಲಿಕ್ಸೂ ರಾಜ. ಹನುಮ ಹಾರ‍್ಲಿಕ್ಸ್ ಕುಡೀತಿದ್ದಿದ್ರಿಂದ್ಲೇ ಅಲ್ವೇ ಅವನ್ಗೆ ಹಾರ‍್ಲಿಕ್ ಆದದ್ದು.
ಮತ್ತೊಬ್ಬ: ಹಾಗಾದ್ರೆ, ಅರ್ಜುನ ಏನ್ಕುಡೀತಿದ್ದ ಸಾರ್?
ಕೈಲಾಸಂ: ‘ಅರ್ಜುನನೇ? ಕೇಳು ಮಗು, ಅರ್ಜುನ, ದ್ರೋಣ, ಏಕಲವ್ಯ, ರಾಮ, ಲಕ್ಷ್ಮಣ ಇವ್ರೆಲ್ಲಾ ಕುಡೀತಿದ್ದದ್ದು ಅರರೂಟ್ ಗಂಜೀನ ಕಂದಾ’ ಎಂದರು. ಸಭಾಂಗಣದಲ್ಲಿ ನಗುವಿನ ಪ್ರವಾಹ ಅದು ಅಡಗುತ್ತಿದ್ದಂತೆ.
ಮತ್ತೊಬ್ಬ: ಅದ್ಸರೀ, ಆದ್ರೆ ಭೀಮ ಏನ್ಕುಡೀತಿದ್ದಾಂತ ಹೇಳಿಸಾರ್?
ಕೈಲಾಸಂ: ‘ಭೀಮಾನೇ?’ ಕೇಳು, ಭೀಮ, ಘಟೋದ್ಗಜ, ಕುಂಭಕರ್ಣ, ಧೃತರಾಷ್ಟ್ರ ಇವ್ರೆಲ್ಲಾ ಕುಡೀತಿದ್ದದ್ದು ಕ್ರಷನ್ ಸಾಲ್ಟ್ ಎಂದು, ಸಿಕ್ಕಿದವರನ್ನು ಕ್ರಷ್ ಮಾಡುವ ರೀತಿಯಲ್ಲಿ ಅಭಿನಯಿಸುತ್ತಾ ಹೇಳಿದರು.
ಮತ್ತೊಬ್ಬ: ಆಯ್ತು ಸಾರ್, ಒಪ್ಕೊಂಡೊ, ಹಾಗಾದ್ರೆ ಕರ್ಣ ಏನ್ಕುಡೀತಿದ್ದ ಸಾರ್?
ಕೈಲಾಸಂ: ನೋಡ್ರಾಜಾ, ಈ ಕರ್ಣ, ಕುಂತಿ, ಕುಚೇಲ ಇವ್ರೆಲ್ಲಾ ಕುಡೀತಿದ್ದದ್ದು ‘ಕೋ ಕೋ’ನ ಕಣೋ, ಇವ್ರನ್ನ ಯಾರೇನೇ ಕೇಳಿದ್ರು “ಕೋ.. ಕೋ..’ ಅಂತ್ಹೇಳಿ ತಮ್ಮ ಹತ್ರ ಇದ್ದದ್ದನ್ನೆಲ್ಲಾ ಕೊಟ್ಟಿಡ್ತಿದ್ರು, ಪಾಪ” ಎಂದರು.
(ಸಭೆಯಲ್ಲಿ .........) ಹುಡುಗರು ಅಲ್ಲಿಗೂ ಅಲ್ಲಿಗೂ ಸುಮ್ಮನಾಗಲಿಲ್ಲ ಮತ್ತೊಬ್ಬ ಕೂಗಿದ...
ಮತ್ತೊಬ್ಬ: ಸಾರ್ ಇವ್ರೆಲ್ಲಾ ಕುಡೀತಿದ್ದದ್ನ ಸಲೀಸಾಗಿ ಹೇಳ್ಬಿಟ್ರಿ, ಈಗ್ಹೇಳಿ, ಭೀಷ್ಮ ಏನ್ಕುಡೀತಿದ್ದ?
ಕೈಲಾಸಂ: (ಅವನತ್ತ ನಗುತ್ತ) ಇದ್ಯಾವ ಪ್ರಶ್ನೇಂತ ಕೇಳ್ತೀ, ಮಗು, ಭೀಷ್ಮ ಪಾಪ... ಪೂರ್ ಫೆಲೋ ಗಂಗೆ ಮಗ ನೋಡು, ಅವನ್ಕುಡೀತಿದ್ದದ್ದು ಗಂಗೇನಾ. ಅಷ್ಟೇ, ಕೇವ್ಲ ಗಂಗಾಪಾಣೀ ರಾಜಾ ಎಂದರು.
ತಮ್ಮ ಯಾವ ಪ್ರಶ್ನೆಗೂ ಜಗ್ಗದ ಕೈಲಾಸಂರನ್ನು ಏನಾದರೂ ಕೇಳಿ ಸೋಲಿಸಲೇಬೇಕು ಎನ್ನುವಂತಿತ್ತು. ಹುಡುಗರ ಪ್ರಶ್ನೆಯ ಸುರಿಮಳೆ.
ಆಗ ಮತ್ತೊಬ್ಬ ಸೆಟೆದು ನಿಂತು.
ಪ್ರಶ್ನೆ: ಇದೆಲ್ಲಾ ಸರ‍್ಯೇ ಸಾರ್... ಈಗ ಭೀಮದ ಅಡ್ರೆಸ್ ಏನೂಂತ ಹೇಳ್ತೀರಾ? ಎಂದ.
ಸಭೆಯಲ್ಲಿ ನಿಶ್ಯಬ್ದ. ಕೈಲಾಸಂ ಈ ಪ್ರಶ್ನೆಗೆ ಉತ್ತರಿಸುತ್ತಾರೆಯೇ ಎಂದು ಸಭಿಕರು ಯೋಚಿಸುತ್ತಿರಲು.
ಕೈಲಾಸಂ: (ಒಂದು ಕ್ಷಣವೂ ತಡ ಮಾಡದೆ)’ ಸರಿ, ಭೀಮನ ಅಡ್ರಸ್ಯೇ? ಬರ‍್ಕೋ ರಾಜಾ ಹೆಚ್.ಪಿ.ಭೀಮಸೇನ, ಟೆಲಿಗ್ರಾಫಿಕ್ ಅಡ್ರೆಸ್ಯೂ ‘ಹುಷಾರ್’ ಟೆಲಿಫೋನ್ ನಂಬರ್ರು 882482 ಎನ್ನಲು ತಬ್ಬಿಬ್ಬಾದ ಸಭಿಕರಿಗೆ ಯಾಕೆ, ಅರ್ಥವಾಗ್ಲಿಲ್ವೇ? ಹೆಚ್.ಪಿ.ಭೀಮಸೇನ ಅಂದ್ರೆ, ಹಸ್ತಿನಾಪುರದ ಪಾಂಡುವಿನ ಮಗ ಭೀಮಸೇನಾಂತ, ಟೆಲಿಗ್ರಾಫಿಕ್ ಅಡ್ರೆಸ್ಯು ‘ಹುಷಾರ್’ ಸರ‍್ಯೇ ಸರಿ, ಹೆಚ್ಚು ಮಾತ್ನಾಡಿದೋರ‍್ಗೆ ‘ಹುಷಾರ್’ ಅಂತ ಗದರಿಸ್ತಿದ್ದ ಭೀಮ, ಹೌದು ತಾನೆ? ಇನ್ನು ಅವನ ಟೆಲಿಫೋನ್ ನಂಬರ್ರು ಅದ್ನ ಸ್ಟೈಲಾಗಿ ಹೇಳ್ನೋಡಿ, ಅರ್ಥವಾಗುತ್ತೆ. ‘ಡಬಲ್ ಏಟು ಫಾರ್ ಏಟು’ ಅಂದ್ರೆ. ಒಂದೇಟ್ಗೆ ಎರ‍್ಟೇಟೂಂತ ಅರ್ಥ’ ಎನ್ನಲು ಇಡೀ ಸಭಾಂಗಣ ಬಿರಿಯುವಂತೆ ನಗು. ಅಲ್ಲಿಗೂ ಹುಡುಗರು ಸುಮ್ಮನಾಗಲಿಲ್ಲ. ಇನ್ನು ಸಾಕೆಂಬಂತೆ ಹೊರಡಲು ತಯಾರಾದ ಕೈಲಾಸಂರನ್ನು ಯೋಚಿಸುತ್ತಾ..
ಒಬ್ಬ: ‘ಸಾರ್, ಸಾರ್’ ನಿಮ್ದಮ್ಮಯ್ಯ, ಶಕುನಿ ಏನ್ಕುಡೀತಿದ್ದಾಂತ ಹೇಳ್ಬಿಡಿ ಸಾಕು ಎನ್ನಲು ಕೈಲಾಸಂ ಪಕ್ಕದಲ್ಲಿದ್ದ ಎನ್.ಎಸ್.ಸುಬ್ಬರಾಯರಿಗೆ, ಇನ್ನು ................ ಸುಬ್ರಾವ್. ಅಲ್ದೆ ಒಂದೊಂದ್ಸಲ ಐರಾವತಕ್ಕೂ ಅಡಿ ತಪ್ಪೋ ಅಪಾಯ ಇದ್ದದ್ದೇ. ಆದ್ರಿಂದ ಬಿಫೋರ್ ಇಟ್ ಹ್ಯಾಪನ್ಸ್, ಲೆಟ್ ಮಿ ಹ್ಯಾವ್ ಎ ಸೇಫ್ ಎಕ್ಸಿಸ್ಟ್’ ಎಂದವರೇ ಪ್ರಶ್ನೆ ಕೇಳಿದ ಹುಡುಗತ್ತ ತಿರುಗಿ
ಕೈಲಾಸಂ: ಶಕುನೀನೇ? ಅವನ್ಕುಡೀತಿದ್ದದ್ದು ವಿಕಸಿತ ಬಕುಳ ಪುಷ್ಪದ ಹಾಲೂ ಮಗೂ ಎನ್ನಲು, ಅದೇನೆಂದು ಸಭಿಕರು ತಮ್ಮ ತಮ್ಮಲ್ಲೇ ಚರ್ಚಿಸುತ್ತಿದೆ. ಅಲ್ಲಿಂದ ಜಾರಿಕೊಳ್ಳಲು ಅದೇ ಸರಿಯಾದ ಸಮಯವೆಂದರಿತ ಕೈಲಾಸಂಯೇ ಚಿಸ್ತಿ, ಐ ವಿಲ್ ಬ್ಯಾಕ್ ಇನ್ ಎ ಫ್ಯೂ ಮಿನಿಟ್ಸ್.... ಸಿಗ್ರೇಟ್ನ ಸೇದ್ಬಿಟ್ಟು ಬರ‍್ತೀನಿ’ ಎಂದು ಆಚೆ ಹೋದವರು ಮತ್ತಲಿಗೆ ಬರಲೇ ಇಲ್ಲ. ಇಲ್ಲ.
ಸಭಾಂಗಣದಲ್ಲಿ ಈ ವಿಕಸಿತ ಬಕುಳ ಪುಷ್ಪದ ಹಾಲೆಂದರೆ ಏನೆಂಬುದು ಅರ್ಥವಾಗದೆ ಒಬ್ಬರನ್ನೊಬ್ಬರು ವಿಚಾರಿಸುತ್ತಿರಲು, ಮುಂದಿನ ಸಾಲಿನಲ್ಲಿ ಕುಳಿತಿದ್ದ ಸಂಸ್ಕೃತವನ್ನು ತಿಳಿದಿದ್ದ ವೃದ್ಧರೊಬ್ಬರು ಫೋಳ್ಳೆಂದು ನಗಲು, ಅಕ್ಕಪಕ್ಕದವರು ಅವರನ್ನು ಮುತ್ತಿ ಕೇಳಲು, ಆ ವೃದ್ಧರು ‘ಅದೇ ಕಂಡ್ರೀ, ಬಕುಳ ಪುಷ್ಪ’ ಅಂದ್ರೆ ಪಗಡ ಹೂವು... ಅದರ ಹಾಲನ, ಶಕುನಿ ಕುಡೀತಿದ್ದಾಂತ ಅವರಂದದ್ದು ಎನ್ನಲು ಈ ಮಾತು ಸಭಾಂಗಣದಲ್ಲೆಲ್ಲಾ ಸಂಚರಿಸಿ ಬಳಿಕ ನಗುವಿನ ಪ್ರವಾಹ ಅಲೆ, ಅಲೆಯಾಗಿ ಹರಿಯಿತು.
ಹುಟ್ಟು-ಸಾವಿನಲ್ಲೂ ಗೊಂದಲಗಳಿದ್ದರೂ, ಹಲವು ವಿದ್ವಾಂಸರ ಪ್ರಕಾರ ಕೈಲಾಸಂ ಹುಟ್ಟಿದ್ದು ೧೭ನೇ ಆಗಸ್ಟ್ ೧೮೮೪ನೇ ಇಸವಿ, ಭಾನುವಾರ, ಆರ್ದ್ರಾ ನಕ್ಷತ್ರದಲ್ಲಿ ಅಂದರೆ, ಇಂದಿಗೆ ಸರಿಯಾಗಿ ೧೨೪ ವರ್ಷಗಳ ಹಿಂದೆ, ಮೈಸೂರಿನಲ್ಲಿ ೧೯೧೮ ಕನ್ನಡದಲ್ಲಿ ಹೆಚ್ಚಾಗಿ ಸಾಮಾಜಿಕ ನಾಟಕಗಳಿರದಿದ್ದ ಕಾಲವದು. ಎ.ಡಿ.ಎ (ಅಮೆಚೂರ‍್ಸ್ ಡ್ರಾಮ ಅಸೋಸಿ ಯೇಷನ್)ನ ಪ್ರಧಾನ ಪೋಷಕರಾಗಿದ್ದವರು. ಯುವರಾಜ ಶ್ರೀ ಕಂಠೀರವ ನರಸರಾಜ ಒಡೆಯರ್‌ರವರು ಈ ಸಂಸ್ಥೆ ಹೊಸ ನಾಟಕಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ನಾಟಕ ರಚನಾ ಸ್ಪರ್ಧೆಯನ್ನು ಏರ್ಪಡಿಸಿತ್ತು. ಕೈಲಾಸಂರ ಮೊದಲ ಕೃತಿ ‘ಟೊಳ್ಳು-ಗಟ್ಟಿ’ ಆ ವರ್ಷದ ಅತ್ಯುತ್ತಮ ನಾಟಕವೆಂದು ಪರಿಗಣಿಸಲ್ಪಟ್ಟು ಮೊದಲನೆಯ ಬಹುಮಾನವಾಗಿ ರಚಲ ಪದಕವನ್ನೂ ಸಂಭಾವನೆಯನ್ನೂ ಗಳಿಸಿತು. ನಮ್ಮೀ ‘ಸಂಸ ರಂಗ ಪತ್ರಿಕೆ’ಯೂ ಅದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಸುಸಂದರ್ಭದಲ್ಲಿ ‘ಕೈಲಾಸಂ’ರನ್ನು ನೆನೆಯದಿದ್ದಲ್ಲಿ, ‘ಸಂಸ ರಂಗ ಪತ್ರಿಕೆ’ ಅಪೂರ್ಣವಾದೀತು.
ಮೈಸೂರಿನಲ್ಲಿ ೧೯೧೮ ಕನ್ನಡದಲ್ಲಿ ಹೆಚ್ಚಾಗಿ ಸಾಮಾಜಿಕ ನಾಟಕಗಳಿರದಿದ್ದ ಕಾಲವದು. ಎ.ಡಿ.ಎ (ಅಮೆಚೂರ‍್ಸ್ ಡ್ರಾಮ ಅಸೋಸಿ ಯೇಷನ್)ನ ಪ್ರಧಾನ ಪೋಷಕರಾಗಿದ್ದವರು. ಯುವರಾಜ ಶ್ರೀ ಕಂಠೀರವ ನರಸರಾಜ ಒಡೆಯರ್‌ರವರು ಈ ಸಂಸ್ಥೆ ಹೊಸ ನಾಟಕಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ನಾಟಕ ರಚನಾ ಸ್ಪರ್ಧೆಯನ್ನು ಏರ್ಪಡಿಸಿತ್ತು. ಕೈಲಾಸಂರ ಮೊದಲ ಕೃತಿ ‘ಟೊಳ್ಳು-ಗಟ್ಟಿ’ ಆ ವರ್ಷದ ಅತ್ಯುತ್ತಮ ನಾಟಕವೆಂದು ಪರಿಗಣಿಸಲ್ಪಟ್ಟು ಮೊದಲನೆಯ ಬಹುಮಾನವಾಗಿ ರಚಲ ಪದಕವನ್ನೂ ಸಂಭಾವನೆಯನ್ನೂ ಗಳಿಸಿತು. ನಮ್ಮೀ ‘ಸಂಸ ರಂಗ ಪತ್ರಿಕೆ’ಯೂ ಅದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಸುಸಂದರ್ಭದಲ್ಲಿ ‘ಕೈಲಾಸಂ’ರನ್ನು ನೆನೆಯದಿದ್ದಲ್ಲಿ, ‘ಸಂಸ ರಂಗ ಪತ್ರಿಕೆ’ ಅಪೂರ್ಣವಾದೀತು.
***** ******* *****
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೈಲಾಸಂ, ತ್ಯಾಗರಾಜ ಪರಮಶಿವ
ತ್ಯಾಗರಾಜ ಪರಮಶಿವ ಕೈಲಾಸಂ : - 1884-1946. 1918ರಿಂದ ಹೊಸ ನಾಟಕ ಸೃಷ್ಟಿಯಿಂದ ಕನ್ನಡ ನಾಟಕ ಕ್ಷೇತ್ರವನ್ನು ಬೆಳಗಿದ ಜನಪ್ರಿಯ ನಾಟಕಕಾರ. ಕೈ ಎಂಬ ಸಂಕ್ಷಿಪ್ತ ನಾಮದಿಂದ ಪ್ರಸಿದ್ಧರಾಗಿದ್ದಾರೆ. ನುರಿತ ನಟರು ನಿರ್ದೇಶಕರು. ಕೈಲಾಸಂ ತಮ್ಮ ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದೂ ಉಂಟು.
ಕೈಲಾಸಂ ಹುಟ್ಟಿದ್ದು ಬೆಂಗಳೂರಾದರೂ ಇವರ ಹಿರಿಯರಿದ್ದದ್ದು ತಂಜಾವೂರಿನ ಬಳಿಯ ಒಂದು ಗ್ರಾಮದಲ್ಲಿ. ತಂದೆ ತ್ಯಾಗರಾಜ ಪರಮಶಿವ ಅಯ್ಯರ್ ಅವರು ಬೆಂಗಳೂರಿನಲ್ಲಿ ಮುನ್ಸೀಫರಾಗಿ ಜೀವನ ಪ್ರಾರಂಭಿಸಿ ಶ್ರೇಷ್ಠ ನ್ಯಾಯಾಧೀಶರ ಪದವಿಗೆ ಏರಿ ನಿವೃತ್ತರಾದರು. ಅವರ ಮೂವರು ಗಂಡು ಮಕ್ಕಳಲ್ಲಿ ಕೈಲಾಸಂ ಹಿರಿಯವರು. ಕೈಲಾಸಂ ಅವರ ಬಾಲ್ಯದ ವಿದ್ಯಾಭ್ಯಾಸ ನಡೆದದ್ದು ಬೆಂಗಳೂರು ಮೈಸೂರು ಹಾಸನಗಳಲ್ಲಿ ಅನಂತರ ಮದ್ರಾಸಿನಲ್ಲಿ. ಕೈಲಾಸಂ ಖ್ಯಾತ ವಿ.ಎಸ್.ಶ್ರೀನಿವಾಸ ಶಾಸ್ತ್ರಿಗಳ ನೆಚ್ಚಿನ ಶಿಷ್ಯ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಪ್ರಥಮ ದರ್ಜೆಯಲ್ಲಿ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಪಡೆದರು. ಅನಂತರ ಮೈಸೂರು ಸರ್ಕಾರದ ಮಾಸಿಕ ವಿದ್ಯಾರ್ಥಿವೇತನ ಪಡೆದು ಲಂಡನ್ನಿಗೆ ತೆರಳಿ (1908) ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಶಾಸ್ತ್ರಾಧ್ಯಯನ ಮಾಡಿ ಏಳು ವಿಷಯಗಳಲ್ಲಿ ಮೊದಲ ದರ್ಜೆಯ ಪ್ರಶಸ್ತಿ ಗಳಿಸಿದರು. ಅನಂತರ ರಾಯಲ್ ಜಿಯಲಾಜಿಕಲ್ ಸೊಸೈಟಿಗೆ ಒಂದು ಮಹಾಪ್ರಬಂಧ ಬರೆದು ಕೊಟ್ಟು ಆ ಸಂಸ್ಥೆಯ ಫೆಲೊ ಆದರು. ಹಾಗೆ ಫೆಲೋಷಿಪ್ ಪಡೆದ ಭಾರತೀಯರಲ್ಲಿ ಇವರೇ ಮೊದಲಿಗರು. ವಿದ್ಯಾರ್ಜನೆ, ಜ್ಞಾನಾರ್ಜನೆಗಳಲ್ಲಿ ಹೇಗೋ ಹಾಗೆ ಕ್ರೀಡಾರಂಗದಲ್ಲಿಯೂ ಅಮಿತವಾದ ಆಸಕ್ತಿಯನ್ನು ಮೆರೆದು, ಹಾಕಿ, ಫುಟ್‍ಬಾಲ್‍ಗಳಲ್ಲಿ ಗೋಲ್‍ಕೀಪರ್ ಆಗಿದ್ದರು. ಅಲ್ಲಿಯೇ ಆಗ ನೆಲೆಸಿದ್ದ ಪ್ರೊಫೆಸರ್ ಯೂಜೀನ್ ಸ್ಯಾಂಡೋಗೆ ಮೆಚ್ಚಿನ ಶಿಷ್ಯರಾಗಿ ವ್ಯಾಯಾಮ ಪಟುವೆನಿಸಿಕೊಂಡು ಶರೀರದ ಸ್ನಾಯುಗಳ ಮೇಲೂ ಅಸಾಮಾನ್ಯ ಹತೋಟಿಯನ್ನು ಬೆಳೆಸಿಕೊಂಡರು. ಪಾಶ್ಚಾತ್ಯ ಸಂಗೀತವನ್ನು ಕೇಳಿ ಕಲಿತು ಅದರಲ್ಲೂ ಸಾಕಷ್ಟು ಪರಿಶ್ರಮ ಪಡೆದುಕೊಂಡರು. ಭಾರತೀಯ ಸಂಗೀತಕ್ಕೂ ಅದಕ್ಕೂ ಇರುವ ಸಾಮ್ಯ ವೈಷಮ್ಯಗಳನ್ನು ಗುರುತಿಸಿಕೊಂಡರು. ಅಲ್ಲಿನ ಗಾಯಕರೊಡನೆ ಬೆರೆತು, ಅವರು ಇಂಗ್ಲಿಷಿನಲ್ಲೊ ಫ್ರೆಂಚಿನಲ್ಲೊ ಜರ್ಮನ್ ಭಾಷೆಯಲ್ಲೊ ಯಾವ ಹಾಡನ್ನೇ ನುಡಿಯಲಿ, ಅದಕ್ಕನುಗುಣವಾಗಿ ಕನ್ನಡ ಭಾಷೆಯಲ್ಲಿ ಅದೇ ರಾಗ ತಾಳ ಲಯಕ್ಕೆ ಹೊಂದಿಸಿಕೊಂಡು ಹಾಡಿ ಅವರನ್ನು ಅಚ್ಚರಿಗೊಳಿಸಿದುದುಂಟು. `ಇಟಿಸ್ ಎ ಲಾಂಗ್ ವೇ ಟು ಟಿಪ್ಪರೇರೀ ಎಂಬ ಹಾಡಿಗೆ ಪ್ರತಿಯಾಗಿ `ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಾಕೆ ಬಲುದೂರ ಎಂದು ಹಾಡಿ ಕನ್ನಡ ತಿಳಿಯದಿದ್ದ ಪ್ರೇಕ್ಷಕರಿಂದಲೂ ನಾಲ್ಕಾರು ಬಾರಿ ಒನ್ಸ್ ಮೋರ್ ಗಿಟ್ಟಿಸಿದವರಿವರು.
ಕೈಲಾಸಂ ಅವರ ತಂದೆ ಮತ್ತು ದೊಡ್ಡಪ್ಪ ಸದಾಶಿವಯ್ಯರ್ ಮಹಾಭಾರತದ ಅಧ್ಯಯನ ಮಾಡಿದ್ದವರು; ಆ ಇಬ್ಬರೂ ಕೈಲಾಸಂ ಅವರನ್ನೂ ಕೂಡಿಸಿಕೊಂಡು ಮಹಾಭಾರತದಲ್ಲಿನ ವೀರವ್ಯಕ್ತಿಗಳ ಕತೆಗಳನ್ನು ಹೇಳುತ್ತಿದ್ದರು. ಕೈಲಾಸಂ ಆಗಲೇ ಸಂಸ್ಕøತವನ್ನೂ ಐಚ್ಛಿಕ ಭಾಷೆಯನ್ನಾಗಿ ಕಲಿತು, ತಮ್ಮ ಮಾವ ಅಮೃತಲಿಂಗ ಅಯ್ಯರವರಲ್ಲಿ ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಮಹಾಭಾರತವನ್ನು ಅಷ್ಟಿಷ್ಟು ತಾವಾಗಿಯೇ ಓದಿ, ಮುಂದೆ ಕಾಳಿದಾಸ, ಭವಭೂತಿ, ಭಾಸ ಮೊದಲಾದ ಮಹಾಕವಿಗಳ ಕೃತಿಗಳನ್ನೂ ಓದಿದರು. ಇವರ ಮೆಚ್ಚುಗೆಗೆ ಪಡೆದವನು ಭಾಸ. ಮುಂದೆ ಕೈಲಾಸಂ ಪ್ರೌಢ ಇಂಗ್ಲಿಷ್ ಭಾಷೆಯಲ್ಲಿ ಬರೆದ ದ ಪರ್ಪಸ್, ದ ಫುಲ್‍ಫಿಲ್‍ಮೆಂಟ್, ಕರ್ಣ-ಈ ನಾಟಕಗಳಲ್ಲಿ ಇದನ್ನು ಕಾಣಬಹುದು.
ಲಂಡನ್ನಿನ ಏಳು ವರ್ಷದ ಜೀವನಾವಕಾಶದಲ್ಲಿ ಕೈಲಾಸಂ ವಿವಿಧ ನಾಟಕ ಮಂದಿರಗಳಲ್ಲಿ ದಿನಗಟ್ಟಲೆ ನಡೆಯುತ್ತಿದ್ದ ನಾಟಕಗಳನ್ನು ಅಧ್ಯಯನ ಮಾಡಿದರು. ಆಗ ಆಸ್ಕರ್ ವೈಲ್ಡ್, ಇಬ್ಸೆನ್, ಬರ್ನಾರ್ಡ್ ಷಾ, ಗಾಲ್ಸ್‍ವರ್ದಿ ಮುಂತಾದ ಪ್ರತಿಭಾವಂತರ ನಾಟಕಗಳ ಪ್ರದರ್ಶನದಿಂದಾಗಿ ನಾಟಕ ಕ್ಷೇತ್ರದಲ್ಲಿ ಒಂದು ನವೀನಯುಗವೇ ಆರಂಭವಾಗಿತ್ತು. ಈ ನಾವೀನ್ಯದ ಬೃಹತ್ ದರ್ಶನ ಮಾಡಿಕೊಂಡ ಕೈಲಾಸಂ, ಅಲ್ಲಿನ ಪ್ರದರ್ಶನ ತಂತ್ರಗಳನ್ನೂ ಕರತಲಾಮಲಕ ಮಾಡಿಕೊಂಡರು. ಆಗಿನ ಮಹಾ ನಟನಟಿಯರಾಗಿದ್ದ ಎಲ್ಲೆನ್ ಟೆರಿ ಜೂನಿಯರ್, ಹೆನ್ರಿ ಅರ್ವಿಂಗ್ ಜೂನಿಯರ್, ಹೆನ್ರಿ ಐನ್ಲಿ, ಅಯಾನ್ ಹೇ, ಸರ್ ಜಾನ್ ಪೋಬ್ರ್ಸ್ ರಾಬರ್ಟ್‍ಸನ್ ಮುಂತಾದವರನ್ನು ಭೇಟಿ ಮಾಡಿ ಅವರ ಪಾತ್ರಾಭಿನಯಗಳನ್ನು ಕುರಿತು ಸುದೀರ್ಘ ಚರ್ಚೆ ನಡೆಸಿದರು. ಕ್ರಮೇಣ ಅವರನ್ನೆಲ್ಲ ಅನುಕರಿಸಿ ಆಯಾ ಪಾತ್ರಗಳನ್ನು ಅವರೆದುರಿಗೇ ಮಾಡಿ ತೋರಿಸಿ ಅವರ ಮೆಚ್ಚುಗೆ ಗಳಿಸಿದರು. 1915ರ ಡಿಸೆಂಬರ್‍ನಲ್ಲಿ ಮೈಸೂರಿಗೆ ಮರಳಿ ಮೈಸೂರು ಸರ್ಕಾರದ ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಪ್ರೊಬೇಷನರಿ ನೌಕರಿ ಹಿಡಿದರು. ಐದು ವರ್ಷ ಕೋಲಾರದ ಚಿನ್ನದ ಗಣಿ, ಹಾಸನ, ಶಿವಮೊಗ್ಗ, ಭದ್ರಾವತಿ, ಲಕ್ಕವಳ್ಳಿ, ತರೀಕೆರೆ, ಎಡೇಹಳ್ಳಿ ಮೊದಲಾದ ಸ್ಥಳಗಳಲ್ಲಿ ಕೆಲಸ ಮಾಡಿದರು. 1920ರ ಜುಲೈ ಒಂದರಂದು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಟ್ಟರು.
1918ರ ವೇಳೆಗೆ ಶಿವಮೊಗ್ಗೆಯಲ್ಲಿ ನೌಕರಿ ಹಿಡಿದಿದ್ದಾಗ ಆಗ್ಗೆ, ನ್ಯಾಯವಾದಿಯಾಗಿದ್ದ (ಅನಂತರ ಮೈಸೂರು ಹೈಕೋರ್ಟಿನ ನ್ಯಾಯಾಧೀಶರಾದ) ಶಂಕರನಾರಾಯಣರಾಯರ ಒತ್ತಾಯದಿಂದ ಸ್ಕೌಟ್ ತತ್ತ್ವಗಳನ್ನು ಪ್ರತಿಪಾದಿಸಲು ಸಹಾಯವಾಗುವಂತೆ ಕೈಲಾಸಂ ನಾಟಕವೊಂದನ್ನು ರಚಿಸಬೇಕಾಯಿತು. ತುಂಗಾತೀರದಲ್ಲಿ, ತಿಂಗಳಬೆಳಕಿನಲ್ಲಿ ಕೈಲಾಸಂ ನಾಟಕವನ್ನು ಬಾಯಲ್ಲಿ ಹೇಳುತ್ತಾ ಹೋದರು. ಕತೆಗಾರ ಆನಂದರು ಅದನ್ನು ಬರೆದುಕೊಂಡರು. ಕೈಲಾಸಂ ತಾವಾಗಿ ಯಾವತ್ತೂ ಬರೆದುದಿಲ್ಲ. ಇದುವರೆಗೆ ಅಚ್ಚಾಗಿರುವ ಅವರ ಕನ್ನಡ ನಾಟಕಗಳೆಲ್ಲ ಹೀಗೆಯೇ ಹೊರಬಿದ್ದಿರುವುದು. ಆಗ ಹೊರಬಂದ ನಾಟಕ ಮಕ್ಕಳ ಸ್ಕೂಲ್ ಮನೇಲಲ್ವೇ ಅಥವಾ ಟೊಳ್ಳುಗಟ್ಟಿ ಎಂಬ ಏಕಾಂಕ. ಅದೇ ಸಮಯಕ್ಕೆ ಬೆಂಗಳೂರಿಗೆ ಬಂದ ವಿಶ್ವಕವಿ ರವೀಂದ್ರನಾಥ ಠಾಕೂರರ ಸಮ್ಮುಖದಲ್ಲಿ ಇದರ ಪ್ರದರ್ಶನವಾಗಿ, ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಕೈಲಾಸಂ ಕರ್ಣಾಟಕ ನಾಟಕ ಪ್ರಹಸನ ಪ್ರಪಿತಾಮಹರಾಗಿದ್ದರು. ಚೊಚ್ಚಲ ನಾಟಕದ ಪಾದಾರ್ಪಣದಿಂದ ಕನ್ನಡ ರಂಗಭೂಮಿಯಲ್ಲೇ ಕ್ರಾಂತಿ ಎಬ್ಬಿಸಿದ ಮಹಾವ್ಯಕ್ತಿ ಕೈಲಾಸಂ. ಅನಂತರ 28 ವರ್ಷಗಳ ಅವಧಿಯಲ್ಲಿ ಹೋಂ ರೂಲು, ಬಹಿಷ್ಕಾರ, ಗಂಡಸ್ಕತ್ರಿ, ನಮ್ಬ್ರಾಹ್ಮಣ್ಕೆ, ಬಂಡ್ವಾಳ್ವಿಲ್ಲದ್ಬಡಾಯಿ, ನಮ್ ಕ್ಳಬ್ಬು, ಅಮ್ಮಾವ್ರಗಂಡ, ಸತ್ತವನ ಸಂತಾಪ, ಅನುಕೂಲಕ್ಕೊಬ್ಬಣ್ಣ, ಸೀಕರ್ಣೆ ಸಾವಿತ್ರಿ, ಶೂರ್ಪನಖಾಕುಲವೈಭವ ಅಥವಾ ನಮ್ ಕಂಪ್ನಿ, ತಾಳೀಕಟ್ಟೋಕ್ಕೂಲೀನೇ, ಪೋಲಿಕಿಟ್ಟಿ, ಬಹಿಷ್ಕಾರ, ವೈದ್ಯನ ವ್ಯಾಧಿ, ಸೂಳೆ-ಎಂಬ ನಾಟಕಗಳೂ ತಾವರೆಕೆರೆ ಎಂಬ ಸಣ್ಣಕತೆಗಳ ಸಂಗ್ರಹವೂ ಇಂಗ್ಲಿಷಿನಲ್ಲಿ ದ ಪರ್ಪಸ್ (ಏಕಲವ್ಯ), ದಿ ಕರ್ಸ್ ಅಥವಾ ಕರ್ಣ ನಾಟಕಗಳೂ ದಿ ಬರ್ಡನ್ ಮತ್ತು ದಿ ಫುಲ್‍ಫಿಲ್‍ಮೆಂಟ್ ಎಂಬ ಕಿರುನಾಟಕಗಳೂ ಲಿಟ್ಲ್ ಲೇಸ್ ಅಂಡ್ ಪ್ಲೇಸ್ ಎಂಬ ಕವನಸಂಗ್ರಹವೂ ಹೊರಬಿದ್ದವು. ಪ್ರಕಟಿತವಾಗಿರುವ ಇವಲ್ಲದೆ, ಇನ್ನೂ ಅಪೂರ್ಣಾವಸ್ಥೆಯಲ್ಲಿದ್ದು ಪ್ರಕಟಗೊಳಿಸಬಹುದಾದ ಅನೇಕ ಪೌರಾಣಿಕ ನಾಟಕಗಳೂ ಸಾಮಾಜಿಕ ನಾಟಕಗಳೂ ಇವೆ. ಮಟ್ಟುಗಳಿಗೆ ಮಟ್ಟ, ಅಥವಾ ವಿವಿಧ ವಿನೋದ್ಹಾವಳಿ-ಇವು ಇವರ ನಿಧನಾನಂತರ ಪ್ರಕಟವಾಗಿವೆ. ದಿ ಪರ್ಪಸ್, ಕರ್ಣ, ಕೀಚಕ, ಅಮ್ಮಾವ್ರ ಗಂಡ, ಹೋಂ ರೂಲು, ಬಂಡ್ವಾಳಿಲ್ಲದ್ಬಡಾಯಿ ನಾಟಕಗಳನ್ನು ಅನುಕ್ರಮವಾಗಿ ಸಂಸ್ಕøತ, ಮರಾಠಿ, ಬಂಗಾಳಿ, ತೆಲುಗು, ಹಿಂದಿ ಮತ್ತು ಉತ್ತರ ಕರ್ನಾಟಕದ ದೇಸೀ ಭಾಷೆಗಳಿಗೆ ಪರಿವರ್ತಿಸಲಾಗಿದೆ.
ಲಂಡನ್ನಿನ ರಂಗಮಂದಿರಗಳಲ್ಲಿ ತಾವು ಅಭ್ಯಸಿಸಿದ ನಾಟಕಗಳಿಂದ ಕೈಲಾಸಂ ಅನೇಕಾನೇಕ ಹೊಸ ವಿಷಯಗಳನ್ನು ಗ್ರಹಿಸಿದರು. ಇಬ್ಸೆನ್, ಷಾ, ಗಾಲ್ಸ್‍ವರ್ದಿಯಂಥ ನಾಟಕಕಾರರ ಕೆಚ್ಚೆದೆ, ಪ್ರಖರ ಬುದ್ಧಿ; ಆಗಿನ ಜನಜೀವನದಲ್ಲಿನ ಅನ್ಯಾಯ, ದುವ್ರ್ಯಾಪಾರ, ದುರ್ನಡತೆಗಳನ್ನು ಕಂಡು ನಾಟಕಕಾರರು ಕನಲಿದುದು; ದೀನದಲಿತರಲ್ಲಿ ಅನುಕಂಪ, ನಿಜಜೀವನಕ್ಕೆ ದೂರವಾದ ಅನೇಕಾನೇಕ ನಿರರ್ಥಕ ಗೊಡ್ಡು ಸಂಪ್ರಾದಾಯಗಳನ್ನು ರೂಢಮೂಲವಾಗಿ ಕಿತ್ತೊಗೆಯಬೇಕೆಂಬ ಅವರ ದೃಢಸಂಕಲ್ಪ; ಇಂತಿದ್ದ ಜನಜೀವನವನ್ನು ರಂಗಸ್ಥಳದಲ್ಲಿ ಪ್ರತಿಬಿಂಬಿಸಿ ಸಮಾಜ ಜೀವನವನ್ನು ಪರಿಷ್ಕರಿಸುವ ಅವರ ಸಾಹಸಪೂರ್ಣ ಪ್ರಯತ್ನಗಳು-ಇವು ಕೈಲಾಸಂ ಅವರ ಮನಸ್ಸಿನ ಮೇಲೆ ತುಂಬ ಪರಿಣಾಮ ಮಾಡಿದುವು. ಜೊತೆಗೆ ಈ ಪ್ರಯತ್ನಗಳ ಸಾಧನವಾಗಿ ಜನತೆಯ ದಿನಬಳಕೆಯ ಭಾಷೆಯನ್ನು ಅವರೆಲ್ಲ ಬಳಸಿಕೊಂಡದ್ದೂ ಕೈಲಾಸಂಗೆ ಮೆಚ್ಚುಗೆಯಾಯಿತು. ಚಿಕ್ಕಂದಿನಿಂದಲೂ ತಮ್ಮಲ್ಲಿ ಸುಪ್ತವಾಗಿದ್ದ ಶುದ್ಧಹಾಸ್ಯದ ಪ್ರವೃತ್ತಿಯನ್ನು ಈ ನಾಟಕ ತಂತ್ರಶಿಕ್ಷಣ ಹೊರೆಗೆಳೆದು ಹಾಕಿತು.
ಸ್ವಯಂ ಅನುಕರಣದಲ್ಲಿ ಅದ್ವಿತೀಯರೂ ಅಭಿನಯದಲ್ಲಿ ಸಿದ್ಧಹಸ್ತರೂ ಪಾಶ್ಚಾತ್ಯ ಭಾರತೀಯ ಸಂಗೀತಶಾಸ್ತ್ರಪಂಡಿತರೂ ಇವೆರಡೂ ಪದ್ಧತಿಯ ಹಾಡುಗಳನ್ನು ನುಡಿಯುವುದರಲ್ಲಿ ಕಟುತರ ಅಭ್ಯಾಸವನ್ನೂ ನಡೆಸಿ ಜ್ಞಾನವೃದ್ಧಿ ಮಾಡಿಕೊಂಡವರೂ ಆದ ಕೈಲಾಸಂ, ತಮ್ಮ ಭಾರತೀಯತೆ, ಪರಂಪರಾಗತವಾಗಿಯೂ ವಂಶಪಾರಂಪರ್ಯದಿಂದಲೂ ಬಂದ ಉಚ್ಚ ಸಂಸ್ಕøತಿಗಳನ್ನು ಮರೆಯದೆ ತಮ್ಮ ಕೃತಿ ರಚನೆಯಿಂದ ಅವಕ್ಕೆ ಕುಂದಣವಿಕ್ಕಿದರು. ಭಾರತೀಯರಿಗೆ ಪುರಾಣಗಳೇ ಉಸಿರು. ಅಂತೆಯೇ ರಾಮಾಯಣ, ಭಾರತ, ಭಾಗವತಾದಿ ಮಹಾಕಾವ್ಯಗಳ ದಿವ್ಯವ್ಯಕ್ತಿಗಳ ದರ್ಶನವನ್ನು ಮಾಡಿಸಿದರು.
ಕನ್ನಡದಲ್ಲಿ ದಿನಬಳಕೆಯ ಭಾಷೆಯನ್ನು ಬಳಸಿ ನಾಟಕ ರಚಿಸಿದವರಲ್ಲಿ ಕೈಲಾಸಂ ಅಗ್ರಗಣ್ಯರು. ಪಾಶ್ಚಾತ್ಯ ನಾಟಕಗಳಲ್ಲಿ ಆಗ ಪ್ರಚಲಿತವಾಗಿದ್ದ ಈ ನೂತನ ವಿಧಾನವನ್ನು ಕನ್ನಡಕ್ಕೆ ತಂದುಕೊಂಡ ಕೀರ್ತಿಯೂ ಇವರದೇ. ಇವರು ಬಳಸಿದ ಆಡುಭಾಷೆಯಾದರೋ ಅಚ್ಚಕನ್ನಡವಲ್ಲ. ಅರ್ಧಮರ್ಧ ಇಂಗ್ಲಿಷ್ ಬೆರೆತ ಕಲಬೆರಕೆ ಭಾಷೆ. ಅದಕ್ಕೆ ಕಾರಣವೂ ಇಷ್ಟೆ. ವಿದ್ಯಾವಂತರೆಂದು ಆಗ ಮೆರೆಯುತ್ತಿದ್ದ ಮೈಸೂರಿನ ಮಧ್ಯಮವರ್ಗದ ನಾಗರಿಕರು ತಮ್ಮ ನಿತ್ಯವ್ಯವಹಾರದಲ್ಲಿ ಬಳಸುತ್ತಿದ್ದುದೇ ಈ ಭಾಷೆ. ಒಮ್ಮೊಮ್ಮೆ ಇಲ್ಲಿನ ಬೆರಕೆ ಅತಿರೇಕಕ್ಕೂ ಹೋಗಿ ಅಸಹ್ಯವಾಗುತ್ತಿದ್ದುದಲ್ಲದೆ ಕನ್ನಡಕ್ಕೆ ಇದರಿಂದ ಎಂಥ ಅಪಚಾರವಾಗುತ್ತಿದೆಯೆಂಬ ಕಲ್ಪನೆಯೂ ಅವರಿಗೆ ಇರುತ್ತಿರಲಿಲ್ಲ. ಕೈಲಾಸಂ ತಮ್ಮ ನಾಟಕಗಳಲ್ಲಿ ಉಪಯೋಗಿಸಿರುವ ಭಾಷೆ ಅದನ್ನಾಡುತ್ತಿರುವ ಸಮಾಜದ ಮುಖಕ್ಕೆ ಕನ್ನಡಿ ಹಿಡಿದಂತಿದೆ. ಸ್ವಲ್ಪ ಅತಿ ಎನಿಸುವಂತೆ ಉತ್ಪ್ರೇಕ್ಷಿಸಿ, ವಿಡಂಬಿಸಿ ನಾಟಕಕಾರ ಅದನ್ನು ಪ್ರೇಕ್ಷಕರ ಮನಮುಟ್ಟಿಸುತ್ತಾನೆ.
ಈ ಆಡುಭಾಷೆಯ ಉಪಯೋಗವೂ ಸಮಯೋಚಿತ. ಬೇಕೆಂದೇ ಅದನ್ನು ಜಗ್ಗಿಸುವ ಚಟವೂ ಕೈಲಾಸಂಗಿಲ್ಲ. ಅಂತೆಯೇ ಒಂದು ಇಂಗ್ಲಿಷ್ ಪದವನ್ನೂ ಬೆರೆಸದೆ ಶುದ್ಧವಾಗಿ ಅರ್ಥವತ್ತಾಗಿ ಆದರೂ ಸರಳವಾಗಿ ಮಾತನಾಡುವ ಜನರೂ ಸಮಾಜದಲ್ಲಿ ಇದ್ದಾರೆಂಬುದನ್ನೂ ಕೆಲವು ನಾಟಕಗಳಲ್ಲಿ ಕಾಣಬಹುದು. ನವೀನ ವಿದ್ಯಾಭ್ಯಾಸ ಪದ್ಧತಿಯಿಂದ ಸಂಸ್ಕøತಿಯನ್ನು ಮರೆತು ಸಭ್ಯತೆಯ ಗೆರೆದಾಟಿದ ಜನತೆ ಸಮಾಜವನ್ನು ಎಂಥ ದುಃಸ್ಥಿತಿಗೆ ತಂದು ನಿಲ್ಲಿಸಿದೆ ಎಂಬುದನ್ನು ಅನೇಕ ನಾಟಕಗಳು ಎತ್ತಿ ತೋರುತ್ತವೆ. ಈ ದುಃಸ್ಥಿತಿಗಿಳಿದ ಸಮಾಜದಲ್ಲೂ ಸಜ್ಜನರೂ ಸುಶಿಕ್ಷಿತರೂ ಆದ ಹಿರಿಯರೂ ಕಿರಿಯರೂ ಇನ್ನೂ ಇದ್ದಾರೆ, ಅವರ ಹಿರಿತನವನ್ನು ಕಂಡುಕೊಂಡು ಸಮಾಜ ಜೀವನವನ್ನು ಸುಧಾರಿಸಬಹುದು-ಎಂಬ ಧ್ವನಿಯಂತೂ ಈ ನಾಟಕಗಳಲ್ಲಿ ಎದ್ದು ಕಾಣುತ್ತದೆ. ಸಮಾಜದಲ್ಲಿ ಟೊಳ್ಳೂ ಇದೆ ಗಟ್ಟಿಯೂ ಇದೆ. ಪರಿಸ್ಥಿತಿ ಸನ್ನಿವೇಶಗಳ ಪ್ರಭಾವದಿಂದ ಹಾಸ್ಯದ ಕುಲುಮೆಯಲ್ಲಿ ಸಮಾಜಜೀವಿ ಕುದಿದಾಗ ಟೊಳ್ಳು ಮಾಯವಾಗಿ ಗಟ್ಟಿ ಉಳಿಯುತ್ತದೆ. ಅಂಥ ಗಟ್ಟಿ ಉಳಿಯಲೆಂಬುದೇ ಕೈಲಾಸಂ ಕೃತಿಗಳ ಉದ್ದೇಶ.
ಕೈಲಾಸಂ ಪಾಶ್ಚಾತ್ಯ ಸಾಮಾಜಿಕ ಹಾಗೂ ಪೌರಾಣಿಕ ನಾಟಕಾವಲೋಕನ ಮತ್ತು ಅಧ್ಯಯನಗಳಿಂದ ಪ್ರೇರಿತರಾದರಷ್ಟೇ ಹೊರತು ವಸ್ತುತಃ ಅವುಗಳನ್ನೇ ಇಲ್ಲಿಗೆ ತಂದುಕೊಳ್ಳಲಿಲ್ಲ. ಕನ್ನಡ ಸಮಾಜದಿಂದ ಎತ್ತಿಕೊಂಡ ಕಥಾವಸ್ತುವನ್ನು ಬಳಸಿಕೊಂಡು ತಮ್ಮದೇ ಆದ ವೈಖರಿಯಿಂದ ನಾಟಕ ಕಟ್ಟಿರುವುದು ಕೈಲಾಸಂ ಅವರ ವೈಶಿಷ್ಟ್ಯ.
ಇತರರು ನಡೆದು ಸವೆಸಿದ ಜಾಡು ಹಿಡಿಯದೆ ನಾಟಕ ಪ್ರಪಂಚದಲ್ಲೇ ಹೊಸ ಹಾದಿ ಹಾಕಿಕೊಟ್ಟ ಹಿರಿತನ ಕೈಲಾಸಂಗೆ ಸೇರುತ್ತದೆ. ಸಮಾಜ ಜೀವನದ ವೈವಿಧ್ಯ, ಅಂಕು ಡೊಂಕುಗಳಿಗೆ ಭೂತಗನ್ನಡಿ ಹಿಡಿದು ಅದರ ಉಬ್ಬಿದ ಪ್ರತಿಬಿಂಬಗಳನ್ನು ನಮ್ಮೆದುರಿಗೆ ನಿಲ್ಲಿಸಿ, ಬಾಳನ್ನು ಆಳವಾಗಿ ಹೊಕ್ಕು, ಜನತೆಯ ಕಷ್ಟಕಾರ್ಪಣ್ಯ, ಮರೆಮೋಸ, ಸಾವುನೋವುಗಳನ್ನು ತೀಕ್ಷ್ಣವಾಗಿ ಪರಿಶೀಲಿಸಿ ಸಮಾಜಜೀವನದಲ್ಲಿ ಹೆಜ್ಜೆಹೆಜ್ಜೆಗೂ ಎದುರಾಗುವ ಕಣ್ಣೀರಿನ ಕಡಲನ್ನು ತಮ್ಮ ಹಾಸ್ಯದ ಹರಿಗೋಲಿನಿಂದ ದಾಟಿಸುತ್ತಾರೆ, ಕೈಲಾಸಂ. ಜನಮನದಲ್ಲಿ ತಾಂಡವವಾಡುತ್ತಿರುವ ನೋವು ನಲಿವು ಆಸೆ ಆಮಿಷಗಳನ್ನು ತಾವೂ ಅನುಭವಿಸುವುದಲ್ಲದೆ ತಾವು ಸೃಷ್ಟಿಸಿದ ಪಾತ್ರಗಳಿಗೆ ಜೀವಕಳೆ ತುಂಬಿ ತಾವು ಮಾತ್ರ ದೂರ ನಿಲ್ಲುವುದು ಕೈಲಾಸಂ ನಾಟಕ ನಿರೂಪಣೆಯ ವೈಖರಿ. ಸಂವಿಧಾನ ಚಾತುರ್ಯ, ರಸೈಕ್ಯತೆ, ಸಂಭಾಷಣೆಯ ನಿರೂಪಣೆಗಳಲ್ಲಿ ಮನೋಜ್ಞತೆ, ಇವೆಲ್ಲಕ್ಕೆ ಹೊಂದಿಕೆಯಾಗಿ ಬರುವ ಹಾಸ್ಯದ ಹೊಳೆ, ಭಾವಪೂರ್ಣವಾಗಿ ಅರ್ಥಪೂರ್ಣವಾಗಿ ಜೀವನದ ಸಮಸ್ಯೆಗಳ ವಿವೇಚನೆ, ಸನ್ನಿವೇಶಗಳ ರಸಸ್ಥಾನ ಹಿಡಿದು ಮಿಡಿಯಬಲ್ಲ ಅಮಿತಶಕ್ತಿ ಇವು-ಕೈಲಾಸಂ ಕೃತಿಗಳ ಸಾಮಾನ್ಯ ಲಕ್ಷಣಗಳು. ಕೆಲವೊಮ್ಮೆ ಆರಿಸಿಕೊಂಡ ಸಮಸ್ಯೆಯೂ ಅರ್ಥಪೂರ್ಣ ವಿಶ್ಲೇಷಣೆ ಆಗುವುದಿಲ್ಲ.
ಕೈಲಾಸಂ ಒಬ್ಬ ಮಹಾವಿಸ್ಮಯಕಾರ ವ್ಯಕ್ತಿ, ವಾಕ್ಚತುರ, ರಸಿಕಭಾಷಿ, ನಗೆಗಾರ, ಪ್ರಾಜ್ಞ, ವೇದಾಂತಿ, ಅಭಿನಯಚತುರ, ನಾಟಕಕಾರ. ಇವರಲ್ಲಿ ಕಂಡುಬರುವ ಒಂದು ಅಸಾಧಾರಣ ಶಕ್ತಿಯೆಂದರೆ ಪರಸ್ಪರ ಸಂಬಂಧವಿಲ್ಲದ ಭಾವಗಳ ಅಥವಾ ಮಾತುಗಳ ಅನಿರೀಕ್ಷಿತ ಸಂಯೋಜನೆ ಅಥವಾ ವೈದೃಶ್ಯ ನಿರೂಪಣೆಯಿಂದ ಥಟ್ಟನೆ ಬುದ್ಧಿಗೆ ಆನಂದವನ್ನುಂಟುಮಾಡುವ ಚತುರೋಕ್ತಿ.
1945ರಂದು ಕನ್ನಡ ಸಾಹಿತ್ಯ ಪರಿಷತ್ತು ಮದ್ರಾಸಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿ, ಅದರ ಅಧ್ಯಕ್ಷಸ್ಥಾನಕ್ಕೆ ಕೈಲಾಸಂ ಅವರನ್ನು ಆರಿಸಿತು. ಇದಾದ ಮಾರನೆಯ ವರ್ಷವೇ (1946) ಕೈಲಾಸಂ ಬೆಂಗಳೂರಿನಲ್ಲಿ ಅವರ ವಿಶ್ವಾಸಿಗಳೂ ಬಂಧುಗಳೂ ಆದ ವಿ.ಟಿ. ಶ್ರೀನಿವಾಸನ್ ಅವರ ಮನೆಯಲ್ಲಿ ಅಸುನೀಗಿದರು. (ಬಿ.ಎಸ್.ಆರ್.ಆರ್.; ಕೆ.ಎ.ಐ.)
ಕೈಲಾಸಂ ತಮ್ಮ ಸುತ್ತಮುತ್ತಲಿನ ಮಧ್ಯಮವರ್ಗದವರ ನಿತ್ಯಜೀವನದ ಆಗುಹೋಗುಗಳಲ್ಲಿ ಪ್ರೀತಿ ಸ್ನೇಹ ವಿರಸಗಳಲ್ಲಿ ತಮ್ಮ ಕನ್ನಡ ನಾಟಕ ವಸ್ತುಗಳನ್ನು ಕಂಡುಕೊಂಡರು. ಇಂಥ ಜೀವನದ ಮನುಷ್ಯ ಬಾಂಧವ್ಯಗಳನ್ನು ವಿಶ್ಲೇಷಿಸಿದರು. ಸಾಮಾಜಿಕ ಕಾರ್ಯದ ಸೋಗು, ಅಹಂಭಾವ, ಕೃತಕತೆಗಳನ್ನು ಅನಾವರಣಗೊಳಿಸಿದರು. ಪ್ರೀತಿ ಅಂತಃಕರಣಗಳನ್ನು ಎತ್ತಿ ಹಿಡಿದರು. ಓಪನ್ ಎಂಡೆಡ್ ಪ್ಲಾಟ್‍ಗಳು (ಕ್ರಿಯೆ ಬದುಕಿನಲ್ಲಿ ಮುಂದುವರಿಯಬಲ್ಲಂತೆ ರೂಪಿಸಿದ ಕಥಾವಸ್ತುಗಳು) ಅವರವು. ಪಾತ್ರಗಳ ಹಣೆಯ ಬರಹದ ಮುಕ್ತಾಯವನ್ನು ಅವರು ನಿರೂಪಿಸುವುದಿಲ್ಲ. ಮರೆಯಲಾಗದ ಪಾತ್ರಗಳನ್ನು ಸೃಷ್ಟಿಸಿದರು. ಹೆಚ್ಚು ರಂಗಸಜ್ಜಿಲ್ಲದೆ ಉಡುಪುಗಳ ವೈಶಿಷ್ಟ್ಯವಿಲ್ಲದೆ ಹವ್ಯಾಸಿ ಕಲಾವಿದರು ಅಭಿನಯಿಸಬಹುದಾದ ನಾಟಕಗಳನ್ನು ರಚಿಸಿ ಕೈಲಾಸಂ ನಾಟಕಗಳ ಪ್ರದರ್ಶನವನ್ನು ವಿಸ್ತರಿಸಿದರು. ನಟನಟಿಯರ ಸಮೂಹವನ್ನು ಬೆಳೆಸಿದರು.
ಆದರೆ ಅವರು ಬಳಸಿದ, ಸಾಮಾನ್ಯವಾಗಿ ಕನ್ನಡಾಂಗ್ಲೋ ಎಂದು ಕರೆಯುವ ಭಾಷೆಯಿಂದಾಗಿ ಕಾಲ ಕಳೆದಂತೆ ಅವರ ನಾಟಕಗಳ ಆಕರ್ಷಣೆ ಮಾಸುತ್ತ ಬಂದಿದೆ.
ಕೈಲಾಸಂ ಇಂಗ್ಲಿಷಿನಲ್ಲಿ ಕವನಗಳನ್ನು ನಾಟಕಗಳನ್ನು ಬರೆದಿದ್ದಾರೆ. ಎರಡು ಕವನಗಳು “ಕೃಷ್ಣ” ಮತ್ತು (ಗಾಂಧೀಜಿಯನ್ನು ಕುರಿತ) ದಿ ರೆಸಿಪಿ ಸಾಕಷ್ಟು ಪ್ರಸಿದ್ಧವಾದವು. ನಾಟಕಗಳಿಗೆ ಕೈಲಾಸಂ ಪೌರಾಣಿಕ ವಸ್ತುಗಳನ್ನು ಆರಿಸಿಕೊಂಡರು. ಇವಕ್ಕೆ ಮಾತ್ರ ಇಂಗ್ಲಿಷ್ ಮಾಧ್ಯಮವನ್ನು ಏಕೆ ಆರಿಸಿಕೊಂಡರು ಎನ್ನುವುದು ಸ್ಪಷ್ಟವಾಗಿಲ್ಲ. ದ ಪರ್ಪಸ್ ಈ ನಾಟಕಗಳಲ್ಲಿ ಅತ್ಯುತ್ತಮವಾದದ್ದು. ಪ್ರಾಯಶಃ ಇದು ಅವರ ಎಲ್ಲ ನಾಟಕಗಳಲ್ಲಿ ಅತ್ಯುತ್ತಮವಾದದ್ದು. ಇದು ಏಕಲವ್ಯನ ಕಥೆ. ದ್ರೋಣನಿಗೆ ಹೆಬ್ಬೆರಳನ್ನು ಕತ್ತರಿಸಿಕೊಟ್ಟ ಕಥೆ. ವ್ಯಕ್ತಿ-ವ್ಯಕ್ತಿಗಳ ಮುಖಾಮುಖಿಯ ಮಾನವೀಯವಾಗಿದೆ, ಇನ್ನು ವಿಶಾಲವಾದ ವಿನ್ಯಾಸದ ಭಾಗವಾಗಿಯೂ ಇದೆ. ವಿದ್ಯೆಯನ್ನು ಕಲಿಯುವಾಗ ಗುರುವಿಗಿದ್ದ ಉದ್ದೇಶಕ್ಕಿಂತ ಅವನ ಶಿಷ್ಯನು ವಿದ್ಯೆಯನ್ನು ಕಲಿಯುವಾಗ ಘನವಾದ ಉದ್ದೇಶವನ್ನು ಹೊಂದಿದ್ದರೆ, ಶಿಷ್ಯನು ಗುರುವನ್ನು ಮೀರಿಸುತ್ತಾನೆ. ಆದುದರಿಂದಲೇ ಏಕಲವ್ಯನು ಗುರುವನ್ನು ಮೀರಿಸುತ್ತಾನೆ. ಇದನ್ನು ದ್ರೋಣನು ಗುರುತಿಸುತ್ತಾನೆ. ಆದರೂ ಅವನು ಹೆಬ್ಬೆರಳನ್ನು ಬೇಡಲೇಬೇಕು. ಇಂಥ ಶಿಷ್ಯನಿಗೆ ಘಾತವನ್ನು ಮಾಡಲೇಬೇಕು. ಇದು ಅವನ ದುರಂತ. ಮನುಷ್ಯನಿಗೆ ಅರ್ಥವಾಗದ ದೈವೀ ಉದ್ದೇಶವೊಂದು ಫುಲ್‍ಫಿಲ್‍ಮೆಂಟ್‍ನಲ್ಲಿ ಸಾಧಿತವಾಗುತ್ತದೆ. ಕೃಷ್ಣನು ಏಕಲವ್ಯನನ್ನು ಕೊಂದಾಗ ಕೀಚಕದಲ್ಲಿ ಕೀಚಕನ ಪಾತ್ರದ ಉದ್ಧಾರದ ಪ್ರಯತ್ನವಿದೆ, ಆದರೆ ಪ್ರಯತ್ನ ಸಫಲವಾಗುವುದಿಲ್ಲ. ಕರ್ಸ್ ಆಫ್ ಕರ್ಣ ಪಾತ್ರದ ನಿರ್ದಯತೆಯ ಚಿತ್ರಣ ಈ ನಾಟಕಗಳಲ್ಲಿಯೂ ಶಬ್ದಾಡಂಬರ ಅಲ್ಲಲ್ಲಿ ಉಂಟು. ಆದರೆ ಈ ನಾಟಕಗಳಲ್ಲಿ ನಾವು ಕಾಣುವುದು ಘನತೆಯ ಅನ್ವೇಷಣೆಯನ್ನು, ಇವೆಲ್ಲ ಟ್ರಾಜಡಿಗಳೇ. ಇವುಗಳಲ್ಲಿ ಮನುಷ್ಯನ ಘನತೆ ಬೆಳಗುತ್ತದೆ.
ಪರಿಷ್ಕರಣೆ ಪ್ರೊ. ಎಲ್. ಎಸ್. ಶೇಷಗಿರಿರಾವ್
No comments:
Post a Comment