ಗದಗ, ಸೆ. 18, 2010 : ಅಂಧರ ಬಾಳಿನ ಬೆಳಕಾಗಿದ್ದ, ಅನಾಥರ ಪಾಲಿನ ಆಶ್ರಯದಾತನಾಗಿದ್ದ ಎಲ್ಲರ ಮೆಚ್ಚಿನ 'ಪುಟ್ಟಜ್ಜಯ್ಯ' ಪಂಡಿತ ಪುಟ್ಟರಾಜ ಗವಾಯಿ (1914-2010) ಅವರ ಪಾರ್ಥೀವ ಶರೀರದ ಮೆರವಣಿಗೆ ಗದಗ ನಗರದಲ್ಲಿ ಆರಂಭವಾಗಿದೆ. ಇಂದು ಸಂಜೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಗವಾಯಿ ಅವರ ಅಂತಿಮ ಸಂಸ್ಕಾರ ನೆರವೇರಲಿದೆ. ಜಿಲ್ಲಾ ಕ್ರೀಡಾಂಗಣದಿಂದ ಬೆಳಿಗ್ಗೆ 11.30ಕ್ಕೆ ಆರಂಭವಾಗಿರುವ ಮೆರವಣಿಗೆ ಊರಿನ ಬೀದಿಬೀದಿ ಸಂಚರಿಸಿ ಸಂಜೆಯ ಹೊತ್ತಿಗೆ ಪುಣ್ಯಾಶ್ರಮ ತಲುಪಲಿದೆ. ದಾರಿಯುದ್ದಕ್ಕೂ ಲಕ್ಷಾಂತರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲು ನೆರೆದಿರುವುದು ಮತ್ತು ಶೋಕ ಸಾಗರದಂತಾಗಿರುವುದು ಪ್ರೀತಿಯ ಅಜ್ಜನ ಗೌರಿಶಿಖರದೆತ್ತರದ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಗವಾಯಿಗಳ ಶಿಷ್ಯಕೋಟಿ ಮಾತ್ರವಲ್ಲ, ಅವರನ್ನು ಬಲ್ಲ ಎಲ್ಲರೂ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.
ಭಕ್ತಾದಿಗಳ ಆಕ್ರಂದನವಂತೂ ಮುಗಿಲು ಮುಟ್ಟಿದೆ. ಹುಯಿಲಗೋಳ ವೃತ್ತ, ಗಾಂಧಿ ವೃತ್ತ, ಜಿಲ್ಲಾ ನ್ಯಾಯಾಲಯ ಮುಖಾಂತರ ಮೆರವಣಿಗೆ ಸಾಗಿ ಪುಣ್ಯಾಶ್ರಮ ತಲುಪಲಿದೆ.
ಗಾನಯೋಗಿಯ ಅಂತಿಮ ಸಂಸ್ಕಾರವನ್ನು ವೀರಶೈವ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ನೆರವೇರಿಸಲಾಗುತ್ತಿದೆ. ಗವಾಯಿಗಳ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಗದಗಿಗೆ ಬಂದಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೂಡ ಅಂತಿಮ ನಮನ ಸಲ್ಲಿಸಿದರು. ಪುಟ್ಟರಾಜರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯಾದ್ಯಂತ ಸರಕಾರಿ ರಜಾ : ಪುಟ್ಟರಾಜರ ಗೌರವಾರ್ಥವಾಗಿ ಇಂದು ರಾಜ್ಯಾದ್ಯಂತ ಶಾಲಾ, ಕಾಲೇಜು, ಕಚೇರಿಗಳಿಗೆ ರಾಜ್ಯ ಸರಕಾರ ಗೌರವ ಘೋಷಿಸಿದೆ. ನಿನ್ನೆ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಮಾತ್ರ ರಜಾ ಘೋಷಿಸಲಾಗಿತ್ತು.
No comments:
Post a Comment