Translate in your Language

Monday, November 28, 2011

ನಾನು ಕಂಡಂತೆ ಕಂಬಾರ !

ಚಂದ್ರಶೇಖರ  ಕಂಬಾರ
ನನ್ನ ತಕ್ಷಣದ  ಪ್ರತಿಕ್ರಿಯೆಯಾಗಿ ನಾನು ಹೇಳಿದ್ದು : ಕಂಬಾರ ಕನ್ನಡದ ಒಬ್ಬ ನೈಜ ,ಸಹಜ  ಬರಹಗಾರ .ಕನ್ನಡ  ನುಡಿಯ ಎಲ್ಲ  ಸೂಕ್ಷ್ಮಲಯಗಳನ್ನು ಹಿಡಿದು ಕಾವ್ಯ  ಬರೆಯಬಲ್ಲ  ಒಬ್ ಪ್ರತಿಭಾನ್ವಿತ .ಕಾವ್ಯದಲ್ಲಿ ಸಿಕ್ಕ  ಯಶಸ್ಸು  ಅವರಿಗೆ  ನಾಟಕದಲ್ಲಿ ಸಿಕ್ಕಿಲ್ಲ  ಎಂದು  ನನ್ನ  ಅನಿಸಿಕೆ  ಈ ಪ್ರಶಸ್ತಿಗೆ ಎಲ್ಲ ಬಗೆಯಿಂದಲೂ ಅವರು ಅರ್ಹರು ."
 ಮುಂಭಾರ, ಹಿಂಭಾರ  ಅಲ್ಲ -ಇವನು ಕಂಬಾರ


ನಾನು ಕಂಡಂತೆ  ನನಗೆ ಕಂಡಷ್ಟು -ಚಂದ್ರಶೇಖರ ಪಾಟೀಲ
ಕನ್ನಡಕ್ಕೆ ಎಂಟನೆಯ  ಜ್ಞಾನಪೀಠ ಪ್ರಶಸ್ತಿ ಗೆಳೆಯ ಚಂದ್ರಶೇಖರ  ಕಂಬಾರರಿಗೆ  ಲಭಿಸಿದ  ಸುದ್ಧಿ ನನಗೆ  ತಿಳಿದದ್ದು  ಪತ್ರಕರ್ತ ಮಿತ್ರರಿಂದ.  "ಇದಕ್ಕೆ  ನಿಮ್ಮ ತಕ್ಷಣದ ಪ್ರತಿಕ್ರಿಯೆ  ಏನು?"- ಅಂತ ಅವುರ ಕೇಳಿದಾಗ  ನನಗೆ  ತಕ್ಷಣದ  ಪ್ರತಿಕ್ರಿಯೆ  ಏನು?"-ಅಂತ  ಅವರು ಕೇಳಿದಾಗ  ನನಗೆ  ತಕ್ಷಣ ನೆನಪಾದದ್ದು  :ಕೆಲವು  ವರ್ಷಗಳಹಿಂದೆ ಇದೇ ಪ್ರಶಸ್ತಿ ಯು.ಆರ್.ಅನಂತಮೂರ್ತಿಯವರಿಗೆ  ಬಂದದ್ದು  ಟಿ.ವಿ. ಮೊಲಕ "ಬ್ರೇಕಿಂಗ್ ನ್ಯೂಸ್ "ಆಗಿ  ನನಗೆ ಅಪ್ಪಳಿಸಿದ  ಆ ಸಂಜೆ

ಅದೇ ಸಂದರ್ಭದಲ್ಲಿ ಗೆಳೆಯ  ಸಂಪಿಗೆ  ತೋಂಟದಾರ್ಯ ಹೇಳಿದ  ಒಂದು ಮಾತಿದು :"ಸಾರ್ ,ಅನಂತರಮೂರ್ತಿಗೆ ಬಂದ  ಮೇಲೆ ಇನ್ನು ಮುಂದಿನ ಏಳೆಂಟು ಪ್ರಶಸ್ತಿ ಕನ್ನಡಕ್ಕೇ ಗ್ಯಾರಂಟಿ."
          ಚಂಪಾ:Chandrashekar Patil
ನಾನು: ಅದು ಹ್ಯಾಗೆ?
ಅವರು: ಅನಂತಮೂರ್ತಿಗಿಂತ  ಚೆನ್ನಾಗಿ ಬರೆಯೋರು ಇನ್ನೂ ಏಳೆಂಟು ಜನ ಇದ್ದಾರೆ !

 ಆ ಏಳೆಂಟು  ಜನರಲ್ಲಿ ಕಂಬಾರರೂ ಒಬ್ಬರು -ಎಂಬುದು ನಾಡಿಗೆಲ್ಲ  ಗೊತ್ತಿದ್ದ ಸಂಗತಿ .ಅಂಥ ಕಂಬಾರರಿಗೆ  ಈಗ ಪ್ರಶಸ್ತಿ.ಕನ್ನಡಿಗರಿಗೆಲ್ಲ ಸಂತೋಷದ ಗಳಿಗೆ ಇದು .ಅನುಭವಿಸೋಣ.

ಕಂಬಾರ ,ಕರ್ನಾಡ -ನನಗಿಂತ  ಎರಡು  ಮೊರು ವರ್ಷ ಹಿರಿಯರು. ನಾವೆಲ್ಲ  ಧಾರವಾಡ  ಕಡೆಯ  ಮಂದಿ .ಆದರೆ  ಆ  ಕಾಲದ ಸಾಹಿತ್ಯಕ ವಾತಾವರಣ ನಮ್ಮೆಲ್ಲರನ್ನು  ಸಮಕಾಲೀನರನ್ನಾಗಿಸಿತ್ತು .ಲಂಕೇಶ್, ತೇಜಸ್ವಿ ,ಅನಂತರಮೂರ್ತಿ ಇನ್ನೂ ದೊಡ್ಡವರು .ಎಪ್ಪತ್ತು  -ಎಂಬತ್ತರ ದಶಕಗಳು ನವ್ಯ ಸಾಹಿತ್ಯದ  ಸಂಭ್ರಮದ ಕಾಲ.

ನವ್ಯದ ಪ್ರವರ್ತಕರು ವಿ.ಕೃ.ಗೋಕಾಕರೇ ಆಗಿದ್ದರೂ ಕಾಲಾಂತರದಲ್ಲಿ ಗೋಪಾಲಕೃಷ್ಣ ಅಡಿಗರು ನವ್ಯದ   ಪ್ರವರ್ತಕರಾದರು. ಆಗಿನ ಬಹುತೇಕ ತರುಣರ  ಪಾಲಿಗೆ ಅಡಿಗರೇ ನವ್ಯ - ಬೃಹನ್ಮಠದ ಜಗದ್ಗುರು. ಅಷ್ಟೋತ್ತಿಗೆ ಜ್ಞಾನಪೀಠ ಪ್ರಶಸ್ತಿ ಪರಂಪರೆ  ಪ್ರಾರಂಭವಾಗಿ  ಕುವೆಂಪು-ಬೇಂದ್ರೆ-ಕಾರಂತ- ಮಾಸ್ತಿ- ಗೋಕಾಕರು  ನಮ್ಮ ಕ್ಯಾಲೆಂಡರುಗಳನ್ನು ಅಲಂಕರಿಸಿದ್ದರು. ಎಲ್ಲರೂ ಉದ್ದಾಮ ಸಾಹಿತಿಗಳು; ಸಾಹಿತ್ಯದ  ಅನೇಕ  ಪ್ರಕಾರಗಳಲ್ಲಿ ಸಮೃದ್ಧ ,ವೈವಿಧ್ಯಮಯ ಕೃತಿ  ಸೃಷ್ಟಿಸಿದವರು . ಈ ಪಂಚಭೂತಗಳ ನಂತರ ತರ್ಕಬದ್ಧವಾಗಿ ಈ ಪ್ರಶಸ್ತಿ ಬರಬೇಕಾಗಿದ್ದುದು ಗೋಪಾಲಕೃಷ್ಣ ಅಡಿಗರಿಗೆ  .ಆದರೆ ಅವರನ್ನು ಓವರ್ ಟೇಕ್  ಮಾಡಿ  ಅನಂತಮೊರ್ತಿ ಅದನ್ನು  ಬಾಚಿಕೊಂಡಾಗ ಸಾಹಿತ್ಯ ಲೋಕದಲ್ಲಿ ಗೊಂದಲವೋ ಗೊಂದಲ.

ಇಂಥ ಘಟನಾವಳಿಯಿಂದ  ಇಡೀ ಇಂಡಿಯಾದ "ಸಾಂಸ್ಕೃತಿಕ ರಾಜಕೀಯ"ದ ಒಳಸುಳಿಗಳು ಅನಾವರಣಗೊಳ್ಳತೊಡಗಿದವು . ಈಗಂತೂ ಇದು ಪಾರದರ್ಶಕ.ನಮ್ಮ ರಾಜ್ಯದಲ್ಲಿಯೇ  ಸಣ್ಣ ಸಣ್ಣ ಪ್ರಶಸ್ತಿಗಳಿಗಾಗಿ ನಮ್ಮ ಸಾಹಿತಿಗಳು,ಕಲಾವಿದರು ನಡೆಸುವ "ಲಾಬಿ"ಗಳು ಅದೆಷ್ಟು ?ಎಲ್ಲರೂ ಚಂದಾಗಿ "ಗುಲಾಬಿನಗರ"ವೆಂದು ಕರೆಯುವ  ಬೆಂಗಳೂರನ್ನು ನಾನು"ಲಾಬಿನಗರ"ವೆಂದು ಕರೆಯಲು ಶುರುಮಾಡಿದ್ದು  ಆಗಲೇ .ರಾಜ್ಯದ  ರಾಜಧಾನಿಯ ಕತೆ  ಇದು .ಇನ್ನು ರಾಷ್ಟ್ರದ ರಾಜಧಾನಿ ಹೊಸ ದಿಲ್ಲಿಯ ಕತೆ ಹೇಗಿರಬೇಡ?

ಈ ದೇಶದಲ್ಲಿ ಪ್ರಶಸ್ತಿಗಳು ಪುಕ್ಕಟೆ ಸಿಗುವುದಿಲ್ಲ "ಪ್ರತಿಭೆ" ಒಂದಿದ್ದರೆ ಸಾಲದು."ಪರಿಶ್ರಮ"ಬೇಕು;ಜತೆಗೆ ಅನುಕೂಲ "ಪರಿಸರ" ಬೇಕು .ಮೂರೂ ಇದ್ದರೆ ಮಾತ್ರ ಲಾಟ್ರಿ ಹೊಡೆಯುವುದು  ಗ್ಯಾರಂಟಿ. ನನ್ನ  ತಕ್ಷಣದ ಪ್ರತಿಕ್ರಿಯೆಯಾಗಿ ನಾನು ಹೇಳಿದ್ದು: ಕಂಬಾರ ಕನ್ನಡದ  ಒಬ್ಬ ನೈಜ ,ಸಹಜ (ಜೆನ್ಯುಇನ್) ಬರಹಗಾರ .ಕನ್ನಡ  ನುಡಿಯು ಎಲ್ಲ ಸೂಕ್ಷ್ಮಲಯಗಳನ್ನು ಹಿಡಿದು  ಕಾವ್ಯ ಬರೆಯಬಲ್ಲ ಒಬ್ಬ ಪ್ರತಿಭಾನ್ವಿತ .ಕಾವ್ಯದಲ್ಲಿ ಸಿಕ್ಕ ಯಶಸ್ಸು ಅವರಿಗೆ ನಾಟಕದಲ್ಲಿ ಸಿಕ್ಕಿಲ್ಲ ಎಂದು ನನ್ನ ಅನಿಸಿಕೆ .ಈ ಪ್ರಶಸ್ತಿಗೆ ಎಲ್ಲ  ಬಗೆಯಿಂದಲೂ ಅವರು ಅರ್ಹರು."

ಈ ಕಂಬಾರ ಎಂಬ ಐಟೆಮ್ಮನ್ನು ನಾನು ಬಹಳ ಹತ್ತಿರದಿಂದ ಕಂಡವನು. ಹೀಗಾಗಿ ಅವರ  ಸಾಹಿತ್ಯೇತರ ಆಯಾಮಗಳ ಬಗ್ಗೆ  ನಾನು ಕಡಿಮೆ ಮಾತಾಡಿದಷ್ಟೂ ಒಳ್ಳೆಯದು. ಅದಕ್ಕೆ  ತಕ್ಕ ಸಂದರ್ಭವೂ ಇದಲ್ಲ .ಒಟ್ಟಿನಲ್ಲಿ : ಎಡಪಂಥೀಯ -ಬಲ  ಪಂಥೀಯ ಇತ್ಯಾದಿ ಏನೂ ಅಲ್ಲ- ಯಾವಾಗಲೂ ವ್ಯವಸ್ಥೆಯ ಪರವಾಗಿಯೇ ಇದ್ದು ,ಸಮರಸವೇ ಜೀವನ  ಎಂಬ  ಸಿದ್ಧಾಂತದಲ್ಲಿ  ನಂಬಿಕೆ ಉಳ್ಳ  ಸಾಹಿತಿ .ನಗರ -ಸಂಸ್ಕೃತಿಯ ಎಲ್ಲ ದಾವು -ಪೇಚುಗಳನ್ನು ಕರಗತ ಮಾಡಿಕೊಂಡೂ ಹಳ್ಳಿಯ ಹೈದನ ಮುಗ್ಧತೆ ಉಳಿಸಿಕೊಂಡ ಮಹಾನುಭಾವ.

1992ರಲ್ಲಿ -(ಅಂದರೆ ,ಹತ್ತೊಂಬತ್ತು  ವರ್ಷಗಳ ಹಿಂದೆಯೇ )- ನಾನು ಕಂಬಾರನ ಬಗ್ಗೆ  ಪ್ರೀತಿಯಿಂದ ,ಚೇಷ್ಟೆ ಯಿಂದ ಬರೆದ  ಕವನ ಇಲ್ಲಿದೆ .
ನೆನಪಿರಲಿ :ಇದು ಕಂಬಾರ -ನಾನು ಕಂಡಂತೆ .(ಇದರ ಮಿತಿ ನನಗೆ ಗೊತ್ತು .ಇದು ,ಕಂಬಾರ :ನನಗೆ ಕಂಡಷ್ಟು ಮಾತ್ರ)

ನಮ್ಮ ಕಂಬಾರ:  ಕಂಬಾರನ ಬಗ್ಗೆ ನಮ್ಮ ಹಂಪನಾ ಹೇಳಿದ್ದು:
"ಇವನು ಮುಂಭಾರ ಅಲ್ಲ,
ಹಿಂಭಾರ ಅಲ್ಲ- 
ಇವನು ಕಂಬಾರ."

ಹಾರುವರ ಕೂಡ ವಿಸ್ಕಿ
ಹೀರುತ್ತಲೇ ಅವರ 
ತಲೆ ಮೇಲೆ ಹಾರುತ್ತಾನೆ 
ರಂಗೋಲಿ ಕೆಳಗೆ ತೂರುತ್ತಾನೆ .

ಶೂದ್ರರ ಕೂಡ ಹೆಂಡ  ಕುಡಿಯುತ್ತ
ಕಂಡ ಕಡಿಯುತ್ತ
ಕೆಟ್ಟ ಕೆಟ್ಟ  ಜೋಕಿಗೂ
ಜೋರಾಗಿ ನಕ್ಕು ಪ್ರೀತಿ ಗಳಿಸಿ ಪಟ್ಟ-
ಭದ್ರನಾಗುತ್ತಾನೆ .

ಸ್ವಲ್ಪಕುಡಿದಾಗ 
ಬಹಳ ಕುಡಿದವರಂತೆ  ಯದ್ವಾತದ್ವಾ ಮಾತಾಡಿ
"ಕವಿ"ಯಾಗುತ್ತಾನೆ .
ಬಹಳ ಕುಡಿದಾಗ ತೆಪ್ಪಗಿದ್ದು 
ಘನ ಗಂಬೀರ  ಮೌನದ 
"ಅನುಭಾವಿ "ಯಾಗುತ್ತಾನೆ.

 ಕಾವ್ಯದಲ್ಲಿ
ಇವನು ಹಾಡಿದ್ದೆಲ್ಲ ಅದ್ಬುತ ರಮ್ಯ
ಕೃತಿಯಲ್ಲಿ ಇವನು ಮಾಡಿದ್ದೆಲ್ಲ
"ಕವಿ"ಯಾಗಿದ್ದರಿಂದ ಕ್ಷಮ್ಯ.

ಹೌದಪ್ಪಾಹಂಪನಾ
ವೇದಪ್ರಿಯನಲ್ಲ ,ನಾದಪ್ರಿಯನಲ್ಲ ,ಬರಿ
ಪ್ರಾಸಪ್ರಿಯನಾದ ನಮ್ಮ ಜಹಂಪನಾ
ನೀ ಒಮ್ಮೊಮ್ಮೆ ನುಡಿಯುವ ಸತ್ಯ
ಕೆಲವರಿಗೆ ಮಿಥ್ಯ ,ಹಲವರಿಗೆ ಅಪಥ್ಯ.

ಅತ್ತ ಅಲ್ಲಮ ಇತ್ತ ಲೋರ್ಕಾ
ಅನಿಸಿಕೆ  ಎಚ್.ಎಸ್.ಶಿವಪ್ರಕಾಶ್
ಕಂಬಾರರ ಮೂಲಕ ಕನ್ನಡಕ್ಕೆ  ಎಂಟನೆಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ .ತಮ್ಮ ವಿಪುಲ  ಹಾಗೂ ವೈವಿಧ್ಯಮಯ ಸಾಹಿತ್ಯ ಸೃಷ್ಟಿಗಾಗಿ  ಈ ಹಿಂದೆ  ಹಲವಾರು  ರಾಜ್ಯ ಮತ್ತು  ರಾಷ್ಟ್ರಮಟ್ಟದ  ಪ್ರಮುಖ ಪ್ರಶಸ್ತಿಗಳನ್ನು ಈಗಾಗಲೇ ಗಳಿಸಿಕೊಂಡಿರುವ  ಕಂಬಾರರ ಸಾಹಿತ್ಯ ಜೀವನಕ್ಕೆ  ಜ್ಞಾನಪೀಠ ಪ್ರಶಸ್ತಿ ಶಿಖರಪ್ರಾಯವಾಗಿದೆ .ಹಿಂದೆ ಕನ್ನಡಕ್ಕೆ  ಏಳು  ಜ್ಞಾನಪೀಠ ಪ್ರಶಸ್ತಿಗಳು  ಸಿಕ್ಕಿರುವುದೂ ,ಜ್ಞಾನಪೀಠ ಪ್ರಶಸ್ತಿಗಳ ದೃಷ್ಟಿಯಲ್ಲಿ  ಕನ್ನಡವು  ಇತರ ಎಲ್ಲ  ಭಾರತೀಯ ಭಾಷೆಗಳನ್ನು ಹಿಂದೆ  ಹಾಕಿರುವುದೂ ಕನ್ನಡಿಗರಾದ ನಮ್ಮೆಲ್ಲರಿಗೆ  ಹೆಮ್ಮೆಯ ವಿಷಯ ,ನಿಜ .ಇಷ್ಟಾದರೂ ಪು.ತಿ.ನ ,ಅಡಿಗ, ಕೆ.ಎಸ್ .ನರಸಿಂಹಸ್ವಾಮಿ ,ತೇಜಸ್ವಿ ಲಂಕೇಶ್ ಅವರಂತಹ ಅನರ್ಘ್ಯ ಬರಹಗಾರರಿಗೆ  ಭಾರತದ ಸವೋಚ್ಚ ಸಾಹಿತ್ಯ ಪ್ರಶಸ್ತಿ ಸಿಗಲಿಲ್ಲವಲ್ಲ ಎಂಬ  ಕೊರಗು  ನಮಗೆ  ಇದ್ದೇ ಇದೆ. ಕಂಬಾರರಿಗೆ  ಹಿಂಗಾಗಲಿಲ್ಲವಲ್ಲ ಎಂಬುದು ನಮಗೆ  ಸಂತಸದ, ಸಂಭ್ರಮದ  ವಿಷಯ  .ಜ್ಞಾನಪೀಠ ಸಂಮಿತಿಯವರು ಕಂಬಾರರಂತಹ  ಪ್ರತಿಭಾವಂತರಿಗೆ  ಈ ಬಾರಿ  ಪ್ರಶಸ್ತಿ ಪ್ರದಾನ ಮಾಡಿ ತಮ್ಮ  ಘನತೆಯನ್ನು  ಹೆಚ್ಚಿಸಿಕೊಂಡಿದ್ದಾರೆ. ಯಾಕೆಂದರೆ  ಲೇಖಕ ಪ್ರಶಸ್ತಿಗಿಂತ  ದೊಡ್ಡವನು ಎಂಬುದು ಕಂಬಾರರ ವಿಷಯದಲ್ಲಿ ಸತ್ಯ ಸ್ಯಸತ್ಯ. 

ಜ್ಞಾನಪೀಠ ಪ್ರಶಸ್ತಿ ಸಮಿತಿಯವರು  ಇನ್ನೊಂದು ಪ್ರಮುಖ ಕಾರಣದಿಂದಲೂ ಅಭಿನಂದನಾರ್ಹರು. ಇಂದು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಭಾತರದ  ಇಂಗ್ಲಿಷ್ ಬರಹಗಾರರಿಗೆ  ಇಂಗ್ಲಿಷೇತರ ಬರಹಗಾರರಿಗಿಂತ ಬಹಳ ಹೆಚ್ಚಿನ ಪ್ರಚಾರ ದೊರಕುತ್ತಿದೆ. ಇಂಗ್ಲಿಷ್  ಬರಹಗಾರರಲ್ಲೂ ಪ್ರತಿಭಾವಂರಿರುವುದು  ನಿಜ.ಆದರೆ, ಭಾರತೀಯ  ಭಾಷಾ ಲೇಖಕರಿಗೆ  ಹೋಲಿಸಿದಾಗ  ಇಂಗ್ಲಿಷ್ ಬರಹಗಾರರ ಸಿದ್ಧಿಗಿಂತಲೂ ಪ್ರಸಿದ್ಧಿಯೇ  ಹೆಚ್ಚು  ಉದಾಹರಣೆಗೆ  ಗುಣ ಮತ್ತು  ಗಾತ್ರದಲ್ಲಿ, ಅಭಿವ್ಯಕ್ತಿಯ ತೀವ್ರತೆ ಮತ್ತು ವೈವಿಧ್ಯಮಯತೆಯಲ್ಲಿ ಕಂಬಾರರಿಗೆ  ಹೋಲಿಸಬಹುದಾದ ಭಾರತೀಯ ಇಂಗ್ಲಿಷ್ ಬರಹಗಾರ ಯಾರು ?  ಗೊತ್ತಿಲ್ಲ, ಈ ಸಂದರ್ಭದಲ್ಲಿ ಜ್ಞಾನ ಪೀಠದವರು  ತಮ್ಮ  ಪ್ರಶಸ್ತಿಗಳನ್ನು  ಭಾರತೀಯ ಭಾಷಾ ಲೇಖಕರಿಗಾಗಿ ಮೀಸಲಿಟ್ಟಿರುವುದು ಶ್ಲಾಘನೀಯ.



ಕಂಬಾರರಿಗೆ  ಮೂದಲೇ  ಕನ್ನಡ ಸಾಹಿತ್ಯದಲ್ಲಿ ಕುವೆಂಪು , ಬೇಂದ್ರೆ ,ಮಾಸ್ತಿ ,ಪುತಿನ ,ಕಾರಂತ ಮತ್ತಿತರ  ಮಹಾನ್ ಪ್ರತಿಭೆಗಳಿದ್ದವು .ಅವರೆಲ್ಲರೂ ನವೋದಯದ ಆದರ್ಶಗಳ ಹಿನ್ನಲೆಯಲ್ಲಿ ತಮ್ಮ ವಿಶಿಷ್ಟ ಮಾರ್ಗಗಳನ್ನು ನಿರ್ಮಿಸಿ  ಕೊಂಡಿದ್ದರು  .ಕುವೆಂಪು  ಅವರ ಭೂಮಪ್ರತಿಭೆ ,ಬೇಂದ್ರೆ ಯವರ ಭಾಷಿಕ ಚಮತ್ಕಾರ ,ಮಾಸ್ತಿಯವರ   ಕಥನಕೌಶಲ, ಪುತಿನವರ ತನ್ಮಯೀಭಾವ ,ಕಾರಂತರ ಸಾಮಾಜಿಕ ದರ್ಶನಗಳು  ಆ ಸಂದರ್ಭದಲ್ಲಿ ಹೊಯ್ ಕಯ್ಯಾಗಿದ್ದವು . ಈ ಎಲ್ಲ  ಅಂಶಗಳೂ ಮೈವೆತ್ತಂತಿದ್ದ ಅಡಿಗರು ,ಆನಂತರ ಕೆ.ಎಸ್.ನ ಅವರು ಸ್ವಾತಂತ್ರಯೇತ್ತರ ತಥ್ಯಗಳ ಹಿನ್ನಲೆ ಯಲ್ಲಿ ತಮ್ಮ ಅಭಿವ್ಯಕ್ತಿ  ಕ್ರಮದಲ್ಲಿ ತಳಮಟ್ಟ ಮಾರ್ಪಾಡು ಗಳನ್ನು ತಂದರು.ಕನ್ನಡದ ಸವ್ಯತೆಯ ಮಾರ್ಗ ನಿರ್ಮಾಣವಾಯಿತು .ಅಡಿಗರ ಕಿರಿಯ ಸಮಕಾಲೀನರಾಗಿ ಬರೆಯಲಾರಂಭಿಸಿದ  ಕಂಬಾರರು ಇವೆರಡು  ಮಾರ್ಗಗಳಿಗಿಂತ  ಭಿನ್ನವಾದ  ತಮ್ಮ  ಅಭಿವ್ಯಕ್ತಿ  ಕ್ರಮವನ್ನು ರೂಪಿಸಿಕೊಂಡರು .ಅಂದರೆ  ನವ್ಯದ  ಉಚ್ಛ್ರಾಯ ಘಟ್ಟದಲ್ಲೇ  ನವ್ಯೋತ್ತರವೆನ್ನಬಹುದಾದ ಮಾರ್ಗದ  ಮೂದಲಿಗರಾದರು ."ಇತ್ತುಗಳ ಧ್ವಜವ ಹಿಡಿದೆತ್ತಿ ನಿಲ್ಲಿಸುವ "ನವೋದಯದ ಆದರ್ಶ ಪ್ರಿಯತೆಯನ್ನು,ಅಸಂದಿಗ್ಧ ದೃಷ್ಟಿಯನ್ನು ಅಡಿಗರ  ನವ್ಯಕಾವ್ಯ ಅಗ್ನಿಪರೀಕ್ಷೆಗೆ  ಒಡ್ಡಿತಾದರೂ ಮುಂದೆ  ಅದೇ ಅಡಿಗರು  ಪರಂಪರೆಯ ಮಹಾಪ್ರವಾಹಕ್ಕೆ ವಾಪಸಾದರು .ಅಡಿಗರಿಂದ  ಪ್ರಭಾವಿತರಾದ ನವ್ಯರು-ಉದಾಹರಣೆಗೆ ಲಂಕೇಶ್ ,ತೇಜಸ್ವಿ ರಾಮಾನುಜನ್  ಮುಂತಾದವರು - ಪರಂಪರೆಗೆ  ಶರಣಾಗದೆ ಸದ್ಯದ ವ್ಯಂಗ್ಯಗಳನ್ನು ಶಕ್ತವಾಗಿ  ಬಿಂಬಿಸುತ್ತ ತಮ್ಮ ತಮ್ಮ ವಿಶಿಷ್ಟ ವ್ಯಕ್ತಿಭಾಷೆಗಳನ್ನು ಕಟ್ಟಿ ಕೊಂಡರು.

ಕಂಬಾರರ ಸೃಷ್ಟಿಗೆ ಮೂದಲಾದ ಸಂದರ್ಭ ಈ ಎಲ್ಲರ  ಸಂದರ್ಭಗಳಿಗಿಂತ  ಭಿನ್ನವಾದ್ದರಿಂದ ಅವರು   ತುಳಿದ ದಾರಿಯೊ ಭಿನ್ನವಾಯಿತು. ಅವರ ಮೂದಲ ಘಟ್ಟದ ಮುಖ್ಯ ಕೃತಿಯಾದ "ಹೇಳತೇನ ಕೇಳ" ಎಂಬ ಹೆಸರೇ ಅವರ ಭಿನ್ನತೆಯನ್ನು  ಸೂಚಿಸುತ್ತದೆ .ಇಪ್ಪತ್ತನೆ  ಶತಮಾನದ  ಹಿರಿಯ ಕವಿಗಳೆಲ್ಲರಿಗೂ -ಬೇಂದ್ರೆಯವರನ್ನು ಹೊರತು  ಪಡಿಸಿ -ಪರಂಪರೆ ಮೌಖಿಕ .ಇಲ್ಲಿ ಕವಿತೆ  ಒಂದು  ಚಿಂತನೆಯ,ಭಾವನೆಯ ಅಭಿವ್ಯಕ್ತಿಯಲ್ಲ.ಅದೊಂದು ನೇರ ಸಂವಹನ,ಒಂದು"ಆಟ" .ಈ ಅರ್ಥದಲ್ಲಿ ಆಟದ  ಭಾಷೆ  ಕಂಬಾರರ ಕಾವ್ಯ ನಾಟಕಗಳೆರಡರ  ವೈಶಿಷ್ಟ್ಯಕ್ಕೆ  ಕಾರಣವಾಗಿದೆ .ಅವರು  ಹಾಡು -ಕವಿತೆ  ಬರೆಯಲಿ, ನಾಟಕ ಬರೆಯಲಿ, ಕತೆ -ಕಾದಂಬರಿ ಬರೆಯಲಿ,ಸಿನಿಮಾ ಮಾಡಲಿ ಅವೆಲ್ಲವುಗಳಿಗೂ ಸಾಮಾನ್ಯ ಅಂಶವೆಂದರೆ  ಶ್ರವ್ಯ ಮತ್ತು  ದೃಶ್ಯ ಕಾವ್ಯ ಪದ್ಧತಿಗಳ ಐಕ್ಯ .ಅಕ್ಷರ ಪ್ರಾಧಾನ್ಯ ವಿಜೃಂಭಿಸುತ್ತಿದ್ದ  ಕಾಲದಲ್ಲಿ ಕಂಬಾರರು ವಾಕ್  ಪ್ರಧಾನ ಕಾವ್ಯರಚನೆಯ ಮೊಲಕ ತಮ್ಮತನದ  ಛಾಪನ್ನು  ಮೊಡಿಸಿದರು . ನವ್ಯಕಾವ್ಯವೂ ಆಡುಮಾತಿನ  ಹತ್ತಿರ  ಸುಳಿದಾಡ  ತೊಡಗಿದ್ಧ ನಿಜ. ಆದರೆ, ಕಂಬಾರರ ವಾಕ್ಕಿನ ಮಾದರಿ  ನಾಗರಿಕ  ಸಂಭಾಷಣೆಯ ಮಾದರಿಯದಲ್ಲ .ಅವರದ್ದು  ಕೇವಲ  ಆಡುಮಾತಲ್ಲ .ಅದು ಹಾಡು  -ಮಾತು ,ಕುಣಿತ - ಮಾತು,ಕನಸು  -ಮಾತು ,ಸಿಡಿತ  -ಮಾತು  ,ಕರಗು -ಮಾತು ,ಮಾನವಾತೀತ  ಶಕ್ತಿಗಳ ಜತೆಗಿನ  ಮಾತಿನಾಚೆಗಿನ , ಮಾತಿನೊಳಗಿನ ಮಾತು -ವಚನಕಾರರ ,ಸ್ವರವಚನಕಾರರ, ಜನಪದ -ಬುಡಕಟ್ಟು ಪರಂಪರೆಗಳ ಮಾತು .ನವೋದಯದವರಿಗೆ  ಪರಂಪರೆಯೆಂದರೆ  ಇತಿಹಾಸದ ಗತಕಾಲದ  ಕಾವ್ಯ -ಶಾಸನಗಳ ಸಿಂಹಾಸನಗಳ ಮಾಲೆ .ಕಂಬಾರರದು  ಸಾಕ್ಷರ ಭಾಷೆಯಲ್ಲ ,ಸಾಕ್ಷಾತ್ಕಾರದ ಭಾಷೆ .ಬೇಂದ್ರೆಯವ ರಲ್ಲೂ ಈ ಅಂಶವಿದೆಯಾದರೂ  ಅವರ  ಲೋಕದೃಷ್ಟಿ ಲಿಖಿತ  ಪರಂಪರೆಯ ಜತೆ  ಸಮನ್ವಯಕ್ಕೆ  ಹಾತೊರೆಯುತ್ತಿದೆ. ಅವರಲ್ಲಿರುವ  ಶಿಶುನಾಳ ಷರೀಫನ  ವಾಣಿ ಅತ್ತ ಅರವಿಂದರ ಕಡೆಗೂ ತುಡಿಯುತ್ತದೆ.

ಲಿಖಿತಪೂರ್ವ ಭಾಷಿಕ ಪರಂಪರೆ  ಕಂಬಾರರಿಗೆ  ಕೇವಲ  ಶೈಲಿಯ ಆಯ್ಕೆಯಲ್ಲ  ಬದಲಿಗೆ ಅನುಭವದ ಅಧಿಕೃತತೆಯ   ಜರೂರಿ .ಗತದ ಜತೆಗೆ ,ಹಿರೇಕರ  ಜತೆಗೆ ,ಮಾನ ವಾತೀತ ನಿಗೂಢಗಳ ಜತೆಗೆ  ,ವ್ಯವಸ್ಥೆಯ ಮಡಿಪಂಚೆ ಯನ್ನು ಮತ್ತೆ  ಮತ್ತೆ  ಸೀಳಿ  ಹೊರಬರುವ ಆದಿಮ  ಲೈಂಗಿಕತೆ  ಜತೆಗೆ ,ಜಾಗರದಾಚೆಗಿನ  ಮನೋಲೋಕಗಳ, ಗಾದೆ -ಒಗಟುಗಳ ಜತೆಗೆ  ಅವಿನಾ ಸಂಬಂಧವಿಟ್ಟುಕೊಂಡ  ಅವರ  ಲೋಕದ  ದೃಷ್ಟಿ ಹಲವು  ಬಾರಿ  ಲೋರ್ಕಾನ ಆಂದು ಲೇಷಿಯಾದ ಪ್ರದೇಶ  ವಿಶಿಷ್ಟತೆಯನ್ನು ಹೋಲುತ್ತದಾದರೂ ಅದರ ಅನುಕರಣೆಯಲ್ಲ  ಇಲ್ಲಿ ಲೋರ್ಕಾನ ಹಿಂಸ್ರ ಜಗತ್ತಿನಲ್ಲಿಲ್ಲದ ಒಂದು ಅಂಶವಿದೆ  :ಅದು  ಅಲ್ಲಮಾದಿಗಳ ಬೆಡಗಿನ, ಬೆರಗಿನ ವಿಸ್ಮಯಲೋಕ. "ಮಹಾಮಾಯಿ"ಯಲ್ಲಿ ಕಂಬಾರರು  ಅದನ್ನು"ಶಿವಲಿಂಗತತ್ವ"ವೆನ್ನುತ್ತಾರೆ. ಹೀಗೆ ಆಧುನಿಕಪೂರ್ವ,ಅಕ್ಷರಪೂರ್ವ,ಸಾವಯವ ಪ್ರಪಂಚವನ್ನು  ಏಕಮುಖೀ ಪ್ರಗತಿಪರ ನಾಗರಿಕತೆ  ಹೇಗೆ  ಭಗ್ನಗೊಳಿಸುತ್ತದೆಂಬುದು ಕಂಬಾರರ ಮುಖ್ಯ ಕಾಳಜಿ .ಈ  ಕಣ್ ನೋಟದಿಂದ  ಹೊಸತನ್ನು  ಪರಿಕಿಸುವ  ಕಂಬಾರರ ಸಾಹಿತ್ಯ ದರ್ಶನಕ್ಕೆ  ಕನ್ನಡದಲ್ಲಿ  ಪೂರ್ವ ಮಾದರಿಗಳಿರಲಿಲ್ಲ  ಈ ಅರ್ಥದಲ್ಲಿ  ಕಂಬಾರರು ನವ್ಯರೆನ್ನಬಹುದಾದರೂ ಅವರ ನವ್ಯತೆ  ಚುರುಕು ಮಾತಿನ  ನಾಗರಿಕ ನವ್ಯತೆಯಲ್ಲ, ಅದು ಲೋರ್ಕಾನ ರೀತಿಯ,ಯೇಟ್ಸ್ ನ ರೀತಿಯ ಪ್ರಾದೇಶಿಕ  ನವ್ಯತೆ .ಆಧುನಿಕ ನಾಗರಿಕತೆಯ  ತಿರುಳಾಗಿರುವ ಎಲ್ಲ  ರೀತಿಯ  ಪ್ರಗತಿ ವಾದಗಳ ,ವೈಜ್ಞಾನಿಕ ಭೌತ ವಾದಗಳ ಟೀಕೆ ."ಹೇಳತೇನೆ ಕೇಳ","ಋಷ್ಯಶೃಂಗ"ಗಳಿಂದ ಹಿಡಿದು ಅವರ  ಇತ್ತೀಚೆಗಿನ "ಶಿಖರಸೂರ್ಯ","ಶಿವರಾತ್ರಿ"ಗಳವೆರೆಗಿನ ಅವರ  ಎಲ್ಲ ಕಾವ್ಯ ,ನಾಟಕ ,ಕತೆ ,ಕಾದಂಬರಿ, ಸಿನಿಮಾಗಳ ಮೊಲ ಸೆಲೆ ಇದೇ .ಉದಾಹರಣೆಗೆ ಮಾವೋನ ಬಗೆಗಿನ  ಅವರ  ಪ್ರಸಿದ್ಧ ಕವಿತೆಯಲ್ಲಿ  ಅವರು  ಸಮಾಜವಾದವನ್ನು ಮೆಚ್ಚುತ್ತಲೇ ಅದನ್ನು ಟೀಕೆಗೊಳಪಡಿಸುವುದು ಬಂಡವಾಳಶಾಹಿ ಅಥವಾ ಇನ್ಯಾವುದೇ ಆಧುನಿಕ ಸಿದ್ಧಾಂತಗಳ ನೆಲೆಗಟ್ಟಿನಿಂದಲ್ಲ ತಮ್ಮ ಪ್ರದೇಶದಲ್ಲಿ ಶತಮಾನಗಳಿಂದ ಪರಿಪುಷ್ಟವಾದ ಮೊಲ ವಾಸಿಗಳ ಮಾಗಿದ  ಲೋಕದೃಷ್ಟಿಯಿಂದ ಮಾವೋನ "ಕಣ್ಣಕಾಮಾಲೆ" ಯನ್ನು ಅವರು  ಗುರುತಿಸಿದ್ದಾರೆ .ಆ  ಲೋಕದ  ಧ್ವನಿ- ಪ್ರತಿಧ್ವನಿಗಳು ಅವರ ವೈವಿಧ್ಯಮಯ ,ರಸಭರಿತ ಕೃತಿಗಳ ಆಕೃತಿಗಳನ್ನು ನಿರ್ಮಿಸಿವೆ .

ಇನ್ನೊಂದು ವಿಷಯವನ್ನು  ಮರೆಯುವಂತಿಲ್ಲ .ಕಂಬಾರರು ಕುವೆಂಪು ಅವರ  ನಂತರದ ದೊಡ್ಡ  ಶೂದ್ರ ಪ್ರತಿಭೆ ."ಮಲೆಗಳಲ್ಲಿ ಮದುಮಗಳು"ಕಾದಂಬರಿಯ ಕುವೆಂಪು ಕಂಬಾರರಿಗೆ  ತುಂಬಾ ಹತ್ತಿರ .ಆದರೆ,ಕುವೆಂಪು ಅವರು ಶೂದ್ರ ಲೋಕದ ದೃಷ್ಟಿಯಿಂದ ಮೇಲುಪರಂಪರೆಯ  ರಾಮಾಯಣಾದಿ ಕಥನಗಳನ್ನು  ತಮ್ಮದಾಗಿಸಿಕೊಳ್ಳಲು ಯತ್ನಿಸಿದರು .ಕಂಬಾರರು ಆ ತಂಟೆಗೆ  ಹೋಗಲೆ ಇಲ್ಲ.ಅವರು ಎಂದೂ ಭಾರತೀಯ ಸಂಸ್ಕೃತಿಯ ಸಂಕೇತಗಳಾಗಿರುವ  ರಾಮಾಯಣ ,ಮಹಾಭಾರತ,ವೇದಾಂತಗಳಿಂದ  ದೂರ ಉಳಿದು,ಸಮಾಜವಾದಿ ಅಥವಾ ಉದಾರವಾದಿ  ನೆಲೆಗಳೊಂದಿಗೆ  ಸಮಜಾಯಿಷಿ  ಮಾಡಿಕೊಳ್ಳದೆ  ಬುಡ ಕಟ್ಟು-ಜನಪದ  ಪರಂಪರೆಗಳ ,ಧರ್ಮದ ಗೋಜಿಗೆ ಸಿಲುಕದ ವಚನಕಾರರ ಸ್ವಚ್ಚಂದತೆಗಳನ್ನು  ದ್ರವ್ಯವಾಗಿ  ಬಳಸಿ ಶೂದ್ರಪ್ರತಿಭೆ ಮತ್ತು ಸಂವೇದನೆಗಳಿಗೆ  ಕುವೆಂಪು  ಅವರಿಗಿಂತ ಭಿನ್ನವಾದ  ರೀತಿಯಲ್ಲಿ  ಹೂಸ  ಶಕ್ತಿ ಮತ್ತು  ಸಾಧ್ಯತೆಗಳನ್ನು ತಂದುಕೊಟ್ಟರು . ಕಂಬಾರರ ಶೂದ್ರತ್ವ ಒಂದು ಜಾತಿಕಲ್ಪನೆ  ಮಾತ್ರವಾಗುಳಿಯದೆ  ಒಂದು ಅನುಭವದ, ಅಭಿವ್ಯಕ್ತಿಯ ಪರಿಕರವಾಯಿತು  .ಆದ್ದರಿಂದಲೇ  ಕನ್ನಡ  ಸಾಹಿತ್ಯ -ಸಂಸ್ಕೃತಿಯಲ್ಲಿ ದಲಿತ-ಸ್ತ್ರೀ ಪ್ರಜ್ಞೆಗಳು ತಂದ  ಪಲ್ಲಟಗಳ ಪೂರ್ವದಲ್ಲಿಯೇ  ಕಂಬಾರರು ನವ್ಯ,ನವೋದಯಕ್ಕಿಂತ ಬೇರೆಯೇ ಆದ ಮಹತ್ವದ ಮಾರ್ಪಾಟನ್ನು ತಂದರು .

ಕನ್ನಡದ  ,ಭಾರತದ ವಿಶಿಷ್ಟ ಪ್ರತಿಭೆಯಾದ ಕಂಬಾರರಿಗೆ  ಸಿಕ್ಕ ಈ ಹಿರಿಯ ಪ್ರಶಸ್ತಿ  ಅವರ ಅದ್ಬುತ ಪ್ರತಿಭೆಗೆ ಸಿಕ್ಕಿದ್ದು ಎಂಬುದರಷ್ಟೇ ಮುಖ್ಯವಾದುದು ಅವರು  ವಹಿಸಿಕೊಳ್ಳುವ  ಲೋಕದ ದೃಷ್ಟಿಗಳಿಗೆ, ಜನಸಮುದಾಯಗಳಿಗೆ ,ಪರಂಪರೆ ಗಳಿಗೆ  ಸಿಕ್ಕಿದ ಗೌರವವೆಂಬುದು.ಕಂಬಾರರ  ಕೃತಿ ಸಮುಚ್ಚಯ ಶಕ್ತ ಅನುವಾದಗಳ ಮೊಲಕ  ಅಂತಾರಾಷ್ಟ್ರೀಯ ಓದುಗರನ್ನು  ತಲುಪಲು ಸಾಧ್ಯವಾದರೆ ಅವರು  ಜ್ಞಾನಪೀಠಕ್ಕಿಂತ ದೊಡ್ಡ  ಪ್ರಶಸ್ತಿಗಳಿಗೆ ಅರ್ಹರೆಂದು ನಮ್ಮವರಿಗೆ  ಗೊತ್ತಾಗದಿದ್ದರೂ ಜಗತ್ತಿಗೆ  ಗೊತ್ತಾಗುವುದರಲ್ಲಿ ಸಂದೇಹವಿಲ್ಲ. 

No comments:

Post a Comment