Ti. Na.Srikanthaiah |
(ನವಂಬರ್ ೨೬, ೧೯೦೬ - ಸಪ್ಟಂಬರ್ ೭, ೧೯೬೬) ಪ್ರೊಫೆಸರ್ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು, ಹಾಗೂ ಕನ್ನಡದ ಶ್ರೇಷ್ಠ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು. ಸೃಜನಶೀಲ ಲೇಖಕರಾಗಿದ್ದ ಅವರ ಸಂಶೋಧನಾತ್ಮಕ ಬರವಣಿಗೆಗಳಲ್ಲಿಯೂ ಕಾವ್ಯಸ್ಪರ್ಶವನ್ನು ಕಾಣಬಹುದಾಗಿತ್ತು.
ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿದ್ದುದಲ್ಲದೆ ಕಲಾನಿಕಾಯದ ಡೀನ್ ಆಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಆಗಿದ್ದರು.
ಅವರು ಆದರ್ಶ ಪ್ರಾಧ್ಯಾಪಕರು ಮತ್ತು ಶ್ರೇಷ್ಠ ವಾಗ್ಮಿಯೆಂದು ಪ್ರಸಿದ್ಧರಾಗಿದ್ದರು. ಇಂದು ಜೀವನದ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಜನ ಮೇಧಾವಿಗಳು ತೀ.ನಂ.ಶ್ರೀ ಅವರ ಶಿಷ್ಯರಾಗಿದ್ದವರು. ತೀ.ನಂ.ಶ್ರೀ ಅವರು ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ಛಂದಸ್ಸು, ಕಾವ್ಯ, ಪ್ರಬಂಧ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಂಥ ಸಂಪಾದನೆ ಮತ್ತು ಭಾಷಾವಿಜ್ಞಾನ - ಈ ವಿಷಯಗಳಲ್ಲಿ ವಿಶೇಷವಾದ ತಜ್ಞತೆಯನ್ನು ಪಡೆದಿದ್ದು, ಈ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ್ದಾರೆ.