P Sheshadri |
ಶೇಷಾದ್ರಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ ದಂಡಿನಶಿವರದಲ್ಲಿ 1963 ನವೆಂಬರ್ 23ರಂದು.
ಇವರು ಈಗಾಗಲೇ ಏಳು ಚಿತ್ರಗಳನ್ನು ನಿರ್ದೇಶಿಸಿದ್ದು, ಈ ಏಳೂ ಚಿತ್ರಗಳೂ ರಾಷ್ಟ್ರಪ್ರಶಸ್ತಿ ಪಡೆದಿವೆ.
‘ಮುನ್ನುಡಿ' ಪಿ. ಶೇಷಾದ್ರಿ ಅವರು ನಿರ್ದೇಶಿಸಿದ ಮೊದಲ ಚಲನಚಿತ್ರ. 2000ದ ಇಸವಿಯಲ್ಲಿ ತೆರೆಗೆ ಬಂದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಹು ಚರ್ಚಿತವಾದ ಚಿತ್ರ. ರಾಷ್ಟ್ರಮಟ್ಟದಲ್ಲಿ ಎರಡು, ರಾಜ್ಯಮಟ್ಟದಲ್ಲಿ ಆರು ಪ್ರಶಸ್ತಿಗಳನ್ನು ಪಡೆದು, ಹಲವಾರು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಯಿತು.
ಮರುವರ್ಷವೇ ಬಂದ ಪ್ರಕಾಶ್ ರೈ ಅಭಿನಯದ `ಅತಿಥಿ' ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ಪಡೆಯಿತು.
2004ರಲ್ಲಿ ಬಂದ `ಬೇರು' ಮೂರನೇ ರಾಷ್ಟ್ರಪ್ರಶಸಿ ಪಡೆದು, ಸತತ ಮೂರು ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಎಂಬ ಖ್ಯಾತಿಗೆ ಕಾರಣವಾಯಿತು. ನಂತರ 2005ರಲ್ಲಿ ತೆರೆಗೆ ಬಂದ ಜಯಮಾಲ ನಿರ್ಮಾಣದ `ತುತ್ತೂರಿ' ಮಕ್ಕಳ ಚಿತ್ರ ಕೂಡ ರಾಷ್ಟ್ರಪ್ರಶಸ್ತಿ ಪಡೆಯಿತಲ್ಲದೆ, ಜಪಾನ್ ದೇಶದ ಟೋಕಿಯೋ ಚಿತ್ರೋತ್ಸವದಲ್ಲಿ `ಅರ್ಥ್‌ವಿಷನ್ ಪ್ರಶಸ್ತಿ' ಪಡೆಯಿತು.
ನಂತರದಲ್ಲಿ `ವಿಮುಕ್ತಿ' 2008ರ ವರ್ಷದಲ್ಲಿ ರಾಷ್ಟ್ರೀಯ ಚಿತ್ರ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಚಲನಚಿತ್ರಗಳ ವಿಭಾಗದಲ್ಲಿ ಶ್ರೇಷ್ಠ ಚಿತ್ರ ಪ್ರಶಸ್ತಿ ಗಳಿಸಿತು.
ಹೀಗೆ ನಿರಂತರ ಉತ್ತಮ ಸಾಧನೆಗೈದ ಶೇಷಾದ್ರಿ ಅವರು ಡಾ. ಶಿವರಾಮಕಾರಂತರ ‘ಬೆಟ್ಟದ ಜೀವ’ ಕೃತಿಯನ್ನು ತೆರೆಗೆ ತಂದು 2011 ವರ್ಷದ ರಾಷ್ಟ್ರಮಟ್ಟದ ಶ್ರೇಷ್ಠ ಪರಿಸರ ಪ್ರಶಸ್ತಿ ಗಳಿಸಿದರು. ಇದಲ್ಲದೆ 2012ರ ವರ್ಷದ 60ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ ಪಿ. ಶೇಷಾದ್ರಿಯವರ 'ಭಾರತ್ ಸ್ಟೋರ್ಸ್' ಚಿತ್ರಕ್ಕೆ ಪ್ರಾದೇಶಿಕ ಪ್ರಶಸ್ತಿ ಸಲ್ಲುವುದರ ಜೊತೆಗೆ ಈ ಚಿತ್ರದ ಅಭಿನಯಕ್ಕಾಗಿ ಹೆಚ್.ಜಿ. ದತ್ತಾತೇಯ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಕೂಡಾ ಸಂದಿತು.
ಈ ಮೇಲ್ಕಂಡ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದ ಪ್ರದರ್ಶನ, ಪ್ರಶಸ್ತಿ ಗೌರವಗಳನ್ನೂ ಗಳಿಸಿವೆ.
No comments:
Post a Comment