Translate in your Language

Wednesday, November 27, 2013

ತೀ ನಂ ಶ್ರೀ ಅವರು ಹುಟ್ಟಿದ ದಿನದ ಸವಿ ನೆನಪಿನಲ್ಲಿ

Ti. Na.Srikanthaiah
(ನವಂಬರ್ ೨೬, ೧೯೦೬ - ಸಪ್ಟಂಬರ್ ೭, ೧೯೬೬) ಪ್ರೊಫೆಸರ್ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು, ಹಾಗೂ ಕನ್ನಡದ ಶ್ರೇಷ್ಠ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು. ಸೃಜನಶೀಲ ಲೇಖಕರಾಗಿದ್ದ ಅವರ ಸಂಶೋಧನಾತ್ಮಕ ಬರವಣಿಗೆಗಳಲ್ಲಿಯೂ ಕಾವ್ಯಸ್ಪರ್ಶವನ್ನು ಕಾಣಬಹುದಾಗಿತ್ತು. 

ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿದ್ದುದಲ್ಲದೆ ಕಲಾನಿಕಾಯದ ಡೀನ್ ಆಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಆಗಿದ್ದರು. 

ಅವರು ಆದರ್ಶ ಪ್ರಾಧ್ಯಾಪಕರು ಮತ್ತು ಶ್ರೇಷ್ಠ ವಾಗ್ಮಿಯೆಂದು ಪ್ರಸಿದ್ಧರಾಗಿದ್ದರು. ಇಂದು ಜೀವನದ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಜನ ಮೇಧಾವಿಗಳು ತೀ.ನಂ.ಶ್ರೀ ಅವರ ಶಿಷ್ಯರಾಗಿದ್ದವರು. ತೀ.ನಂ.ಶ್ರೀ ಅವರು ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ಛಂದಸ್ಸು, ಕಾವ್ಯ, ಪ್ರಬಂಧ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಂಥ ಸಂಪಾದನೆ ಮತ್ತು ಭಾಷಾವಿಜ್ಞಾನ - ಈ ವಿಷಯಗಳಲ್ಲಿ ವಿಶೇಷವಾದ ತಜ್ಞತೆಯನ್ನು ಪಡೆದಿದ್ದು, ಈ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ್ದಾರೆ.

"ಒಲುಮೆ" ಕನ್ನಡದ ಮೊಟ್ಟಮೊದಲನೆಯ ಪ್ರೇಮಗೀತೆಗಳ ಸಂಕಲನವಾಗಿದ್ದು, ಕೆ.ಎಸ್.ನರಸಿಂಹಸ್ವಾಮಿ ಅವರ "ಮೈಸೂರು ಮಲ್ಲಿಗೆ" ಸಂಕಲನದ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. "ನಂಟರು" ಕನ್ನಡದ ಮಹತ್ವದ ಲಲಿತ ಪ್ರಬಂಧಗಳ ಸಂಕಲನಗಳಲ್ಲೊಂದು. ರಾಕ್ಷಸನ ಮುದ್ರಿಕೆ ವಿಶಾಖ ದತ್ತನ ಮುದ್ರಾರಾಕ್ಷಸ, ನಾಟಕದ ಯಶಸ್ವಿ ಭಾಷಾಂತರ ಮಾತ್ರವಾಗಿರುವುದಲ್ಲದೆ, ಸೃಜನಶೀಲ ರೂಪಾಂತರವೂ ಆಗಿದೆ.

ಪುರಾತನ ಸಂಸ್ಕೃತ ಹಾಗೂ ಕನ್ನಡದ ಕಾವ್ಯ ನಾಟಕಗಳಲ್ಲಿರುವ ವಿಷಮ ಪ್ರಣಯದ ಚಿತ್ರಗಳನ್ನು ಕುರಿತ ಲೇಖನಗಳಿವೆ. ಸಮಾಲೋಕನದಲ್ಲಿ ಬಿ.ಎಂ.ಶ್ರೀ, ಬೇಂದ್ರೆ, ರಾಜರತ್ನಂ, ಡಿ.ವಿ.ಜಿ, ಕವಿಗಳ ಕಾವ್ಯವನ್ನು ವಿಮರ್ಶಿಸಲಾಗಿದೆ. ಭಾಷಾವಿಜ್ಞಾನ ದೃಷ್ಟಿಯಿಂದ ನಿಘಂಟನ್ನು ನಿರ್ಮಿಸುವ ಪದ್ದತಿಯನ್ನು ಇವರು ರೂಡಿಸಿದರು. ಮಾದ್ಯಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಾಶಾಸ್ತ್ರದ ದೃಷ್ಟಿಯಿಂದ ಬರೆದ ಮಧ್ಯಮ ವ್ಯಾಕರಣ ಇಂದಿಗೂ ಒಂದು ಉತ್ತಮ ವ್ಯಾಕರಣ ಕೃತಿಯಾಗಿದೆ. ಇಂಗ್ಲಿಷ್, ಕನ್ನಡ, ಮತ್ತು, ಸಂಸ್ಕೃತ ಭಾಷೆಗಳಲ್ಲಿ ಪರಿಣತರಾಗಿದ್ದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ‘ಭಾರತೀಯ ಕಾವ್ಯ ಮೀಮಾಂಸೆ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ. ೧೯೬೬ ಸೆಪ್ಟೆಂಬರ್ ೧೭ ರಂದು ತೀರಿಕೊಂಡ ಇವರ ಸ್ಮರಣಾರ್ಥವಾಗಿ ‘ಶ್ರೀಕಂಠ ತೀರ್ಥ, ಎಂಬ ಸ್ಮರಣ ಗ್ರಂಥವನ್ನು ೧೯೭೩ ರಲ್ಲಿ ಪ್ರಕಟಿಸಲಾಗಿದೆ.


No comments:

Post a Comment