K.S ನರಸಿಂಹಸ್ವಾಮಿ |
ಜನವರಿ ೨೬ ೧೯೧೫ - ಡಿಸೆಂಬರ್ ೨೮ ೨೦೦೩
ಶಾಲೆಯ ದಿನಗಳಿಂದಲೂ ನರಸಿಂಹಸ್ವಾಮಿ ತಮ್ಮ ಮೇಲೆ ಬೀರಿದ ಪ್ರಭಾವವನ್ನು ನಿಸಾರ್ ನೆನಪಿಸಿಕೊಂಡರು. 'ಬೇಂದ್ರೆ ಮತ್ತು ಅಡಿಗರನ್ನು ಬಿಟ್ಟರೆ ನರಸಿಂಹಸ್ವಾಮಿ ನನ್ನನ್ನು ಪ್ರಭಾವಗೊಳಿಸಿದ ಮೂರನೆಯ ಕವಿ. ಶಾಲೆಯಲ್ಲಿನ ನೀತಿಪಾಠದ ಪೀರಿಯೆಡ್‌ನಲ್ಲಿ ಮೈಸೂರು ಮಲ್ಲಿಗೆ ಹಾಗೂ ಅ.ನ.ಕೃಷ್ಣರಾಯರ ಸಂಧ್ಯಾರಾಗದ ಕುರಿತು ನಮ್ಮ ಮೇಷ್ಟ್ರು ಹೇಳುತ್ತಿದ್ದರು. ನಾನು ಆ ವೇಳೆಗಾಗಲೇ ಪದ್ಯ ಬರೆಯುತ್ತಿದ್ದೆ. 1959ರಲ್ಲಿ ನನ್ನ ಮೊದಲ ಕವನಸಂಕಲನಕ್ಕೆ ಮುನ್ನುಡಿ ಬರೆದುದು ನರಸಿಂಹಸ್ವಾಮಿ ಅವರೇ. ಮುನ್ನುಡಿ ಕೇಳಲು ಹೆದರಿದ್ದೆ. ಆದರೆ ವೈಎನ್‌ಕೆ ಧೈರ್ಯತುಂಬಿದರು. ನರಸಿಂಹಸ್ವಾಮಿ ಅವರ ಮುನ್ನುಡಿ ದೊರೆತದ್ದು ನನ್ನ ಬದುಕಿನ ದೊಡ್ಡ ಅದೃಷ್ಟ .
ನಿತ್ಯೋತ್ಸವ ಸಂಕಲನದ ಬಿಡುಗಡೆಯ ಸಮಾರಂಭದಲ್ಲಿ ನರಸಿಂಹಸ್ವಾಮಿ ಅವರು ನನ್ನ ಬೆನ್ನುತಟ್ಟಿ ಮಾತನಾಡಿದ್ದನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ ..." ಎಂದರು ನಿಸಾರ್. ನರಸಿಂಹಸ್ವಾಮಿ ಅವರ ಕವಿತೆಗಳನ್ನು ನಿಸಾರ್ ಎರಡು ನೆಲೆಯಲ್ಲಿ ಗುರ್ತಿಸಿದರು. ಭಾಷಾ ನೆಲೆಯಲ್ಲಿ ನರಸಿಂಹ ಸ್ವಾಮಿ ಅವರ ಕವಿತೆಗಳ ಅನನ್ಯತೆಯನ್ನು ನಿಸಾರ್ ಗುರ್ತಿಸಿದರು. ಹಳೆ ಮೈಸೂರಿನ ಸುಸಂಸ್ಕೃತ, ಗ್ರಾಮ್ಯ ಹಾಗೂ ಆಡುಭಾಷೆ ಕೆಎಸ್‌ನ ಕವಿತೆಗಳಲ್ಲಿ ಜೀವತಾಳಿದೆ. ಆದರೆ ಅವರ ಕವಿತೆಗಳಲ್ಲಿ ಅತಿ ರಂಜಿತ ಪ್ರೇಮ ಚಿತ್ರಿತವಾಗಿದೆ ಎಂದು ನಿಸಾರ್ ಹೇಳಿದರು. ತಮ್ಮ ಹಾಗೂ ನರಸಿಂಹಸ್ವಾಮಿ ಅವರ ನಡುವಣ ಬಾಂಧವ್ಯ ಭೌತಿಕವಾದುದಲ್ಲ , ಭಾವನಾತ್ಮಕವಾದುದು ಎಂದು ಬಣ್ಣಿಸಿದ ನಿಸಾರ್- ನರಸಿಂಹಸ್ವಾಮಿ ಅವರೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿನ ಕವಿಗೋಷ್ಠಿಗಳಿಗೆ ಹೋದ ಗಳಿಗೆಗಳನ್ನು ನೆನಪಿಸಿಕೊಂಡರು.