K.S ನರಸಿಂಹಸ್ವಾಮಿ |
ಜನವರಿ ೨೬ ೧೯೧೫ - ಡಿಸೆಂಬರ್ ೨೮ ೨೦೦೩
ಶಾಲೆಯ ದಿನಗಳಿಂದಲೂ ನರಸಿಂಹಸ್ವಾಮಿ ತಮ್ಮ ಮೇಲೆ ಬೀರಿದ ಪ್ರಭಾವವನ್ನು ನಿಸಾರ್ ನೆನಪಿಸಿಕೊಂಡರು. 'ಬೇಂದ್ರೆ ಮತ್ತು ಅಡಿಗರನ್ನು ಬಿಟ್ಟರೆ ನರಸಿಂಹಸ್ವಾಮಿ ನನ್ನನ್ನು ಪ್ರಭಾವಗೊಳಿಸಿದ ಮೂರನೆಯ ಕವಿ. ಶಾಲೆಯಲ್ಲಿನ ನೀತಿಪಾಠದ ಪೀರಿಯೆಡ್‌ನಲ್ಲಿ ಮೈಸೂರು ಮಲ್ಲಿಗೆ ಹಾಗೂ ಅ.ನ.ಕೃಷ್ಣರಾಯರ ಸಂಧ್ಯಾರಾಗದ ಕುರಿತು ನಮ್ಮ ಮೇಷ್ಟ್ರು ಹೇಳುತ್ತಿದ್ದರು. ನಾನು ಆ ವೇಳೆಗಾಗಲೇ ಪದ್ಯ ಬರೆಯುತ್ತಿದ್ದೆ. 1959ರಲ್ಲಿ ನನ್ನ ಮೊದಲ ಕವನಸಂಕಲನಕ್ಕೆ ಮುನ್ನುಡಿ ಬರೆದುದು ನರಸಿಂಹಸ್ವಾಮಿ ಅವರೇ. ಮುನ್ನುಡಿ ಕೇಳಲು ಹೆದರಿದ್ದೆ. ಆದರೆ ವೈಎನ್‌ಕೆ ಧೈರ್ಯತುಂಬಿದರು. ನರಸಿಂಹಸ್ವಾಮಿ ಅವರ ಮುನ್ನುಡಿ ದೊರೆತದ್ದು ನನ್ನ ಬದುಕಿನ ದೊಡ್ಡ ಅದೃಷ್ಟ .
ನಿತ್ಯೋತ್ಸವ ಸಂಕಲನದ ಬಿಡುಗಡೆಯ ಸಮಾರಂಭದಲ್ಲಿ ನರಸಿಂಹಸ್ವಾಮಿ ಅವರು ನನ್ನ ಬೆನ್ನುತಟ್ಟಿ ಮಾತನಾಡಿದ್ದನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ ..." ಎಂದರು ನಿಸಾರ್. ನರಸಿಂಹಸ್ವಾಮಿ ಅವರ ಕವಿತೆಗಳನ್ನು ನಿಸಾರ್ ಎರಡು ನೆಲೆಯಲ್ಲಿ ಗುರ್ತಿಸಿದರು. ಭಾಷಾ ನೆಲೆಯಲ್ಲಿ ನರಸಿಂಹ ಸ್ವಾಮಿ ಅವರ ಕವಿತೆಗಳ ಅನನ್ಯತೆಯನ್ನು ನಿಸಾರ್ ಗುರ್ತಿಸಿದರು. ಹಳೆ ಮೈಸೂರಿನ ಸುಸಂಸ್ಕೃತ, ಗ್ರಾಮ್ಯ ಹಾಗೂ ಆಡುಭಾಷೆ ಕೆಎಸ್‌ನ ಕವಿತೆಗಳಲ್ಲಿ ಜೀವತಾಳಿದೆ. ಆದರೆ ಅವರ ಕವಿತೆಗಳಲ್ಲಿ ಅತಿ ರಂಜಿತ ಪ್ರೇಮ ಚಿತ್ರಿತವಾಗಿದೆ ಎಂದು ನಿಸಾರ್ ಹೇಳಿದರು. ತಮ್ಮ ಹಾಗೂ ನರಸಿಂಹಸ್ವಾಮಿ ಅವರ ನಡುವಣ ಬಾಂಧವ್ಯ ಭೌತಿಕವಾದುದಲ್ಲ , ಭಾವನಾತ್ಮಕವಾದುದು ಎಂದು ಬಣ್ಣಿಸಿದ ನಿಸಾರ್- ನರಸಿಂಹಸ್ವಾಮಿ ಅವರೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿನ ಕವಿಗೋಷ್ಠಿಗಳಿಗೆ ಹೋದ ಗಳಿಗೆಗಳನ್ನು ನೆನಪಿಸಿಕೊಂಡರು.
ತಂಪು ಹೊತ್ತಿನಲ್ಲಿ ನೆನೆದೇವು !
ಬಿಸಿಲ ಮಧ್ಯಾಹ್ನ 12ರ ಸಮಯದಲ್ಲಿ ಮೈಸೂರುಮಲ್ಲಿಗೆಯನ್ನು ಓದಿದರೆ ತಂಪಿನ ಅನುಭವವಾಗುತ್ತದೆ ಎಂದವರು ರಾಧಾಮಾಧವ ವಿಲಾಸದ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ. ನರಸಿಂಹಸ್ವಾಮಿ ತಮ್ಮ ಕವಿತೆಗಳಲ್ಲಿ ಹೊಸಭಾಷೆಯನ್ನು ಹೊಸ ರೂಪಕಗಳನ್ನು ಸೃಷ್ಟಿಸಿದರು. ಚಂದ್ರಮುಖಿ ಎನ್ನುವ ಹಳೆಯ ಪದ ನರಸಿಂಹಸ್ವಾಮಿ ಅವರ ಕುಲುಮೆಯಲ್ಲಿ ಹೊಸದಾಗಿ ಹೊಳೆಯಿತು. ಯುವಕನಾಗಿದ್ದಾಗ ಕೆಎಸ್‌ನ ಕವಿತೆಗಳನ್ನು ಓದಿ ಪ್ರೇರಣೆ ಪಡೆದಿದ್ದೆ. ಅನೇಕ ಮಂದಿಯ ದಾಂಪತ್ಯದ ಹಸನುಗೊಳ್ಳುವಿಕೆಯಲ್ಲಿ ನರಸಿಂಹಸ್ವಾಮಿ ಅವರ ಕವಿತೆಗಳ ಪಾಲಿತ್ತು ಎಂದು ವೆಂಕಟೇಶಮೂರ್ತಿ ಬಣ್ಣಿಸಿದರು. ಶಾಸ್ತ್ರೀಯ ಸಂಗೀತದಲ್ಲಿ ಪುರಂದರ ಹಾಗೂ ಕನಕದಾಸರು ಶಾಶ್ವತವಾಗಿರುವಂತೆ ಸುಗಮಸಂಗೀತದಲ್ಲಿ ಕೆಎಸ್‌ನ ಗೀತೆಗಳ ಸ್ಥಾನ ಶಾಶ್ವತ. ನರಸಿಂಹಸ್ವಾಮಿ ಬರೆದಂಥ ಕವಿತೆಗಳನ್ನು ಈ ಮುನ್ನ ಯಾರೂ ಬರೆದಿಲ್ಲ , ಮುಂದೆ ಯಾರೂ ಬರೆಯಲಾರರು. ನರಸಿಂಹಸ್ವಾಮಿ ಅವರದ್ದು ಮನೆ ಹಾಗೂ ಮನೆಯ ಬೀದಿ ದಾಟುದ ಕವಿತೆ. ಆದರೆ, ಈ ಕವಿತೆಗಳ ಮೂಲಕವೇ ಅವರು ಬದುಕಿನ ಸಾಧ್ಯತೆಗಳ ದರ್ಶನ ಮಾಡಿಸುತ್ತಿದ್ದರು. ಓಣಿ, ಬೃಂದಾವನ, ಮಲ್ಲಿಗೆ ವನ ಮುಂತಾದ ಮನೆಯ ಆಸುಪಾಸಿನ ಪರಿಸರ ಕೆಎಸ್‌ನ ಗೀತೆಗಳಲ್ಲಿ ಅನನ್ಯವಾಗಿ ಮೂಡಿಬರುತ್ತದೆ. ಗಂಡ ಹೆಂಡತಿ, ಒಂದು ಅಥವಾ ಎರಡು ಮಕ್ಕಳು- ಇವಿಷ್ಟೇ ಈ ಕವಿತೆಗಳಲ್ಲಿನ ಪಾತ್ರಗಳು. ಇಲ್ಲಿ ಕಾಟ ಕೊಡುವ ಅತ್ತೆ ನಾದಿನಿಯರಿಗೆ ಅವಕಾಶವಿಲ್ಲ . ನರಸಿಂಹಸ್ವಾಮಿ ಅವರ ಕವಿತೆಗಳದು ಅಮೃತದ ಗುಣ. ನಿಜವಾದ ಅರ್ಥದಲ್ಲಿ ನರಸಿಂಹ ಸ್ವಾಮಿ 'ಅಭಿನವ ಶಿವ"ನಂತಿದ್ದರು. ಗಂಟಲಲ್ಲಿ ವಿಷವಿದ್ದರೂ ಪದ್ಯಗಳಲ್ಲಿದ್ದುದು ಅಮೃತ ಮಾತ್ರ ಎಂದು ವೆಂಕಟೇಶಮೂರ್ತಿ ಹೇಳಿದರು. ನನಗೆ ದೇವರ ಹಂಗಿಲ್ಲ ಎನ್ನುತ್ತಿದ್ದ ನರಸಿಂಹಸ್ವಾಮಿ- ಹುಟ್ಟು ಸಾವು ನಡುವಿನ ಬದುಕಷ್ಟೇ ಸತ್ಯ, ಆ ಬದುಕನ್ನು ಅರ್ಥಪೂರ್ಣವಾಗಿ ಬದುಕಬೇಕು ಎನ್ನುತ್ತಿದ್ದರು. ಅವರಿಗೆ ಸಾವಿನ ಕುರಿತು ಭಯವಿರಲಿಲ್ಲ. ಆದರೆ ಮನೆಯಲ್ಲೇ ಸಾಯುವ ಆಸೆ ಹೊಂದಿದ್ದರು. ತುಂಬಿದ ಕೊಡ ನೀರಿನಲ್ಲಿ ಮುಳುಗುವಂತೆ ಸಾಯಬೇಕು (ಶಬ್ದ ಮಾಡದಂತೆ) ಸಾಯಬೇಕು ಎನ್ನುತ್ತಿದ್ದರು. ಅವರದು ಶರಣರ ರೀತಿಯ ಮರಣ ಎಂದರು ಎಚ್ಚೆಸ್ವಿ. ಕೆಎಸ್‌ನ ಮಿತಭಾಷಿಯಾಗಿದ್ದರು, ಕವಿತೆಗಳನ್ನು ದೊಡ್ಡಸಂಖ್ಯೆಯಲ್ಲಿ ಬರೆದರು. ನಾವು ಜಾಸ್ತಿ ಮಾತನಾಡುತ್ತೇವೆ, ಕವಿತೆ ಕಡಿಮೆ ಬರೆಯುತ್ತೇವೆ. ಇನ್ನು ಮುಂದಾದರೂ ಅವರು ನಮಗೆ ಆದರ್ಶವಾಗಬೇಕು ಎಂದು ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದರು.
ಕವಿತೆಯ ಬೆಳಗು ಬೆರಗು
ನರಸಿಂಹಸಿಂಹ ಸ್ವಾಮಿ ಅವರ ಗೀತೆಯಾಂದನ್ನು ತಮ್ಮದೇ ಆದ ಏರಿಳಿತಗಳಲ್ಲಿ ಹಾಡುವ ಮೂಲಕ ಕವಿ ಸುಮತೀಂದ್ರ ನಾಡಿಗ ಅಗಲಿದ ಕವಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಜೊತೆಯಲ್ಲಿ ನಾಡಿಗರ ಸ್ವಂತದ್ದೇ ಆದ ಚುಟುಕವೂ ಇತ್ತು . ಶಿವಮೊಗ್ಗ ಸುಬ್ಬಣ್ಣ ಕೂಡ ಕೆಎಸ್‌ನ ಕವಿತೆ ಹಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ನರಸಿಂಹಸ್ವಾಮಿ ಅವರೊಂದಿಗಿನ ತಮ್ಮ ನಂಟನ್ನು ನೆನಪಿಸಿಕೊಂಡರು. ಸ್ವಾತಂತ್ರ್ಯಾನಂತರ ತಾವು ಮೈಸೂರಿನಲ್ಲಿ ಪುಸ್ತಕದ ಅಂಗಡಿ ತೆರೆದುದನ್ನೂ , ವ್ಯಾಪಾರ ಕಡಿಮೆಯಿದ್ದ ಆ ಅಂಗಡಿಯಲ್ಲಿ ಸಾಹಿತಿಗಳು ಹರಟೆ ಹೊಡೆಯುತ್ತಿದ್ದುದನ್ನೂ ದೊರೆಸ್ವಾಮಿ ನೆನಪಿಸಿಕೊಂಡರು. ನರಸಿಂಹಸ್ವಾಮಿ ಅವರ ಸಂಕಲನವನೊಂದನ್ನು ತಾವು ಪ್ರಕಟಿಸಿದ ಅನುಭವವನ್ನು ಹೇಳಿಕೊಂಡ ದೊರೆಸ್ವಾಮಿ- ಸದಾ ತಾಂಬೂಲ ಮೆಲ್ಲುತ್ತಿದ್ದ ನಗೆಮೊಗದ ನರಸಿಂಹಸ್ವಾಮಿ ಕವಿತೆಗಳ ಮೂಲಕ ಬೆಳೆದ ಕವಿ ಎಂದು ಬಣ್ಣಿಸಿದರು. ವಿ.ಸೀ.ಸಂಪದ ವೇದಿಕೆಯ ಅಧ್ಯಕ್ಷ ಎಂ.ಎಚ್.ಕೃಷ್ಣಯ್ಯ, ನರಸಿಂಹಸ್ವಾಮಿ ಅವರ ಈಚಿನ ಕವಿತೆಗಳ ಲಿಪಿಗಾರ ವೆಂಕಟೇಶಮೂರ್ತಿ , ನರಸಿಂಹಸ್ವಾಮಿ ಅವರ ಮಕ್ಕಳು ಮೊಮ್ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದ ನಂತರವೂ 'ನಿನ್ನೊಲುಮೆಯಿಂದಲೇ ಬಾಳು ಬೆಳಗಿರಲು" ಎನ್ನುವ ಗೀತೆ ಸಹೃದಯರ ಎದೆಯಲ್ಲಿ ಮೊರೆಯುತ್ತಿತ್ತು . ಅದು ಕವಿತೆಯ ಬೆಳಗು. ಕವಿತೆ ಬಾಳಿಗೆ ಬೆಳಗಾದ ಕುರಿತ ಬೆರಗು ! -ಚಿತ್ರ-ಲೇಖನ : ಮುಕುಂದ್ ತೇಜಸ್ವಿ ,ಬೆಂಗಳೂರು
ಉಪಯುಕ್ತ
ಕೆ ಎಸ್ ನರಸಿಂಹಸ್ವಾಮಿಯವರ ಭಾವಗೀತೆಗಳು
ಉಪಯುಕ್ತ
ಕೆ ಎಸ್ ನರಸಿಂಹಸ್ವಾಮಿಯವರ ಭಾವಗೀತೆಗಳು
No comments:
Post a Comment