Dr. Chandrasekhara Kambaar |
ಡಾ. ಚಂದ್ರಶೇಖರ ಕಂಬಾರ (ಜನನ- ೨ ಜನವರಿ ೧೯೩೭)ರಂದು ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ 'ಕರ್ನಾಟಕ ವಿವಿ'ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ವೊದಲ ಕುಲಪತಿಯಾಗಿ ಡಾ. ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ.೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನ್ ಮುಂತಾದೆಡೆಗಳ ಕೆಲವು ವಿ.ವಿ.ಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು.
ವೃತ್ತಿಜೀವನ
ಕಂಬಾರರು ಯುವಕರಾಗಿದ್ದಾಗ ಧಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ, ಖ್ಯಾತ ಕವಿಗಳೊಬ್ಬರು ಅಧ್ಯಕ್ಷತೆ ವಹಿಸಿದ್ದರು, ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ, ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು, "ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ " ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು, ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ. ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ದಕ್ಷ ಆಡಳಿತಗಾರ ಇತ್ಯಾದಿ.
ಕವಿ, ನಾಟಕಕಾರ
ಮುಖ್ಯವಾಗಿ ಕವಿ-ನಾಟಕಕಾರರಾಗಿ ಕಂಬಾರ ಜನಪ್ರಿಯರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಉಪನ್ಯಾಸಕ ವೃತ್ತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈಗ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಮ್ಮ ಊರಿನ ವಾತಾವರಣದಲ್ಲಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಗೋಕಾಕ್, ಬೆಳಗಾವಿ, ಧಾರವಾಡದ ಗಂಡು ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು. ಧಾರವಾಡ ದ ವರಕವಿ ಡಾ. ದ. ರಾ. ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿ ಕೊಂಡವರಲ್ಲಿ ಕಂಬಾರರು ಒಬ್ಬರು. ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. "ಕರಿಮಾಯಿ, ಸಂಗೀತಾ, ಕಾಡುಕುದುರೆ" ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಚಿತ್ರಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಕಾಡುಕುದುರೆಯ ಹಿನ್ನೆಲೆ ಸಂಗೀತದ ``ಕಾಡು ಕುದುರೆ ಓಡಿಬಂದಿತ್ತಾsss.." ಹಾಡಿಗೆ ಶಿವವೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. `ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಜೊತೆಗೆ ಜಾನಪದ ಶೈಲಿಯ ಹಾಡುಗಳಿಂದ ಜನಪ್ರಿಯರು. ತಾವೇ ಸ್ವತಃ ಹಾಡುಗಾರರೂ ಆಗಿದ್ದಾರೆ.
ಕೃತಿಗಳು:
ಹೇಳತೇನ ಕೇಳ,
ಸಿರಿಸಂಪಿಗೆ,
ಬೆಳ್ಳಿಮೀನು,
ಋಷ್ಯಶೃಂಗ,
ಕಾಡುಕುದುರೆ,
ನಾಯಿಕಥೆ,
ಹರಕೆಯ ಕುರಿ,
ಬೋಳೇಶಂಕರ,
ಸಿಂಗಾರವ್ವ ಮತ್ತು ಅರಮನೆ ಮುಂತಾದವು ಇವರ ಪ್ರಮುಖ ಕೃತಿಗಳು. ಮಹಾಮಾಯಿ ಅವರ ಇತ್ತೀಚಿನ ಹೊಸ ನಾಟಕ ಕೃತಿ. ಶಿಖರ ಸೂರ್ಯ ೨೬ ವರ್ಷಗಳ ನಂತರ ಹೊರಬಂದ ಬೃಹತ್ ಕಾದಂಬರಿ;ಡಿಸೆಂಬರ ೨೦೦೬ರಲ್ಲಿ ಬಿಡುಗಡೆಯಾಯಿತು. ಉತ್ತರ ಕರ್ನಾಟಕದ ಜಾನಪದ ರಂಗಭೂಮಿ ಇವರ ಸಂಶೋಧನಾ ಕ್ಷೇತ್ರ. "ಜಾನಪದ ವಿಶ್ವಕೋಶ" (೧೯೮೫) ದಂಥ ಬೃಹತ್ ಗ್ರಂಥ ಸಂಪುಟವನ್ನು ಕನ್ನಡದಲ್ಲಿ ಹೊರತಂದ ಕೀರ್ತಿ ಇವರದು. ಕಂಬಾರರು ಒಟ್ಟು ೨೨ ನಾಟಕಗಳು, ೮ ಕವನ ಸಂಕಲನಗಳು ಮತ್ತು ೪ ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೆ 'ಚಕೋರಿ' ಎಂಬ ಮಹಾಕಾವ್ಯ, ಜಾನಪದ, ರಂಗಭೂಮಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ೧೪ ಸಂಶೋಧನಾ ಕೃತಿಗಳನ್ನೂ ರಚಿಸಿದ್ದಾರೆ. ಎಲ್ಲಾ ಸೇರಿ ಸುಮಾರು ನಲವತ್ತಕ್ಕೂ ಮಿಕ್ಕ ಕೃತಿಗಳು ಹೊರ ಬಂದಿವೆ. ಇವರ ಅನೇಕ ಕೃತಿಗಳು ಹಿಂದಿ, ಇಂಗ್ಲೀಷ್ ಸಹಿತ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ‘ಬೆಂಬತ್ತಿದ ಕಣ್ಣು’(೧೯೬೧) ಮತ್ತು ‘ನಾರ್ಸಿಸಸ್’(೧೯೬೯) ಹೆಸರು ಮಾಡಿದ ಇವರ ನಾಟಕಗಳು.
ಹುದ್ದೆಗಳು/ಗೌರವ ಹುದ್ದೆಗಳು:
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ
ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ
ಹಂಪಿ ಕನ್ನಡ ವಿವಿಯ ವೊದಲ ಉಪಕುಲಪತಿ
ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷ[೧]
ಪ್ರಶಸ್ತಿ, ಸನ್ಮಾನಗಳು:
ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕಂಬಾರರು ೧೯೯೧ರಲ್ಲಿ ತಮ್ಮ `ಸಿರಿಸಂಪಿಗೆ' ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.
೨೦೦೧ ರಲ್ಲಿ ಪದ್ಮಶ್ರೀ ಪ್ರಶಸ್ತಿ.
೨೦೦೪ರಲ್ಲಿ ಕನ್ನಡ ವ್ವಿಶ್ವ ವಿದ್ಯಾಲಯದಿಂದ ನಾಡೋಜ ಪ್ರಶಸ್ತಿ .
ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ.
ಮಧ್ಯ ಪ್ರದೇಶ ಸರ್ಕಾರ ನೀಡುವ ಕಾಳಿದಾಸ ಸಮ್ಮಾನ್ ಪ್ರಶಸ್ತಿ
"ಜೋಕುಮಾರಸ್ವಾಮಿ" ೧೯೭೫ರ ಭಾರತೀಯ ಭಾಷೆಯ ಅತ್ಯುತ್ತಮ ನಾಟಕ - ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ.
ರಾಜ್ಯ ಸಾಹಿತ್ಯ ಅಕಾಡೆಮಿ ಜೆರೋವಾ ಪ್ರಶಸ್ತಿಗಳು ಬಂದಿವೆ
ಶಿಖರ ಸೂರ್ಯ ಕೃತಿಗೆ ಟ್ಯಾಗೋರ್ ಪ್ರಶಸ್ತಿ,
೨೦೦೨ರಲ್ಲಿ ಕಬೀರ್ ಸಮ್ಮಾನ್ ಪ್ರಶಸ್ತಿ ದೊರೆತಿದೆ,
ಆಳ್ವಾಸ್ ನುಡಿಸಿರಿ-೨೦೦೬ರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇವರು ೨೦೦೪ ರಿಂದ ೨೦೧೦ರವರೆಗೆ ವಿಧಾನಪರಿಷತ್ ಸದಸ್ಯರಾಗಿದ್ದರು.
ಚಂದ್ರಶೇಖರ ಕಂಬಾರರಿಗೆ ೨೦೧೦ ರಲ್ಲಿ ಪ್ರತಿಷ್ಟಿತ ಜ್ನಾನ ಪೀಠ ಪ್ರಶಸ್ತಿ ಲಭಿಸಿತು
ಉಪಯುಕ್ತ
ನಾನು ಕಂಡಂತೆ ಕಂಬಾರ ! -ಚಂಪಾ
ಚಂದ್ರಶೇಕರ ಕಂಬಾರ ಅವರ ಭಾವಗೀತೆಗಳು
ಉಪಯುಕ್ತ
ನಾನು ಕಂಡಂತೆ ಕಂಬಾರ ! -ಚಂಪಾ
ಚಂದ್ರಶೇಕರ ಕಂಬಾರ ಅವರ ಭಾವಗೀತೆಗಳು
No comments:
Post a Comment