ಗುಂಡಪ್ಪ ರಂಗನಾಥ ವಿಶ್ವನಾಥರು ಹುಟ್ಟಿದ್ದು ಫೆಬ್ರವರಿ 12, 1949 ರಂದು ಭದ್ರಾವತಿಯಲ್ಲಿ. ಒಬ್ಬ ಬಡ ಮೇಷ್ಟರ ಮಗನಾಗಿ ಹುಟ್ಟಿದ ಈ ಹುಡುಗ ಕ್ರಿಕೆಟ್ಟಿನಂತಹ ಪೈಪೋಟಿಯ ಆಟದಲ್ಲಿ ಮುಂದೆ ಬಂದ ಎಂದರೆ ಅಂದಿನ ದಿನದಲ್ಲಿ ಕ್ರಿಕೆಟ್ ಆಟದಲ್ಲೂ ಇದ್ದ ಒಂದಷ್ಟು ನೈತಿಕತೆಯ ಬಗ್ಗೆ ಉಂಟಾಗುವ ಮೆಚ್ಚುಗೆಯ ಜೊತೆಗೆ ಈತನ ಆಟದಲ್ಲಿದ್ದ ಮೋಡಿ ಸಹಾ ಅದೆಷ್ಟು ಪ್ರಬಲವಾಗಿದ್ದಿರಬಹುದೆಂಬುದರ ಅಚ್ಚರಿ ಸಹಾ ಜೊತೆ ಜೊತೆಗೇ ಮೂಡುತ್ತದೆ.
1969ರಲ್ಲಿ ನಾನು ಪುಟ್ಟವನಿದ್ದಾಗ ಇಡೀ ನನ್ನ ಸುತ್ತಲಿನ ಲೋಕವೇ ಆಸ್ಟ್ರೇಲಿಯಾದಂತಹ ಪ್ರಬಲ ತಂಡದ ಮುಂದೆ ನಮ್ಮ ಪುಟ್ಟ ಪೋರ ವಿಶ್ವನಾಥ ಕಾನ್ಪುರದಲ್ಲಿ ತನ್ನ ಮೊದಲನೇ ಟೆಸ್ಟಿನಲ್ಲೇ ಸೆಂಚುರಿ ಬಾರಿಸಿ, ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಗೆಲ್ಲುವುದನ್ನು ತಪ್ಪಿಸಿದ ಎಂದು ಕುಣಿದಾಡಿ ಹಬ್ಬ ಆಚರಿಸಿದ್ದು ಕಣ್ಣಿಗೆ ಕಟ್ಟಿದಂತಿದೆ. ಮುಂದೆ 1974-75ರಲ್ಲಿ ವೆಸ್ಟ್ ಇಂಡೀಜ್ ಭಾರತಕ್ಕೆ ಬಂದಾಗ ವಿಶ್ವನಾಥ್ ಆ ಸರಣಿಯ ಪೂರ್ತಿಯಾಗಿ ಏಕೈಕಿ ಎಂಬಂತೆ ಬ್ಯಾಟುಗಾರನಾಗಿ ನಿಂತು ಆಡಿದ ಆಟ ನಮ್ಮ ಜೀವಮಾನದಲ್ಲೇ ಚಿರಸ್ಮರಣೀಯ. ವಿಶಿ ಅವರು ಮದರಾಸಿನಲ್ಲಿ ಗಳಿಸಿದ ಅಜೇಯ 97ರನ್ನುಗಳು ಭಾರತದ ಒಟ್ಟು ಇನ್ನಿಂಗ್ಸ್ ಮೊತ್ತವಾದ 190ರನ್ನುಗಳಲ್ಲಿ ಸಿಂಹಪಾಲಾಗಿದ್ದು ಅದು ಭಾರತದ ವಿಜಯದ ಕಥೆ ಕೂಡಾ ಆಯಿತು. ವಿಸ್ಡೆನ್ ದಾಖಲಿಸಿರುವ ನೂರು ಪ್ರಮುಖ ಬ್ಯಾಟಿಂಗ್ ಪ್ರದರ್ಶನಗಳಲ್ಲಿ ಇದು 38ನೆಯ ಸ್ಥಾನ ಪಡೆದಿದ್ದು, ಸೆಂಚುರಿಯಲ್ಲದ ಬ್ಯಾಟಿಂಗ್ ಪ್ರದರ್ಶನದ ದೃಷ್ಟಿಯಲ್ಲಿ ಎರಡನೇ ಶ್ರೇಷ್ಠ ಆಟವೆನಿಸಿದೆ. ಅದೇ ಸರಣಿಯ ಅದರ ಹಿಂದಿನ ಟೆಸ್ಟಿನಲ್ಲಿ ಕೂಡಾ ಕಲ್ಕತ್ತೆಯಲ್ಲಿ ಶತಕ ಬಾರಿಸಿ ಭಾರತಕ್ಕೆ ವಿಜಯ ತಂದುಕೊಟ್ಟಿದ್ದರು ನಮ್ಮ ವಿಶಿ. ಕೊನೆಯ ಟೆಸ್ಟಿನಲ್ಲಿ ವಿಶಿ 95 ರನ್ನು ಗಳಿಸಿದರೂ ವೆಸ್ಟ್ ಇಂಡೀಜ್ 3-2ರಲ್ಲಿ ಭಾರತವನ್ನು ಸೋಲಿಸಿತು. ಹಾಗಿದ್ದಾಗ್ಯೂ ವಿಶಿ ಅವರ ಬ್ಯಾಟಿಂಗ್, ಚಂದ್ರು, ಪ್ರಸನ್ನರ ಶ್ರೇಷ್ಠ ಬೌಲಿಂಗ್, ಏಕನಾಥ ಸೋಲ್ಕರ್ ಅವರ ಕ್ಯಾಚಿಂಗ್, ಪಟೌಡಿ ಅವರ ಶ್ರೇಷ್ಠ ನಾಯಕತ್ವ ಮತ್ತು ವೆಸ್ಟ್ ಇಂಡೀಜ್ ತಂಡದಲ್ಲಿ ಅಂದಿದ್ದ ಶ್ರೇಷ್ಠ ಆಟಗಾರರಾದ ಲಾಯ್ಡ್, ಯಾಂಡಿ ರಾಬರ್ಟ್ಸ್, ವಿವಿಯನ್ ರಿಚರ್ಡ್ಸ್ ಮುಂತಾದ ಅತಿರಥ ಮಹಾರಥರ ತಂಡದ ದೃಷ್ಟಿಯಿಂದ ಅದೊಂದು ಮನಮೋಹಕ ಸರಣಿಯಾಗಿ ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನಿಂತಿದೆ.
1975-76ರಲ್ಲಿ ಭಾರತ ತಂಡವು ವೆಸ್ಟ್ ಇಂಡೀಜ್ ದ್ವೀಪ ಸಮೂಹಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ, ಭಾರತ ತಂಡ ದಾಖಲಿಸಿದ ಶ್ರೇಷ್ಠವಾದ 403ರನ್ನುಗಳ ಚೇಸ್’ನಲ್ಲಿ ವಿಶಿ ಕೂಡಾ ಒಬ್ಬ ಪ್ರಮುಖ ಪಾತ್ರಧಾರಿಯಾಗಿ 112ರನ್ನುಗಳನ್ನು ಗಳಿಸಿದ್ದರು.
ವಿಶ್ವನಾಥರ ಒಟ್ಟಾರೆ ಸಾಧನೆಯನ್ನು ಗಮನಿಸಿದಾಗ ಅಂದು ಪ್ರಬಲವೆನಿಸಿದ್ದ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಜ್ ತಂಡಗಳ ವಿರುದ್ಧದ ಬ್ಯಾಟಿಂಗ್ ನಲ್ಲಿ ಅವರು 50ಕ್ಕೂ ಹೆಚ್ಚು ಸರಾಸರಿ ಹೊಂದಿರುವುದು ವೈಶಿಷ್ಟ್ಯವೆನಿಸುತ್ತದೆ. ಜೊತೆಗೆ ಅವರು ಒಟ್ಟು 13 ಶತಕಗಳನ್ನು ಸಿಡಿಸಿದ್ದು ಅವರು ಶತಕ ಸಿಡಿಸಿದ್ದ ಒಂದೂ ಪಂದ್ಯದಲ್ಲಿ ಭಾರತ ಸೋತಿಲ್ಲ ಎಂಬುದು ಕೂಡಾ ಅವರು ಕೊಟ್ಟ ಕೊಡುಗೆಯ ಮಹತ್ವವನ್ನು ಸಾರಿ ಹೇಳುತ್ತದೆ. ಅವರು ಆಡಿದ 15 ವರ್ಷಗಳಲ್ಲಿ ಅವರು ಆಡಿದ್ದು 91 ಪಂದ್ಯಗಳಾಗಿದ್ದು ಅವುಗಳಲ್ಲಿ ಅವರು ಒಟ್ಟು 6080ರನ್ನುಗಳನ್ನು ಕೂಡಿಹಾಕಿದ್ದರು.
ವಿಶ್ವನಾಥರು ಆಡುತ್ತಿದ್ದ ಸೊಗಸಿನ ಆಟದಲ್ಲಿ ಅವರ ಸ್ಕ್ವೇರ್ ಕಟ್ ಮೋಹಕತೆಗೆ ಕ್ರಿಕೆಟ್ ಯುಗದಲ್ಲಿ ಬಹಳ ಪ್ರಸಿದ್ಧಿಯಿದೆ. ಅಷ್ಟೊಂದು ಸುಂದರವಾದದ್ದು ಅವರ ಕೈಚೆಳಕ.
ಇವೆಲ್ಲಕ್ಕಿಂತಲೂ ಹೆಚ್ಚು ಸೊಗಸಿನದು ವಿಶಿ ಅವರ ಕ್ರೀಡಾ ಮನೋಭಾವನೆ ಎಂಬ ಹೃದಯ ವೈಶಾಲ್ಯ. ಅವರು ಔಟಾಗಿದ್ದೇನೆ ಎಂಬ ಭಾವನೆ ಬಂದಾಗ ಅಂಪೈರ್ ಕಡೆ ಎಂದೂ ತಿರುಗಿ ನೋಡಿದವರಲ್ಲ. ನಮ್ಮ ದ್ರಾವಿಡ್ ಹಾಗೆ ಔಟಾದಾಗ ಅಂಪೈರ್ ಕಡೆ ನೋಡದೆ ಬಂದಾಗ ಕೂಡಾ ನನಗೆ ವಿಶ್ವನಾಥ್ ಅವರ ನೆನಪೇ ಬರುತ್ತದೆ. ಒಂದು ಸತ್ಸಂಪ್ರದಾಯ ತನ್ನ ಮುಂದಿನ ಪೀಳಿಗೆಯ ಮುಂದೆ ಮಾಡುವ ಶ್ರೇಷ್ಠ ಪಾಠವಿದು.
ಗುಂಡಪ್ಪ ವಿಶ್ವನಾಥರು ತಂಡಕ್ಕೆ ನಾಯಕರಾದದ್ದು ಒಂದೆರಡು ಟೆಸ್ಟ್ ಗಳಲ್ಲಿ ಮಾತ್ರ. 1979-80ರಲ್ಲಿ ಇಂಗ್ಲೆಂಡ್ ವಿರುದ್ದದ ಬೆಳ್ಳಿ ಹಬ್ಬದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಹಲವಾರು ಪ್ರಮುಖ ವಿಕೆಟ್ಟುಗಳನ್ನು ಕಳೆದುಕೊಂಡು ದುಸ್ಥಿತಿಯಲ್ಲಿತ್ತು. ಆಗ ಬ್ಯಾಟು ಮಾಡುತ್ತಿದ್ದವರು ಬೋಥಮ್ ಮತ್ತು ಟೇಲರ್. ಟೇಲರ್ ಅವರನ್ನು ಅಂಪೈರ್ ಔಟ್ ಎಂದು ನಿರ್ಣಯಿಸಿದಾಗ ಅದು ತಮ್ಮ ಆತ್ಮಸಾಕ್ಷಿಗೆ ಒಪ್ಪಿಗೆಯಾಗಲಿಲ್ಲ ಎಂಬ ಕಾರಣದಿಂದ ಆತನಿಗೆ ಪುನಃ ಆಡಲು ಅವಕಾಶ ಮಾಡಿಕೊಟ್ಟರು ವಿಶ್ವನಾಥ್. ಒಂದು ರೀತಿಯಲ್ಲಿ ನೋಡಿದರೆ ಟೇಲರ್ ಅವರು ಬೋಥಮ್ ಅವರೊಂದಿಗೆ ಮುಂದುವರೆಸಿ ಆಡಿದ ದೊಡ್ಡ ಆಟ ಭಾರತಕ್ಕೆ ಸೋಲನ್ನು ತಂದಿತೇನೋ ನಿಜ. ಆದರೆ ವಿಶ್ವನಾಥ್ ಭಾರತಕ್ಕೆ ಸೋಲಿನಲ್ಲೂ ಗಳಿಸಿಕೊಟ್ಟ ಗೌರವ ಯಾವುದೇ ಗೆಲುವಿನ ಪಾರಿತೋಷಕಗಳನ್ನೂ ಮೀರಿದುದು. ಇಂದೂ ಜನರಿಗೆ ಭಾರತ ಯಾವ ಆಟದಲ್ಲಿ ಗೆದ್ದಿತು ಸೋತಿತು ಎಂಬ ಅರಿವಿಲ್ಲದಿದ್ದಾಗ್ಯೂ ಈ ಬೆಳ್ಳಿ ಹಬ್ಬದ ಟೆಸ್ಟ್ ಮಾತ್ರ ವಿಶ್ವನಾಥರ ಹೃದಯ ವೈಶ್ಯಾಲ್ಯದಿಂದ ಅಜರಾಮರವಾಗಿ ಉಳಿದಿದೆ.
GR Vishwanath with his Wife |
ಮುಂದೆ ನಿವೃತ್ತಿಯ ನಂತರದಲ್ಲಿ ವಿಶ್ವನಾಥರು ಐ.ಸಿ.ಸಿ ಪಂದ್ಯಗಳ ರೆಫರಿಯಾಗಿ ಐದು ವರ್ಷ, ಆಯ್ಕೆದಾರರ ಸಮಿತಿಯಾಗಿ ಹಲವು ವರ್ಷ ಕೆಲಸಮಾಡಿರುವುದರ ಜೊತೆಗೆ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತುದಾರರಾಗಿ ಸಹಾ ಉತ್ತಮ ಕೆಲಸ ಮಾಡಿದ್ದಾರೆ. ಆಯ್ಕೆ ಸಮಿತಿಯಂತಹ ಟೀಕಾ ಪ್ರಹಾರಕ್ಕೊಳಗಾಗುವ ಕೆಲಸದಲ್ಲಿ ಸಹಾ ಅವರು ಪಡೆದ ಪ್ರಶಂಸೆಗಳು ಭಾರತಕ್ಕೆ ಮುಂದೆ ಸಿಕ್ಕ ಉತ್ತಮ ಆಟಗಾರರು ಮತ್ತು ಸಿಕ್ಕ ಗೆಲುವುಗಳಿಗೆ ಉತ್ತಮ ನಾಂದಿ ಹಾಡಿದೆ ಎಂದರೆ ತಪ್ಪಾಗಲಾರದು. ಹೀಗೆ ಪ್ರಪಂಚದಲ್ಲಿ ಎಲ್ಲವನ್ನೂ ಯಶಸ್ಸಿನ ದೃಷ್ಟಿಯಿಂದಲೇ ಅಳೆಯಬೇಕಿಲ್ಲ. ಸತ್ಯಕ್ಕೆ ಎಲ್ಲಕ್ಕೂ ಮಿಗಿಲಾದ ಮಹತ್ವದ ಬೆಲೆ ಇದೆ, ಶಾಂತಿ, ಸಮಾಧಾನ ಮತ್ತು ನಿಜವಾದ ಕೀರ್ತಿಗಳು ಇರುವುದು ಅಲ್ಲೇ ಎಂದು ಕ್ರಿಕೆಟ್ಟಿನಂತಹ ವ್ಯಾಪಾರೀ ರಂಗದಲ್ಲೂ ಆಗಾಗ ನೆನಪಿಸುವಂತೆ ಮಾಡಿರುವ ವಿಶ್ವನಾಥ್ ಸಾಧನೆ ಅಮೂಲ್ಯವಾದದ್ದು.
ಇಂತಹ ದಿವ್ಯ ಚೇತನದ ಕ್ರಿಕೆಟ್ಟಿಗ ನಮ್ಮ ಪ್ರೀತಿಯ ವಿಶಿಗೆ ಹುಟ್ಟು ಹಬ್ಬದ ಆತ್ಮೀಯ ಶುಭ ಹಾರೈಕೆಗಳು.
Krupe:kannada sampada
No comments:
Post a Comment