Translate in your Language

Friday, February 7, 2014

ಜಿ. ಎಸ್. ಶಿವರುದ್ರಪ್ಪ. ಅವರ. ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

Born: 7 February1926, , Died on 23 December 2013
Dr. G S Shivarudrappa

ಜಿ ಎಸ್ ಶಿವರುದ್ರಪ್ಪ -(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ)(ಫೆಬ್ರುವರಿ ೭,೧೯೨೬ - ಡಿಸೆಂಬರ್ ೨೩, ೨೦೧೩) ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಜೊತೆಗೆ ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತಗಾರ. ಕುವೆಂಪು ಅವರ ಮೆಚ್ಚಿನ ಶಿಷ್ಯ. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ ೧,೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು.



ಓದು/ವಿದ್ಯಾಭ್ಯಾಸ
ಡಾ.ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗಜಿಲ್ಲೆಯ ಶಿಕಾರಿಪುರದ ಹತ್ತಿರವಿರುವ ಈಸೂರುಗ್ರಾಮದಲ್ಲಿ ಫೆಬ್ರುವರಿ ೭, ೧೯೨೬ ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.ತಾಯಿ ವೀರಮ್ಮ. ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳ ಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣವನ್ನು,ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ (೧೯೪೯) ಪದವಿ ಪಡೆದರು. ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಂ.ಎ. (೧೯೫೩) ಪ್ರ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು.

ಜೀವನ
೧೯೫೫ ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಡಾ.ಜಿ.ಎಸ್.ಶಿವರುದ್ರಪ್ಪನವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೬೩ರ ನವೆಂಬರ್‌ನಿಂದ ೨ ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೧ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು "ಕನ್ನಡ ಅಧ್ಯಯನ ಕೇಂದ್ರ" ವಾಗಿ ಪರಿವರ್ತಿತವಾದಾಗ, ಅದರ ನಿರ್ದೇಶಕರೂ ಆದರು. ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಹಸ್ತಪ್ರತಿ ವಿಭಾಗ' ವನ್ನು ಪ್ರಾರಂಭಿಸಿದರು. ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು.

ತಾವು ಓದಿದ ಮೈಸೂರು ವಿಶ್ವವಿದ್ಯಾಲಯದಲ್ಲೇ ೧೯೪೯ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು. ೧೯೬೩ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೬ ರ ವರೆವಿಗೂ ಅಲ್ಲಿ ಸೇವೆ ಸಲ್ಲಿಸಿದರು. ೧೯೬೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ ೧೯೮೭ ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.

ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠ ದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರು ತ್ತಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನ ದ ಕವಿಗೋಷ್ಠಿಯ ಅಧ್ಯಕ್ಷರಾಗಿ, ಮದರಾಸಿನ ಕನ್ನಡ ಸಮ್ಮೇಳನ ದ ಅಧ್ಯಕ್ಷರಾಗಿ, ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ.

ಜಿ.ಎಸ್.ಶಿವರುದ್ರಪ್ಪ ಅವರ ಕೃತಿಗಳು
ಕವನ ಸಂಕಲನಗಳು
ಚೆಲುವು-ಒಲವು
ದೇವಶಿಲ್ಪಿ/ಶಿಲ್ಪ
ದೀಪದ ಹೆಜ್ಜೆ
ಅನಾವರಣ
ತೆರೆದ ಬಾಗಿಲು/ತೆರೆದ ದಾರಿ
ಗೋಡೆ
ವ್ಯಕ್ತಮಧ್ಯ ಓರೆ ಅಕ್ಷರಗಳು
ತೀರ್ಥವಾಣಿ
ಕಾರ್ತಿಕ
ಕಾಡಿನ ಕತ್ತಲಲ್ಲಿ
ಪ್ರೀತಿ ಇಲ್ಲದ ಮೇಲೆ
ಚಕ್ರಗತಿ
ಎದೆ ತು೦ಬಿ ಹಾಡುವೆನೆ

ವಿಮರ್ಶೆ/ಗದ್ಯ
ಪರಿಶೀಲನ
ವಿಮರ್ಶೆಯ ಪೂರ್ವ ಪಶ್ಚಿಮ
ಸೌಂದರ್ಯ ಸಮೀಕ್ಷೆ(ಇದು ಅವರ ಪಿಹೆಚ್‌ಡಿ ಮಹಾ ಪ್ರಬಂಧ)
ಕಾವ್ಯಾರ್ಥ ಚಿಂತನ
ಗತಿಬಿಂಬ
ಅನುರಣನ
ಪ್ರತಿಕ್ರಿಯೆ
ಕನ್ನಡ ಸಾಹಿತ್ಯ ಸಮೀಕ್ಷೆ
ಮಹಾಕಾವ್ಯ ಸ್ವರೂಪ
ಕನ್ನಡ ಕವಿಗಳ ಕಾವ್ಯ ಕಲ್ಪನೆ
ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ
ಕುವೆಂಪು : ಪುನರವಲೋಕನ
ಸಮಗ್ರ ಗದ್ಯ ಭಾಗ ೧, ೨ ಮತ್ತು ೩
ಬೆಡಗು
ನವೋದಯ
ಇವಿಷ್ಟೇ ಅಲ್ಲದೆ ಸರ್ಕಾರಕ್ಕಾಗಿ "Kuvempu-a Re-appraisal" ಎಂಬ ಗ್ರಂಥವನ್ನು ಬರೆದಿದ್ದಾರೆ.

ಪ್ರವಾಸ ಕಥನ
ಮಾಸ್ಕೋದಲ್ಲಿ ೨೨ ದಿನ -(ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)
ಇಂಗ್ಲೆಂಡಿನಲ್ಲಿ ಚತುರ್ಮಾಸ
ಅಮೆರಿಕದಲ್ಲಿ ಕನ್ನಡಿಗ
ಗಂಗೆಯ ಶಿಖರಗಳಲ್ಲಿ

ಜೀವನ ಚರಿತ್ರೆ

ಕರ್ಮಯೋಗಿ (ಸಿದ್ದರಾಮನ ಜೀವನ ಚರಿತ್ರೆ) 

ಪ್ರಶಸ್ತಿ/ಪುರಸ್ಕಾರಗಳು

ಕ್ರಮ ಸಂಖ್ಯೆಪ್ರಶಸ್ತಿ/ಪುರಸ್ಕಾರವರ್ಷ
ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ("ಮಾಸ್ಕೋದಲ್ಲಿ ೨೨ ದಿನ" ಪ್ರವಾಸ ಕಥನಕ್ಕೆ)೧೯೭೪
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ೧೯೮೨
ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ 'ಕಾವ್ಯಾರ್ಥ ಚಿಂತನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ೧೯೮೪
ದಾವಣಗೆರೆಯಲ್ಲಿ ನಡೆದ ೬೧ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ೧೯೯೨
ಪ್ರೋ.ಭೂಸನೂರ ಮಠ ಪ್ರಶಸ್ತಿ ಮತ್ತು ಗೊರೂರು ಪ್ರಶಸ್ತಿ೧೯೯೭
ಪಂಪ ಪ್ರಶಸ್ತಿ೧೯೯೮
ಮಾಸ್ತಿ ಪ್ರಶಸ್ತಿ೨೦೦೦
ಹಂಪಿ ಕನ್ನಡ ವಿ.ವಿಯಿಂದ ನಾಡೋಜ ಗೌರವ ಡಾಕ್ಟರೇಟ್೨೦೦೧
ಮೈಸೂರು ವಿ.ವಿಯಿಂದ ಗೌರವ ಡಿ.ಲಿಟ್೨೦೦೪
೧೦ರಾಷ್ಟ್ರಕವಿ ಪುರಸ್ಕಾರ, ಅ.ನ.ಕೃ ನಿರ್ಮಾಣ್ ಪ್ರಶಸ್ತಿ೨೦೦೬
೧೧ಕುವೆಂಪು ವಿ.ವಿಯಿಂದ ಗೌರವ ಡಿ.ಲಿಟ್೨೦೦೬
೧೨ಬೆಂಗಳೂರು ವಿ.ವಿಯಿಂದ ಗೌರವ ಡಿ.ಲಿಟ್೨೦೦೭
೧೩ಕುವೆತ್ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ೨೦೦೭
೧೪ನೃಪತುಂಗ ಪ್ರಶಸ್ತಿ೨೦೧೦
ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ ೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು. ಇದಲ್ಲದೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨), ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ (೧೯೭೩)ಸಹ ಶಿವರುದ್ರಪ್ಪನವರಿಗೆ ದೊರೆತಿವೆ. ೨೦೦೬ನೆಯ ಸಾಲಿನಲ್ಲಿ ಜರಗುತ್ತಿರುವ ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರವು ರಾಷ್ಟ್ರಕವಿ (೨೦೦೬) ಎನ್ನುವ ಗೌರವವನ್ನು ಪ್ರಧಾನಿಸಿದೆ. ಇತರೆ ಪ್ರಶಸ್ತಿಗಳು: ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಜಿ.ಎಸ್.ಶಿವರುದ್ರಪ್ಪನವರು ೧೯೯೨ ರಲ್ಲಿ ದಾವಣಗೆರೆಯಲ್ಲಿ ಜರುಗಿದ ೬೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ನಿಧನ
ಜಿ.ಎಸ್.ಶಿವರುದ್ರಪ್ಪನವರು ೨೩ ಡಿಸೆಂಬರ್ ೨೦೧೩ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ನಿಧನರಾದರು. ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಅಂದು ಸ್ವರ್ಗಸ್ಥರಾದರು.ಜಿ.ಎಸ್.ಶಿವರುದ್ರಪ್ಪನವರ ಆಣತಿಯಂತೆಯೆ ಅವರ ದೇಹವನ್ನು ಮರಣಾನಂತರ ಮಣ್ಣು ಮಾಡದೆ ಸುಡಲಾಯಿತು. ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ ದಿ. ೨೬ ಡಿಸೆಂಬರ್ ೨೦೧೩ರಂದು ನೇರವೇರಿಸಲಾಯಿತು.

ಉಪಯುಕ್ತ
ಜಿ ಎಸ್ ಶಿವರುದ್ರಪ್ಪನವರ ಭಾವಗೀತೆಗಳು


No comments:

Post a Comment