Translate in your Language

Thursday, October 23, 2014

ಶೋಭಾ ಕರಂದ್ಲಾಜೆ ಅವರಿಗೆ 48ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ನಮ್ಮ ನಾಡಿನ ದಿಟ್ಟ. ಸಹೃದಯ, ಸೇವಾ ಮನೋಭಾವದ ಮಹಿಳಾ ರಾಜಕಾರಿಣಿ ಶೋಭಾ ಕರಂದ್ಲಾಜೆ ಅವರಿಗೆ ೪೮ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
Date of Birth: October 23, 1966

ಅವರ ಪರಿಚಯ ಅವರದೇ ಮಾತಿನಲ್ಲಿ
ನಾನು ಶೋಭಾ ಕರಂದ್ಲಾಜೆ, ನೀವೆಲ್ಲರೂ ನನ್ನನ್ನು ಶೋಭ ಅಂತ ಕರೆಯಬಹುದು. ನನ್ನನ್ನು ನನ್ನ ಮನೆಯಲ್ಲಿ ಮತ್ತು ಊರಿನಲ್ಲಿ ‘ಬೇಬಿ’ ಅಂತ ಕರೆಯುತ್ತಾರೆ. ಆ ಊರಿಗೆ ನಾನು ‘ಬೇಬಿ’ ಯಾಗಿರುವುದೇ ನನಗೆ ಇಷ್ಟ. ಅಷ್ಟು ಮುಗ್ದ ಜನ ನನ್ನ ಊರಿನವರು ಮತ್ತು ಮನೆಯವರು. ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಚಾರ್ವಾಕ ಅನ್ನುವ ಪುಟ್ಟ ಗ್ರಾಮ. ಕಾಡು, ಬೆಟ್ಟ, ಗುಡ್ಡದ ಪ್ರದೇಶ. ಕೃಷಿಯೇ ನಮ್ಮೂರಿನ ಜೀವನಾಧಾರ. ಅಡಿಕೆ, ತೆಂಗು, ಗೇರು, ಕರಿಮೆಣಸು, ಪ್ರಮುಖ ಬೆಳೆಗಳು. ನಾನು ಹುಟ್ಟುವ ಕಾಲಕ್ಕೇನೇ ನಾವು ಅಡಿಕೆ, ತೆಂಗು ಬೆಳೆಯುತ್ತಿದ್ದೆವು. ನಮ್ಮದು ಮಧ್ಯಮ ವರ್ಗದ ಕುಟುಂಬ, ನನ್ನ ಹಿರಿಯರು ಕೃಷಿಕ ಕುಟುಂಬದವರು.

ನನ್ನ ಅಜ್ಜ ನಾಟಿ ವೈದ್ಯರಾಗಿದ್ದರು. ತುಂಬಾ ಧರ್ಮಿಷ್ಠ, ಪರೋಪಕಾರಿ. ಊರಲ್ಲಿ ಯಾರು ಕಾಯಿಲೆ ಬಿದ್ದರೂ ಹೋಗಿ ಔಷಧಿ ಕೊಡುತ್ತಿದ್ದರು, ಅವರ ಮನೆಯಲ್ಲಿ ನೀರೂ ಕುಡಿಯುತ್ತಿರಲಿಲ್ಲ. ಜನರಿಗೆ, ದನಕರುಗಳಿಗೆ ಔಷಧೋಪಚಾರ ಮಾಡುವುದೇ ಸೇವೆ ಅಂದುಕೊಂಡಿದ್ದರು. ಇಳಿವಯಸ್ಸಿನಲ್ಲೂ ನಮ್ಮೂರಿನ ಗುಡ್ಡ, ಬೆಟ್ಟ ಪ್ರದೇಶದಲ್ಲಿ ನಡೆದುಕೊಂಡು ಹೋಗಿ ಔಷಧಿ ಕೊಟ್ಟು ಬರುವಾಗ ಎಷ್ಟೋ ಸಾರಿ ಬಿಸಿಲಿಗೆ ತಲೆ ತಿರುಗಿ ಬಿದ್ದಿದ್ದಿದೆ. ಆದರೂ ಸಾಯುವ ತನಕ ಕಾಯಕ ಮಾಡಿದ್ರು, ಆ ಪುಣ್ಯವೇ ಮೊಮ್ಮಕ್ಕಳಿಗೆ ಸಿಕ್ಕಿದೆಯೆಂದು ಊರಿನ ಜನ ಅಂತಿರ್ತಾರೆ.

ನನಗೂ ನನ್ನ ಅಜ್ಜ, ಅಪ್ಪ, ಅಮ್ಮನ ಬಗ್ಗೆ ತುಂಬಾ ಹೆಮ್ಮೆ. ತಮಗೆ ಶಿಕ್ಷಣ ಇಲ್ಲದೆ ಹೋದ್ರು ನಮಗೆ ಶಿಕ್ಷಣ ಕೊಡಿಸಿದರು. ನಾನು ಓದುವಾಗ ನಮ್ಮೂರಿನಲ್ಲಿ 7ನೇ ತರಗತಿ ತನಕ ಶಾಲೆಯಿತ್ತು. ಆಮೇಲೆ ಮನೆ ಬಿಟ್ಟು ದೂರದ ಊರಿಗೆ ಹೋಗಬೇಕಾಗಿತ್ತು, ನಮ್ಮೂರಿನ ಶಾಲೆಗೂ 3-4 ಕಿ.ಮೀ. ನಡೆದುಕೊಂಡು ಹೋಗಬೇಕಾಗಿತ್ತು. ಮೂಲಭೂತ ಸೌಲಭ್ಯಗಳು, ಸರಿಯಾಗಿ ಶಿಕ್ಷಕರು ಇಲ್ಲದ ಕಾಲ ಮತ್ತು ಶಾಲೆ ಅದು. ದೂರ ನಡೆಯಬೇಕೆಂದು ನನ್ನಪ್ಪ ನನ್ನನ್ನು 7 ವರ್ಷಕ್ಕೆ ಶಾಲೆಗೆ ಸೇರಿಸಿದರು. ಅಜ್ಜಿ ಮನೆಯಲ್ಲಿದ್ದು ಹೈಸ್ಕೂಲ್ ಓದಿದೆ. ಅಲ್ಲೂ ಅಷ್ಟೇ ವ್ಯವಸ್ಥೆ. ಬಹಳ ಹಠ ಮಾಡಿ ಕಾಲೇಜು ಸೇರಿಕೊಂಡೆ. ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಪದವಿವರೆಗೆ ಓದಿದೆ. ನಂತರ ಸಮಾಜ ಸೇವೆಯಲ್ಲಿ ಸ್ನಾತಕೊಕೋತ್ತರ ಮಾಡಬೇಕು ಅನ್ನಿಸಿತು. ಮಂಗಳೂರಿನ ರೋಶನಿ ನಿಲಯದಲ್ಲಿ ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ಪದವಿ ಮಾಡಿದೆ. ಇದು ನನ್ನ ಜೀವನದ ದಿಕ್ಕನ್ನು ಬದಲಾಯಿಸಿತು. ಇದಕ್ಕಿಂತಲೂ ಹೆಚ್ಚು ಬಾಲ್ಯದಲ್ಲೇ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಗಳಿಂದ ಪ್ರಭಾವಿತಳಾದೆ. ರಾಷ್ಟ್ರ ಸೇವಿಕಾ ಸಮಿತಿ, ಹಿಂದು ಸೇವಾ ಪ್ರತಿಷ್ಠಾನ, ವಿಶ್ವ ಹಿಂದೂ ಪರಿಷತ್, ಭಾರತೀಯ ಕಿಸಾನ್ ಸಂಘ ಹೀಗೆ ಸಂಘ ಪರಿವಾರದ ವಿವಿಧ ಸಂಘಟನೆಗಳಲ್ಲಿ ಕಾರ್ಯಕರ್ತೆಯಾಗಿ ದುಡಿದೆ. ಇದರಿಂದ ಭವಿಷ್ಯದ ಜೀವನಕ್ಕೆ ಒಂದು ದಿಕ್ಕು ಸಿಕ್ಕಿತು. ನನ್ನ ಜೀವನ ಜನರ ಸೇವೆಗಾಗಿಯೇ ಎಂಬ ನಿರ್ಧಾರಕ್ಕೆ ಬಂದೆ. 1990 ರಲ್ಲಿ ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ಪದವಿ ಮಾಡಿದ ಮೇಲೆ ಬೆಂಗಳೂರಿನ Institute of Social Studies Trust ಸಂಸ್ಥೆಯಲ್ಲಿ  Research Assistant ಆಗಿ ಕೆಲಸಕ್ಕೆ ಸೇರಿಕೊಂಡೆ. 1992 ರಲ್ಲಿ ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ Medico-Social Worker ಆಗಿ ಕೆಲಸ ಸಿಕ್ಕಿತು. ಮತ್ತೆ ವಾಪಸ್ಸು ಊರಿಗೆ ಅಂದ್ರೆ ಮಣಿಪಾಲಕ್ಕೆ ಹೋದೆ. ಊರಿನಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ಪರಿಸರ ಹೋರಾಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತೊಮ್ಮೆ ಅವಕಾಶ ಸಿಕ್ಕಿತು, ಇದರ ಮಧ್ಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸಮಾಜ ಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದೆ.
ಕುಮಾರಧಾರ ನದಿಗೆ ಬೃಹತ್ ಆಣೆಕಟ್ಟು ಕಟ್ಟುತ್ತಾರೆ ಎಂಬ ಯೋಜನೆ ಬಂದಾಗ ಇಷ್ಟು ಬೃಹತ್ ಯೋಜನೆ ಈ ನದಿಗೆ ಸೂಕ್ತವಲ್ಲ ಎಂದು ಹೋರಾಟ ಮಾಡಿದೆವು. ಇದನ್ನು ತಡೆಯುವಲ್ಲಿ ಯಶಸ್ವಿಯಾದೆವು.
ಪಡುಬಿದ್ರಿಗೆ ಕ್ರೊಜೆಂಟ್ರಿಕ್ಸ್ ಕಂಪನಿ ಬರುತ್ತದೆ  ಎಂದು ನಿರ್ಧಾರವಾದಾಗ ಪಶ್ಚಿಮ ಘಟ್ಟದ ಈ ಸೂಕ್ಷ್ಮ ಪ್ರದೇಶಕ್ಕೆ ಮತ್ತು ಸಮುದ್ರದ ದಂಡೆಗೆ ಈ ಭಾಗದಲ್ಲಿ ಸಾಧುವಲ್ಲವೆಂದು ಹೋರಾಟ ನಡೆಸಿದೆವು. ಪಶ್ಚಿಮ ಘಟ್ಟ, ಜಗತ್ತಿನ 18 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು. ಇಲ್ಲಿಯ ಪರಿಸರ ಹಾನಿ ಕೇವಲ ಈ ಜಿಲ್ಲೆಗೆ ಮಾತ್ರವಲ್ಲ, ಏಷ್ಯಾ ಖಂಡವನ್ನೇ ಅಸಮತೋಲನ ಮಾಡುತ್ತದೆ ಎಂಬ ವೈಜ್ಞಾನಿಕ ವರದಿಯಿದೆ. ಈ ಕಾರಣಕ್ಕೆ ಜಿಲ್ಲೆಗೆ ಬರುವ ಬೃಹತ್ ಯೋಜನೆಗಳನ್ನು ವಿರೋಧಿಸುವ ನಿರ್ಧಾರ ಮಾಡಿದ್ದದ್ದೆವು.
 ಉತ್ತರ ಕನ್ನಡ ಜಿಲ್ಲೆಯ ಕಾಸರಗೋಡಿನ ಕುಸುಮ್ ಸೊರಬ್, ದೇಶದ ಪ್ರಸಿದ್ದ ಹೋರಾಟಗಾರ್ತಿ ಮೇಧಾಪಾಟ್ಕರ್ ಇವರೆಲ್ಲರ ಪರಿಚಯ ಮತ್ತು ಸ್ನೇಹ ನನ್ನ ಹೋರಾಟಕ್ಕೆ ಇನ್ನಷ್ಟು ಹುರುಪು ಕೊಟ್ಟಿತ್ತು. ಮಣಿಪಾಲದ ಕೆಲಸದ ಜೊತೆಗೆ ಸಂಘ ಪರಿವಾರದ ಕೆಲಸ ಮತ್ತು ಪರಿಸರ ಹೋರಾಟದ ಕೆಲಸ ಮಾಡುತ್ತಿದ್ದೆ. ಕಿಸಾನ್ ಸಂಘದ ಕೆಲಸದಲ್ಲಿ ತುಂಬಾ ಆಸಕ್ತಿಯಿತ್ತು, ರಾಜ್ಯದಲ್ಲೆಲ್ಲ ಓಡಾಡಿ ರೈತರ ಸಮಸ್ಯೆ, ಕೃಷಿಯ ಬಗ್ಗೆ ಮಾಹಿತಿ, ಸಾವಯವ ಕೃಷಿ ಈ ಬಗ್ಗೆ ಅಧ್ಯಯನ ಮಾಡುತ್ತಿದ್ದೆ. ನನ್ನ ಎಲ್ಲಾ ರಜಾದಿನಗಳು ಈ ರೀತಿಯ ಕೆಲಸಕ್ಕೆ ಖರ್ಚಾಗುತ್ತಿದ್ದವು.
ಚುನಾವಣಾ ಸಂದರ್ಭದಲ್ಲಿ ರಾಜಕೀಯದ ಸಂಪರ್ಕವಿತ್ತು. ಚುನಾವಣೆಯಲ್ಲಿ ಕೆಲಸ ಮಾಡುವುದು ಮಾತ್ರ ಮಾಡುತ್ತಿದ್ದೆ. 1994ರ ಚುನಾವಣೆಯಲ್ಲಿ ಶ್ರೀಮತಿ ಶಂಕುತಳಾ ಶೆಟ್ಟಿಯವರು ಬಂಟ್ವಾಳದಿಂದ ವಿಧಾನ ಸಭೆಗೆ ಸ್ಪರ್ಧೆ ಮಾಡಿದಾಗ ಒಂದು ತಿಂಗಳು ಪೂರ್ಣಾವಧಿಯಾಗಿ ಅವರೊಂದಿಗೆ ಓಡಾಡಿದೆ. ನಂತರ ರಾಜಕೀಯದ ಸಂಪರ್ಕಕ್ಕೆ ಬಂದೆ. 1997 ರಲ್ಲಿ ಶ್ರೀಯುತ ಎ.ಜಿ.ಕೊಡ್ಗಿ, ಬಿ.ಜೆ.ಪಿ ಉಡುಪಿ ಜಿಲ್ಲಾ ಅಧ್ಯಕ್ಷರು ನನ್ನನ್ನು ಉಡುಪಿ ಜಿಲ್ಲೆ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ಘೋಷಣೆ ಮಾಡಿದರು, ಒಲ್ಲದ ಮನಸ್ಸಿನಿಂದ ಜವಾಬ್ದಾರಿ ಒಪ್ಪಿಕೊಂಡೆ, ಇದಾದ 5-6 ತಿಂಗಳಲ್ಲೆ ಮಣಿಪಾಲದ ನನ್ನ ಕೆಲಸ ಮತ್ತು ರಾಜಕೀಯ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದೆ. ಬಿ.ಜೆ.ಪಿ ಯಲ್ಲಿ ಪೂರ್ಣಾವಧಿ ಕಾರ್ಯಕರ್ತೆಯಾಗಿ ಹೋರಾಡಬೇಕೆಂದು ನಿರ್ಧರಿಸಿದೆ. ನನ್ನ ತಮ್ಮ ಸಂಘದ ಪ್ರಚಾರಕನಾಗಿದ್ದ. ಅವನು ಮನೆಗೆ ವಾಪಸ್ಸು ಬಂದ. ನಾನು ಬಿ.ಜೆ.ಪಿ ಪೂರ್ಣಾವಧಿ ಕಾರ್ಯಕರ್ತೆಯಾಗಿ ಕೆಲಸಕ್ಕೆ ರಾಜಿನಾಮೆ ನೀಡಿ ಬೆಂಗಳೂರಿಗೆ ಬಂದೆ.
ನಾನು ಮತ್ತು ಮಂಜುಳ ಇಬ್ಬರೂ ಬಿ.ಜೆ.ಪಿಯ ಮಹಿಳಾ ಪೂರ್ಣಾವಧಿ ಕಾರ್ಯಕರ್ತೆಯರಾಗಿ ಮೊದಲ ಬಾರಿಗೆ ಬಂದೆವು. ಮಂಜುಳರವರು ಬಿ.ಜೆ.ಪಿಯ ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು, ನಾನು ಕಾರ್ಯದರ್ಶಿಯಾದೆ. ರಾಜ್ಯದಲ್ಲಿ ಪ್ರವಾಸ ಆರಂಭ ಮಾಡಿದೆವು. ಇದೇ ಸಂದರ್ಭದಲ್ಲಿ 1997 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್‌ಗೆ ಪದವೀಧರರ ಕ್ಷೇತ್ರದಿಂದ ನಾನು ಎ.ಬಿ.ವಿ.ಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಂದೆ. ಅಲ್ಲಿ ಸೆನೆಟ್ ಮೀಟಿಂಗ್‌ಗೆ ಹೋಗುವ ಜವಾಬ್ದಾರಿಯೂ ಇತ್ತು. 2000 ನೆ ಇಸವಿಯಲ್ಲಿ ಶ್ರೀ ಬಸವರಾಜ ಪಾಟೀಲ್ ಸೇಡಂ ಬಿ.ಜೆ.ಪಿ ರಾಜ್ಯ ಅಧ್ಯಕ್ಷರಾದರು. ಆಗ ನಾನು ಬಿ.ಜೆ.ಪಿ ಯ ರಾಜ್ಯ ಕಾರ್ಯದರ್ಶಿಯಾದೆ. ನಂತರ  ಶ್ರೀ ಅನಂತಕುಮಾರ್, ಶ್ರೀ ಜಗದೀಶ್ ಶೆಟ್ಟರ್, ರಾಜ್ಯ ಅಧ್ಯಕ್ಷರಾದರು. ಆಗಲೂ ರಾಜ್ಯ ಕಾರ್ಯದರ್ಶಿಯಾದೆ. ಶ್ರೀ ಸದಾನಂದ ಗೌಡರು ರಾಜ್ಯ ಅಧ್ಯಕ್ಷರಾದಾಗ ಬಿ.ಜೆ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿ ಸಿಕ್ಕಿತು. ಪಕ್ಷದ ಜವಾಬ್ದಾರಿಯಿದ್ದಾಗ ಇಡೀ ರಾಜ್ಯವನ್ನು ಹಲವಾರು ಸಾರಿ ಪ್ರವಾಸ ಮಾಡುವ, ಕಾರ್ಯಕರ್ತರ ಜೊತೆ ಬೆರೆಯುವ ಹಾಗೂ ರಾಜ್ಯದ ಸಮಸ್ಯೆಗಳನ್ನು ಅರಿಯುವ ಮತ್ತು ಹೋರಾಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. 2004 ರಲ್ಲಿ ಪಕ್ಷದಲ್ಲಿ ನನ್ನನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿದರು, ವಿಧಾನ ಪರಿಷತ್‌ನ ಕಲಾಪಗಳಲ್ಲಿ ಭಾಗವಹಿಸುವ ಅನುಭವ ಆಯಿತು. ಮಾನ್ಯ ಯಡಿಯೂರಪ್ಪನವರ 1999ರ ಸಂಕಲ್ಪ ರಥ ಯಾತ್ರೆ, ಹಲವಾರು ಹೋರಾಟಗಳು, ಪಾದ ಯಾತ್ರೆಗಳು, ಧರಣಿ ಸತ್ಯಾಗ್ರಹಗಳಲ್ಲಿ ಭಾಗವಹಿಸುವ ಮತ್ತು ಸಂಘಟಿಸುವ ಅನುಭವವಾಯಿತು.
2008 ರಲ್ಲಿ ಚುನಾವಣೆ ನಡೆದಾಗ ನೇರವಾಗಿ ಜನರಿಂದ ಆಯ್ಕೆ ಆಗಬೇಕೆಂದು ನಾನು ಬಯಸಿದೆ. ರಾಜ್ಯದಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಬೆಂಗಳೂರಿನಲ್ಲಿ ಹಲವಾರು ಹೊಸ ಕ್ಷೇತ್ರಗಳಾದವು. ಅದರಲ್ಲಿ ಯಶವಂತಪುರವೂ ಒಂದು. ಬಿ.ಜೆ.ಪಿ ಗೆ ಬಹಳ ಕಷ್ಟವಾಗಿದ್ದ ಕ್ಷೇತ್ರ ಅದು. ಕಬ್ಬಿಣದ ಕಡಲೆಕಾಯಿಯೆಂದು ಹಿರಿಯರು ಅಲ್ಲಿ ಸ್ಪರ್ಧೆ ಬೇಡವೆಂದರು. ನಾನೇ ಹಠ ಹಿಡಿದು ಸ್ಪರ್ಧಿಸಿದೆ. ಅಲ್ಲಿನ ಕಾರ್ಯಕರ್ತರ ಶ್ರಮ ಮತ್ತು ಜನರ ಆಶೀರ್ವಾದದಿಂದ ಕೇವಲ ಒಂದು ತಿಂಗಳ ಓಡಾಟ ಮತ್ತು ಪರಿಚಯದಲ್ಲಿ ಜನ  ನನ್ನನ್ನು ಆಯ್ಕೆಮಾಡಿದರು. ಯಶವಂತಪುರ ಕ್ಷೇತ್ರ ಅತ್ಯಂತ ಹಿಂದುಳಿದ ಪ್ರದೇಶ, ಕೆಂಗೇರಿ ಮತ್ತು 14  ಗ್ರಾಮ ಪಂಚಾಯತ್ ಗಳನ್ನು ಒಳಗೊಂಡ ಕ್ಷೇತ್ರ ಇದು. ಮೂಲಭೂತ ಸೌಲಭ್ಯಗಳ ಭಾರೀ ಕೊರತೆಯಿದೆ. ಅಲ್ಲಿನ ಶಾಸಕಿಯಾದೆ. 1 1/2 ವರ್ಷಗಳ ಕಾಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವೆಯಾದೆ. ಗ್ರಾಮೀಣ ಪ್ರದೇಶಕ್ಕೆ ಹೊಸ ಕಾಯಕಲ್ಪ ಕೊಡುವ ಕೆಲಸಕ್ಕೆ ಕೈಹಾಕಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಆಡಳಿತಾತ್ಮಕವಾಗಿ ಮತ್ತು ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಸುಧಾರಣೆ ತರುವ ಪ್ರಯತ್ನ ಮಾಡಿದೆ.
1 1/2 ವರ್ಷಗಳ ನನ್ನ ಅವಧಿಯ ಕೆಲಸ ನನಗೆ ತೃಪ್ತಿ ಕೊಟ್ಟಿದೆ. ನನ್ನಲ್ಲಿ ಹಲವಾರು ಕನಸುಗಳಿದ್ದವು. ಗ್ರಾಮೀಣ ಪ್ರದೇಶಕ್ಕೆ ಶುದ್ಧವಾದ ಮೇಲ್ಮೈ ಕುಡಿಯುವ ನೀರು ಕೊಡಬೇಕು, ಎಲ್ಲರಿಗೂ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಆಗಬೇಕು. ಗ್ರಾಮೀಣ ರಸ್ತೆ ಅಭಿವೃದ್ಧಿಯಾಗಬೇಕು. ಹಳ್ಳಿಗಳ ಒಳಚರಂಡಿ, ಬೀದಿ ದೀಪ ಇವುಗಳಿಗೆ ಅದ್ಯತೆ ಕೊಡಬೇಕು, ಇಲಾಖೆಯಲ್ಲಿ ಪಾರದರ್ಶಕತೆ ತರಬೇಕು ಎಂಬ ಕನಸುಗಳನ್ನು  ಹೊತ್ತು ಕೆಲಸ ಮಾಡಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಮೈಸೂರಿನ ಅಭಿವೃದ್ಧಿಗೆ ಶ್ರಮಿಸಿದೆ. ಮೈಸೂರನ್ನು ಜಗತ್ತಿನಲ್ಲೆ ಗಮನ ಸೆಳೆಯುವ ಪ್ರವಾಸಿ ತಾಣವಾಗಿ, ಔದ್ಯಮಿಕ ಕೇಂದ್ರವನ್ನಾಗಿ ಮಾಡುವ ಕನಸಿತ್ತು. ಎರಡು ವರ್ಷ ದಸರಾ ಅಚರಿಸುವ ಅವಕಾಶ ಸಿಕ್ಕಿತು. ಕಾರಣಾಂತರಗಳಿಂದ ಸಚಿವ ಪದವಿ ಕಳೆದುಕೊಂಡಿದ್ದೇನೆ. ಸಚಿವೆಯಾಗುವ ಮೊದಲು ನಾನು ಸಮಾಜ ಸೇವಕಿ, ಹೋರಾಟಗಾರ್ತಿ. ಕೇವಲ 1 1/2 ವರ್ಷ ಮಾತ್ರ ನಾನು ಸಚಿವೆ. ಈಗ ಮತ್ತೆ ನಾನು ಸಮಾಜ ಸೇವಕಿಯಾಗಿ ಕೆಲಸ ಮಾಡಬೇಕೆಂದು ನಿರ್ಧಾರ ಮಾಡಿದ್ದೇನೆ.
ನಮ್ಮ ರಾಜ್ಯದ ಅತ್ಯಂತ ದೊಡ್ಡ ದುರಂತ ನೆರೆ ಹಾವಳಿ. ಆ ಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು, ನೆರೆ ಪರಿಹಾರದಲ್ಲಾದ ಕೊರತೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇನೆ.

ದೇಶವನ್ನು ಮತ್ತು ರಾಜ್ಯವನ್ನು ಇಂದು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ ನಕ್ಸಲಿಸಂ. ನಮ್ಮ ರಾಜ್ಯಕ್ಕೂ ಪೆಡಂಭೂತವಾಗಿ ಇದು ಕಾಲಿಟ್ಟಿದೆ. ಮಲೆನಾಡಿನ ಸುಂದರ ತಾಣಗಳಲ್ಲಿ ಗುಂಡಿನ ಸದ್ದು ಕೇಳುತ್ತಿದೆ. ಹಸಿರು ಹುಲ್ಲಿನ ಮೇಲೆ ರಕ್ತ ಚೆಲ್ಲುತ್ತಿದೆ. ಬಹಳಷ್ಟು ಜನ ಗ್ರಾಮಸ್ಥರನ್ನು ಹೆದರಿಸಿ, ಬೆದರಿಸಿ ನಕ್ಸಲರು ಅವರ ಸಹಾಯ ಪಡೆಯುತ್ತಿದ್ದಾರೆ ಎಂಬ ಮಾತಿದೆ. ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಹಳ್ಳಿಯ ಜನ ನಕ್ಸಲರನ್ನು ಬೆಂಬಲಿಸುತ್ತಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ. ಅದಕ್ಕಾಗಿ ಸತ್ಯವನ್ನು ತಿಳಿದುಕೊಳ್ಳಬೇಕೆಂದು ಆ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇನೆ. ಈ ಎಲ್ಲಾಕಡೆ ಮಂತ್ರಿಯಾಗಿಯೂ ಹೋಗಿದ್ದೆ. ಈಗ ಮಂತ್ರಿಗಿರಿ ಹೋದಮೇಲೂ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೊಸಲ್ಫಾನ್ ಸಿಂಪಡಣೆಯಿಂದ ತೊಂದರೆಗೊಳಗಾದ ಅಂಗವಿಕಲರ ಮನೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಸದನದಲ್ಲಿ ಮಾತನಾಡಿ ಅವರಿಗೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಿದೆ. ಮಾನ್ಯ ಮುಖ್ಯಮಂತ್ರಿಯವರು ಅವರ ಸಂಕಷ್ಟಕ್ಕೆ ಸ್ಪಂದಿಸಿ ಈ ಬುದ್ಧಿಮಾಂದ್ಯರಿಗೆ, ಅಂಗವಿಕಲರಿಗೆ, ರೋಗಗ್ರಸ್ತರಿಗೆ ಪರಿಹಾರ ಕೊಡುವ, ಮಾಸಾಶನ ಕೊಡುವ ಭರವಸೆ ನೀಡಿದ್ದಾರೆ. ಹೀಗೆ ಸದನದ ಒಳಗೆ ಮತ್ತು ಹೊರಗೆ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ.

ಅಧಿಕಾರ ಕಳೆದುಕೊಂಡ ಮೇಲೆ ರಾಜ್ಯದ ಜನ ಅಪಾರವಾದ ಪ್ರೀತಿ, ವಿಶ್ವಾಸ, ಅನುಕಂಪವನ್ನು ತೋರುತ್ತಿದ್ದೀರಿ. ಮಾಧ್ಯಮದ ಎಲ್ಲಾ ಬಂಧುಗಳು ಪ್ರೀತಿ ತೋರುತ್ತಿದ್ದಾರೆ. ನಿಮ್ಮೆಲ್ಲರಿಗೂ ನನ್ನ ಶತಶತ ನಮನಗಳು. ನಿಮ್ಮ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಲಹೆ, ಸಹಕಾರ ಹೀಗೇನೇ ಇರಲಿ ಎಂದು ನನ್ನ ವಿನಂತಿ. ಹಾಗೇನೆ ನಿಮ್ಮ ಸಲಹೆಗಳನ್ನು ನನಗೆ ತಿಳಿಸಿ.
ಇಂತಿ ನಿಮ್ಮವಳೇ,
ಶೋಭ

No comments:

Post a Comment