Translate in your Language

Sunday, November 1, 2015

ಕಸ್ತೂರಿ ಶಂಕರ್ ಅವರಿಗೆ 65ನೇ ಹುಟ್ಟುಹಬ್ಬದ ಶುಭಾಶಯಗಳು

ಶ್ರೀಮತಿ.ಕಸ್ತೂರಿ ಶಂಕರ್
ಕನ್ನಡದ ಕಸ್ತೂರಿ ಶಂಕರ್ ಹುಟ್ಟಿದ್ದು ಕನ್ನಡ ರಾಜ್ಯೋತ್ಸವ ದಿನ  ನವೆಂಬರ್ 1 ರಂದು, ಹುಟ್ಟಿದ ದಿನ, ಇಟ್ಟ ಹೆಸರು ಮತ್ತು ಅವರು ಹಾಡಿರುವ ಹಾಡುಗಳು ಎಲ್ಲವೂ ಕನ್ನಡ ಕಸ್ತೂರಿಗೆ ಅನ್ವರ್ಥಕವೇ, 
ಕನ್ನಡದ ಸುಪ್ರಸಿದ್ಧ ಗಾಯಕಿ ಕಸ್ತೂರಿ ಶಂಕರ್ ಅವರು 1950ರ ನವೆಂಬರ್ 1ರ ದಿನದಂದು ಮೈಸೂರಿನಲ್ಲಿ ಜನಿಸಿದರು.  ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರೂ,  ಉತ್ತಮ ಬರಹಗಾರರೂ ಆದ  ಜಿ.ಸಿ. ಶಂಕರಪ್ಪನವರು.  ತಾಯಿ ಗಿರಿಜಾ ಶಂಕರ್. ಅಪ್ಪಟ ಗಾಂಧೀವಾದಿಯಾಗಿದ್ದ ಶಂಕರಪ್ಪನವರು ಕಸ್ತೂರಿಬಾ ಗಾಂಧಿ ಅವರ ನೆನಪಿನಲ್ಲಿ ಅವರಿಗೆ ಕಸ್ತೂರಿ ಎಂದು ಹೆಸರಿಟ್ಟರಂತೆ.  ಕಸ್ತೂರಿ ಅವರು ಚಿಕ್ಕಂದಿನಿಂದಲೇ ಭಕ್ತಿಗೀತೆಗಳನ್ನೂ, ತಂದೆಯವರು ರಚಿಸಿದ್ದ ಭಕ್ತಿಗೀತೆಗಳನ್ನೂ ಹಾಡುತ್ತಿದ್ದರು.
ಕಸ್ತೂರಿ ಶಂಕರ್ ಅವರ ಒಂದು ಹಾಡು ನನ್ನ ಮೊಬೈಲಿನಲ್ಲಿದ್ದು,  ಅದನ್ನು ಆಗಾಗ ಕೇಳುತ್ತಲೇ ಇರುತ್ತೇನೆ.  ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ  “ಎಲ್ಲೋ ದೂರದಿ ಜಿನುಗುವ ಹನಿಗಳೆ ಬನ್ನಿ ಬನ್ನಿ ಬಿರು ಮಳೆಯಾಗಿ.  ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ ಹೊಸ ಹಸುರೇಳಲಿ ನವುರಾಗಿ”  ಎಂಬ ಆ ಹಾಡಿಗೆ ಕಸ್ತೂರಿ ಶಂಕರ್ ಅವರು ನೀಡಿರುವ ಅಂತರ್ಮುಖತೆ ಎಂಬ ಅಂತರ್ಧ್ವನಿ ಮತ್ತು ಬಹಿರ್ಮುಖತೆಯ ಸೌಂದರ್ಯವೆಂಬ ಇನಿದನಿಗಳು  ಪ್ರತೀಬಾರಿ ಕೇಳುವಾಗಲೂ ನನ್ನಲ್ಲಿ ವಿಧವಿಧವಾದ ಭಾವಗಳ ಬಾಗಿಲನ್ನು ತೆರೆದಂತೆ ಬಾಸವಾಗುತ್ತದೆ.  “ಎಲ್ಲೋ ದೂರದಿ ಚಿಕ್ಕ ಗೆಜ್ಜೆಗಳ ಕಟ್ಟಿ ನರ್ತಿಸುವ ಹೆಜ್ಜೆಗಳೇ ಬನ್ನಿ, ನನ್ನೆದೆಗೆ ಲಾಸ್ಯವನಾಡಿರಿ ಚಿಮ್ಮಲಿ ಒಲವಿನ ಬುಗ್ಗೆಗಳೇ” ಎಂದು ಹಾಡಿನ ಅಂತಿಮ ಚರಣವನ್ನು ಹಾಡುವ ಕಸ್ತೂರಿ ಶಂಕರ್ ಅವರ ಧ್ವನಿಯ ಮಧುರತೆಯಂತೂ ಅಪೂರ್ವವಾದದ್ದು.

ಒಂದು ಕಡೆ ನಮ್ಮ ಚಲನಚಿತ್ರಗೀತೆಗಳ ಸುಂದರ ವಿಶ್ಲೇಷಕರಾದ ಎ. ಆರ್. ಮಣಿಕಾಂತ್ ಬರೆಯುತ್ತಾರೆ.  “ಕಸ್ತೂರಿ ಶಂಕರ್‌ ಹಿಂದೆ ಮಾತ್ರವಲ್ಲ,  ಈಗ ಕೂಡ ಸಿರಿಕಂಠದ ಒಡತಿ.  ಅವರು ಸುಶೀಲಾ ಥರಾ ಅಲ್ಲ. ಇತ್ತ ಎಸ್‌.ಜಾನಕಿ ಥರಾನೂ ಅಲ್ಲ. ವಾಣಿ ಜಯರಾಂಗೆ ಆಕೆ ಹೋಲಿಕೇನೇ ಆಗಲ್ಲ. ಆದ್ರೆ ಈ ಮೂರೂ ಗಾಯಕಿಯರ ಸಿರಿಕಂಠ ಒಂದಾದರೆ ಕೇಳುತ್ತಲ್ಲ - ಮೋಹನ ರಾಗ - ಅದು ಕಸ್ತೂರಿ ಶಂಕರ್‌ ಅವರದ್ದು.”

ಅಂದಿನ ದಿನಗಳಲ್ಲಿ ಸುಶೀಲ, ಜಾನಕಿ, ವಾಣಿ ಜಯರಾಂ ಹಿನ್ನೆಲೆ ಗಾಯನದಲ್ಲಿ ವಿರಾಜಮಾನರಾಗಿದ್ದ ಸಮಯ.  ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರು ಕಸ್ತೂರಿ ಶಂಕರ್ ಅವರನ್ನು “ಬೆಟ್ಟದ ಗೌರಿ” ಚಿತ್ರಕ್ಕಾಗಿ ಹಾಡಿಸಿದರು.  ಆದರೆ ಆ ಚಿತ್ರ ಬಿಡುಗಡೆಯಾಗಲಿಲ್ಲ.  ಆದರೆ ‘ಭಾಗ್ಯಜ್ಯೋತಿ’ ಚಿತ್ರದ ‘ಗುಡಿ ಸೇರದ ಮುಡಿ ಏರದ ಕಡೆಗಾಣಿಸೊ ಹೂವಲ್ಲ’ ಗೀತೆ ಕಸ್ತೂರಿ ಶಂಕರ್ ಅವರನ್ನು ಮನೆಮನೆಗೂ ತಲುಪಿಸಿತ್ತು.  ಕಸ್ತೂರಿ ಶಂಕರ್ ಕೇವಲ ಚಿತ್ರರಂಗದ ಏಕತಾನತೆಗೇ ಸೀಮಿತವಾಗದೆ ಭಾವ ಗೀತೆ, ಭಕ್ತಿಗೀತೆ, ಜಾನಪದ ಗೀತೆಗಳ ವೈವಿಧ್ಯತೆಯ ಹಾದಿಯಲ್ಲಿ ಸಹಾ ಸಾಗುತ್ತಾ ಬಂದರು. 

ಅಂದಿನ ದಿನಗಳಲ್ಲಿ ರೇಡಿಯೋದಲ್ಲಿ ಮೂಡಿಬರುತ್ತಿದ್ದ “ತ್ವಮೇವ ಮಾತಾ ಚ ಪಿತಾ ತ್ವಮೇವ, ತ್ವಮೇವ ಬಂಧುಶ್ಚ ಸಖಾ ತ್ವಮೇವ, ತ್ವಮೇವ ವಿದ್ಯಾ ದ್ರವಿಣಂ ತ್ವಮೇವ, ತ್ವಮೇವ ಸರ್ವಂ ಮಮ ದೇವ ದೇವ” ಶ್ಲೋಕದಿಂದ ಪ್ರಾರಂಭವಾಗಿ “ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ” ಎಂಬ ವಿಜಯದಾಸರ ಗೀತೆ ಕಸ್ತೂರಿ ಶಂಕರ್ ಅವರ ಧ್ವನಿಯಲ್ಲಿ ಜೇನಿನ ಹನಿಗಳಂತೆಯೇ ಅಪ್ಯಾಯಮಾನವಾಗಿದ್ದಂತದ್ದು.

ಸುಗಮ ಸಂಗೀತದಲ್ಲೊಂದು ಕ್ರಾಂತಿ ಎಂಬಂತೆ ಮೈಸೂರು ಅನಂತಸ್ವಾಮಿಯವರ ರಾಗ ಸಂಯೋಜನೆಯಲ್ಲಿ ಮೂಡಿ ಬಂದ ಕಾವ್ಯ ಮಾಂತ್ರಿಕರಾದ ದ. ರಾ. ಬೇಂದ್ರೆಯವರ “ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು” ಗೀತೆಗೆ ಧ್ವನಿಯಾದವರು ಕಸ್ತೂರಿ ಶಂಕರ್.  ‘ನವೋದಯದ ಕಿರಣ ಲೀಲೆ’,  ‘ಬಂದ ಚೈತ್ರದ ಹಾದಿ ತೆರೆದಿದೆ’,  ‘ಶೃತಿ ಸುಖ ನಿನದೆ..’,  ‘ಈ ಕಂಗಳೇನೋ ನನ್ನವು..’ ಗೀತೆಗಳು ಕೂಡಾ ಕಸ್ತೂರಿ ಶಂಕರ್ ಅವರ ಧ್ವನಿಯಲ್ಲಿ ಬಹು ಪ್ರಖ್ಯಾತಗೊಂಡವು.  ಕಸ್ತೂರಿ ಶಂಕರ್ ಅವರಿಗೆ ಕನ್ನಡದ ಸುಗಮ ಸಂಗೀತದ ಬಗ್ಗೆ ಕಾಳಿಂಗರಾಯರ ಗೀತೆಗಳು ಆಶಯ ಹುಟ್ಟಿಸಿದರೆ, ಸ್ವಯಂ ಅನಂತ ಸ್ವಾಮಿಯವರು ಅವರಿಗೆ ಕನ್ನಡದಲ್ಲಿ ಸುಗಮ ಸಂಗೀತ ಹಾಡಲು ಪ್ರೇರಕರಾದರು.

ಸಿನಿಮಾದಲ್ಲಿ ಕೂಡಾ ‘ರಂಗೇನ ಹಳ್ಳಿಯಾಗೆ’, ‘ಯಾವ ತಾಯಿಯು ಹಡೆದ ಮಗಳಾದರೇನು’, ‘ಓ ದ್ಯಾವ್ರೆ’, ‘ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ’, ‘ಇದು ರಾಮ ಮಂದಿರ ನೀ ರಾಮಚಂದಿರ’, ‘ಜೇನಿನ ಹೊಳೆಯೊ, ಹಾಲಿನ ಮಳೆಯೊ’, ‘ಶ್ರೀರಾಮ ಬಂದೌನೇ’ ಮುಂತಾದ ಗೀತೆಗಳು ಇಂದಿಗೂ ಅವಿಸ್ಮರಣೀಯ ಗೀತೆಗಳಾಗಿ ಪ್ರಸಿದ್ಧವಾಗಿವೆ.  ‘ನವೋದಯ’, ‘ನಾಕು ತಂತಿ’, ‘ಗೀತ ಮಾಧುರಿ’, ‘ಕಾವ್ಯ ಕಸ್ತೂರಿ’, ‘ದೀಪಿಕಾ’, ‘ಕೆಂದಾವರೆ’, ‘ಸೌಗಂಧ’ ಮೊದಲಾದ ಧ್ವನಿ ಸುರುಳಿಗಳು ನಿರಂತರವಾಗಿ ಜನಪ್ರಿಯಗೊಂಡಿವೆ.


ಇವಲ್ಲದೆ ಕಸ್ತೂರಿ ಶಂಕರ್ ಅವರು ತಮ್ಮದೇ ಆದ ವಾದ್ಯವೃಂದದ ತಂಡದ ಮೂಲಕ ಇಡೀ ನಾಡಿನಲ್ಲಿ ಕಾರ್ಯಕ್ರಮಗಳನ್ನು ನೀಡಿದವರು.  ಹಿಂದಿಯನ್ನೂ ಒಳಗೊಂಡಂತೆ ಎಂಟು ಭಾಷೆಗಳಲ್ಲಿ ಗೀತೆಗಳನ್ನು ಅವರು  ಹಾಡಿದ್ದಾರೆ.  ರಾಜ್ಯಸರ್ಕಾರದ ಗೌರವವೂ ಸೇರಿದಂತೆ ಅನೇಕ ಗೌರವಗಳು ಕಸ್ತೂರಿ ಶಂಕರ್ ಅವರಿಗೆ ಸಂದಿವೆ.

ಕಸ್ತೂರಿ ಶಂಕರ್ ಅವರ ವ್ಯಕ್ತಿತ್ವವೇ ಗೌರವಪೂರ್ಣ ವ್ಯಕ್ತಿತ್ವ.  ಹಲವಾರು ಬಾರಿ ಅವರನ್ನು ಕಂಡು, ಮಾತನಾಡಿದ ಸೌಭಾಗ್ಯ ನನ್ನದಾಗಿದೆ. ಅವರು ಅತ್ಯಂತ ಸಹಜ ನಗೆಮೊಗದೊಂದಿಗೆ ಒಂದು ರೀತಿಯ ಸಹಜ ಗಾಂಭೀರ್ಯದ ನವುರುತನದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಪಾಲ್ಗೊಳ್ಳುವ ರೀತಿ ನಮಗೆ ಅವರಲ್ಲಿ  ಗೌರವ ಮೂಡಿಸುತ್ತದೆ.  ಈಗಲೂ ಸಹಾ  ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗಲೆಲ್ಲಾ ಅವರು ಹರಿಸುವ ವಾತ್ಸಲ್ಯಸುಧೆ ಅನುಪಮವಾದದ್ದು.   ಈ ಮಹಾನ್ ಗಾಯಕಿ, ಆತ್ಮೀಯ ವ್ಯಕ್ತಿತ್ವದ ಕಸ್ತೂರಿ ಶಂಕರ್ ಅವರಿಗೆ ಹುಟ್ಟುಹಬ್ಬದ ಆತ್ಮೀಯ ಶುಭ ಹಾರೈಕೆಗಳು.

No comments:

Post a Comment