Translate in your Language

Monday, January 25, 2016

ಕೆ.ಎಸ್.ನರಸಿಂಹಸ್ವಾಮಿ ಅವರ 101ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಕೆ.ಎಸ್. ನರಸಿಂಹಸ್ವಾಮಿ

ಕೆ.ಎಸ್. ನರಸಿಂಹಸ್ವಾಮಿಯವರು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನವರಿ 25ರಂದು ಜನಿಸಿದರು. ತಂದೆ ಸುಬ್ಬರಾಯ. ತಾಯಿ ನಾಗಮ್ಮ, ನರಸಿಂಹಸ್ವಾಮಿಯವರ ವಿದ್ಯಾಭ್ಯಾಸ ಮೈಸೂರಿನ ಮಹಾರಾಜ ಪ್ರೌಢಶಾಲೆ, ಇಂಟರ್‌ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಆಯಿತು. ಇವರ ಕಾಲೇಜು ಅಭ್ಯಾಸ ಆರ್ಥಿಕ ಸಂಕಷ್ಟದಿಂದಾಗಿ ಮೊಟಕಾಯಿತು. ಪದವಿ ವ್ಯಾಸಂಗ ಅಪೂರ್ಣಗೊಂಡಿತು. ತಮ್ಮ ಓದಿನ ವಿಷಯ ಕನ್ನಡವಲ್ಲದಿದ್ದರೂ ಕನ್ನಡ ತರಗತಿಗಳಿಗೆ ಹಾಜರಾಗಿ ಆಲಿಸುತ್ತಿದ್ದರು. ಗಣಿತ, ಭೌತವಿಜ್ಞಾನ, ಇಂಜಿನಿಯರಿಂಗ್ ಇವರ ಪಠ್ಯ ವಿಷಯಗಳಾಗಿದ್ದವು. ೧೯ನೇ ವಯಸ್ಸಿಗೆ ವಿದ್ಯಾಭ್ಯಾಸ ನಿಂತುಹೋಯಿತು. ತಮ್ಮ ೨೨ನೇ ವಯಸ್ಸಿಗೆ ಕೆಲಸಕ್ಕೆ ಸೇರಿದರು. ಶಿವಮೊಗ್ಗದ ವೆಂಕಮ್ಮ ಎಂಬುವವರೊಡನೆ ವಿವಾಹವಾದರು. ಇವರ ಪ್ರೇಮಮಯ ಜೀವನ ಗೀತೆ ರಚನೆಗೆ ಪುಷ್ಠಿ ನೀಡಿತು. 

ನವೋದಯ ಕಾವ್ಯಮಾರ್ಗವನ್ನು ಹಿಡಿದು ಮುಂದುವರಿದ ಇವರಿಗೆ ಬಿ.ಎಂ.ಶ್ರೀಕಂಠಯ್ಯನವರ ಇಂಗ್ಲಿಷ್ ಗೀತೆಗಳು ದಾರಿದೀಪವಾಯಿತು. ಇವರ ಮೊದಲ ಕವಲ ಸಂಕಲನ "ಮೈಸೂರು ಮಲ್ಲಿಗೆ" ೧೯೪೨ರಲ್ಲಿ ಎ.ಆರ್. ಕೃಷ್ಣಶಾಸ್ತ್ರ, ಟಿ.ಎಸ್. ವೆಂಕಣ್ಣಯ್ಯ, ತೀ.ನಂ.ಶ್ರೀಕಂಠಯ್ಯನವರ ಮಾರ್ಗದರ್ಶನದಲ್ಲಿ ಬೆಳಕಿಗೆ ಬಂದಿತು. ಕನ್ನಡ ಸಾಹಿತ್ಯದ ಕಾಲದಿಂದ ನವ್ಯಕಾವ್ಯ ಸೃಷ್ಟಿಯ ಕಾಲದವರೆಗೂ ತಮ್ಮ ಕಾವ್ಯ ಸೃಷ್ಟಿಯನ್ನು ನಡೆಸುತ್ತಾ ಬಂದವರು. 
ನರಸಿಂಹಸ್ವಾಮಿಯವರು ನಂಜನಗೂಡು, ಮೈಸೂರು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದಿಂದ ೧೯೭೦ ಜನವರಿ ೨೬ರಂದು ನಿವೃತ್ತರಾದರು. ೨೦೦೩ ಡಿಸೆಂಬರ್ ೨೮ ರಂದು ಬೆಂಗಳೂರಿನಲ್ಲಿ ನಿಧನರಾದರು. 

ಕೃತಿಗಳು
ಕವನ ಸಂಕಲನಗಳು: ದೀಪದ ಮಲ್ಲಿ, ಐರಾವತ, ಉಂಗುರ ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ, ಮಲ್ಲಿಗೆಯ ಮಾಲೆ, ದುಂಡುಮಲ್ಲಿಗೆ, ಕೆಲವು ಚೀನಿ ಕವನಗಳು, ರಾಬಟ್ಸ್ ಕವಿಯ ಕೆಲವು ಪ್ರೇಮಗೀತೆಗಳು, ನವಿಲದನಿ, ಸಂಜೆ ಹಾಡು.
ಗದ್ಯ ಬರಹಗಳು: ಮಾದರಿಯ ಕಲ್ಲು, ಉಪವನ, ದಮಯಂತಿ
ಅನುವಾದಿತ ಕೃತಿಗಳು: ಗಾಂಧೀಜಿಯವರ ಹಲವು ಉಕ್ತಿಗಳು, ಯೂರಿಪಿಡೀಸನ ಮಿಡೀಯಾ ನಾಟಕ, ಮಾರ್ಕ್‌ಟ್ಟೇನನ ಹಕಲ್ ಬರಿಫಿನ್ನನ ಸಾಹಸಗಳು, ಸುಬ್ರಹ್ಮಣ್ಯ ಭಾರತಿ, ಮಾಯಶಂಖ ಮತ್ತು ಇರತ ಕೃತಿಗಳು, ರಾಣಿಯ ಗಿಳಿ ಮತ್ತು ರಾಜನ ಮಂಗ ಇವು ಇವರ ಅನುವಾದಿತ ಕೃತಿಗಳು. 

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೪೩ ರಲ್ಲಿ ಮೈಸೂರು ಮಲ್ಲಿಗೆ ಕೃತಿಯು "ದೇವರಾಜ ಬಹದ್ದೂರ್" ಬಹುಮಾನವನ್ನು ಪಡೆದಿದೆ.
೧೯೫೭ರಲ್ಲಿ "ಶಿಲಾಲತೆ" ಮೈಸೂರು ರಾಜ್ಯದ ಪ್ರಸಾರ ಶಾಖೆಯ ಬಹುಮಾನವನ್ನು ಪಡೆದಿದೆ.
೧೯೭೨ ರಲ್ಲಿ ಇವರ ಅಭಿಮಾನಿಗಳು "ಚಂದನ" ಎಂಬ ಅಭಿನಂದನ ಗ್ರಂಥವೊಂದನ್ನು ಸಮರ್ಪಿಸಿದ್ದಾರೆ. 
೧೯೭೭ರಲ್ಲಿ "ತೆರೆದ ಬಾಗಿಲು" ಕವನ ಸಂಗ್ರಹ "ಕೇಂದ್ರ ಸಾಹಿತ್ಯ ಅಕಾಡೆಮಿ" ಪ್ರಶಸ್ತಿಯನ್ನು ಪಡೆದಿದೆ.
೧೯೯೦ರಲ್ಲಿ ಇವರು ಮೈಸೂರಿನಲ್ಲಿ ಜರುಗಿದ ೬೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು
೧೯೯೨ರಲ್ಲಿ ಬೆಂಗಲೂರು ವಿಶ್ವವಿದ್ಯಾನಿಲಯವು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.
೧೯೯೫ರಲ್ಲಿ "ದುಂಡುಮಲ್ಲಿಗೆ" ಕವನಸಂಕಲನಕ್ಕೆ "ಪಂಪ ಪ್ರಶಸ್ತಿ" ಲಭಿಸಿದೆ. 
೧೯೯೬ರಲ್ಲಿ "ಮಾಸ್ತಿ ಸಾಹಿತ್ಯ ಪ್ರಶಸ್ತಿ" ಲಭಿಸಿದೆ.
೧೯೯೭ರಲ್ಲಿ ಕೇರಳದ ಕವಿ "ಕುಮಾರನ್ ಆಶಾನ್ ಪ್ರಶಸ್ತಿ" ಲಭಿಸಿದೆ.
ಇವರು ದೆಹಲಿ ಆಕಾಶವಾಣಿ ಕವಿ ಸಮ್ಮೇಳನದಲ್ಲಿ ಸರ್ವ ಭಾಷಾ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 

No comments:

Post a Comment