Translate in your Language

Tuesday, January 5, 2016

ದೀಪಿಕಾ ಪಡುಕೋಣೆ ಅವರ 31ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಸತತ ಏಳು ಬಾರಿ ಬ್ಯಾಡ್ಮಿಂಟನ್ ವಿಶ್ವ-ಚಾಂಪಿಯನ್ ಆಟಗಾರ ರಾದ ನಮ್ಮ ಪ್ರಕಾಶ್ ಪಡುಕೋಣೆ ಅವರ ನೆಚ್ಚಿನ ಮಗಳು, ಕನ್ನಡದ ನೆಲದ ಹುಡುಗಿ ಇಂದಿನ ಹಿಂದಿ ಚಿತ್ರರಂಗದ ಪ್ರಖ್ಯಾತ ನಟಿ ದೀಪಿಕಾ ಪಡುಕೋಣೆ ಹುಟ್ಟಿದ್ದು ಜನವರಿ 5, 1986 ರಲ್ಲಿ. 


ಕನ್ನಡದ ಸಿನಿಮಾಗಳಲ್ಲಿ  ಅಂದಿನ ಪ್ರಸಿದ್ಧ ಅಭಿನೇತ್ರಿಯರಾದ ಪಂಡರೀಬಾಯಿ, ಲೀಲಾವತಿ, ಬಿ. ಸರೋಜಾದೇವಿ, ಭಾರತಿ, ಜಯಂತಿ ಅಂತಹ ಪ್ರತಿಭೆಗಳು ಕನ್ನಡದಲ್ಲಿ ಪ್ರಖ್ಯಾತರಾಗಿದ್ದಷ್ಟೇ ಇತರ ಭಾಷೆಗಳಲ್ಲಿ ಕೂಡಾ ನಟಿಸಿ ಅಲ್ಲಿಯೂ ಪ್ರಖ್ಯಾತಿ ಪಡೆದಿದ್ದವರು.  
ಕಲ್ಪನ, ಆರತಿ, ಮಂಜುಳ ಹೆಚ್ಚು ಕಾಣಿಸಿಕೊಂಡದ್ದು ಕನ್ನಡದಲ್ಲೇ.  ನಂತರದಲ್ಲಿ ಕನ್ನಡ ಚಿತ್ರಗಳ ಸಂಖ್ಯೆಗಳೂ ಬೆಳೆದು ಹಳೆಯ ನಟಿಯರು ಸಂಸಾರ ಹಿಡಿದು, ಹೊಸಬರು ಕಡಿಮೆಯಾಗಿ ಕನ್ನಡದಲ್ಲಿ ಇತರ ಭಾಷೆಯ ನಟಿಯರು ಮೂಡಿದ್ದೇ ಹೆಚ್ಚು.  ದಿವಂಗತ ಸೌಂಧರ್ಯ ಅಂತಹವರು ಬೇರೆ ಭಾಷೆಯಲ್ಲಿ ಹೆಚ್ಚು ಯಶಸ್ವಿಯಾಗಿ ಆ ಭಾಷೆಗಳಲ್ಲಿ ಮೂಡಿದ್ದೇ ಹೆಚ್ಚು. 


ಇತ್ತೀಚಿನ ತಲೆಮಾರಿನಲ್ಲಿ ಕರ್ನಾಟಕದ ಕೆಲವು ಬೆಡಗಿಯರು ಭಾರತೀಯ ಚಿತ್ರರಂಗದ ಪ್ರಧಾನ ಕೇಂದ್ರವಾದ ಹಿಂದೀ ಚಿತ್ರರಂಗದಲ್ಲಿ ಅಪಾರ ಯಶಸ್ಸನ್ನು ಕಂಡಿದ್ದಾರೆ.  ಇಂತಹವರಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಮುಖ ಹೆಸರು ದೀಪಿಕಾ ಪಡುಕೋಣೆ.

ಪಡುಕೋಣೆ ಅಂದೊಡನೆ ಬ್ಯಾಡ್ಮಿಂಟನ್ ಆಟದಲ್ಲಿ ನಮ್ಮ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಅಂತರಾರಾಷ್ಟ್ರೀಯ ಖ್ಯಾತಿ ತಂದ ಪ್ರಕಾಶ್ ಪಡುಕೋಣೆ ನೆನಪಿಗೆ ಬರುತ್ತಾರೆ. ಅವರು ಅಂತರರಾಷ್ಟ್ರೀಯ ಖ್ಯಾತಿ ಪಡೆದುದಲ್ಲದೆ, ಬರೀ ಗೋಲಿ, ಕ್ರಿಕೆಟ್ ಬ್ಯಾಟು, ಕಾಲು ಮುರಿಯಲಿಕ್ಕೆ ಹಾಕಿ  ಕೋಲು ಇತ್ಯಾದಿ ಹಿಡಿಯುತ್ತಿದ್ದ ಜನರಿಗೆ “ನಾವೂ ಬ್ಯಾಡ್ಮಿಂಟನ್ ಆಡುತ್ತೇವೆ” ಎಂಬ ಆಶಯ ಹತ್ತಿಸಿದವರು.  ನಮ್ಮ ದೀಪಿಕ ಪ್ರಕಾಶ್ ಪಡುಕೋಣೆ ಅವರ ಮಗಳೇ. ವಿದೇಶದಲ್ಲಿ ಹುಟ್ಟಿ ಬೆಂಗಳೂರಿನ ಸೋಫಿಯಾ, ಮೌಂಟ್ ಕಾರ್ಮೆಲ್ ಅಂಥಹ  ಇಂಗ್ಲಿಷ್ ಶಾಲೆಯಲ್ಲಿ ಹೆಚ್ಚು ಬಾಳಿದ್ದರೂ, ಕನ್ನಡವನ್ನು ಇಂದಿನ ಯುವ ಕನ್ನಡ ಕಲಾವಿದರಿಗೆ ಹೋಲಿಸಿದಲ್ಲಿ ಚೆನ್ನಾಗಿಯೇ ಮಾತನಾಡುತ್ತಾಳೆ.  ಈ ವಿಚಾರದಲ್ಲಿ, ಈಕೆ ನಮ್ಮ ಕನ್ನಡದ ಹುಡುಗಿ ಎಂಬ ಭಾವವನ್ನು ಖಂಡಿತ  ಒಂದಷ್ಟು ಮೂಡಿಸುತ್ತಾಳೆ.

ಉಪೇಂದ್ರರೊಡನೆ ನಾಯಕಿಯಾಗಿ ಕನ್ನಡದಲ್ಲಿ ಮೊದಲು  ‘ಐಶ್ವರ್ಯ’ ಚಿತ್ರದಲ್ಲಿ ನಟಿಸಿದ ಈ ಹುಡುಗಿ ಮುಂದೆ ಪ್ರಖ್ಯಾತ ಶಾರುಕ್ ಖಾನ್ ಜೊತೆ ‘ಓಂ ಶಾಂತಿ ಓಂ’ ಚಿತ್ರದಲ್ಲಿ ನಟಿಸಿ ಜಯಭೇರಿ ಭಾರಿಸಿದಳು ದೀಪಿಕಾ.  ಈ ನಗು ಮೊಗದ ಹುಡುಗಿ ಆ ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲಂ ಫೇರ್ ನೀಡಿದ ಎರಡು ಪ್ರಮುಖ ಪ್ರಶಸ್ತಿಗಳೂ ಸೇರಿದಂತೆ  ಬಹುತೇಕ ಪ್ರತಿಷ್ಟಿತ ಮಾಧ್ಯಮ ಪ್ರಶಸ್ತಿಗಳನ್ನು ಈ ಪಾತ್ರಕ್ಕಾಗಿ ಪಡೆದಳು.  ಆ ನಂತರದಲ್ಲಿ ನಿರಂತರ ಬೇಡಿಕೆಯಲ್ಲಿದ್ದು,  ಹಿಂದಿ ಚಿತ್ರರಂಗದ ಬಹುತೇಕ ಪ್ರಸ್ತುತ ನಟರ ಜೊತೆ ಅಭಿನಯಿಸಿರುವ ದೀಪಿಕ, ಅಲ್ಲೊಂದು ಇಲ್ಲೊಂದು ಯಶಸ್ಸು ಎನ್ನುವ ಚಿತ್ರರಂಗದ ದಿನನಿತ್ಯದ ಪರಿಯಂತೆ ಒಂದೊಂದು ಅಪರೂಪದ ಯಶಸ್ಸು ಕಾಣುತ್ತಾ ನಿರಂತರ ಬೇಡಿಕೆಯೊಂದಿಗೆ ಕಾರ್ಯನಿರತವಾಗಿರುವುದು ಕಂಡು ಬರುತ್ತಿದೆ.  ‘ಓಂ ಶಾಂತಿ ಓಂ’ ನಂತರದಲ್ಲಿ ಆಕೆಯ ಗೆದ್ದ ಚಿತ್ರಗಳಾದ  ’ಲವ್ ಆಜ್ ಕಲ್’, 'ಹೌಸ್ ಫುಲ್', 'ಕಾಕ್ ಟೈಲ್' ಚಿತ್ರವನ್ನು ಇಲ್ಲಿ ನೆನೆಯಬಹುದು.  ಮುಂಬರುವ ದಿನಗಳಲ್ಲಿ ದಕ್ಷಿಣದ ಪ್ರಖ್ಯಾತ ನಾಯಕ ರಜನೀಕಾಂತ್ ಜೊತೆ ಸೇರಿದಂತೆ ಹಲವಾರು ಪ್ರಖ್ಯಾತ ನಿರ್ದೇಶಕರು ಮತ್ತು ನಾಯಕರ ಜೊತೆಯಲ್ಲಿ ಆಕೆಯ ಚಿತ್ರಗಳು ಬರಲಿವೆ.

ದೀಪಿಕಾ ಶಾಲೆಯಲ್ಲಿರುವಾಗ  ಬ್ಯಾಡ್ಮಿಂಟನ್ ಆಟದಲ್ಲಿ ನಮ್ಮ ರಾಜ್ಯ ತಂಡದಲ್ಲಿ ಆಡಿದ್ದಳು.  ಮುಂದೆ ಮಾಡೆಲಿಂಗ್ ಪ್ರಪಂಚದಲ್ಲಿ ಆಸಕ್ತಿ ತಳೆದು, ಜಾಹೀರಾತು ಲೋಕದಲ್ಲೂ ಸಾಕಷ್ಟು ತನ್ನ ದಂತಪಂಕ್ತಿ, ನಗೆಮೊಗವನ್ನು ತೋರಿರುವ ಈ ಹುಡುಗಿ ಈಗ ಚಿತ್ರರಂದಲ್ಲಿ ಆ ಕಾಯಕ ಮುಂದುವರೆಸಿದ್ದಾಳೆ. 

ಅಂತರರಾಷ್ಟ್ರೀಯ ಪ್ರಖ್ಯಾತಿ ಪಡೆದರೂ ತಮ್ಮ ಕ್ರಿಯಾಶೀಲತೆಯ ಜೊತೆಗೆ ಸೌಜನ್ಯಕ್ಕೂ ಹೆಸರಾಗಿರುವ ಪ್ರಕಾಶ್ ಪಡುಕೋಣೆ ಅವರಂತೆ ದೀಪಿಕಾ ಕೂಡ ಸಾಮಾಜಿಕ ಜೀವನದಲ್ಲಿ ಸೌಜನ್ಯತೆ ಉಳಿಸಿಕೊಂಡಿರುವ ಲಕ್ಷಣಗಳನ್ನು  ಆಕೆಯ ನಗೆಮೊಗದ ಸಂಸ್ಕಾರದಲ್ಲಿ ತೋರುತ್ತಾಳೆ.

ಆಕೆಯ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಆಕೆ ಜೀವನದಲ್ಲಿ ಸಂತಸಗಳನ್ನು ನಿರಂತರವಾಗಿ ಕಾಣುವಂತಾಗಲಿ, ಚಿತ್ರರಂಗದ ಯಾವುದೇ ಕರಾಳತೆ ಆಕೆಯನ್ನು ಭಾದಿಸದಿರಲಿ,  ಆಕೆ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಹಾರೈಸೋಣ.

No comments:

Post a Comment