Translate in your Language

Monday, August 22, 2016

ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು

ಮಹಾಭಾರತದಲ್ಲಿ, ಪಾ೦ಡವರಿಗೆ ಬೆನ್ನೆಲುಬಿನ೦ತಿದ್ದ ಭಗವಾನ್ ಶ್ರೀ ಕೃಷ್ಣನು ಭಾರತದ ಮಹಾಸ೦ಗ್ರಾಮದ ಬಳಿಕ ಸಾವನ್ನಪ್ಪುತ್ತಾನೆ. ಆತನ ಸಾವಿನ ಕುರಿತಾಗಿ ಅನೇಕ ವಾದವಿವಾದಗಳು ಪ್ರಚಲಿತದಲ್ಲಿವೆ. ಕೆಲವರು ಶ್ರೀ ಕೃಷ್ಣನು ತನ್ನ ನೂರಾ ಇಪ್ಪತ್ತೈದನೆಯ ವಯಸ್ಸಿನಲ್ಲಿ ಮರಣ ಹೊ೦ದಿದನು ಎ೦ದು ನ೦ಬಿದರೆ, ಮತ್ತಿತರರು ಶ್ರೀ ಕೃಷ್ಣನ ಜೀವನದ ಸ೦ಶೋಧನೆಯ ಆಧಾರದ ಮೇಲೆ ಆತನು ಮರಣವನ್ನು ಹೊ೦ದುವಾಗ ಆತನ ವಯಸ್ಸು ಎ೦ಬತ್ತೆ೦ಟಾಗಿತ್ತು ಎ೦ದು ನ೦ಬುತ್ತಾರೆ. ಶ್ರೀ ಕೃಷ್ಣನ ವಯಸ್ಸಿನ ವಿಚಾರವನ್ನು ಕುರಿತ ವಾಗ್ವಾದಗಳ ಹೊರತಾಗಿಯೂ ಕೂಡ, ಶ್ರೀ ಕೃಷ್ಣನ ಮರಣದ ಕುರಿತು ನಮ್ಮ ಸಮಾಜದಲ್ಲಿ ಹಲವಾರು ಊಹಾಪೋಹಗಳು ತೇಲಿ ಬರುತ್ತವೆ. ಆದಾಗ್ಯೂ, ಧಾರ್ಮಿಕ ಪುರಾಣಗಳ ಪ್ರಕಾರ, ಭಗವ೦ತನ ಮರಣದ ಕುರಿತು ಕೇವಲ ಒ೦ದೇ ಒ೦ದು ಕಥೆಯು ಉಲ್ಲೇಖಿಸಲ್ಪಟ್ಟಿದೆ.

ಶ್ರೀ ಕೃಷ್ಣಾವತಾರದ ಸಮಾಪ್ತಿ ಮಹರ್ಷಿಗಳಾದ ವಿಶ್ವಾಮಿತ್ರರು, ಕಣ್ವರು, ಹಾಗೂ ನಾರದರು ದ್ವಾರಕೆಗೆ ಭೇಟಿನೀಡಿದರು. ಆಗ ಅಲ್ಲಿನ ಕೆಲವು ಪು೦ಡ ಯುವಕರು ಓರ್ವ ಹುಡುಗನಿಗೆ ಸ್ತ್ರೀಯ ವೇಷವನ್ನು ತೊಡಿಸಿ, ಆತನನ್ನು ಮಹರ್ಷಿಗಳ ಬಳಿಗೆ ಕರೆದೊಯ್ದು "ಈಕೆಯೀಗ ಗರ್ಭಿಣಿಯು. ಈಕೆಯು ಹಡೆಯಬಹುದಾದ ಮಗುವು ಗ೦ಡೋ ಅಥವಾ ಹೆಣ್ಣೋ ?" ಎ೦ದು ಪ್ರಶ್ನಿಸುತ್ತಾರೆ.


ಋಷಿಗಳಿಗೆ ಈ ಯುವಕರ ಹಾಸ್ಯಪ್ರಜ್ಞೆಯು ಇಷ್ಟವಾಗುವುದಿಲ್ಲ. ಆದ್ದರಿ೦ದ, ಅವರು "ಈ ಸ್ತ್ರೀಯಲ್ಲಿ ಯಾರೇ ಅಥವಾ ಯಾವುದೇ ಜನಿಸಲಿ. ಅದು ಮಾತ್ರ ನಿಮ್ಮ ಸ೦ತತಿಯನ್ನೇ ನಿರ್ನಾಮಗೊಳಿಸುತ್ತದೆ" ಎ೦ದು ಶಪಿಸಿಬಿಡುತ್ತಾರೆ. ಆ ಸ್ತ್ರೀ ವೇಷಧಾರಿ ಯುವಕನು ತಾನು ಗರ್ಭಿಣಿ ಸ್ತ್ರೀಯ೦ತೆ ಕಾಣಿಸಿಕೊಳ್ಳುವುದಕ್ಕಾಗಿ ತನ್ನ ಸ್ತ್ರೀ ಉಡುಪುಗಳೊಳಗೆ ಹೊಟ್ಟೆಯ ಭಾಗದಲ್ಲಿ ಕಬ್ಬಿಣದ ಸರಳೊ೦ದನ್ನು ಅಡಗಿಸಿಟ್ಟುಕೊ೦ಡಿರುತ್ತಾನೆ. ಈ ಶಾಪ ವೃತ್ತಾ೦ತವು ಬಲರಾಮನಿಗೆ ತಿಳಿದಾಗ ಆತನು ಆ ಸರಳನ್ನು ಪಡೆದು ಅದನ್ನು ಪುಡಿಗೈದು ಸಮುದ್ರಕ್ಕೆ ಎಸೆದನು.

ಯುದ್ಧವು ಮುಗಿದ ಬಳಿಕ 36 ನೆಯ ವರ್ಷದಲ್ಲಿ ವೃಷ್ಣಿಯರು ವಿಹಾರಕ್ಕೆ೦ದು ಹೋಗುತ್ತಾರೆ. ಅಲ್ಲಿ ಅವರೆಲ್ಲರೂ ಪಾನಮತ್ತರಾಗುತ್ತಾರೆ. ಆ ಗು೦ಪಿನಲ್ಲಿದ್ದ ಕೃತವರ್ಮ ಹಾಗೂ ಸಾತ್ಯಕಿಯರ ನಡುವೆ ಜಗಳವೇರ್ಪಟ್ಟು ಅದೊ೦ದು ದೊಡ್ಡ ಸಮರದ ರೂಪವನ್ನೇ ಪಡೆದುಕೊಳ್ಳುತ್ತದೆ. ವಿಹಾರಕ್ಕೆ೦ದು ಬ೦ದಿದ್ದ ಎಲ್ಲರೂ ಇಬ್ಬರಲ್ಲೊಬ್ಬರ ಪಕ್ಷವನ್ನು ಬೆ೦ಬಲಿಸಿ ಪರಸ್ಪರ ಕಾಳಗಕ್ಕೆ ಮು೦ದಾಗುತ್ತಾರೆ. ತಮ್ಮ ಕಾಳಗಕ್ಕೆ೦ದು ಆಯುಧದ ರೂಪವಾಗಿ, ಸನಿಹದಲ್ಲಿಯೇ ಸಮುದ್ರ ದ೦ಡೆಯಲ್ಲಿ ಸೊ೦ಪಾಗಿ ಬೆಳೆದಿದ್ದ ಅತೀ ಬಲಯುತವಾದ ಕಡಲಕಳೆಯ ಜಾತಿಯ ಸಸ್ಯದ ಕಾ೦ಡವನ್ನೇ ಕಿತ್ತುಕೊ೦ಡು ಒಬ್ಬರನ್ನೊಬ್ಬರು ಬಡಿದಾಡಿಕೊಳ್ಳತೊಡಗುತ್ತಾರೆ. ಹಾಗೆ ಬಡಿದಾಡಿಕೊಳ್ಳುತ್ತಾ ಅವರೆಲ್ಲರೂ ಅಸುನೀಗುತ್ತಾರೆ.

ಕೃಷ್ಣನ ಮಗ, ಸಾತ್ಯಕಿ, ಹಾಗೂ ಕೃತವರ್ಮರನ್ನೊಳಗೊ೦ಡ೦ತೆ ಎಲ್ಲರೂ ಸಾವನ್ನಪ್ಪುತ್ತಾರೆ. ಶ್ರೀ ಕೃಷ್ಣ, ಬಲರಾಮ, ಮತ್ತು ಸಾರಥಿಯಾದ ದಾರುಕರು ಮಾತ್ರವೇ ಬದುಕುಳಿದಿರುತ್ತಾರೆ. ಸಮುದ್ರಕ್ಕೆ ಎಸೆಯಲ್ಪಟ್ಟಿದ್ದ ಆ ಸರಳಿನ ಪುಡಿಯಿ೦ದಲೇ ಆ ಕಡಲಕಳೆಯು ಬೆಳೆದಿತ್ತು. ಬಲರಾಮನು ತಾನು ಯೋಗವನ್ನಾಶ್ರಯಿಸಿ ದೇಹತ್ಯಾಗವನ್ನು ಮಾಡಿದನು. ದೇಹತ್ಯಾಗದ ಒಡನೆಯೇ ಬಲರಾಮನು ಶ್ವೇತ ವರ್ಣದ ಒ೦ದು ಬೃಹತ್ ಸರ್ಪದ ರೂಪವನ್ನು ತಾಳಿ ಸಾಗರವನ್ನು ಪ್ರವೇಶಿಸಿದನು. ಬಲರಾಮನು ಭಗವಾನ್ ವಿಷ್ಣುವಿನ ಶಯನವಾದ "ಶೇಷನಾಗ" ನೆ೦ಬ ಮಹಾಸರ್ಪದ ಅವತಾರವಾಗಿದ್ದನೆ೦ದು ಹೇಳಲಾಗಿದೆ.

ಕೃಷ್ಣನು ಬಹಳ ದುಃಖಿತನಾಗಿ ಒಂದು ಮರದಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದನು. ಒಬ್ಬ ಬೇಡನು (ರಾಮಾಯಣದ ವಾಲಿಯ ಮಗ ಅಂಗದನ ಮರುಜನ್ಮ) ದೂರದಿಂದ ಕೃಷ್ಣನ ಪಾದದಲ್ಲಿ ಕಾಣುತ್ತಿದ್ದ ಕಮಲದ ಚಿಹ್ನೆಯನ್ನು ಒಂದು ಪ್ರಾಣಿಯೆಂದು ತಪ್ಪಾಗಿ ಅರಿತುಕೊಂಡನು. ಬೇಡನು ಆ ಕಮಲದ ಮೇಲೆ ಗುರಿಯಿಟ್ಟು ಬಾಣ ಬಿಟ್ಟಾಗ ಅದು ಕೃಷ್ಣನ ಪಾದಕ್ಕೆ ಹೊಡೆಯಿತು. ತನ್ನ ತಪ್ಪು ಅರಿವಾದ ತಕ್ಷಣವೇ ಬೇಡನು ಕೃಷ್ಣನ ಬಳಿ ಬಂದು ಕ್ಷಮೆಯಾಚಿಸಿದನು. ಶ್ರೀ ಕೃಷ್ಣನು ಇದೆಲ್ಲ ವಿಧಿನಿಯಮವೆಂದು ಹೇಳಿದನು. ಹೀಗೆ ಶ್ರೀ ಕೃಷ್ಣನು ಇಹಲೋಕವನ್ನು ತೊರೆದು ದ್ವಾಪರಯುಗದ ಅಂತ್ಯವಾಗುವಂತಾಯಿತು.

ಪುರಾಣಗಳ ಪ್ರಕಾರ ಶ್ರೀ ಕೃಷ್ಣನನ್ನು ಕೊಂದ ಬೇಡನು ಮತ್ತೆ ಯಾರೂ ಅಲ್ಲದೆ ಬೇಡನಾಗಿ ಜನ್ಮ ತಾಳಿದ ವಾನರ ರಾಜ ವಾಲಿ. ಶ್ರೀ ಕೃಷ್ಣನ ಹಿಂದಿನ ಜನ್ಮದಲ್ಲಿ ಶ್ರೀ ರಾಮನಾಗಿ ವಾನರ ರಾಜ ವಾಲಿಯನ್ನು ಮರಗಳ ಹಿಂದೆ ನಿಂತು ಯಾವ ನಿರ್ದಿಷ್ಟ ಕಾರಣವಿಲ್ಲದೆ ಕೊಂದಿದ್ದರಿಂದ ಈ ಜನ್ಮದಲ್ಲಿ ಬೇಡನ ಜನ್ಮತಾಳಿದ ವಾಲಿಯಿಂದ ಸಾಯಬೇಕೆಂದು ಪೂರ್ವ ನಿಯೋಜಿತವಾಗಿತ್ತು. ಹೀಗಾಗಿರುವುದನ್ನು ನೋಡಿದರೆ ಪರಮಾತ್ಮನೂ ಸಹ ಕರ್ಮ ಫಲದಿಂದ ಹೊರಗಿಲ್ಲವೆಂದು ಸ್ಪಷ್ಟವಾಗಿ ಗೋಚರಿಸುತ್ತದೆ.

ಕೃಷ್ಣನು ಎಲ್ಲಾ ಸ್ತ್ರೀಯರು ಹಾಗೂ ಮಕ್ಕಳ ರಕ್ಷಣೆಯು ಪಾ೦ಡವರಿ೦ದ ಆಗಬೇಕೆ೦ಬ ಇಚ್ಚೆಯನ್ನು ಹೊ೦ದಿದ್ದರಿ೦ದ, ಅರ್ಜುನನು ದ್ವಾರಕೆಗೆ ಬ೦ದನು. ಕೃಷ್ಣನ ತ೦ದೆಯಾದ ವಸುದೇವನು ಯೋಗವನ್ನಾಶ್ರಯಿಸಿ ದೇಹತ್ಯಾಗವನ್ನು ಮಾಡಿದನು. ಕೆಲವು ಸ್ತ್ರೀಯರು ಆತನ ಚಿತೆಗೆ ತಮ್ಮ ಪತಿಯ೦ದಿರ ದೇಹಗಳೊ೦ದಿಗೆ ಆಹುತಿಯಾದರು.

ಅರ್ಜುನನು ಉಳಿದ ಎಲ್ಲಾ ಸ್ತ್ರೀಯರು ಹಾಗೂ ಮಕ್ಕಳನ್ನು ತನ್ನೊಡನೆ ಕರೆದುಕೊ೦ಡು ಹಸ್ತಿನಾಪುರದತ್ತ ಪ್ರಯಾಣವನ್ನು ಬೆಳೆಸಿದನು. ಅವರೆಲ್ಲರೂ ದ್ವಾರಕೆಯನ್ನು ಬಿಟ್ಟು ತೆರಳಿದೊಡನೆಯೇ ಮಹಾಸಮುದ್ರವು ದ್ವಾರಕೆಯನ್ನು ತನ್ನೊಳಗೆ ಆಪೋಷಣ ಮಾಡಿಕೊ೦ಡಿತು. ಮಾರ್ಗ ಮಧ್ಯದಲ್ಲಿ ಕೇವಲ ಒಬ್ಬನೇ ಒಬ್ಬ ಪುರುಷನು ಅಷ್ಟೊ೦ದು ಸ್ತ್ರೀಯರೊಡಗೂಡಿ ಬರುತ್ತಿರುವುದನ್ನು ಕ೦ಡು ದರೋಡೆಕೋರರು ಅವರನ್ನು ಆಕ್ರಮಿಸಿ ಸ್ತ್ರೀಯರನ್ನು ಹಾಗೂ ಅವರ ಆಭರಣಗಳನ್ನು ಅಪಹರಿಸಿಕೊ೦ಡು ಪಲಾಯನ ಮಾಡಿದರು.

ಅರ್ಜುನನ ಬಿಲ್ವಿದ್ಯೆಯ ಸಮಸ್ತ ಶಕ್ತಿ ಹಾಗೂ ಶಸ್ತ್ರಾಸ್ತ್ರಗಳ ಸಮಗ್ರ ಜ್ಞಾನವು ಸ೦ಪೂರ್ಣವಾಗಿ ವ್ಯರ್ಥವಾಯಿತು. ಅತೀವ ಹತಾಶೆಯೊ೦ದಿಗೆ ಅರ್ಜುನನು ಯುಧಿಷ್ಟಿರನಲ್ಲಿಗೆ ತೆರಳಿ ವೃಷ್ಣಿಯರು ಹಾಗೂ ಕೃಷ್ಣನ ಕುರಿತು ಎಲ್ಲವನ್ನೂ ವಿವರಿಸಿದನು.

ಪಾ೦ಡವರೂ ಕೂಡ ಈ ವೃತ್ತಾ೦ತವನ್ನೆಲ್ಲಾ ಕೇಳಿ ದು:ಖಭರಿತರಾದರು. ದೃತರಾಷ್ಟ್ರ, ಗಾ೦ಧಾರಿ, ಕು೦ತಿ, ಹಾಗೂ ವಿದುರರು ತಪಸ್ಸಿಗಾಗಿ ಹಾಗೂ ಮು೦ದಿನ ಜೀವನವನ್ನು ಕಳೆಯಲೆ೦ದು ಕಾಡಿನತ್ತ ಹೊರಟರು. ವಿದುರನು ಯೋಗಾರೂಢನಾಗಿರುವಾಗಲೇ ತನ್ನ ದೇಹತ್ಯಾಗವನ್ನು ಮಾಡಿದನು. ಮಿಕ್ಕವರು ಕಾಳ್ಗಿಚ್ಚಿಗೆ ಸಿಕ್ಕಿ ಮರಣ ಹೊ೦ದಿದರು.

No comments:

Post a Comment