Translate in your Language

Tuesday, November 22, 2016

ಡಾ. ಬಾಲಮುರಳಿಕೃಷ್ಣ ಇನ್ನಿಲ್ಲ !!


ಕರ್ನಾಟಕ ಶಾಸ್ತ್ರೀಯ ಸಂಗೀತದ ಅದ್ವಿತೀಯ ಗಾಯಕ  ಡಾ. ಎಮ್.ಬಾಲಮುರಳಿಕೃಷ್ಣ ಅವರು ಈ ಸಂಜೆ ವಿಧಿವಶರಾದರು. ಅನಾರೋಗ್ಯದಿಂದ ಬಳಲುತಿದ್ದ ಅವರು ಚನ್ನೈನ ಆಸ್ಪತ್ರೆಯೊಂದರಲ್ಲಿ ತಮ್ಮ ಕೊನೆಯುಸಿರೆಳೆದರು


6-7-1930                                                  22-11-2016
ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ, ಕರ್ನಾಟಕ ಶೈಲಿಯ ಸಂಗೀತಗಾರರಲ್ಲಿ ಒಬ್ಬ ಅದ್ವಿತೀಯರು. ವಾಗ್ಗೇಯಕಾರರಾಗಿಯೂ ಅವರು ಹಲವಾರು ಕೃತಿ ರಚನೆಮಾಡಿದ್ದಾರೆ. ತೆಲುಗು, ತಮಿಳು, ಕನ್ನಡವಲ್ಲದೆ,ಹಲವಾರು ಭಾಷೆಗಳಲ್ಲಿ ಅವರು ಸಂಗೀತ ಕಚೇರಿಗಳನ್ನು ಕೊಟ್ಟಿದ್ದಾರೆ. ಅವರ ಕೊಡುಗೆ 4೦೦ ಕ್ಕೂ ಹೆಚ್ಚು. ಒಟ್ಟು ಇದುವರೆವಿಗೆ, ನಡೆಸಿದ ಸಂಗೀತ ಕಛೇರಿ ಗಳು-18,೦೦೦. ೨೫೦ ಕ್ಕಿಂತಲೂ ಹೆಚ್ಚು, 'ಮ್ಯೂಸಿಕ್ ಕ್ಯಾಸೆಟ್,' ಗಳನ್ನು ಬಿಡುಗಡೆಮಾಡಿದ್ದಾರೆ.



'ಡಾ.ಬಾಲಮುರಳಿ ಕೃಷ್ಣರಿಗೆ ಪ್ರಶಸ್ತಿದೊರೆತಾಗ'
'ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ', ರವರು ಜನಿಸಿದ್ದು, 6, ಜುಲೈ, 1930 ರಲ್ಲಿ. "ಸಂಕರ ಗುಪ್ತನ್," ಎಂಬ ಗ್ರಾಮದಲ್ಲಿ. ಇದು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ, 'ರೋಜುಲು,' ತಾಲ್ಲೂಕಿನಲ್ಲಿದೆ. ತಂದೆ-ತಾಯಿಯರು, ಅವರಿಗೆ ಪ್ರೀತಿಯಿಂದ ಇಟ್ಟ ಹೆಸರು, 'ಮುರಳಿ ಕೃಷ್ಣ'. ಆದರೆ, ಆ ಊರಿನ ಪ್ರಸಿದ್ಧ 'ಹರಿಕಥಾ ವಿದ್ವಾನ್ ಶ್ರೀ. ಸತ್ಯನಾರಾಯಣರು', ಅವನ ಹೆಸರಿನ ಮೊದಲಿಗೆ 'ಬಾಲ' ಎಂಬ ಪದವನ್ನು ಸೇರಿಸಿದರು.

ಮನೆಯಲ್ಲಿ ಸಂಗೀತಮಯ ವಾತಾವರಣ. ತಂದೆ, 'ಪಟ್ಟಾಭಿರಾಮಯ್ಯ', ಕೊಳಲು, ವೀಣೆ ಪಿಟೀಲು ವಾದಕ. ತಾಯಿ, 'ಸೂರ್ಯಕಾಂತಮ್ಮ' ನವರು, ಶ್ರೇಷ್ಠ ವೀಣಾವಾದಕಿ. ತಮ್ಮ ೧೫ ನೆಯ ವಯಸ್ಸಿನಲ್ಲಿಯೇ, ಬಾಲಮುರಳಿಯವರ ತಾಯಿಯವರು ಮೃತಪಟ್ಟರು. ಬಾಲಮುರಳಿಯವರ ಸೋದರತ್ತೆಯವರು ಅವರನ್ನು ವಿಜಯವಾಡಕ್ಕೆ ಕರೆದುಕೊಂಡು ಹೋಗಿ, ತಮ್ಮ ಮನೆಯಲ್ಲಿ ಸಾಕಿ-ಸಲಹಿದರು.

ಬಾಲ್ಯದಿಂದ ತಂದೆಯೇ ಅವರಿಗೆ ಗುರುಗಳು. ತಂದೆಯವರ ಸಂಗೀತಾಸಕ್ತಿ, ಹಾಗೂ ಅದರ ಪ್ರಭಾವ ಸಹಜವಾಗಿ ಮಗನಮೇಲೂ ಆಗಿತ್ತು. ಸಂಗೀತಾಭಿರುಚಿಯ ಉತ್ತುಂಗದಲ್ಲಿದ್ದ ಮಗನನ್ನು ಅವರು 'ಸುಸರ್ಲ ದಕ್ಷಿಣಾಮೂರ್ತಿ' ಗಳ ಬಳಿ ಶಿಕ್ಷಣ ಕೊಡಿಸಲು ಕರೆದುಕೊಂಡು ಹೋದರು. ಕೆಲವೇ ವರ್ಷಗಳಲ್ಲಿ ಅವರು 27 ಬಗೆಯ ರಾಗಗಳನ್ನು ಹೆಣೆದರು. 1960 ರಲ್ಲೇ, ವಿಜಯವಾಡ ರೇಡಿಯೋ ಕೇಂದ್ರದ, ಬೆಳಗಿನ ಕಾರ್ಯಕ್ರಮದಲ್ಲಿ 'ಭಕ್ತಿರಂಜಿನಿ,' ಎಂಬ 'ಗೀತಮಾಲೆ'ಯನ್ನು ಪ್ರಾರಂಭಿಸಿ, ಅತ್ಯಂತ ಜನಪ್ರಿಯರಾದರು.


ಸಂಗೀತದಲ್ಲಿ ಪ್ರಯೋಗಶೀಲತೆ, ಅವರ ಪ್ರಮುಖ-ಹವ್ಯಾಸಗಳಲ್ಲೊಂದು

ಸಂಗೀತ ವಿದ್ವಾನ್, ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ, ಕರ್ನಾಟಕ ಸಂಗೀತ ಶೈಲಿಯ ಮೇರುಗಾಯಕ. ರಾಗ, ತಾಳ, ಗಾನ, ಪಲ್ಲವಿಯ ಹೊಸ ಪ್ರಯೋಗಗಳ ಹರಿಕಾರ. ಭಾರತದೇಶ ಕಂಡ ಮಹಾನ್ ವಾಗ್ಗೇಯಕಾರ. ಬಾಲಮುರಳಿಯವರು, ದೇಶ-ವಿದೇಶಗಳಲ್ಲಿ ಸಾಕಷ್ಟು ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲೆಯಾಳಂ ಚಲನ-ಚಿತ್ರಗಳಲ್ಲಿ ಹಾಡಿ, ಕಂಠದಾನ ಮಾಡಿದ್ದಾರೆ.

 6ನೇ ವರ್ಷದಿಂದ ಈವರೆಗೆ ಜಗತ್ತಿನಾದ್ಯಂತ 25 ಸಾವಿರಕ್ಕೂ ಹೆಚ್ಚು ಕಛೇರಿ ನೀಡಿದ್ದಾರೆ.

ಕನ್ನಡ ಚಿತ್ರಗಳಾದ, ಸಂಧ್ಯಾರಾಗ, ಹಂಸಗೀತೆ, ಸುಬ್ಬಾಶಾಸ್ತ್ರಿ, ಗಾನಯೋಗಿ ರಾಮಣ್ಣ, ಶ್ರೀ ಪುರಂದರದಾಸರು, ಅಮ್ಮ, ಚಿನ್ನಾರಿ ಮುತ್ತಣ್ಣ, ಮುತ್ತಿನಹಾರ -ಹೀಗೆ ಹಲವಾರು ಹಾಡುಗಳು, ಕೀರ್ತನೆಗಳು, ದೇವರನಾಮಗಳನ್ನು ಹಾಡಿದ್ದಾರೆ. ಅವರು 1938 ರಲ್ಲಿ ನಡೆದ, "ಸದ್ಗುರು ಆರಾಧನಾ ಮಹೋತ್ಸವ," ದಲ್ಲಿ ತಮ್ಮ ಚೊಚ್ಚಲ ಸಂಗೀತ ಕಛೇರಿ ಕೊಟ್ಟರು. ಆಗ ಅವರಿಗೆ ಕೇವಲ ೮ ವರ್ಷ ವಯಸ್ಸು.

ಬಾಲಮುರಳಿಕೃಷ್ಣರವರ, ಹವ್ಯಾಸಗಳು
ಹಾಡುಗಾರಿಕೆಯಲ್ಲದೆ, ಪಿಟೀಲು ನುಡಿಸುವ ಖಯಾಲಿದೆ. ಖಂಜಿರ, ಮೃದಂಗ, ಕೊಳಲು ಬಾರಿಸುವುದು ಇಷ್ಟ. ವಿಜಯವಾಡ ದಲ್ಲಿ, Government Music College ನ, ಪ್ರಥಮ ಪ್ರಾಂಶುಪಾಲರಾಗಿ ಸೇವೆಸಲ್ಲಿಸುತ್ತಿದ್ದಾರೆ. , ವಿಜಯವಾಡ , ಹೈದರಾಬಾದು ಮತ್ತು ಮದರಾಸು ಆಕಾಶವಾಣಿ ಕೇಂದ್ರಗಳಲ್ಲಿ ಸಂಗೀತ ನಿರ್ಮಾಪಕರಾಗಿಸೇವೆ ಸಲ್ಲಿಸಿದ್ದಾರೆ.

ಅಭಿನಯ ಅವರಿಗೆ ಹೆಚ್ಚಾಗಿ ಗೊತ್ತಿಲ್ಲದಿರಬಹುದು, ಆದರೆ ಅವರೊಬ್ಬ ವಾಗ್ಗೇಯಕಾರರು, ಕವಿ, ಹೊಸತನ್ನೇ ಅರಸುತ್ತಾ ಸಂಶೋಧನೆಮಾಡುವ ಆಸೆ. 'ಸ್ವಿಟ್ ಝರ್ ಲ್ಯಾಂಡ್' ನಲ್ಲಿ, 'Academy of Performing arts & Research', ಸಂಸ್ಥೆ ಸ್ಥಾಪಿಸಿದ್ದಾರೆ. ಕಲೆ ಸಂಸ್ಕೃತಿಯ ಅಬಿವೃದ್ಧಿಗಾಗಿ ಮದರಾಸಿನಲ್ಲಿ "MBK" ಟ್ರಸ್ಟ್ ನ, ನೃತ್ಯ ಮತ್ತು ಸಂಗೀತಶಾಲೆ "ವಿಪಂಚಿ" ಆರಂಭಿಸಿದರು. 'ಸಂಧ್ಯಾ ಕೆಂದಿನ ಸಿಂಧೂರಂ,' ಮಲೆಯಾಳಂ ಚಿತ್ರದ ಪ್ರಮುಖ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅವರ ಕಂಠಸಿರಿಗೆ ಒಲಿದು ಬಂದ ಪ್ರಶಸ್ತಿಗಳು :
ಗೌರವ ಪಿ. ಎಚ್. ಡಿ ; ಡಿ. ಎಸ್. ಸಿ ; ಡಿ. ಲಿಟ್, ಆಂಧ್ರ ಪ್ರದೇಶ, ವಿಶ್ವವಿದ್ಯಾಲಯದಿಂದ.
1978 ರಲ್ಲಿ 'ಸಂಗೀತ ಕಲಾನಿಧಿ ಪ್ರಶಸ್ತಿ'
1992 ರಲ್ಲಿ 'ವಿಸ್ಡಮ್ ಮ್ಯಾನ್ ಆಫ್ ದ ಯಿಯರ್, ಪ್ರಶಸ್ತಿ'.
1996 ರಲ್ಲಿ 'ನಾದಬ್ರಹ್ಮ-ನೃತ್ಯಾಲಯ, ಹಾಗೂ ಈಸ್ತೆಟಿಕ್ ಸಂಘದ ಪ್ರಶಸ್ತಿ'.
ಪದ್ಮಭೂಷಣ ಪ್ರಶಸ್ತಿ
ಪದ್ಮವಿಭೂಷಣ ಪ್ರಶಸ್ತಿ
ಅತ್ಯುತ್ತಮ ಹಿನ್ನೆಲೆಗಾಯಕ ಪ್ರಶಸ್ತಿ, "ಹಂಸಗೀತೆ," ಕನ್ನಡ ಚಲನ ಚಿತ್ರಕ್ಕೆ.
"ಮಧ್ವಾಚಾರ್ಯ," ಚಿತ್ರಕ್ಕೆ 'ಉತ್ತಮ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ' ಸೇರಿವೆ.
ತಿರುಪತಿ ತಿರುಮಲದೇವಸ್ಥಾನ, ಶೃಂಗೇರಿ ಪೀಠ, ಮತ್ತು ನಂಜನಲ್ಲೂರಿನ ಆಂಜನೇಯಸ್ವಾಮಿ ದೇವಸ್ಥಾನದ ಆಸ್ಥಾನ ವಿದ್ವಾನ್ ಪಟ್ಟಕ್ಕೆ ಪಾತ್ರರಾಗಿದ್ದಾರೆ.
2000-2001 ಕಾಳಿದಾಸ ಸಮ್ಮಾನ್ ಪ್ರಶಸ್ತಿ.

No comments:

Post a Comment