Translate in your Language

Monday, February 20, 2017

ಟಿ.ಎನ್.ಸೀತಾರಾಮ್ ನಿರ್ದೇಶನದ ಸಸ್ಪೆನ್ಸ್ ಚಿತ್ರ `ಕಾಫಿ ತೋಟ'

ಕಿರುತೆರೆಯಲ್ಲಿ ನಿರ್ದೇಶಕ, ನಿರ್ಮಾಪಕ ಹಾಗೂ ಕಲಾವಿದರಾಗಿ ಮನೆಮಾತಾಗಿರುವ ಟಿ.ಎನ್.ಸೀತಾರಾಮ್ ಅವರು ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಮತದಾನ, ಮೀರಾ ಮಾಧವ, ರಾಘವ ಚಿತ್ರಗಳ ನಂತರ ಕಿರುತೆರೆಯಲ್ಲಿ ಬ್ಯೂಸಿಯಾಗಿದ್ದ ಟಿಎನ್‍ಎಸ್ ಈಗ ಮತ್ತೊಂದು ಸಸ್ಪೆನ್ಸ್ ಕಥಾನಕವನ್ನು ಹೊತ್ತು ಹಿರಿತೆರೆಗೆ ಬರುತ್ತಿದ್ದಾರೆ. ಟಿಎನ್‍ಎಸ್ ಅವರ ನಿರ್ದೇಶನದ ಮೂರನೇ ಸಿನಿಮಾ ಕಾಫಿ ತೋಟ ಕಳೆದ ಶುಕ್ರವಾರ ಅದ್ದೂರಿಯಾಗಿ ಸೆಟ್ಟೇರಿದೆ. ಒಬ್ಬ ಲಾಯರ್, ಇನ್ನೊಬ್ಬ ಕಾಫಿ ಎಸ್ಟೇಟ್ ಮಾಲೀಕ, ಅವನ ಮಗಳು ಹೀಗೆ ಒಂದು ತ್ರಿಕೋನ ಪ್ರೇಮಕಥೆಯಂತೆ ಭಾಸವಾಗುವ ಅಂಶಗಳನ್ನು ಸೇರಿಸಿ ಟಿಎನ್‍ಎಸ್ ಕಾಫಿ ತೋಟ ಎಂಬ ಚಿತ್ರವನ್ನು ತೆರೆಮೇಲೆ ತರುತ್ತಿದ್ದಾರೆ. ದಿನಾ ಬೆಳಿಗ್ಗೆ ಎಲ್ಲರೂ ಕುಡಿಯುವ ಕಾಫಿ ತುಂಬ ಇಷ್ಟದ ಸಂಗತಿ. ಅದರ ಪರಿಮಳವೇ ಆಹ್ಲಾದಕರವಾದದ್ದು. ಎಲ್ಲರಿಗೂ ಅದು ತುಂಬ ಪರಿಚಿತವಾಗಿರುತ್ತದೆ.


ಆದರೂ ಅದರ ಹಿಂದೆ ಗೊತ್ತಿರದ ಹಲವಾರು ಕುತೂಹಲಕರ ಸಂಗತಿ ಗಳಿರುತ್ತವೆ. ಈ ಸಿನಿಮಾದ ಕಥೆ ಕೂಡ ಕಾಫಿಯ ಪರಿಮಳದ ಥರ. ಮೇಲ್ನೋಟಕ್ಕೆ ಒಂಥರಾ ಸುಗಂಧ ಪರಿಮಳ ಬೀರುತ್ತಿದ್ದರೆ, ಹುಡುಕುತ್ತಾ ಹೋದರೆ ಬೇರೇನೋ ಸಿಗುತ್ತದೆ ಎನ್ನುವುದು ಟಿ.ಎನ್.ಸೀತಾರಾಮ್ ಅವರು ತಮ್ಮ ಸಿನಿಮಾದ ಶೀರ್ಷಿಕೆ ಬಗ್ಗೆ ಕೊಡುವ ಸ್ಪಷ್ಟನೆ.

ಇನ್ನು ಕಾಫಿ ತೋಟ ಚಿತ್ರದಲ್ಲಿ ಬಿ.ಸಿ.ಪಾಟೀಲ್, ರಾಧಿಕಾ ಚೇತನ್, ಸಂಯುಕ್ತಾ ಹೊರನಾಡು, ರಘು ಮುಖರ್ಜಿ, ಅಚ್ಯುತ್ ಕುಮಾರ್, ರಾಹುಲ್ ಮಾಧವ್ ಮೊದಲಾದ ಕಲಾವಿದರ ತಾರಾಗಣವಿದೆ. ಚಿತ್ರದಲ್ಲಿ ನಟ ರಘು ಮುಖರ್ಜಿ ಒಬ್ಬ ಜ್ಯೂನಿಯರ್ ಲಾಯರ್ ಆಗಿಯೂ, ಅಚ್ಯುತ್‍ಕುಮಾರ್ ಒಬ್ಬ ಸೀನಿಯರ್ ಲಾಯರ್ ಆಗಿಯೂ ಕಾಣಿಸಿಕೊಳ್ಳಲ್ಲಿದ್ದಾರೆ . ಮನ್ವಂತರ ಚಿತ್ರ ಎಂಬ ಹೊಸ ಬ್ಯಾನರ್ ಹುಟ್ಟುಹಾಕಿರುವ ಟಿ.ಎನ್.ಎಸ್. ಅವರು ಸುಮಾರು 20 ಜನರ ಪಾಲುದಾರಿಕೆಯಲ್ಲಿ ಈ ಸಂಸ್ಥೆಯನ್ನು ಆರಂಭಿಸಿದ್ದಾರೆ. ಮುಂದೆ ಇದೇ ಬ್ಯಾನರ್‍ನಡಿ ಇನ್ನಷ್ಟು ಹೊಸ ರೀತಿಯ ಪ್ರಯೋಗಾತ್ಮಕ ಸಿನಿಮಾಗಳನ್ನು ನಿರ್ಮಿಸುವ ಯೋಜನೆ ಯನ್ನು ಟಿಎನ್‍ಎಸ್ ಮತ್ತವರ ತಂಡ ಹಾಕಿಕೊಂಡಿದೆ. ಅಶೋಕ್ ಕಶ್ಯಪ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ. ಯೋಗರಾಜ್‍ಭಟ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯ, ಮುಕುಂದನ್ ಅವರ ಸಂಗೀತ ಸಂಯೋಜನೆ ಕಾಫಿ ತೋಟ ಚಿತ್ರದಲ್ಲಿದೆ. ಈ ಸಮಾರಂಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದಂತಹ ಸಾ.ರಾ.ಗೋವಿಂದು, ಅಕಾಡೆಮಿ ಅಧ್ಯಕ್ಷರಾದ ಸಿಂಗ್ ಬಾಬು ಹಾಜರಿದ್ದು, ಚಿತ್ರದ ಮೋಷನ್ ಪಿಕ್ಚರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭವನ್ನು ಕೋರಿದರು.
(ಸಂಗ್ರಹ)

No comments:

Post a Comment