Translate in your Language

Saturday, June 10, 2017

ಬ್ಯಾಡ್ಮಿಂಟನ್ ಸಾಧಕ ಪ್ರಕಾಶ್ ಪಡುಕೋಣೆ ಅವರ 63ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಭಾರತದ ಶ್ರೇಷ್ಠ ಕ್ರೀಡಾಪಟುಗಳ ಸಾಲಿನಲ್ಲಿ ಅತ್ಯಂತ ಪ್ರಮುಖ ಹೆಸರು ನಮ್ಮ ಕರ್ನಾಟಕದವರೇ ಆದ ಪ್ರಕಾಶ್ ಪಡುಕೋಣೆ. ಅವರು ಹುಟ್ಟಿದ್ದು ಜೂನ್ 10, 1955ರಲ್ಲಿ. ಆರು ವರ್ಷದ ಹುಡುಗನಾಗಿದ್ದಾಗಲೇ ಆಡಲು ಪ್ರಾರಂಭಿಸಿದ ಪ್ರಕಾಶ್ ತನ್ನ ಏಳನೇ ವಯಸ್ಸಿನಲ್ಲೇ ಕರ್ನಾಟಕ ಕಿರಿಯರ ಬ್ಯಾಡ್ಮಿಂಟನ್ ಚಾಂಪಿಯನ್. 1971ರ ವೇಳೆಗೆ ತಮ್ಮ ಆಟದಲ್ಲಿ ತೀವ್ರ ಬಿರುಸು ಮತ್ತು ಚಾಣಾಕ್ಷತೆಯನ್ನು ಬೆಳೆಸಿಕೊಂಡ ಪ್ರಕಾಶ್ ಒಂದೇ ವರ್ಷದಲ್ಲಿ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಮತ್ತು ಸೀನಿಯರ್ ಚಾಂಪಿಯನ್ ಎರಡೂ ಆದರು. ಮುಂದೆ ಏಳು ವರ್ಷಗಳ ಕಾಲ ಪ್ರಕಾಶ್ ಪಡುಕೋಣೆ ಅವರೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್.
ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ 1978ರ ವರ್ಷದಲ್ಲಿ ಕೆನಾಡದಲ್ಲಿ ನಡೆದ ಕಾಮನ್ ವೆಲ್ತ್ ಸ್ಪರ್ಧೆಗಳಲ್ಲಿ ಜಯಗಳಿಸಿದ ಪ್ರಕಾಶ್ ಪಡುಕೋಣೆ, 1979ರಲ್ಲಿ ಲಂಡನ್ನಿನ ಈವನಿಂಗ್ ಆಫ್ ರಾಯಲ್ ಚಾಂಪಿಯನ್ಸ್, 1980ರಲ್ಲಿ ಸ್ವೀಡಿಶ್ ಚಾಂಪಿಯನ್ ಮತ್ತು ಇವುಗಳಿಗೆಲ್ಲಾ ಕಳಶ ಪ್ರಾಯದಂತೆ ಬ್ಯಾಡ್ಮಿಂಟನ್ ಕ್ರೀಡೆಯ ಶ್ರೇಷ್ಠತೆಯ ಕುರುಹೆಂದು ಪರಿಗಣಿತವಾಗಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದು ಈ ಆಟದಲ್ಲಿ ತಮ್ಮ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತೋರಿದರು. ಇಂಥಹ ಶ್ರೇಷ್ಠ ಸ್ಪರ್ಧೆಗಳಲ್ಲಿ ಗೆದ್ದ ಪ್ರಥಮ ಭಾರತೀಯರೆಂಬುದು ಪ್ರಕಾಶ್ ಅವರಿಗೂ ನಮ್ಮ ಕನ್ನಡ ನಾಡಿಗೂ ಸಂದಿರುವ ಶ್ರೇಷ್ಠ ಗರಿಮೆಯಾಗಿದೆ.

ಮುಂದೆ ಭಾರತದ ಬ್ಯಾಡ್ಮಿಂಟನ್ ಕ್ರೀಡೆಯ ತರಬೇತುದಾರರಾಗಿ ಕೆಲಸ ಮಾಡುವುದರ ಜೊತೆಗೆ ಗೀತ್ ಸೇತಿ ಅವರ ಜೊತೆಗೂಡಿ ಒಲಿಂಪಿಕ್ ಗೋಲ್ದ್ ಕ್ವೆಸ್ಟ್ ಎಂಬ ಕ್ರೀಡಾ ಪ್ರತಿಷ್ಠಾನವನ್ನು ಕೂಡಾ ಹುಟ್ಟುಹಾಕಿದ್ದಾರೆ.
ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳಿಂದ ಸಂಮಾನಿತರಾಗಿರುವ ಪ್ರಕಾಶ್ ಪಡುಕೋಣೆ ಈ ಹಿರಿಮೆಗಳ ಪರಿಧಿಯಾಚೆಗೆ ಸಾರ್ವಜನಿಕವಾಗಿ ಸಜ್ಜನನೆಂದು ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿದ್ದಾರೆ. ಅಂದಿನ ದಿನಗಳಲ್ಲಿ ಡೆನ್ಮಾರ್ಕ್ ದೇಶದಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದ ಪ್ರಕಾಶ್ ಪಡುಕೋಣೆ ಮಾರ್ಟಿನ್ ಫ್ರಾಸ್ಟ್ ಅಂತಹ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಗೆಳೆಯ ಕೂಡಾ.
ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಮತ್ತು ಜಾಹಿರಾತು ಮಾಡೆಲ್ ಆಗಿ ಜನಪ್ರಿಯರಾಗಿರುವ ದೀಪಿಕಾ ಪಡುಕೋಣೆ ಪ್ರಕಾಶ್ ಪಡುಕೋಣೆ ಅವರ ಪುತ್ರಿ. ಇವರು ತಮ್ಮ ಪತ್ನಿ ಉಜ್ಜಾಲ ಮತ್ತು ಮತ್ತೊಬ್ಬ ಪುತ್ರಿ ಅನಿಶಾ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಭಾರತಕ್ಕೆ ಕ್ರೀಡೆಯಲ್ಲಿ ಕೀರ್ತಿತಂದ ಈ ಮಹನೀಯರಿಗೆ ಹುಟ್ಟು ಹಬ್ಬದ ಆತ್ಮೀಯ ಶುಭ ಹಾರೈಕೆಗಳು.
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)

No comments:

Post a Comment