Translate in your Language

Monday, April 23, 2018

ಬೀchi (ರಾಯಸಂ ಭೀಮಸೇನ ರಾವ್)


ಬೀchi  ಯವರ 105ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !!
ಬೀchi (ರಾಯಸಂ ಭೀಮಸೇನ ರಾವ್
(Born: ಏಪ್ರಿಲ್ 23, 1913 - Died: ಡಿಸೆಂಬರ್ 7, 1980) 
ಬೀchi ಅಂದರೆ ವೈಶಿಷ್ಟ್ಯಪೂರ್ಣ ಹಾಸ್ಯ ಬರಹಗಳಿಗೆ ಮತ್ತೊಂದು ಹೆಸರು.

ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ".
                    (- ಅಂದನಾ ತಿಂಮ)

ಬರಹಗಾರನ ವೈಯಕ್ತಿಕ ಪ್ರತಿಭೆ ಜಡ ಅನುಕರಣೆಯ ಮರಳಿನಲ್ಲಿ ಇಂಗಿ ಹೋಗಬಾರದು. ಇದು ಬೀchi ದೃಷ್ಟಿಕೋನ. ಈ ದೃಷ್ಟಿಯನ್ನು ಕಂಡೇ ಇರಬೇಕು ತುಂಬ ಗಂಭೀರ ಬರಹಗಾರರಾದ ಶಂ.ಬಾ. ಜೋಶಿ ಯವರು ಬೀchiಯವರನ್ನು “ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ” ಎಂದು ವರ್ಣಿಸಿದ್ದಾರೆ. ಬೀchi ಕನ್ನಡ ಸಾಹಿತ್ಯಕ್ಕೊಂದು ಸೊಗಸು ಮೂಡಿಸಿದವರು.

ಜೀವನ
ಮಾಧ್ವ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಬೀಚಿ, ಆರ್ ಶ್ರೀನಿವಾಸರಾಯರು ಮತ್ತು ಭಾರತಮ್ಮ ದಂಪತಿಗಳಿಗೆ 1913ರಲ್ಲಿ 2ನೆಯ ಮಗನಾಗಿ ಜನಿಸಿದರು. ಬೀಚಿ ಒಂಬತ್ತು ವರ್ಷದವರಿದ್ದಾಗ ತಾಯಿ ತೀರಿಕೊಂಡರು.

ಅವರ ಜೀವನ ಚರಿತ್ರೆಯ ಒಂದು ಪುಟ ಅವರೇ ಬರೆದ ಬೀchi ಲೈಫೋಗ್ರಫಿ ಯಲ್ಲಿದೆ.
ಹುಟ್ಟಿದ ತಾರೀಖು : ಏಪ್ರಿಲ್ 23, 1913
ಶಿಕ್ಷಣ  : ಎಸ್ ಎಸ್ ಎಲ್ ಸಿ ಪಾಸು 1930
ನೌಕರಿಗೆ ಸೇರಿದ್ದು : ಪೊಲೀಸ್ ಖಾತೆಯಲ್ಲಿ ಅಟೆಂಡರ್ 1931
ಪ್ರಥಮ ಲೇಖನ ಮುದ್ರಣ : ಪ್ರಜಾಮತ (ಮದ್ರಾಸ್) 1933
ಮದುವೆ: ಜಮಖಂಡಿ ಶ್ರೀನಿವಾಸಾಚಾರ್ಯರ ಮಗಳು ಸೌ. ಸೀತಾಬಾಯಿ ಅವರೊಡನೆ. 1933 (ಶ್ರಾವಣ)
ಪ್ರಥಮ ಸಂತಾನ : 1940
ಪ್ರಥಮ ಪುಸ್ತಕ ಪ್ರಕಟಣೆ : 1946
ಕೆಲಸದಲ್ಲಿ ಬಡತಿ: ಸೂಪರಿಂಟೆಂಡೆಂಟ್, ಸ್ಪೆಷಲ್ ಬ್ರಾಂಚ್ ಸಿ.ಐ.ಡಿ ಬೆಂಗಳೂರು (ರಾಜ್ಯದಲ್ಲಿ ಈ ತರಹದ ಹುದ್ದೆ ಇದೊಂದೇ)
ಪಿಂಚಣಿ : 1968, ಪಿಂಚಣಿ ಹಣ : ರೂ. 133

ವಿಶೇಷ ಉಲ್ಲೇಖನೀಯ ಸಂಗತಿಗಳು
ಬೀchi ಹರಪನಹಳ್ಳಿಯ ಹುರುಪಿನ ಜೀವ. ಅವರೇ ತಮ್ಮ ಬಾಲ್ಯದ ಬಗೆಗೂ ಹೇಳಿಕೊಂಡಿದ್ದಾರೆ.
ಪರಾವಲಂಬಿಯ ಜೀವಿ ನಾನಲ್ಲ. ಹುಟ್ಟುತ್ತಲೇ ತಂದೆ, ತಾಯಿ ಇಲ್ಲ. ಬಡವರಾದ ಸೋದರತ್ತೆ ಅವರು ಉಳಿದ ತಂಗಳ ಹಾಕಿ ಸಾಕಿದರು.... ಎಸ್ಸೆಸ್ಸೆಲ್ಸಿ ಮುಗಿಸುವುದೇ ಒಂದು ಪ್ರಯಾಸವಾಯಿತು. ಶಾಲೆಗೆ ಫೀಜು ಕಟ್ಟುವುದಕ್ಕೆ ಗತಿಯಿಲ್ಲದೆ ಅಲ್ಲಿಗೆ ಮುಗಿಯಿತು ವಿದ್ಯಾಭ್ಯಾಸದ ಕತೆ”.

ಅವರಿಗೆ ಬಾಲ್ಯದಲ್ಲಿ ಅಕ್ಷರಾಭ್ಯಾಸವಾದದ್ದು ತೆಲುಗಿನಲ್ಲಿ. ಸೋದರಮಾವ ವೃತ್ತಿಯಲ್ಲಿ ಅರ್ಚಕರು.
ಅವರ ಮನೆಯಲ್ಲಿ ‘ಮೇಲುಕರಟದ ತುರಿಯಿಂದ ಬೆಳೆದವನು’ ಎಂದು ಬೀchi ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಅವರು ಕನ್ನಡ ಕಲಿತದ್ದೇ ಎಸ್.ಎಸ್.ಎಲ್.ಸಿ ವೇಳೆಗೆ (ಅಥವಾ ಆಗಲೂ ಅಲ್ಲ. I learnt Kannada after I became an author – ಇದು ಅವರದೇ ಮಾತು). ಬೀಚಿ ಅವರದ್ದು ಪೋಲೀಸ್ ಇಲಾಖೆಯಲ್ಲಿ ಅಖಂಡವಾಗಿ ಮೂವತ್ತೆರಡು ವರ್ಷ ಸೇವೆ. ಬಹುಶಃ ಇವರ ಹುಡುಕುಗಣ್ಣು, ಚುಚ್ಚು ಮಾತು, ಝಾಡಿಸುವ ಮನೋಧರ್ಮ ಇವೆಲ್ಲ ಬಹುಮಟ್ಟಿಗೆ ಆ ಡಿಪಾರ್ಟ್ ಮೆಂಟಿನ ಪ್ರಸಾದ ಎನಿಸುತ್ತದೆ. ಇದನ್ನು ಮನಸ್ಸಿನಲ್ಲಿ ಇರಿಸಿಕೊಂಡೇ ಎಂ.ಎನ್. ವ್ಯಾಸರಾವ್ ಬೀಚಿಯವರನ್ನು ಕುರಿತ ಒಂದು ಪದ್ಯದಲ್ಲಿ:
ಕಾಲಮಾನಗಳನಾಚೆ ನೂಕಿ
ಸವೆದು ಸತ್ತವುಗಳ ಬೆದಕಿ ಕೆದಕಿ
ಸದಾ ತನಿಖೆಯಲ್ಲಿರುವ ಮನಸು

ಭೀಮಸೇನ ಬೀಚಿಯಾದದ್ದು
“ಬೀchi” ಕನ್ನಡ-ಹೂಣ ಲಿಪಿಗಳ ಎರಡು ತಲೆ ಕರುವಿನಂತೆ ವಿಚಿತ್ರವಾಗಿ ಕಾಣುವ ಈ ಹೆಸರು ನಿಜವಾಗಿ ಅಚ್ಚಕನ್ನಡದ ‘ಬೀಚಿ’ಯೇ. ಅವರ ನಿಜವಾದ ಹೆಸರು ಹೆದರಿಕೆ ಹುಟ್ಟಿಸುವಂತ ಬಲಶಾಲಿಯಾದ ಹೆಸರೇ. ರಾಯಸಂ ಭೀಮಸೇನರಾವ್. ಈ ಬಗ್ಗೆ ಅವರೇ ವಿವರಣೆ ನೀಡಿದ್ದಾರೆ.

“ಪಾರ್ಥಸಾರಥಿ ಪಾಚು ಆಗುತ್ತಾನೆ. ನಾರಾಯಣ ನಾಣಿ. ಅಂತೆಯೇ ಭೀಮಸೇನ ಬೀಚಿಯಾದ ಅವರಿವರ ಬಾಯಲ್ಲಿ, ಹಾಗಾದುದೇ ಒಳಿತಾಯಿತು. ಸದಾ ಕರುಳಿನ ಬೇನೆಯಿಂದ ನರಳುವ ಈ ಹೊಟ್ಟೆರೋಗಿ ‘ಭೀಮಸೇನ’ ಹೇಗಾದಾನು?” ಹೀಗಾಗಿ ಈ ‘ಕಾಚಿಕಡ್ಡಿ ಪೈಲುವಾನ’ ಅವರ ಅಮ್ಮನ ಮುದ್ದಿನ ನುಡಿಗತ್ತರಿಗೆ ಸಿಲುಕಿ ‘ಬೀಚಿ’ಯಾದ.

ಅಪ್ರತಿಮ ವ್ಯಂಗ್ಯ ಶೈಲಿ
ಬೀchi ಪ್ರಸಿದ್ಧ ಇಂಗ್ಲಿಷ್ ಕಾದಂಬರಿಗಳ ನಗೆತುಣುಕುಗಳ ಸಾಮಗ್ರಿಯನ್ನು ಕನ್ನಡಕ್ಕೆ ಇಳಿಸಿದ್ದಾರೆ ನಿಜ. ಆದರೆ ಅವರ ಭಾಷಾಪ್ರಜ್ಞೆಯಲ್ಲಿ ಕನ್ನಡದ ಛಾಪು ಇದೆ. ಶಬ್ದದ ವಿಶಿಷ್ಟ ಸತ್ವದಿಂದಲೇ ವಿಚಾರಗಳನ್ನು ಬೆದಕಬೇಕೆಂಬ ಆರೋಗ್ಯಕರ ವ್ಯಂಗ್ಯಶೀಲತೆಯಿದೆ. “ಮಾನವನ ಬಾಳು ಗೋಪುರದ ಗಡಿಯಾರ. ತಲೆ ಎತ್ತಿದರೆ ಮಾತ್ರ ಕಾಣುತ್ತದೆ. ಎತ್ತಲು ತಲೆ ಎಂಬುದೊಂದುಬೇಕು. ಎತ್ತಬೇಕು ಅಂಬುದು ಅದಕ್ಕೆ ತೋಚಬೇಕು, ಅಲ್ಲವೇ? ಅದಕ್ಕಾಗಿ ಮನುಷ್ಯನೆಂಬ ಪ್ರಾಣಿ ಊರ್ಧ್ವಮುಖಿ.
ಗಡಿಯಾರ ಅಂಬುದು ಅದಕ್ಕೆ ತೋಚಬೇಕು. ಬರೀ ಕಂಡರೂ ಸಾಲದು. ಅದರ ಮುಳ್ಳುಗಳ ಲೆಕ್ಕಾಚಾರ ತಿಳಿದಿರಬೇಕು.” ಹೀಗೆ ಶಬ್ದಮುಖವಾಗಿ ಪ್ರತಿಮಾತ್ಮಕವಾಗಿ ಬರೆಯುವ ಶಕ್ತಿಯನ್ನು ಅವರು ರೂಢಿಸಿಕೊಂಡಿದ್ದಾರೆ. ಈ ಬಗೆಯ ವ್ಯಂಗ್ಯ ಶೈಲಿಯೇ ಅವರ ದೊಡ್ಡ ಕೊಡುಗೆ.
ಭಾಷೆಯ ಬೇರುಗಳೊಳಗೆ ನೀರಿನಂತೆ ಇಳಿದುಕೊಂಡು ಅದರ ಒಳಮೈಯ ಇಕ್ಕಟ್ಟಾದ ಸ್ಥಳಗಳನ್ನೆಲ್ಲ ಶೋಧಿಸುವ ಕೆಲಸ ಕೈಗೊಂಡವರು ಬೀchi.

ಇದರ ಪರಿಣಾಮವಾಗಿ ಶಬ್ದದ ಬೆನ್ನುಹತ್ತಿ ಅದರ ವಕ್ರಗತಿಗಳನ್ನೆಲ್ಲ ತೋರಿಸಿಕೊಡುವುದು, ಹಾಸ್ಯದೃಷ್ಟಿಯನ್ನಿರಿಸಿಕೊಂಡು ಶಬ್ದದ ಆಚೆ ಈಚೆಯ ವಿಚಾರದ ಮಗ್ಗುಲುಗಳನ್ನು ತೋರಿಸಿ ಕೊಡುವುದು ಅವರಿಗೆ ಸಾಧ್ಯವಾಯಿತು. ಈ ದೃಷ್ಟಿಯಿಂದ ಹಾಸ್ಯ ವಿಶ್ಲೇಷಣೆ ಶಬ್ಧಶೋಧಗಳೆರಡನ್ನೂ ಒಂದೇ ಮೈಯಲ್ಲಿ ಸಾಧಿಸಿದ ಕೀರ್ತಿ ಬೀchiಯವರಿಗೆ ಸಲ್ಲುತ್ತದೆ. ಆಧುನಿಕ ಕನ್ನಡ ಹಾಸ್ಯಪರಂಪರೆ ಬಹುಮುಖಿಯಾದದ್ದು. ಆರ್. ನರಸಿಂಹಾಚಾರ್, ಗೊರೂರು, ಪಡುಕೋಣೆ ರಮಾನಂದರಾಯ ಇವರುಗಳಲ್ಲಿ ಹಾಸ್ಯ ಪ್ರಸಂಗಗಳ ನವಿರಾದ ವಸ್ತು ವಿವರಣೆಯಿದೆ.

ರಾಶಿ, ರಾಜರತ್ನಂ, ಎ. ಎನ್. ಮೂರ್ತಿರಾವ್, ಲಾಂಗೂಲಾಚಾರ್ಯ ಇವರುಗಳ ಹಾಸ್ಯದಲ್ಲಿ ಆತ್ಮೀಯತೆಯ ಲೇಪವಿದೆ. ನಾಡಿಗೇರ್ ಸೋದರರು, ನಾ. ಕಸ್ತೂರಿ, ಎನ್ಕೆ, ಎಚ್.ಕೆ. ರಂಗನಾಥ್ ಇವರುಗಳು ಶುದ್ಧಹಾಸ್ಯದ ಅಬ್ಬರದ ದರ್ಶನ ಮಾಡಿಕೊಡುತ್ತಾರೆ. ಶ್ರೀರಂಗ, ಕಾರಂತ ಇವರ ಹಾಸ್ಯದ ಹಿನ್ನೆಲೆಯಲ್ಲಿ ವಿಚಾರದ ಬೆಟ್ಟವೇ ಇರುತ್ತದೆ. ರಾ.ಕು, ಅ.ರಾ.ಸೇ, ದಾಶರಥಿ ದೀಕ್ಷಿತ್, ಸುನಂದಮ್ಮ ಮೊದಲಾದವರು ತಮ್ಮ ವಿಚಿತ್ರ ದೃಷ್ಟಿಕೋನದಿಂದ ಹಾಸ್ಯಪ್ರಕರಣಗಳನ್ನು ಮಥಿಸುತ್ತಾರೆ. ಬೀchi ಶಬ್ದದ ಬೆನ್ನು ಹಿಡಿದು ಹಾಸ್ಯದ ಒಳಸೆಲೆಗಳನ್ನು ಶೋಧಿಸುವ ಅನನ್ಯ ಪಂಥದ ಬರಹಗಾರರಾಗಿದ್ದಾರೆ.

ಬರವಣಿಗೆಗೆ ಇಳಿದದ್ದು
ಬೀchi ಬರವಣಿಗೆಗೆ ಇಳಿದದ್ದು ಒಂದು ಆಕಸ್ಮಿಕವೇ. ಅದರಲ್ಲೂ ಹಾಸ್ಯದ ಬರವಣಿಗೆಗೆ ಅವರಿಗೆ ಪ್ರೇರಣೆ ಬಂದದ್ದು ಇನ್ನೊಂದು ಆಕಸ್ಮಿಕ. ಹಾಸ್ಯಪ್ರಜ್ಞೆಯೇನೋ ಅವರಲ್ಲಿ ಧಾರಾಳವಾಗಿತ್ತು. ಆದ್ದರಿಂದ ಏನನ್ನೂ ಬರೆಯದಿದ್ದರೂ ಹಾಸ್ಯಗಾರರನ್ನಾಗಿರುವವರನ್ನು ಅವರು ಮೆಚ್ಚಿದ್ದಾರೆ:
“ಎಂದು ನೀನು ಹಾಸ್ಯ ಲೇಖಕನಾದಿ? ಎಂಬುದಕ್ಕೆ ಉತ್ತರ ಸಿಕ್ಕೀತು. ಆದರೆ ನೀನೆಂದು ಹಾಸ್ಯಗಾರನಾದಿ ಎಂಬ ಪ್ರಶ್ನೆಗೆ ಉತ್ತರ ಹೇಳುವುದು ತುಂಬಾ ಕಷ್ಟ. ಹಾಸ್ಯಗಾರ ಅವನು ಹುಟ್ಟುವ ಮೊದಲೇ ಹಾಸ್ಯಗಾರನಾಗಿರುತ್ತಾನೆ.

ಆಮೇಲೆ ಅವನು ಲೇಖಕನಾದರೆ ಹಾಸ್ಯ ಲೇಖಕನಾಗುತ್ತಾನೆ. ಇಲ್ಲದಿದ್ದರೆ ಬರಿಯ ಹಾಸ್ಯಗಾರನಾಗಿಯೇ ಉಳಿಯುತ್ತಾನೆ. ಅಂಥ ಹುಟ್ಟು ಹಾಸ್ಯಗಾರರು ನಮ್ಮಲ್ಲಿ ಹೇರಳವಾಗಿದ್ದಾರೆ. “ಬೀchi ಅವರಿಗೆ ಬರೆಯುವ ಅಭ್ಯಾಸ ಇರಲಿಲ್ಲ ಮಾತ್ರವಲ್ಲ. ‘ಕನ್ನಡದಲ್ಲಿ ಬರೆಯುವುದು ಓದು ವುದು ಅಷ್ಟೇನೂ ಗೌರವದ ಕೆಲಸವಲ್ಲ ಎಂಬ ಭಾವನೆಯೂ ಇತ್ತು. ಕನ್ನಡ ಸಾಹಿತ್ಯ ಗ್ರಂಥಗಳ ಪರಿಚಯವೇ ಇಲ್ಲದಿದ್ದ ಬೀchiಯಂತಹ ತರುಣನನ್ನು ಸಾಹಿತ್ಯ ಜಗತ್ತಿನ ಗುರುತ್ವಾಕರ್ಷಣೆಗೆ ಒಳಪಡಿಸಿದವರೆಂದರೆ ಅ.ನ.ಕೃಷ್ಣರಾಯರು.ಅವರ ಸಂಧ್ಯಾರಾಗ ಬೀchiಯವರ ಮನಸ್ಸ ನ್ನು ಸೆಳೆದ ಕಾದಂಬರಿ. ಈ ಕಾದಂಬರಿಯ ಪರಿಚಯವಾದುದೂ ಒಂದು ಸ್ವಾರಸ್ಯಕರ ವಿಷಯವೇ. ಇವರ ಪತ್ನಿ ಕನ್ನಡ ಭಕ್ತೆ. ಕನ್ನಡ ಪುಸ್ತಕ ಓದುವ ಹವ್ಯಾಸ ಆಕೆಯದು. ಬೀchi ಅಲ್ಪ ಸ್ವಲ್ಪ ತಿರಸ್ಕಾರದ ಭಾವದಿಂದಲೇ ಒಂದು ಪುಸ್ತಕದ ಅಂಗಡಿಗೆ ಹೋದರಂತೆ. “ಒಂದು ಕನ್ನಡದ ಪುಸ್ತಕ ಕೊಡಿ. ಯಾವುದಾದರೂ ಚಿಂತೆಯಿಲ್ಲ. ರೈಲ್ವೆ ಟೈಮ್ ಟೇಬಲ್ ಪುಸ್ತಕ ಕೊಟ್ಟರೂ ಅಡ್ಡಿಯಿಲ್ಲ. ಆದರೆ ಕನ್ನಡದಲ್ಲಿ ಅಚ್ಚಾಗಿರಬೇಕು” ಎಂದರಂತೆ! ಪುಣ್ಯಕ್ಕೆ ಅಂಗಡಿಯಾತ ಕೊಟ್ಟ ಪುಸ್ತಕ ‘ಸಂಧ್ಯಾರಾಗ’.

ಅದನ್ನು ಓದಿದ ಬೀchi ಸದ್ದಿಲ್ಲದೆ ಕನ್ನಡದ ಪ್ರೇಮಿಯಾದರು. ಬಳ್ಳಾರಿಯಲ್ಲಿದ್ದ ಗೆಳೆಯ ಕೋ. ಚೆನ್ನಬಸಪ್ಪ ಅವರ ಕಾಟದಿಂದ, ಕೋ.ಚೆ. ಸಂಪಾದಕರಾಗಿದ್ದ ರೈತವಾಣಿ ವಾರಪತ್ರಿಕೆಯಲ್ಲಿ ‘ಬೇವಿನಕಟ್ಟೆ ತಿಂಮ’ ಎಂಬ ಸ್ಥಿರ ಶೀರ್ಷಿಕೆ ಯಲ್ಲಿ ಹಾಸ್ಯ ಲೇಖನಗಳನ್ನು ಬರೆದು ಅನಂತರ ಪಾ.ಪು.ಅವರ ‘ವಿಶಾಲ ಕರ್ನಾಟಕ’ ದಿನಪತ್ರಿಕೆಯಲ್ಲಿ ‘ಕೆನೆ ಮೊಸರು’ ಸ್ಥಿರ ಶೀರ್ಷಿಕೆಯಡಿಯಲ್ಲಿ ನಿತ್ಯವೂ ಹರಟೆಗಳನ್ನು ಬರೆದರು.

ನಾಟಕ ಪ್ರೇಮಿ
ಅವರು ನಾಟಕ ಪ್ರೇಮಿಯೂ ಆಗಿದ್ದರು. ಒಂದು ನಾಟಕ ಬರೆದು ಬಳ್ಳಾರಿಯ ಜನರ ಕೆಂಗಣ್ಣಿನ ಕೃಪೆಗೆ ಪಾತ್ರರಾದರು. ಅವರು ಬರೆದ ಮೊದಲ ನಾಟಕ ’ಯದ್ವಾತದ್ವಾ ಅಥವಾ ದೇವರ ಆತ್ಮಹತ್ಯೆ’. ಬರೆದ ಹುರುಪಿನಲ್ಲೇ ಗೆಳೆಯರನ್ನು ಕೂಡಿಸಿ ಬಳ್ಳಾರಿಯಲ್ಲಿ ಆಡಿಯೂ ಬಿಟ್ಟರು. ಬೀchiಯವರೇ ದೇವರ ವೇಷ ಹಾಕಿ ರಂಗಭೂಮಿಯ ಮೇಲೆ ಟೈಯಿಂದ ಉರುಲು ಹಾಕಿಕೊಂಡು ‘ಆತ್ಮಹತ್ಯೆ’ ಮಾಡಿಕೊಂಡರು.

ಮರುದಿನ ಅವರ ಅವಸ್ಥೆ ಬೇಡ. ಉತ್ತಮ ಜಾತಿಯವರೆಂದು ಭ್ರಮಿಸಿಕೊಂಡ ಅನೇಕರು ಬೀchiಯ ಮೇಲೆ ತಮ್ಮ ಜುಟ್ಟಿನಿಂದಲೇ ಕೆಂಡ ಕಾರಿದರಂತೆ. ಆ ಜನಗಳ ತಪೋಜ್ವಾಲೆ ಎಂದೋ ತಣ್ಣಗಾಗಿದ್ದರಿಂದ ಬೀchiಯವರು ಬಳ್ಳಾರಿ ರಾಘವರ ಸಕಾಲಿಕ ಸಹಾಯದಿಂದ ಉಳಿದುಕೊಂಡರಂತೆ.

ಅವಿಶ್ರಾಂತ ಬರವಣಿಗೆ
1946ರಲ್ಲಿ ಪ್ರಕಟಿತಗೊಂಡ ‘ರೇಡಿಯೋ ನಾಟಕಗಳು’ದಿಂದ ಹಿಡಿದು ತಾವು ತೀರಿಕೊಳ್ಳುವವರೆಗೂ ಬೀchi ಬರವಣಿಗೆಗೆ ವಿಶ್ರಾಂತಿ ಎಂಬುದೇ ಇರಲಿಲ್ಲ. ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ ಅವರ ರಚನೆಗಳಲ್ಲಿ ಹಲವಾರು ನಿರಂತರವಾಗಿ ಮುದ್ರಣದ ಭಾಗ್ಯವನ್ನು ಕಂಡಿವೆ. ‘ತಿಂಮನ ತಲೆ’ಯಂತೂ ಇಂದಿನ ದಿನಗಳಲ್ಲೂ ಪುನರ್ ಮುದ್ರಣ ಕಾಣುತ್ತಲೇ ಸಾಗಿದೆ. ಬೀchiಯವರ ಬರವಣಿಗೆಯನ್ನು ಮುಖ್ಯವಾಗಿ ಕಾದಂಬರಿ, ನಾಟಕ, ಕಥೆ, ಹರಟೆ, ಪದ್ಯ ಎಂದು ವಿಂಗಡಿಸಬಹುದು.

ಅವರ ‘ದಾಸಕೂಟ’ ಕನ್ನಡದಲ್ಲಿಯೇ ಮೊತ್ತ ಮೊದಲ ಹಾಸ್ಯಪ್ರಧಾನ ಕಾದಂಬರಿ. ಇದರ ಒಂದು ಪಾತ್ರದ ಬೆಳವಣಿಗೆ ಮುಂದಿನ ‘ಸತೀ ಸೂಳೆ’ ಕಾದಂಬರಿಯ ವಸ್ತು. ‘ಸರಸ್ವತಿ ಸಂಹಾರ’, ‘ಖಾದಿ ಸೀರೆ’, ‘ಬೆಂಗಳೂರು ಬಸ್ಸು’, ‘ದೇವನ ಹೆಂಡ’, 'ಬ್ರಹ್ಮಚಾರಿಯ ಮಗ' ಸತ್ತವನು ಎದ್ದು ಬಂದಾಗ '‘ಏರದ ಬಳೆ’, ಮೇಡಮ್ಮನ ಗಂಡ’, ‘ಟೆಂಟ್ ಸಿನಿಮಾ’, ‘ಆರಿದ ಚಹಾ’, ‘ಬಿತ್ತಿದ್ದೇ ಬೇವು’ ಮೊದಲಾದ ಮೂವತ್ತಕ್ಕೂ ಹೆಚ್ಚಿನ ಕಾದಂಬರಿಗಳನ್ನು ಅವರು ಬರೆದಿದ್ದಾರೆ.

ಕನ್ನಡದಲ್ಲಿ ಬರುತ್ತಿದ ಬರಿಯ ಕಾಲ್ಪನಿಕವಾದ ಅಸಂಬದ್ಧ ಪತ್ತೆದಾರಿ (detective) ಕಾದಂಬರಿಗಳ ವ್ಯಂಗ್ಯಾನುಕರಣದ ಫಲವಾಗಿ ಅವರ ‘ಸತ್ತವನು ಎದ್ದು ಬಂದಾಗ’ ಎಂಬ ‘Defective’ ಕಾದಂಬರಿ ಮೂಡಿತು. ಸಾಯದೆ ಇದ್ದವನನ್ನು ಶೋಧಿಸುವ ಮೋಜಿನ ಈ ಕಾದಂಬರಿ ತುಂಬ ಜನಪ್ರಿಯವಾಯಿತು. ಬೀಚಿಯವರು ತಮ್ಮ ‘ದಾಸಕೂಟ’ದಂತಹ ಹಲವಾರು ರಾಜಕೀಯ ಕಾದಂಬರಿಗಳಲ್ಲಿ ರಾಷ್ಟ್ರನಾಯಕರ ಮತ್ತು ಅವರ ಅನು'ನಾಯಿ’ಗಳ ವ್ಯಕ್ತಿತ್ವದ ಸುತ್ತ ಬೆಳೆದುಕೊಳ್ಳುವ ಪೊಳ್ಳು, ಕ್ರಿಯಾ ಹೀನತೆಯನ್ನು ವಾಗಾಡಂಬರದಿಂದ ಮೆಚ್ಚಿಕೊಳ್ಳುವ ಪ್ರವೃತ್ತಿ ಮತ್ತು ಜನತೆಯ ಸಮಯ ಸಾಧಕವೃತ್ತಿ ಬಾಲಬಡುಕುತನಗಳಿಂದಾಗಿ ಮರೆಯಲ್ಲೇ ನರಳುವ ಪ್ರಾಮಾಣಿಕತೆ-ಈ ಎರಡು ರಾಜಕೀಯ ಪತನಗಳನ್ನು ವಿಶ್ಲೇಷಿಸಲು ಯತ್ನಿಸಿದ್ದಾರೆ.
ಸಮಾಜದ ಕಂದಾಚಾರಗಳು ಮತ್ತು ವರ್ಗ ಕಲಹಗಳು ಸಿಡಿಸುತ್ತಿರುವ ಸಾಮಾಜಿಕ ಬೇನೆಗಳನ್ನು ಅವರ ‘ಎಲ್ಲರೂ ಸಂಪನ್ನರೇ’, ‘ಸ್ವರಸ್ವತಿಯ ಸಂಹಾರ’ ಮೊದಲಾದ ಕೃತಿಗಳು ಪರಿಚಯಿಸಲು ಯತ್ನಿಸಿವೆ. ಮೂರನೆಯ ಬಗೆಯ ಕಾದಂಬರಿಗಳಲ್ಲಿ ಲೈಂಗಿಕ ಕಾಮನೆಗಳು ತುಂಬಾ ಕಟ್ಟುಪಾಡಿಗೆ ಒಳಗಾದಾಗ ಏನೇನು ವಿಕಾರಗಳನ್ನು ತಾಳಬಹುದು ಎಂಬ ವಿವರಗಳಿವೆ. ಬೀchiಯವರಿಗೆ ತುಂಬ ಕೀರ್ತಿ ತಂದುಕೊಟ್ಟ ಕೃತಿಗಳ ಪೈಕಿ ಹನ್ನೊಂದನೆಯ ಅವತಾರ, ರೇಡಿಯೋ ನಾಟಕಗಳು ಇವೆರಡು ಮುಖ್ಯವಾದವು.

‘ಏಕೀಕರಣ’ದಂಥ ರೇಡಿಯೋ ನಾಟಕ ಕರ್ನಾಟಕದ ಸಮಗ್ರತೆಯ ಆಶಯದಲ್ಲಿಯೂ ಅದರ ಭಾಷಾವೈವಿಧ್ಯಗಳನ್ನು ವಿಫುಲ ಸಾಕ್ಷಾಧಾರಗಳಿಂದ ಪದರ್ಶಿಸುವ ಶುದ್ಧಾಂಗ ಹಾಸ್ಯನಾಟಕ. ಹನ್ನೊಂದನೆಯ ಅವತಾರದ ಎರಡು ನಾಟಕಗಳಲ್ಲೂ “ದೇ.ಭ” ಎಂದು ಬೀchi ಜನಪ್ರಿಯ ಗೊಳಿಸಿದ ದೇಶಭಕ್ತ ಹೇಗೆ ನಮ್ಮ ದೇಶದ ‘ಹನ್ನೊಂದನೆಯ ಅವತಾರ’ವಾಗಿದ್ದಾನೆ ಎಂಬುದನ್ನು ತುಂಬ ಅಬ್ಬರದಿಂದ ವ್ಯಂಗ್ಯವಾಗಿ ಕಾಣಿಸಲಾಗಿದೆ. ನವರಾಜಕಾರಣಿಗಳಿಂದ ನಮ್ಮ ರಾಜಕೀಯ ಹಾಗೂ ನೈತಿಕ ಮೌಲ್ಯ ಹೇಗೆ ಕುಸಿಯುತ್ತಿವೆ ಎಂಬುದರ ಧ್ವನಿಪೂರ್ಣ ಸಮೀಕ್ಷೆಯೂ ಈ ನಾಟಕಗಳಲ್ಲಿವೆ.

ಬೀchiಯವರ ಬರವಣಿಗೆಯ ಕಾವಿನಿಂದ ಪುಷ್ಟಗೊಂಡವೆಂದರೆ ಅವರ ಹಾಸ್ಯ ಬರಹಗಳು, ಚುಟುಕಗಳು, ನಗೆಹನಿಗಳು, ತಿಂಮ ದರ್ಶನಗಳು, ತಿಂಮ ರಸಾಯನಗಳು, ಹರಟೆಗಳು, ತಿಂಮನ ತಲೆ, ಹುಚ್ಚು ಹುರುಳು, ಚಿನ್ನದ ಕಸ, ಬೆಳ್ಳಿ ತಿಂಮ ನೂರೆಂಟು ಹೇಳಿದ, ಅಮ್ಮಾವ್ರ ಕಾಲ್ಗುಣ, ಹೆಂಡತಿ ನಕ್ಕಾಗ, ಸಂಪನ್ನರಿದ್ದಾರೆ ಎಚ್ಚರಿಕೆ, ಉತ್ತರ ಭೂಪ, ತಿಂಮಿಕ್ಷನರಿ, ಅಂದನಾ ತಿಂಮ ಮೊದಲಾದ ಹಾಸ್ಯಕೃತಿಗಳು. ಬೀchi ಕಥೆ ಬರೆಯಲಿ, ಹರಟೆ ಬರೆಯಲಿ, ನಾಟಕ ಕಾದಂಬರಿಯನ್ನೇ ಬರೆಯಲಿ ಅವರ ಮೊದಲ ಗಮನ ಮಾತಿನ ಕಡೆಗೆ.

“ತಿಂಮ ಯಾರು?”
ತಿಂಮನ ವಿಷಯದಲ್ಲಿ ಬೀchi ಹೀಗೆ ಹೇಳುತ್ತಾರೆ.- “ಯಾವೊಬ್ಬ ತಿರುಮಲರಾಯನನ್ನಾಗಲಿ, ತಿಂಮಪ್ಪನನ್ನಾಗಲಿ ಮುಂದಿಟ್ಟುಕೊಂಡು ಇದನ್ನು ಬರೆದಿಲ್ಲ. ಮಕ್ಕಳ ಆಟದಲ್ಲಿ, ಗೆಳೆಯರ ಕೂಟದಲ್ಲಿ, ಹಿರಿಕಿರಿಯರ ಕಿರಿಹಿರಿತನಗಳಲ್ಲಿ, ಚತುರರ ಹೆಡ್ಡತನದಲ್ಲಿ, ದಡ್ಡರ ದೊಡ್ಡತನದಲ್ಲಿ ಕಂಡು ಕೇಳಿದ ಚೇಷ್ಟೆಗಳಿಗೆಲ್ಲಾ –ಪಾಪ! ತಿಂಮನನ್ನೇ ನಾಯಕನನ್ನಾಗಿ ಒಡ್ಡಿದ್ದೇನೆ. ತಿಂಮನ ನಗು ದೇಹವಾದರೆ ಆ ನಗುವಿನ ಹಿಂದೆ ಹುದುಗಿಕೊಂಡಿರುವ ನೋವೇ ಜೀವ, ಅದನ್ನು ಗುರುತಿಸದಿದ್ದರೆ ದೊರೆಯುವುದು ತಿಂಮನ ಹೆಣ ಮಾತ್ರ”.

ಬರಹದ ವೈಖರಿ
ಬೀchiಯವರ ಭಾಷಾಸಾಧನೆಗೆ ಸಹಾಯಕವಾಗಿರುವ ಅವರ ಶ್ರವಣಾಭಿರುಚಿ ಉನ್ನತಮಟ್ಟದ್ದು. ಕೇಳಿದ ಮಾತನ್ನು ಅದೇ ಉಚ್ಛಾರ ಕ್ರಮದಲ್ಲಿ ಉಲ್ಲೇಖಿಸಲು ಅವರು ಪ್ರಯತ್ನಿಸುತ್ತಾರೆ. ಜನ ಬಳಸುವ ಒಂದು ಶಬ್ದಕ್ಕೆ ಏನೆಲ್ಲಾ ಅರ್ಥ, ಅನರ್ಥ, ಅಪಾರ್ಥ, ಹೀನಾರ್ಥ, ನಾನಾರ್ಥ ಗಳನ್ನು ಕಲ್ಪಿಸಬಹುದು, ಶಬ್ದವನ್ನು ಹದವಾಗಿ ತಿರುವಿ ಬಿಡಿ ಭಾಗಗಳನ್ನು ಹೇಗೆ ತೆರೆದಿಡಬಹುದು ಎಂದು ತಿಳಿಯಬಯಸುವವರು ಬೀchiಯವರ ಬರಹದ ವೈಖರಿಯನ್ನೇ ಗಮನಿಸಬೇಕು.
ಹೀಗಾಗಿ ಅವರಿಗೆ ಸಾಹಿತ್ಯ ಪರಿಷತ್ತಿನ ‘ಕನ್ನಡ-ಕನ್ನಡ ನಿಘಂಟು’ ಅಂದ ಕೂಡಲೇ 'ಹೆರಲಾರದ ಬಸುರಿ’ ಎಂಬ ವ್ಯಾಖ್ಯಾನ ಸಾಧ್ಯವಾಗುತ್ತದೆ. ‘ಆಕಳಿಕೆ’ಯಲ್ಲಿ ಅವರು ಲೀಲಾಜಾಲವಾಗಿ ಆsssಕಳಿಕೆಯನ್ನು ಕಾಣುತ್ತಾರೆ. ‘ಮಗಳನ್ನು ಬೆಂಗಳೂರಿಗೆ ಕೊಟ್ಟಿದೆ’ ಎಂದು ಯಾರೋ ಅಂದರೆ ‘ಆ್ಞ..... ಇಡೀ ಬೆಂಗಳೂರಿಗೆ?’ – ಎನ್ನುತ್ತಾರೆ. ಸೀತಾ ಪರೀಕ್ಷಣ ಮಾಡಿದ ರಾಮನನ್ನು ಅವರ ಭಾಷಾಮುಖ ಕಂಡಿರುವ ಬಗೆ ಹೀಗಿದೆ: “ಶ್ರೀರಾಮ ಅಸಲು ಅಕ್ಕಸಾಲಿಗ – ಹೆಂಡತಿಯನ್ನೇ ಬೆಂಕಿಯಲ್ಲಿ ಪುಟಕ್ಕೆ ಹಾಕಿ ಪರೀಕ್ಷೆ ಮಾಡಿದ.” ಐವತ್ತಕ್ಕೂ ಹೆಚ್ಚಿನ ಗ್ರಂಥ ಗಳನ್ನು ಬರೆದ ಬೀchiಯವರ ಯಾವ ಪುಸ್ತಕ ತೆರೆದರೂ ಇಂಥ ಬೀchiಯವರದೆಂದು ಗುರುತಿಸಬಲ್ಲಂಥ-ವಿಶಿಷ್ಟಶೈಲಿಯ ದರ್ಶನವಾಗುತ್ತದೆ.
ವಿದಾಯ
1980 ದೀಪಾವಳಿ ಸಂಚಿಕೆಯಲ್ಲಿ ಬರೆದ "ಸ್ಫೂರ್ತಿ" ಕೊನೆಯದಾಗಿ ಪ್ರಕಟಗೊಂಡ ಲೇಖನ. 
ಬೀchiಯವರು ನಿಧನರಾದದ್ದು ಡಿಸೆಂಬರ್ 7, 1980ರಲ್ಲಿ.

ಕೃತಿಗಳು
ಬೀಚಿ ಸುಮಾರು 78 ಕೃತಿಗಳನ್ನು ರಚಿಸಿದರು. ಅವುಗಳಲ್ಲಿ 40 ಕಾದಂಬರಿಗಳು. ಇನ್ನುಳಿದವು ಏಕಾಂತ, ರೇಡಿಯೋ ನಾಟಕಗಳು, ವಿನೋದ ಬರಹಗಳು, ಸಣ್ಣಕಥೆ ಇತ್ಯಾದಿ.

ಕಾದಂಬರಿಗಳು

  1. ಆಗಿಷ್ಟು ,ಈಗಿಷ್ಟು
  2. ಅರು ಏಳು ಸ್ತ್ರೀ ಸೌಖ್ಯ
  3. ಅಮ್ಮಾವ್ರ ಕಾಲ್ಗುಣ
  4. ಅಂದನಾ ತಿಂಮ
  5. ಆರಿದ ಚಹ
  6. ಆಟೋ
  7. ಬಂಗಾರದ ಕತೆ
  8. ಬೀಚಿ ಬುಲೆಟಿನ್
  9. ಬೆಳ್ಳಿ ಮಾತ್ರೆಗಳು
  10. ಬೆಳ್ಳಿ ತಿಂಮ ನೂರೆಂಟು ಹೇಳಿದ
  11. ಬೆಳ್ಳಿ ಪತ್ರಗಳು
  12. ಬೆಂಗಳೂರು ಬಸ್ಸು
  13. ಬಿತ್ತಿದ್ದೆ ಬೇವು
  14. ಬ್ರಹ್ಮಚಾರಿ
  15. ಬ್ರಹ್ಮಚಾರಿಯ ಮಗ
  16. Bullets-ಉ, bombs-ಉ, ಭಗವದ್ಗೀತೆ
  17. ಚಿನ್ನದ ಕಸ
  18. ದಾಸ ಕೂಟ
  19. ದೇವನ ಹೆಂಡ
  20. ಎಲ್ಲಿರುವೆ ತಂದೆ ಬಾರೋ
  21. ಏರದ ಬಳೆ
  22. ಗರತಿಯ ಗುಟ್ಟು
  23. ಹೆಣ್ಣು ಕಾಣದ ಗಂಡು
  24. ಹುಚ್ಚು ಹುರುಳು
  25. ಕಾಂಮಣ
  26. ಕಲ್ಲು ಹೇಳಿತು
  27. ಕಮಲೆಯ ಓಲೆಗಳು
  28. ಕನ್ನಡ ಎಮ್ಮೆ
  29. ಕಾಮಲೋಕ
  30. ಕಾಣದ ಸುಂದರಿ
  31. ಕತ್ತಲಲ್ಲಿ ಬಂದವಳು
  32. ಖಾದಿ ಸೀರೆ
  33. ಲಕ್ಷ್ಮೀ ಪೂಜೆ
  34. ಲೇವಡಿ ಟೈಪಿಸ್ಟ್
  35. ಮಾತನಾಡುವ ದೇವರುಗಳು
  36. ಮಾತ್ರೆಗಳು
  37. ಮೇಡಮ್ಮನ ಗಂಡ
  38. ಮಹಾಯುದ್ಧ
  39. ಮನೆತನದ ಗೌರವ
  40. ಮೂರು ಹೆಣ್ಣು ಐದು ಜಡೆ
  41. ಮುರಿದ ಬೊಂಬೆ
  42. ನರಪ್ರಾಣಿ
  43. ನಂಬರ್ ೫೫
  44. ಸಾಹುಕಾರ ಸುಬ್ಬಮ್ಮ
  45. ಸಕ್ಕರೆ ಮೂಟೆ
  46. ಸಂಪನ್ನರಿದ್ದಾರೆ ಎಚ್ಚರಿಕೆ
  47. ಸರಸ್ವತಿ ಸಂಹಾರ
  48. ಸತೀಸೂಳೆ
  49. ಸತ್ತವನು ಎದ್ದು ಬಂದಾಗ
  50. ಸೀತೂ ಮದುವೆ
  51. ಸುಬ್ಬಿ
  52. ಸುನಂದೂಗೆ ಏನಂತೆ
  53. ಟೆಂಟ್ ಸಿನೆಮಾ
  54. ತೋಚಿದ್ದು ಗೀಚಿದ್ದು
  55. ತಿಂಮ ರಸಾಯನ
  56. ತಿಂಮ ಸತ್ತಾಗ
  57. ತಿಂಮನ ತಲೆ
  58. ತಿಂಮಾಯಣ
  59. ತಿಮ್ಮಿಕ್ಷನರಿ
  60. ಉತ್ತರ ಭೂಪ
  61. ನಾಟಕಗಳು
  62. ರೇಡಿಯೋ ನಾಟಕಗಳು
  63. ಹನ್ನೊಂದನೆಯ ಅವತಾರ
  64. ಮನುಸ್ಮೃತಿ
  65. ಏಕೀಕರಣ
  66. ವಶೀಕರಣ
  67. ಏಕೋದರರು
  68. ಸೈಕಾಲಜಿಸ್ಟ್ ಸಾರಂಗಪಾಣಿ
  69. ದೇವರ ಆತ್ಮಹತ್ಯೆ
  70. ನಾನೇ ಸತ್ತಾಗ
  71. ಅಂಕಣಗಳು
  72. ಕೆನೆಮೊಸರು (ವಿಶಾಲ ಕರ್ನಾಟಕ)
  73. ಬೇವಿನಕಟ್ಟೆ (ರೈತ)
  74. ನೀವು ಕೇಳಿದಿರಿ! (ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಓದುಗರ ಈ ಪ್ರಶ್ನೋತ್ತರಮಾಲಿಕೆ, ಬಳಿಕ ಉತ್ತರಭೂಪ ಎನ್ನುವ ಶೀರ್ಷಿಕೆಯಲ್ಲಿ ಸಂಕಲಿತವಾಗಿ ೧೯೭೪ರಲ್ಲಿ ಪ್ರಕಟವಾಗಿದೆ.)

ಪ್ರವಾಸ ಸಾಹಿತ್ಯ

  1. ದೇವರಿಲ್ಲದ ಗುಡಿ
  2. ಆತ್ಮಕಥೆ
  3. ನನ್ನ ಭಯಾಗ್ರಫಿ
  4. ಮಾಹಿತಿ ಆಧಾರ

==========ಮಾಹಿತಿ ಆಧಾರ :======================
ಪ್ರೊಫೆಸರ್ ಅ. ರಾ. ಮಿತ್ರರು 'ಸಾಲುದೀಪಗಳು' ಗ್ರಂಥದಲ್ಲಿ ಮೂಡಿಸಿರುವ ಲೇಖನ.
***                      *****                    ***

No comments:

Post a Comment