Translate in your Language

Thursday, June 16, 2016

ಎ.ಎನ್. ಮೂರ್ತಿರಾವ್ ಅವರ 117ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ

ಎ.ಎನ್. ಮೂರ್ತಿರಾವ್
ಅಕ್ಕಿಹೆಬ್ಬಾಳು ನರಸಿಂಹರಾವ್ ಮೂರ್ತಿರಾವ್ ಇವರ ಪೂರ್ಣ ಹೆಸರು. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಹೆಬ್ಬಾಳುವಿನಲ್ಲಿ 1900 ಜೂನ್ 16 ರಂದು ಜನಿಸಿದರು. ತಂದೆ ಸುಬ್ಬರಾಯ ತಾಯಿ ಪುಟ್ಟಮ್ಮ. ಮಾಧ್ಯಮಿಕ ಹಂತದವರೆಗೆ ಅಕ್ಕಿಹೆಬ್ಬಾಳುವಿನಲ್ಲಿ ಅಭ್ಯಾಸ ಮಾಡಿದರು. ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. ಪದವಿ ಪಡೆದರು. ಎಸ್. ರಾಧಾಕೃಷ್ಣನ್ ಅವರು ಇವರಿಗೆ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಬಿ.ಎಂ. ಶ್ರೀಕಂಠಯ್ಯನವರು ಇವರ ಗುರುಗಳಾಗಿದ್ದರು. ೧೯೨೪ರಲ್ಲಿ ಮೂರ್ತಿರಾಯರು ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಟ್ಯೂಟರ್ ಆಗಿ ಕೆಲಕಾಲ ಸೇವೆ ಸಲ್ಲಿಸಿ ೧೯೨೫ರಲ್ಲಿ ಮೈಸೂರು ಮಹಾರಾಜ ಹೈಸ್ಕೂಲಿನ ಅಧ್ಯಾಪಕರಾದರು. ೧೯೨೭ರಲ್ಲಿ ಕಾಲೇಜು ಅಧ್ಯಾಪಕರಾಗಿದ್ದರು. ೧೯೪೦ರಲ್ಲಿ ಉಪ ಪ್ರಾಧ್ಯಾಪಕರಾದರು.
೧೯೪೦-೪೩ರವರೆಗೆ ಶಿವಮೊಗ್ಗದ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿದ್ದರು. ೧೯೪೩ರಲ್ಲಿ ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾಗಿ ನೇಮಕವಾದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಅಧ್ಯಾಪಕರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ೧೯೫೫ರಲ್ಲಿ ನಿವೃತ್ತರಾದರು. ೧೯೫೯ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ೧೯೫೪ರಿಂದ ೫೬ ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಂಚಾಲಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಇವರು ಶತಾಯುಷಿಯೂ, ತಮ್ಮ ೧೦೧ ನೇ ವಯಸ್ಸಿನಲ್ಲಿ (ಆಗಸ್ಟ್ 23, 2003 ರಲ್ಲಿ)ನಿಧನರಾದರು. ಕನ್ನಡದ ಹೆಸರಾಂತ ಹಿರಿಯ ವಿಮರ್ಶಕರು, ವಿದ್ವಾಂಸರು, ಪ್ರಬಂಧಕಾರರು ಆದ ಮೂರ್ತಿರಾಯರು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಸೇವೆಯನ್ನು ಸಲ್ಲಿಸಿದ್ದಾರೆ.

ಕೃತಿಗಳು
ಅಪರ ವಯಸ್ಕನ ಅಮೇರಿಕಾ ಯಾತ್ರೆ, ಹಗಲುಗನಸು, ಪೂರ್ವ ಸೂರಿಗಳೊಡನೆ ಅಲೆಯುವ ಮನ, ಮಿನುಗು, ಮಿಂಚು, ಚಿತ್ರಗಳು ಪತ್ರಗಳು, ಮಾಸ್ತಿಯವರ ಕತೆಗಳು, ಷೇಕ್ಸ್‌ಪಿಯರ್, ಸಂಜೆಗಣ್ಣಿನ ಹಿನ್ನೋಟ, ಹೆಬ್ಬಾಳು, ದೇವರು, ಸಾಹಿತ್ಯ ಮತ್ತು ಸತ್ಯ, ಜನತಾ ಜನಾರ್ಧನ, ಇಂಡಿಯಾ ಇಂದು ಮತ್ತು ನಾಳೆ, ವಿಮರ್ಶಾತ್ಮಕ ಪ್ರಬಂಧಗಳು, ಚಂಡಮಾರುತ, ಪಾಶ್ಚಾತ್ಯ ಸಣ್ಣ ಕತೆಗಳು, ಆಷಾಢಭೂತಿ, ಸಾಕ್ರೇಟೀಸನ ಕೊನೆಯ ದಿನಗಳು, ಹವಳದ ದ್ವೀಪ, ಸಮಗ್ರ ಲಲಿತ ಪ್ರಬಂಧಗಳು ಮುಂತಾದವು. 
ಗೌರವ, ಪ್ರಶಸ್ತಿ- ಪುರಸ್ಕಾರಗಳು,
ಮೈಸೂರು ವಿಶ್ವವಿದ್ಯಾಲಯ, ಹಂಪಿ ವಿಶ್ವವಿದ್ಯಾಲಯ ಇವರಿಗೆ ಗೌರ ಡಿ.ಲಿಟ್ ಪದವಿ ನೀಡಿದೆ.
ಇವರ ಚಿತ್ರಗಳು ಪತ್ರಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
೧೯೭೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೧೯೮೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
೧೯೯೨ ರಲ್ಲಿ ಪಂಪ ಪ್ರಶಸ್ತಿ
ಕನ್ನಡ ವಿಶ್ವವಿದ್ಯಾಲಯ ಹಂಪಿಯ ನಾಡೋಜ ಗೌರವ ಪ್ರಶಸ್ತಿ
೧೯೮೪ರಲ್ಲಿ ಕೈವಾರದಲ್ಲಿ ಜರುಗಿದ ೫೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು. 


No comments:

Post a Comment