ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ-
ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ
ಬಂದೆ ಬಂದೆ ಬಾರದ ಭವಗಳನುಂಡೆನುಂಡೆ ಸುಖಾಸುಖಂಗಳ ಹಿಂದಣ ಜನ್ಮಂಗಳು
ತಾನೇನಾದರಾಗಲಿ ಇಂದು ನೀ ಕರುಣಿಸು ಚನ್ನಮಲ್ಲಿಕಾರ್ಜುನ ||
ಹನ್ನೆರಡನೆಯ ಶತಮಾನದಷ್ಟು ಹಿಂದೆಯೆ ಕನ್ನಡನಾಡಿನ ಪರಿಸರದಲ್ಲಿ ತನ್ನ ವೈಚಾರಿಕತೆ ಹಾಗೂ ಆತ್ಮಪ್ರತ್ಯಯದ ಮೂಲಕ ಹೆಣ್ಣಿನ ವ್ಯಕ್ತಿತ್ವಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಅಕ್ಕಮಹಾದೇವಿ, ಅಂದು ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ರೂಪುಗೊಂಡ ಶರಣ ಚಳುವಳಿಯ ಮೇಲೆ ಹಾದುಹೋದ ಒಂದು ಉಜ್ವಲವಾದ ಮಿಂಚಿನ ಗೆರೆಯಂತೆ ತೋರುತ್ತಾಳೆ.
ಮಹಾದೇವಿ ಉಡುತಡಿಯಿಂದ ಶ್ರೀಶೈಲ ಶಿಖರಕ್ಕೆ ಬಿಟ್ಟ ಬೆಳಕಿನ ಬಾಣದಂತೆ ನೇರವಾಗಿ ಹೊರಟ ಹಾದಿಯಲ್ಲಿ, ಕಲ್ಯಾಣದ ಈ ಶರಣಕಿರಣ ಕೇಂದ್ರದಿಂದ ಆಕರ್ಷಿತಳಾಗಿ ಸ್ವಲ್ಪ ಕಾಲ ನಿಂತವಳು. ತನ್ನ ವ್ಯಕ್ತಿತ್ವ ಹಾಗೂ ಅನುಭಾವಿಕ ನಿಲುವುಗಳಿಂದ ಶರಣ ಸಮೂಹವನ್ನು ಬೆರಗುಗೊಳಿಸಿದವಳು.