Translate in your Language

Monday, April 25, 2016

ಮಹಾ ಶರಣೆ ಅಕ್ಕಮಹಾದೇವಿ

ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ-
ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ
ಬಂದೆ ಬಂದೆ ಬಾರದ ಭವಗಳನುಂಡೆನುಂಡೆ ಸುಖಾಸುಖಂಗಳ ಹಿಂದಣ ಜನ್ಮಂಗಳು 
ತಾನೇನಾದರಾಗಲಿ ಇಂದು ನೀ ಕರುಣಿಸು  ನ್ನಮಲ್ಲಿಕಾರ್ಜುನ ||

ಹನ್ನೆರಡನೆಯ ಶತಮಾನದಷ್ಟು ಹಿಂದೆಯೆ ಕನ್ನಡನಾಡಿನ ಪರಿಸರದಲ್ಲಿ ತನ್ನ ವೈಚಾರಿಕತೆ ಹಾಗೂ ಆತ್ಮಪ್ರತ್ಯಯದ ಮೂಲಕ ಹೆಣ್ಣಿನ ವ್ಯಕ್ತಿತ್ವಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಅಕ್ಕಮಹಾದೇವಿ, ಅಂದು ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ರೂಪುಗೊಂಡ ಶರಣ ಚಳುವಳಿಯ ಮೇಲೆ ಹಾದುಹೋದ ಒಂದು ಉಜ್ವಲವಾದ ಮಿಂಚಿನ ಗೆರೆಯಂತೆ ತೋರುತ್ತಾಳೆ. 
ಮಹಾದೇವಿ ಉಡುತಡಿಯಿಂದ ಶ್ರೀಶೈಲ ಶಿಖರಕ್ಕೆ ಬಿಟ್ಟ ಬೆಳಕಿನ ಬಾಣದಂತೆ ನೇರವಾಗಿ ಹೊರಟ ಹಾದಿಯಲ್ಲಿ, ಕಲ್ಯಾಣದ ಈ ಶರಣಕಿರಣ ಕೇಂದ್ರದಿಂದ ಆಕರ್ಷಿತಳಾಗಿ ಸ್ವಲ್ಪ ಕಾಲ ನಿಂತವಳು. ತನ್ನ ವ್ಯಕ್ತಿತ್ವ ಹಾಗೂ ಅನುಭಾವಿಕ ನಿಲುವುಗಳಿಂದ ಶರಣ ಸಮೂಹವನ್ನು ಬೆರಗುಗೊಳಿಸಿದವಳು.
ತನ್ನ ವೈರಾಗ್ಯ ಮತ್ತು ವೈಚಾರಿಕತೆಯ ಪರಿಣತಿಯಿಂದ ‘ಅಕ್ಕ’ ಎಂದು ಕರೆಯಿಸಿಕೊಳ್ಳುವ ಗೌರವಕ್ಕೆ ಪಾತ್ರಳಾದವಳು; ತನ್ನ ಆಧ್ಯಾತ್ಮಿಕ ಸಂವಾದದಿಂದ ಶರಣ ಚಳುವಳಿಯ ಪ್ರಮುಖರ ಪ್ರಶಂಸೆಯನ್ನು ಗಳಿಸಿಕೊಂಡವಳು.

ಆದರೆ ಅಕ್ಕಮಹಾದೇವಿ ಕಲ್ಯಾಣಕ್ಕೆ ಬರುವ ಮುನ್ನವೇ ಅವಳ ತಾತ್ವಿಕ ನಿಲುವುಗಳೂ ಹಾಗೂ ಜೀವನ ವಿಧಾನದ ಪರಿಕಲ್ಪನೆಗಳೂ ಬಹುಮಟ್ಟಿಗೆ ಸಿದ್ಧವಾಗಿದ್ದವು; ಮತ್ತು ಆಕೆ ತನ್ನ ವೈಚಾರಿಕತೆ ಹಾಗೂ ನಿರ್ಭಯವಾದ ನಿಲುವು ಮತ್ತು ನಡವಳಿಕೆಗಳಿಂದಾಗಿ ಸಾಕಷ್ಟು ಹೆಸರಾಗಿದ್ದಳೆಂದು ತೋರುತ್ತದೆ. ತನ್ನ ಪಯಣದ ಹಾದಿಯಲ್ಲಿ ಶರಣ ಚಳುವಳಿಯೊಳಕ್ಕೆ ಬಂದ ಈಕೆ, ಇಲ್ಲಿ ಎಷ್ಟು ಕಾಲ ಇದ್ದಳೆಂಬ ಬಗ್ಗೆ ಖಚಿತವಾಗಿ ಹೇಳಲುಬಾರದು. ಆದರೆ ಆಕೆ ಇಲ್ಲಿದ್ದದ್ದು ಕೆಲವೇ ಕಾಲದ ಮಟ್ಟಿಗೆ ಎಂಬುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಅವಳ ನಿಲುಗಡೆ ಕಲ್ಯಾಣವಲ್ಲ; ಶ್ರೀಶೈಲ.

ಭಗವತ್ಪರವಾದ ವ್ಯಾಕುಲತೆ, ಎಲ್ಲ ಅನುಭಾವಿಗಳಂತೆ ಪುಸ್ತಕ ಹಾಗೂ ಶಾಸ್ತ್ರಜ್ಞಾನಗಳ  ಬಗ್ಗೆ ಅವಳಿಗಿದ್ದ ತಿರಸ್ಕಾರ, ಪರಂಪರಾಗತವಾದ ಜಾತಿ ಹಾಗೂ ವರ್ಣಭೇದಗಳನ್ನು ಪ್ರತಿಪಾದಿಸುತ್ತಿದ್ದ ವೇದ-ಪುರಾಣ-ಆಗಮಗಳ ನಿರಾಕರಣೆ ಇತ್ಯಾದಿಗಳ ವಿಚಾರದಲ್ಲಿ ಅವಳಿಗೆ ವಚನ ಚಳುವಳಿಯೊಂದಿಗೆ ಸಹಮತವಿದ್ದರೂ, ಮಾಯೆಯನ್ನು ಕುರಿತು ಅವಳ ವ್ಯಾಖ್ಯಾನ ಮಾತ್ರ ತೀರಾ ವಿಶಿಷ್ಟವಾದುದಾಗಿದೆ. ಹಾಗೆ ನೋಡಿದರೆ ಭಾರತೀಯ ತತ್ವಜ್ಞಾನದ ಪ್ರಕಾರ ‘ಮಾಯೆ’ ಎಂದರೆ ಸತ್ಯವಲ್ಲದ, ಆದರೆ ಸತ್ಯದ ಹಾಗೆ ಭಾಸವಾಗುವ ಈ ಜಗತ್ತಿನ ತೋರಿಕೆ; ಮತ್ತು ಅನೇಕ ವಿಧವಾದ ಆಸೆ-ಆಮಿಷಗಳಿಂದ ಜಗತ್ತಿನೊಂದಿಗೆ ಜೀವನನ್ನು ಬಂಧಿಸುವ ಒಂದು ಅವಿದ್ಯೆಯ ಉಪಕರಣ. ಹೀಗೆ ಮನುಷ್ಯನನ್ನು ಹಿಡಿದು ಕಟ್ಟುವ ಈ ಮಾಯೆಯನ್ನು ‘ಹೆಣ್ಣು-ಹೊನ್ನು-ಮಣ್ಣು’ ಎಂದು ವರ್ಣಿಸಲಾಗಿದೆ. ಸ್ವಲ್ಪ ವಿಚಾರ ಮಾಡಿ ನೋಡಿದರೆ, ಈ ವ್ಯಾಖ್ಯಾನ ಮುಖ್ಯವಾಗಿ ಸಾಧಕನಾದ ಹಾಗೂ ಮುಮುಕ್ಷುವಾದ ಪುರುಷನ ದೃಷ್ಟಿಕೋನದಿಂದ ಹುಟ್ಟಿಕೊಂಡದ್ದು. ಆದರೆ ಅಕ್ಕಮಹಾದೇವಿ ಈ ಪರಿಕಲ್ಪನೆಯನ್ನು ಮೊಟ್ಟಮೊದಲಿಗೆ ಸ್ತ್ರೀಪರವಾಗಿ ವ್ಯಾಖ್ಯಾನಿಸಿರುವ ಕ್ರಮವು ತೀರಾ ವಿಶಿಷ್ಟವಾದುದಾಗಿದೆ. ಆಕೆ ಹೇಳುತ್ತಾಳೆ-

ಪುರುಷನ ಮುಂದೆ ಮಾಯೆ
ಸ್ತ್ರೀ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ
………………………………………
ಹೆಣ್ಣಿಗೆ ಗಂಡು ಮಾಯೆ, ಗಂಡಿಗೆ ಹೆಣ್ಣು ಮಾಯೆ

ಈ ಮಾತುಗಳಲ್ಲಿ, ಹೆಣ್ಣು ಗಂಡಿನ ಪಾಲಿಗೆ ‘ಮಾಯೆ’ ಯಾಗುವುದಾದರೆ, ಗಂಡು ಹೆಣ್ಣಿನ ಪಾಲಿಗೆ ಯಾಕೆ ಮಾಯೆ ಅಲ್ಲ?- ಎಂಬ ದೃಷ್ಟಿಕೋನ, ಮಹಿಳಾಪರವಾದ ಒಂದು ಪ್ರತಿಕ್ರಿಯೆಯಾಗಿದೆ. ಹಾಗೆಯೆ ಕಟ್ಟಿಕೊಂಡ ಹೆಂಡತಿಯನ್ನು ಗಂಡ ಆಧ್ಯಾತ್ಮಸಾಧನೆಯ ನೆಪದಿಂದ ಬಿಟ್ಟು ಹೋಗುವುದೂ ‘ವೈರಾಗ್ಯ’ದ ಲಕ್ಷಣವಾಗುವುದಾದರೆ, ಕಟ್ಟಿಕೊಂಡ ಗಂಡನನ್ನು ತನ್ನ ಆಧ್ಯಾತ್ಮಸಾಧನೆಗಾಗಿ ಹೆಣ್ಣು ಬಿಟ್ಟು ಹೋಗುವುದೂ ವೈರಾಗ್ಯ ಯಾಕೆ ಆಗುವುದಿಲ್ಲ ಎನ್ನುವುದನ್ನು,  ಆಕೆ ಕೌಶಿಕನನ್ನು ಬಿಟ್ಟು ಹೊರಟ ಸಂದರ್ಭವು ಸಾಂಕೇತಿಸುತ್ತದೆ ಎಂದು ಭಾವಿಸುವುದು ತಪ್ಪೇನೂ ಆಗುವುದಿಲ್ಲ.

ವಚನ ಚಳುವಳಿ ಲೌಕಿಕ ದಾಂಪತ್ಯ ಜೀವನವನ್ನು ಆಧ್ಯಾತ್ಮ ಸಾಧನೆಯ ನೆಲೆಗಟ್ಟನ್ನಾಗಿ ಒಪ್ಪಿಕೊಂಡಿತ್ತು. ಹಾಗೆಯೆ ಈ ಲೋಕಜೀವನವನ್ನೂ ಒಪ್ಪಿಕೊಂಡಿತ್ತು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬ ಜೇಡರ ದಾಸಿಮಯ್ಯನ ಮಾತೂ, ‘ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ’ ಎಂಬ ಬಸವಣ್ಣನವರ ಮಾತೂ, ಈ ನಿಲುವಿಗೊಂದು ನೆಲೆಗಟ್ಟನ್ನು ಹಾಕಿದ್ದವು. ಸಂಸಾರದಲ್ಲಿದ್ದೂ ಶಿವಯೋಗವನ್ನು ಸಾಧಿಸಬಹುದು ಎಂಬ ಈ ಧರ್ಮಸೂತ್ರವೇ ಬಹುಶಃ ಬಹುಜನರನ್ನು ಈ ಚಳುವಳಿಯೊಳಕ್ಕೆ ಆಕರ್ಷಿಸಿರಬಹುದು. ಹಾಗೆ ನೋಡಿದರೆ ಈ ಶರಣ ಧರ್ಮದ ಚಳುವಳಿಯಲ್ಲಿ ಪಾಲುಗೊಂಡವರೆಲ್ಲ ಬಸವಣ್ಣನವರಿಂದ ಮೊದಲುಗೊಂಡು, ಸಂಸಾರಿಗಳೇ, ಗೃಹಸ್ಥರೇ ಮತ್ತು ಗೃಹಸ್ಥರಲ್ಲದ ಇತರ ಹಿರಿಯರು ಯಾರೂ ಗೃಹಸ್ಥನಾಗಿರುವುದು ಆಧ್ಯಾತ್ಮ ಸಾಧನೆಗೆ ಒಂದು ಆತಂಕ ಎಂಬ ಮಾತನ್ನು ಹೇಳಿದವರಲ್ಲ. ಹೀಗಿರುವಾಗ ಲೌಕಿಕ ದಾಂಪತ್ಯದ ಮೂಲವಾದ ಮದುವೆಯ ಕಲ್ಪನೆಯನ್ನೇ ಮಹಾದೇವಿ ಪ್ರಶ್ನಿಸಿದಳು: ಮತ್ತು ಸಂದರ್ಭದ ಒತ್ತಡದಿಂದ ತಾನು ಮದುವೆಯಾಗಬೇಕಾಗಿ ಬಂದ ಗಂಡನನ್ನೇ ಬಿಟ್ಟು ಬಂದ ಈ ಹೆಣ್ಣು ಮಗಳ ನಡವಳಿಕೆ, ಲೌಕಿಕ ದಾಂಪತ್ಯವನ್ನು ಮೂಲಮಾನವಾಗಿ ಒಪ್ಪಿಕೊಂಡ ವಚನ ಚಳುವಳಿಯ ನಿಲುವಿಗೆ ವಿರೋಧವಾಗುವುದಿಲ್ಲವೆ- ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೆ ಉದ್ಭವಿಸುತ್ತದೆಯಲ್ಲದೆ, ಅಕ್ಕನ ಈ ನಡವಳಿಕೆ ಈ ವಚನ ಚಳುವಳಿಯಲ್ಲಿ ಪಾಲುಗೊಂಡ ಮಹಿಳೆಯರಿಗೆ ಹೇಗೆ ಮಾದರಿಯಾದೀತು ಎಂಬ ಸಂಶಯಕ್ಕೆ ಅವಕಾಶ ಮಾಡಿಕೊಡುತ್ತದೆ. ಆದರೂ ಅಕ್ಕನ ನಿಲುವನ್ನು ಅಂದಿನ ಶರಣರು ಒಪ್ಪಿಕೊಂಡರು, ಗೌರವಿಸಿದರು. ಅವಳನ್ನು ‘ಅಕ್ಕ’ ಎಂಬ ಪೂಜ್ಯಭಾವದಿಂದ ಹೊಗಳಿದರು. ಯಾಕೆ?

ಯಾಕೆಂದರೆ, ಅಕ್ಕ ‘ಮದುವೆ’ಯನ್ನು ನಿರಾಕರಿಸಿದವಳಲ್ಲ; ಮದುವೆ ಎಂಬ ವ್ಯವಸ್ಥೆಯನ್ನು ಪ್ರಶ್ನಿಸಿದಳು, ಪ್ರತಿಭಟಿಸಿದಳು; ‘ಮದುವೆ’ಯಲ್ಲಿ ಹೆಣ್ಣಿನ ಆಯ್ಕೆಯ ಸ್ವಾತಂತ್ರ್ಯವನ್ನು ತಿರಸ್ಕರಿಸುವ  ಪ್ರವೃತ್ತಿಯನ್ನು ವಿರೋಧಿಸಿದಳು. ಅಲ್ಲದೆ ಅವಳ ಮದುವೆಯ ಕಲ್ಪನೆ ಲೌಕಿಕವಾದದ್ದಲ್ಲ; ಅನುಭಾವಿಕವಾದದ್ದು. ಅಂದರೆ ತಾನು ‘ಹೆಣ್ಣು’, ತನ್ನ ಬದುಕಿನ ಗಮ್ಯವಾದ ಆ ದೈವ ‘ಗಂಡು’ ಎನ್ನುವ ಭಾವನೆ ಅದು. ವೀರಶೈವ ಪರಿಭಾಷೆಯಲ್ಲಿ ಹೇಳುವುದಾದರೆ ‘ಶರಣಸತಿ ಲಿಂಗಪತಿ’. ವೈಷ್ಣವ ಪರಿಭಾಷೆಯಲ್ಲಿ ಹೇಳುವುದಾದರೆ ‘ಮಧುರ ಭಾವ.’

ಹಾವಿನ ಬಾಯ ಹಲ್ಲ ಕಳೆದು
ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯಾ
ಚೆನ್ನಮಲ್ಲಿಕಾರ್ಜುನ ನೀನೊಲಿದವರು
ಕಾಯಗೊಂಡಿದ್ದರೆನಬೇಡ       (ವ. ೧೫೭ : ಡಾ.ಎಲ್. ಬಸವರಾಜು)

ಎಂದರೆ ಸಂಸಾರ ಎನ್ನುವುದು ತ್ಯಾಜ್ಯವೇನಲ್ಲ. ಆದರೆ ಅದು ವಿಷದ ಹಲ್ಲುಗಳಿರುವ ಸರ್ಪವೆಂಬ ಅರಿವಿರಬೇಕು. ಈ ಹಾವಿನ ಬಾಯ ಹಲ್ಲುಗಳನ್ನು- ಅಂದರೆ ಕಾಮ ಕ್ರೋಧಾದಿಗಳನ್ನು- ಕಿತ್ತು ಹಾಕಿ ಬದುಕುವುದಾದರೆ ಹಾವಿನ ಸಂಗವೇ ಲೇಸು. ಆದರೆ ಸಂಸಾರವನ್ನು ಹೀಗೆ ಗೆದ್ದು ಬದುಕಲು ಚೆನ್ನಮಲ್ಲಿಕಾರ್ಜುನನ ಒಲುಮೆ ಅಗತ್ಯ. ಆದ ಕಾರಣ ನಿಜವಾದ ಭಕ್ತರಾಗಿ ಸಂಸಾರದಲ್ಲಿ ಬದುಕುವವರೂ ಗೌರವಾರ್ಹರೇ ಎಂಬುದು ಅಕ್ಕನ ನಿಲುವು; ಮತ್ತು ತನ್ನ ದಾರಿಯೇ ಬೇರೆ ಎಂಬುದನ್ನು ಕಂಡುಕೊಂಡ ಅಕ್ಕ, ತಾನು ಹಿಡಿದ ದಾರಿಯೇ ಸರಿ, ಆದಕಾರಣ ಉಳಿದವರು ಅದನ್ನು ಅನುಸರಿಸಬೇಕೆಂದು ಎಂದೂ ಹೇಳಲಿಲ್ಲ. ಯಾಕೆಂದರೆ ಆಧ್ಯಾತ್ಮ ಸಾಧನೆ ಎಂಬುದು ಮೂಲತಃ ವೈಯಕ್ತಿಕವಾದದ್ದು.

ತನ್ನ ಇಷ್ಟ ದೈವವನ್ನು ತನ್ನ ಗಂಡನೆಂದು ಭಾವಿಸಿದ ಅಕ್ಕನ ದೈವದ ಕಲ್ಪನೆ ಅಂದಿನ ವೀರಶೈವ ಧರ್ಮದ ದೇವರ ಕಲ್ಪನೆಯಿಂದ ಭಿನ್ನವಾಗಿದೆ. ಆಕೆಯ ದೈವವಾದ ಮಲ್ಲಿಕಾರ್ಜುನ ಪರಮ ಸಾಕಾರ ಸುಂದರಮೂರ್ತಿ. ಅಕ್ಕ ಆಗಾಗ ‘ರೂಹಿಲ್ಲದ ಚೆಲುವ’ನೆಂದು ಅವನನ್ನು ವರ್ಣಿಸಿದರೂ, ಅವಳ ಕಣ್ಣಿಗೆ ಮುಖ್ಯವಾಗಿ ಆತ ಸೌಂದರ್ಯದ ಮೂರ್ತಿಯೆ ಹೊರತು, ವೀರಶೈವದ ‘ಇಷ್ಟಲಿಂಗ’ ಪ್ರತಿನಿಧಿಸುವ ನಿರಾಕಾರಕ್ಕೆ ಸಮೀಪವಾದ ಸಂಕೇತವಲ್ಲ. ಯಾಕೆಂದರೆ ದೈವವನ್ನು ಗಂಡೆಂದು ಅಥವಾ ಗಂಡನೆಂದು ಕಲ್ಪಿಸಿಕೊಂಡ ಅಕ್ಕನ ಕಣ್ಣಿಗೆ, ಆತ ಸರ್ವೇಂದ್ರಿಯ ಸಾಕಾರ ಸುಂದರನಾಗಿಯೆ ಕಾಣುತ್ತಾನೆ. ಆತನೊಂದಿಗೆ ಈಕೆ ಒಂದಾಗುವ ಸ್ಥಿತಿ ಕೇವಲ ‘ಬಯಲ’ ಅಥವಾ ಬೆಳಕಿನ ಅಥವಾ ಕೇವಲ ಜ್ಯೋತಿಯ ಸ್ಥಿತಿ ಮಾತ್ರವಾಗದೆ ಅದು ಉತ್ಕಟವಾದ ಪ್ರಣಯಾನುಭವವಾಗಿದ್ದು, ಶೃಂಗಾರದ ರೂಪಕಗಳ ಮೂಲಕವಾಗಿಯೆ ವರ್ಣಿತವಾಗಿದೆ.

ಅಕ್ಕನ ಅನುಭಾವ ಚೆನ್ನಮಲ್ಲಿಕಾರ್ಜುನನನ್ನು ಕುರಿತ ಕನಸು-ಹಂಬಲ ಹಾಗೂ ತಳಮಳಗಳ ರೂಪದ ಅನ್ವೇಷಣೆಯ ಸ್ವಿತಿಯಾಗಿರುವುದರಿಂದ, ಮುಖ್ಯವಾಗಿ ಅದು ಗಾಢವಾದ ಅಂತರ್ಮುಖ ಪ್ರವೃತ್ತಿಯಾಗಿದೆ. ಬಸವಣ್ಣನವರದು ಮುಖ್ಯವಾಗಿ ಸಮಾಜ ಕ್ಷೇಮ ಕಾತರವಾದ ಬಹಿರ್ಮುಖ ಪ್ರವೃತ್ತಿ; ಅಲ್ಲಮನದಾದರೋ ಇದ್ದೂ ಇಲ್ಲದಂತಹ ನೆಲೆಯಲ್ಲಿ ಸಂಚರಿಸುತ್ತಾ, ಈ ಎಲ್ಲವನ್ನೂ ಮೀರಿದ ಒಂದು ಊರ್ಧ್ವಮುಖ ಪ್ರವೃತ್ತಿ. ಅಕ್ಕನದು ಅಂತರ್ಮುಖ ಪ್ರವೃತ್ತಿಯಾದುದರಿಂದ ಸಮಾಜ ಸುಧಾರಣಾ ಪರವಾದ ಕಾಳಜಿಗಳು ಅವಳಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಆಕೆ ತನ್ನೊಂದಿಗೆ ತಾನು ಮಾತನಾಡಿಕೊಂಡಿದ್ದೆಲ್ಲ ಅದ್ಭುತವಾದ ಭಾವಗೀತೆಯ ಗುಣವನ್ನು ಪ್ರಕಟಿಸುತ್ತದೆ. ಆಗಾಗ ಆಕೆ ಲೋಕದೊಂದಿಗೆ ಮಾತನಾಡಿದರೂ ಅದು ತನ್ನ ಧೈರ್ಯಕ್ಕೆ, ಸಮಾಧಾನಕ್ಕೆ ಹಾಗೂ ತನ್ನ ನಡವಳಿಕೆಯ ಸಮರ್ಥನೆಗೆ. ತಾನೊಲಿದ ಗಂಡನೊಂದಿಗೆ ತನಗೆ ಒದಗಿದ ವಿರಹ ಹಾಗೂ ಆತನೊಂದಿಗೆ ತಾನು ಒಂದಾಗುವ ಉತ್ಕಟವಾದ ಹಂಬಲದ ಪ್ರಯಾಣದ ಉದ್ದಕ್ಕೂ ಅವಳು ಆಡುವ ಮಾತೆಲ್ಲ ಭಾರತೀಯ ಪ್ರೇಮಕಾವ್ಯದ ವಿರಹಗೀತೆಗಳ ಮಾದರಿಗಳಂತಿವೆ. ಅವಳ ವಚನಗಳಲ್ಲಿ ಉತ್ಕಟವಾದ ಶೃಂಗಾರ ಭಾವದ ಅನೇಕ ಕ್ಷಣಗಳು ದಾಖಲಾಗಿವೆ. ಈ ಅರ್ಥದಲ್ಲಿ ಅಕ್ಕಮಹಾದೇವಿ ಕನ್ನಡದ ಮೊದಲ ಹಾಗೂ ಮೊದಲ ದರ್ಜೆಯ ಕವಯಿತ್ರಿಯಾಗಿದ್ದಾಳೆ.

ಅಕ್ಕ ಏಕಾಂಗಿಯಾದ, ಆದರೆ ನಿಜವಾಗಿಯೂ ಧೀರಳಾದ ಹೆಣ್ಣು.  ಲೋಕದ ನಿಂದೆ, ಅಪವಾದ ಇತ್ಯಾದಿಗಳ ಬಗ್ಗೆ ಒಂದಿಷ್ಟೂ ತಲೆಕೆಡಿಸಿಕೊಂಡವಳಲ್ಲ. ನಿಜವಾದ ಆಧ್ಯಾತ್ಮ ಸಾಧಕರಲ್ಲಿ ಕಂಡು ಬರುವ ನಿರ್ಭಯತೆ ಆಕೆಯ ವ್ಯಕ್ತಿತ್ವದ ಲಕ್ಷಣವಾಗಿದೆ.

(ಆಧಾರ:  ಈ ಲೇಖನವು ರಾಷ್ಟ್ರಕವಿ. ಜಿ. ಎಸ್. ಶಿವರುದ್ರಪ್ಪನವರ ಅಕ್ಕಮಹಾದೇವಿ ಲೇಖನದ ಕಿರುರೂಪ.  ಅಕ್ಕನ ಕುರಿತಾದ ಸುದೀರ್ಘ ಲೇಖನವನ್ನು ಇಲ್ಲಿ ಓದಬಹುದು http://kanaja.in/?p=14711)

No comments:

Post a Comment