ಜನನ: ಜುಲೈ 29, 1884- ನಿಧನ: 23 ನವೆಂಬರ್ 1946
“ಕನ್ನಡಕ್ಕೊಬ್ಬರೇ ಕೈಲಾಸಂ” ಎಂಬುದು ಪ್ರಸಿದ್ಧ ಮಾತು. ಒಮ್ಮೆ ಕೈಲಾಸಂರ ಆತ್ಮೀಯರೂ, ಅಭಿಮಾನಿಯೂ ಆಗಿದ್ದ ಅ.ನ.ಕೃ ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರಿತು ಅವರು ಜಗತ್ತಿನ ನಾಟಕ ಸಾಹಿತ್ಯದಲ್ಲಿ ಶ್ರೇಷ್ಠ ವಿಡಂಬನಕಾರರ ಪೈಕಿ ಆರನೆಯ ಸ್ಥಾನದಲ್ಲಿದ್ದಾರೆ ಎಂದು ಹೇಳಿ, ಉಳಿದವರು ಮೊಲಿಯರ್, ಅರಿಸ್ಟೋಫೆನಿಸ್, ವಾಲ್ಟೇರ್, ಸ್ವಿಫ್ಟ್ ಹಾಗೂ ಬರ್ನಾಡ್ ಷಾ ಎಂದು ಬರೆದಿದ್ದರು. ಇದಕ್ಕೆ ಉದಾಹರಣೆಯಾಗಿ ಅವರು ಕೈಲಾಸಂ ಅವರ ‘ನಮ್ ಬ್ರಾಹ್ಮಣ್ಕೆ’, ‘ಟೊಳ್ಳುಗಟ್ಟಿ’, ‘ತಾಳೀ ಕಟ್ಟೋಕ್ಕೂಲೀನೇ?’, ‘ಬಂಡ್ವಾಳ್ವಿಲ್ಲದ ಬಡಾಯಿ’, ‘ಹೋಂರೂಲು’ ನಾಟಕಗಳ ಹಲವಾರು ಸನ್ನಿವೇಶಗಳನ್ನು ಉದ್ಘರಿಸುತ್ತಿದ್ದರು.
ಕೈಲಾಸಂ ಅವರು ಈ ಲೋಕವನ್ನಗಲಿ ಸುಮಾರು ಏಳು ದಶಕಗಳೇ ಕಳೆದಿವೆ. ಅಂದರೆ ಇಂದಿನ ವೃದ್ಧರಲ್ಲೂ ಬಹಳಷ್ಟು ಜನ ಅವರ ಕಾಲದಲ್ಲಿ ಇರಲಿಲ್ಲ. ಹಾಗಿದ್ದರೂ ಕೈಲಾಸಂ ಅವರ ಕುರಿತ ಬರಹಗಳು, ಅವರು ಜೋಕುಗಳು, ಉತ್ಸಾಹ ಉಕ್ಕಿಸುವ ಪದ್ಯದ ಧಾಟಿಗಳು ಇವುಗಳೆಲ್ಲದರಿಂದ ಅವರು ಒಂದು ಪ್ರೀತಿಪಾತ್ರ ಕಥಾನಕವಾಗಿ ನಮ್ಮ ನಡುವೆ ಉಳಿದಿದ್ದಾರೆ.