Translate in your Language

Tuesday, July 29, 2014

ಟಿ. ಪಿ. ಕೈಲಾಸಂ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಜನನ: ಜುಲೈ 29, 1884- ನಿಧನ: 23 ನವೆಂಬರ್ 1946
ಕನ್ನಡಕ್ಕೊಬ್ಬರೇ ಕೈಲಾಸಂ” ಎಂಬುದು ಪ್ರಸಿದ್ಧ ಮಾತು. ಒಮ್ಮೆ ಕೈಲಾಸಂರ ಆತ್ಮೀಯರೂ, ಅಭಿಮಾನಿಯೂ ಆಗಿದ್ದ ಅ.ನ.ಕೃ ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರಿತು ಅವರು ಜಗತ್ತಿನ ನಾಟಕ ಸಾಹಿತ್ಯದಲ್ಲಿ ಶ್ರೇಷ್ಠ ವಿಡಂಬನಕಾರರ ಪೈಕಿ ಆರನೆಯ ಸ್ಥಾನದಲ್ಲಿದ್ದಾರೆ ಎಂದು ಹೇಳಿ, ಉಳಿದವರು ಮೊಲಿಯರ್, ಅರಿಸ್ಟೋಫೆನಿಸ್, ವಾಲ್ಟೇರ್, ಸ್ವಿಫ್ಟ್ ಹಾಗೂ ಬರ್ನಾಡ್ ಷಾ ಎಂದು ಬರೆದಿದ್ದರು. ಇದಕ್ಕೆ ಉದಾಹರಣೆಯಾಗಿ ಅವರು ಕೈಲಾಸಂ ಅವರ ‘ನಮ್ ಬ್ರಾಹ್ಮಣ್ಕೆ’, ‘ಟೊಳ್ಳುಗಟ್ಟಿ’, ‘ತಾಳೀ ಕಟ್ಟೋಕ್ಕೂಲೀನೇ?’, ‘ಬಂಡ್ವಾಳ್ವಿಲ್ಲದ ಬಡಾಯಿ’, ‘ಹೋಂರೂಲು’ ನಾಟಕಗಳ ಹಲವಾರು ಸನ್ನಿವೇಶಗಳನ್ನು ಉದ್ಘರಿಸುತ್ತಿದ್ದರು. 

ಕೈಲಾಸಂ ಅವರು ಈ ಲೋಕವನ್ನಗಲಿ ಸುಮಾರು ಏಳು ದಶಕಗಳೇ ಕಳೆದಿವೆ. ಅಂದರೆ ಇಂದಿನ ವೃದ್ಧರಲ್ಲೂ ಬಹಳಷ್ಟು ಜನ ಅವರ ಕಾಲದಲ್ಲಿ ಇರಲಿಲ್ಲ. ಹಾಗಿದ್ದರೂ ಕೈಲಾಸಂ ಅವರ ಕುರಿತ ಬರಹಗಳು, ಅವರು ಜೋಕುಗಳು, ಉತ್ಸಾಹ ಉಕ್ಕಿಸುವ ಪದ್ಯದ ಧಾಟಿಗಳು ಇವುಗಳೆಲ್ಲದರಿಂದ ಅವರು ಒಂದು ಪ್ರೀತಿಪಾತ್ರ ಕಥಾನಕವಾಗಿ ನಮ್ಮ ನಡುವೆ ಉಳಿದಿದ್ದಾರೆ. 
ಕಾಸೀಗೋಹ್ದ ನಮ್ ಭಾವ ಕಭ್ಭಣದ್ ದೋಣಿಲಿ...
ಪೌರಾಣಿಕ ನಾಟಕಗಳ ಆವರಣದಲ್ಲಿದ್ದ ಕನ್ನಡ ಜನತೆಗೆ ಸಾಮಾಜಿಕ ಸಮಸ್ಯೆಗಳನ್ನು ರಂಗಮಂಟಪವೇರಿಸಿ ಹೊಸದೊಂದು ಯುಗವನ್ನೇ ಪ್ರಾರಂಭಿಸಿದ ಕೀರ್ತಿ ಕೈಲಾಸಂ ಅವರಿಗೆ ಸಲ್ಲತಕ್ಕದ್ದು ಎಂಬುದಂತೂ ನಿರ್ವಿವಾದ. ಪ್ರಥಮ ಬಾರಿಗೆ ಈ ಸಾಮಾಜಿಕ ನಾಟಕಯುಗದ ನಾಂದಿಯಾಗಿ ಅವರು ನೀಡಿದ ಕೊಡುಗೆ ‘ಟೊಳ್ಳು ಗಟ್ಟಿ’. ಇದರಲ್ಲಿ ಕೈಲಾಸಂ ಜನತೆಗೆ ತಮ್ಮನ್ನು ಪರಿಚಯ ಮಾಡಿಕೊಡುತ್ತಾ “ಪ್ರಹಸನ ಪ್ರಪಿತಾಮಹ ಚಂಡ ಪ್ರಚಂಡ ಗುಂಡೂರಾಯ ನಮೋಸ್ತುಮೇ” ಎಂದು ಕನ್ನಡಿ ಹಿಡಿದು ಬಂದು ತಮ್ಮ ಕಾಲಿಗೆ ತಾವೇ ಸಾಷ್ಟಾಂಗವರ್ಪಿಸಿಕೊಂಡರು. 

ಅಂದಿನ ನೂಕುನುಗ್ಗಲಿನ ರಂಗಮಂದಿರದೊಳಗೆ ಗಡ್ಡಗಳಿಲ್ಲದ, ಗದೆ ಕತ್ತಿಗಳನ್ನೇ ಕಾಣದ, ಕಿರೀಟಾದಿ ಆಭರಣರಹಿತವಾದ ಜನಸಾಮಾನ್ಯರು ಪ್ರವೇಶ ಮಾಡುವುದೆಂದರೇನು? ಇಂತಹ ಸಮಯದಲ್ಲಿ ಕೈಲಾಸಂ ತಮ್ಮ ಹಾವಾಡಿಗನ ಬುಟ್ಟಿಯಲ್ಲಿ ಕಟ್ಟಿ ತಂದ, ಸಾಮಾನ್ಯ ಮಾನವರಾದ ರಂಗಣ್ಣ, ರಾಮಣ್ಣ, ಅಹೋಬ್ಲು, ನಾಗತ್ತೆ, ಸುಬ್ಬಮ್ಮ, ಪಾತು, ಸಾತು, ಬಾಳು, ನರಸಿಂಹಯ್ಯ, ಪೋಸ್ಟ್ ಮನ್, ಗಡಫ್ ಖಾನ್, ಪೋಲಿಕಿಟ್ಟಿ, ಕುಪ್ಪಣ್ಣ ಇತ್ಯಾದಿ ಮಂದಿಯನ್ನು ಧೈರ್ಯವಾಗಿ ರಂಗಮಂಟಪಕ್ಕೇರಿಸಿದರು. ಈ ಕೈಲಾಸಂ ಪಾತ್ರಗಳ ಮಾತಿನ ಚಕಮಕಿ, ವಿನೋದಪೂರ್ಣ ವಿವಾದಗಳು, ವಿಚಿತ್ರ ಸನ್ನಿವೇಶಗಳು ಜನರನ್ನು ಕಕ್ಕಾಬಿಕ್ಕಿ ಮಾಡಿದವು. ಈ ವಿಚಿತ್ರ ವ್ಯಕ್ತಿಗಳ ನಡೆ ನುಡಿಗಳ ಆಕರ್ಷಣೆಗೆ ಪ್ರೇಕ್ಷಕರು ಮಾರುಹೋದರು. ಕನ್ನಡ ನಾಟಕ ರಂಗಕ್ಕೆ ಹತ್ತಿದ್ದ ಪೌರಾಣಿಕ ತೆವಲು ಬಿಟ್ಟುಹೋಯಿತು. ಸಾಮಾನ್ಯ ಜನರ ದಿನನಿತ್ಯದ ಜೀವನದ ಹಿಂದೆ ಅಡಗಿರುವ ಕಾಪಟ್ಯ, ವಂಚನೆ, ನಟನೆ, ಆಟಾಟೋಪ, ಅಟ್ಟಹಾಸ, ಮೋಸ, ಠಕ್ಕುಗಳನ್ನೆಲ್ಲಾ ಈ ನಾಟಕಗಳು ಬಯಲು ಮಾಡಿದವು. ಇಂತಹ ವೈವಿಧ್ಯಮಯ ಆಕರ್ಷಣೆ ಎದುರಿನಲ್ಲಿ ದೇವದಾನವರ ನಾಟಕೀಯ ಆರ್ಭಟಗಳು ಹುಸಿ ಎನಿಸಿದವು. ಹೀಗೆ ಕನ್ನಡದ ಸಾಮಾಜಿಕ ನಾಟಕಗಳ ಹೊಸ ಯುಗ ಆರಂಭವಾಯಿತು. ಇದರ ಆದ್ಯ ಪ್ರವರ್ತಕ ಶ್ರೀ ತ್ಯಾಗರಾಜ ಪರಮಶಿವ ಕೈಲಾಸಂ.

ಕೈಲಾಸಂ ಅವರು ಹುಟ್ಟಿದ್ದು ಜುಲೈ 29, 1884ರಲ್ಲಿ. ಅವರು ಜಸ್ಟೀಸ್ ಪರಮಶಿವ ಐಯ್ಯರ್ ಅವರ ಮಕ್ಕಳು. ಇವರ ವಿದ್ಯಾಭ್ಯಾಸ ಮೈಸೂರು, ಬೆಂಗಳೂರು, ಹಾಸನಗಳಲ್ಲಾಯಿತು. ಕಾಲೇಜು ವಿದ್ಯಾಭ್ಯಾಸ ಮತ್ತು ಪ್ರಶಸ್ತಿ ಪಡೆದುದು ಮದ್ರಾಸಿನಲ್ಲಿ, ಬಾಲ್ಯದಿಂದಲೇ ಕೈಲಾಸಂ ಚಾಣಾಕ್ಷಮತಿ ಎಂದು ಹೆಸರುಗಳಿಸಿದ್ದು ಪರೀಕ್ಷೆಗಳಲ್ಲಿ ‘ಫಸ್ಟ್ ಕ್ಲಾಸು’ಗಳನ್ನೇ ಸಿಗಿದು ಸಿಪ್ಪೆ ಹಾಕಿದ್ದರು. ಕಡೆಗೆ ಭೂಗರ್ಭ ಶಾಸ್ತ್ರದ ಉನ್ನತ ಪದವಿಗಾಗಿ ಲಂಡನ್ನಿನ ರಾಯಲ್ ಕಾಲೇಜಿಗೆ ಸೇರಿ ಅಲ್ಲಿ ಪ್ರಶಸ್ತಿ ಪಡೆದು ಬಂದರು. ಇಂಗ್ಲೆಂಡಿನಲ್ಲಿದ್ದ ಹಲವು ವರ್ಷಗಳ ಕಾಲದಲ್ಲಿ ಇವರು ಅಲ್ಲಿನ ಸರ್ಕಸ್ ಕೂಟಗಳು, ನೃತ್ಯಮಂದಿರಗಳು, ನಾಟಕ ರಂಗಗಳ ಅಮೂಲಾಗ್ರ ಪರಿಚಯ ಮಾಡಿಕೊಂಡು ಬಂದರು. ಇದಲ್ಲದೆ ಯೂಜಿನ್ ಸಾಂಡೋ ಎಂಬ ವ್ಯಾಯಾಮಪಟುವಿನ ಬಳಿ ‘ಫಿಸಿಕಲ್ ಕಲ್ಚರ್’ ಶಿಕ್ಷಣ ಪಡೆದರು. ಇಂಗ್ಲೆಂಡಿನ ಪುಟ್ ಬಾಲ್ ಟೀಮಿನ ಗೊಲಿಯಾಗಿಯೂ ಆಡುತ್ತಿದ್ದರಂತೆ. ಇವರ ಮೈಕಟ್ಟು ಅತ್ಯಂತ ದೃಢವಾದುದೂ ಆಗಿತ್ತು. ಇಷ್ಟಲ್ಲದೆ ಅಲ್ಲಿನ ಸಂಗೀತ ಸಾಹಿತ್ಯಗಳಲ್ಲಿ ಇವರ ಪ್ರೌಢಿಮೆ ಅಸದಳವಾಗಿತ್ತು. ಇವರ ‘ತಿಪ್ಪಾರಳ್ಳಿ’, ‘ಕೊಳೀಕೆರಂಗಾ’, ‘ನೋಡಿದ್ರಾ ನಂ ನಂಜೀನಾವ’ ಕೇಳಿದರೆ ಪಾಶ್ಚಾತ್ಯರ ಸಂಗೀತದ ಮರ್ಮಗಳ ಐತಿಹ್ಯ ಇವರಿಗೆ ಎಷ್ಟುಮಟ್ಟಿಗೆ ಕರತಲಾಮಲಕವಾಗಿತ್ತೆಂದು ಊಹಿಸಬಹುದು. ಇವರ ಇಂಗ್ಲಿಷ್ ಕವನಗಳಲ್ಲೂ, ನಾಟಕಗಳಲ್ಲೂ ಕಾಣ ಬರುವ ಶೈಲಿ ಇವರಿಗೆ ಆ ಭಾಷೆಯ ಮೇಲಿದ್ದ ಅಧಿಪತ್ಯವನ್ನು ಶೃತಪಡಿಸುತ್ತದೆ.

ಇವುಗಳೆಲ್ಲಕ್ಕೂ ಹೆಚ್ಚಾಗಿ ಇವರ ವಿನೋದಪ್ರಿಯತೆ ಇವರನ್ನು ಒಬ್ಬ ‘ಜೀನಿಯಸ್’ರನ್ನಾಗಿ ಮಾಡಿತು ಎನ್ನುವುದರಲ್ಲಿ ಸಂದೇಹವಿಲ್ಲ. ಇವರ ನಾಟಕದ ಪಾತ್ರಗಳನ್ನೇ ಒತ್ತಟ್ಟಿಗಿಟ್ಟರೂ ಇವರು ಕಟ್ಟುತ್ತಿದ್ದ ಅಣಕವಾಡುಗಳು, ಕುಂಟ್ಪದಿಗಳು, ವಕ್ರೋಕ್ತಿಗಳು, ಚುಟುಕಚಾಟೋಕ್ತಿಗಳು, ಜೋಕುಗಳು ಅಸಂಖ್ಯಾತವಾಗಿವೆ. ಇದನ್ನು ಕೇಳುವ ಜನ ಈಗಲೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಇಡೀ ಜೀವಮಾನ ಅವನ್ನು ಚಪ್ಪರಿಸುವುದು ವಾಡಿಕೆ. ಕೈಲಾಸಂ ಎಂದರೆ ಕುಚೋದ್ಯಕ್ಕೆ ಮತ್ತೊಂದು ಹೆಸರು ಎನ್ನುವಷ್ಟು ಇವರ ನುಡಿಕಟ್ಟುಗಳು ಪ್ರಸಿದ್ಧವಾಗಿವೆ.

ಕೈಲಾಸಂ ಸ್ವತಃ ವರದಾಚಾರ್ಯರ ನಾಟಕಗಳಲ್ಲಿ ಪಾತ್ರಧಾರಿಯಾಗಿದ್ದುದಲ್ಲದೆ ಆಚಾರ್ಯರು ತೀರಿಕೊಂಡಾಗ ಅವರ ಕಂಪೆನಿ ಯಜಮಾನ್ಯ ವಹಿಸಿಕೊಂಡುದು ಹಲವರಿಗೆ ತಿಳಿಯದು. ಅವರಿಗೆ ಅಂದಿನ ಪೌರಾಣಿಕ ನಾಟಕಗಳ ಸಂಪೂರ್ಣ ಪರಿಚಯವೇ ಅಲ್ಲದೆ ಅಯಾ ಹಾಡುಗಳ ಸರ್ವಲಕ್ಷಣಗಳೂ ಗೊತ್ತಿದ್ದವು. ಸ್ವತಃ ಅವರಿಗೆ ಸಂಗೀತದ ಅನುಭವವೇ ಅಲ್ಲದೆ ಸಂಗೀತ ಲಕ್ಷಣಶಾಸ್ತ್ರದ ಗಾಢ ಪರಿಚಯವಿತ್ತು. ಶಂಬರನ ಶೃಂಗಾರದಲ್ಲಿ ಅವರು ಹಂಸಧ್ವನಿ, ಶಹನ, ಫರಜ್, ಬೇಗಡೆ, ಕಮಾಚ್ ರಾಗಗಳ ಅತ್ಯುತ್ತಮ ಕೃತಿಗಳನ್ನು ರಚಿಸಿದ್ದಾರೆ. 

ಕೈಲಾಸಂ ಅವರ ನಾಟಕಗಳ ಉದ್ದಕ್ಕೂ ಜನ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದರೂ ಅದರ ಹಿನ್ನಲೆಯಲ್ಲಿ ನಮ್ಮ ಸಮಾಜದ ಅನಿಷ್ಟ ಪ್ರವೃತ್ತಿಗಳನ್ನು, ಕ್ಷಕಿರಣಗಳನ್ನು ಚೆಲ್ಲಿ ತೋರಿಸಿದ್ದಾರೆ. ದೊಡ್ಡ ರಕ್ತದವರಾಡುವ ಆಂಗ್ಲೋ ಕನ್ನಡ, ಶೆಟ್ರ ತೆಲುಗು, ಐಯ್ಯರಿ, ಐಯ್ಯಂಗಾರ್ಸ್, ಸಂಕೇತಿಗಳಾಡುವ ವಿಧವಿಧ ಶೃತಿಗಳಿರುವ ತಮಿಳು, ಗಡಫ್ ಖಾನರ ಉರ್ದು ಮಿಶ್ರಿತ ಕನ್ನಡ ಎಷ್ಟೊಂದು ರಸಭರಿತ ಎಂದು ವರ್ಣಿಸಲು ಸಾಧ್ಯವಿಲ್ಲ. ಇದು ಅತ್ಯಂತ ಶಕ್ತಿಯುತ ಎನ್ನಬೇಕು. 

ಕೈಲಾಸಂ ಭೂಗರ್ಭಶಾಸ್ತ್ರದಲ್ಲಿ ಅತ್ಯುನ್ನತ ಪದವಿ ಪಡೆದು ಶ್ರೀಮಂತ ವಂಶದ ಆಸರೆ ಇದ್ದು, ಸರ್ಕಾರಿ ಉದ್ಯೋಗ ದೊರಕಿದ್ದರೂ ಸಹಾ ಅದನ್ನೆಲ್ಲಾ ತೊರೆದರು. ಅವರಿಗೆ ಲಂಡನ್ನಿನಲ್ಲಿ ವೈಲ್ಡ್, ಷಾ, ಪೆರಿಡನ್, ಇಬ್ಸನ್, ಷೇಕ್ಸ್ಪಿಯರನ ನಾಟಕಗಳನ್ನು ನೋಡಿ ಅಂತೆಯೇ ನಮ್ಮ ನಾಟಕವನ್ನು ಇಂದಿನ ಯುಗಕ್ಕೆ ಕೊಂಡೊಯ್ಯುವುದೆಂತು ಎಂಬ ಚಿಂತೆ ಸರ್ವದಾ ಕಾಡುತ್ತಿದ್ದಿತು. ಅದಕ್ಕಾಗಿ ಅವರು ಸರ್ವಸ್ವವನ್ನೂ ತೊರೆದು ಅಲೆಮಾರಿಯಾದರು. “ಕೂತಲ್ಲಿ ಕಂಪೆನಿ... ನಿಂತಲ್ಲಿ ನಾಟ್ಕ” ಅವರು ಹೋದಲ್ಲೆಲ್ಲಾ ನಾಟಕವಾಡಿಸುವರು. ತಾವೇ 4 ಗಂಟೆಗಳ ಕಾಲ ಏಕಪಾತ್ರಾಭಿನಯ ಮಾಡಿ ಪ್ರದರ್ಶನಗಳನ್ನು ನೀಡುತ್ತಿದ್ದರು. ಅವರಿಗೆ ಕೈ ಬರಹದ ಪ್ರತಿ ಅವಶ್ಯವಿರಲಿಲ್ಲ. ನಾಲ್ಕಾರು ನಾಟಕಗಳನ್ನೂ, ನೂರಾರು ಹಾಡುಗಳನ್ನೂ, ಹಲವಾರು ಅಣಕುವಾಡುಗಳನ್ನೂ ನೀಡಿ, ಜನರನ್ನು ಚುಚ್ಚಿ ನಗಿಸುವರು. ಇವರ ಇಡೀ ಜೀವಮಾನವೇ ಹೀಗೆ ಜರುಗಿತು. ಇವರು ಮಾತನಾಡುವುದನ್ನು ಪೀಡಿಸಿ ಕೆಲವರು ಬರೆದುಕೊಂಡರೆ ಉಂಟು ಇಲ್ಲದಿದ್ದರೆ ಅದೂ ಇಲ್ಲ. ಇಂದು ಈ ಊರು, ನಾಳೆ ಮತ್ತೊಂದೂರು, ತಂಗುವ ಸ್ಥಳ ಅನಿರ್ದಿಷ್ಟ, ಅಡ್ರೆಸ್ ನಾಪತ್ತೆ ಈ ರೀತಿ ತಿರುಗಿದ ಇವರ ಜೀವನದಲ್ಲಿ ಸುವ್ಯವಸ್ಥಿತ ಕ್ರಮವೆಲ್ಲಿಂದ ಬಂದೀತು? ಇಷ್ಟಾಗಿ ಸುಮಾರು ಇಪ್ಪತ್ತೈದು ಕನ್ನಡ ನಾಟಕಗಳು, ಆರು ಇಂಗ್ಲಿಷ್ ನಾಟಕಗಳು ಅಚ್ಚಾಗಿವೆ. ಇದಕ್ಕೆ ಕಾರಣರಾದವರಲ್ಲಿ ಬಿ.ಎಸ್. ರಾಮರಾಯರು, ಕೆ. ಸಂಪದ್ಗಿರಿರಾಯರು, ಜಿ. ಪಿ. ರಾಜರತ್ನಂ, ಕೆ. ವಿ. ಅಯ್ಯರ್, ಟಿ. ತಾತಾಚಾರ್ಯ ಶರ್ಮ, ಎ. ಸೀತಾರಾಂ ಬಹುಮಟ್ಟಿಗೆ ಕಾರಣರಾದವರು. ಇದು ಕನ್ನಡ ನಾಡಿನ ಸೌಭಾಗ್ಯ ಎನ್ನಲು ಅಡ್ಡಿ ಇಲ್ಲ.

ಕೈಲಾಸಂ ಕನ್ನಡದಲ್ಲಿ ದುರಂತ ನಾಟಕಗಳನ್ನೇ ಬರೆಯಲಿಲ್ಲ ಎಂಬುವರನ್ನು ಹೊಡೆದೇಳಿಸುವಂತ ದುರಂತ ನಾಟಕ ‘ಬಹಿಷ್ಕಾರ’. ಮದುವೆಯಾಗದ ಕನ್ಯೆ, ಉಳಿದ ಕುಟುಂಬದವರಿಗೆ ಆಚಾರದ ಹೆಸರಿನಲ್ಲಿ ಸಮಾಜ ಕೊಡುವ ನರಕಯಾತನೆಯ ಕ್ರೌರ್ಯ ಇದರಲ್ಲಿ ಚಿತ್ರಿತವಾಗಿದೆ. ಕೈಲಾಸಂರವರಿಗೆ ಇಂಗ್ಲೀಷಿನಲ್ಲಿದ್ದ ಅದ್ವಿತೀಯ ಪಾಂಡಿತ್ಯ. ಷಾ, ವೈಲ್ಡ್, ಇಬ್ಸನ್, ಷೇಕ್ಸ್ಪಿಯರ್ ನಾಟಕಗಳನ್ನು ಇಡೀ ರಾತ್ರಿ ಅಭಿನಯಿಸುವ ಚಟ ಇವರಿಗಿತ್ತು. ಇವುಗಳ ಜೊತೆಗೆ ಪುರಾಣಗಳ ಅಗಾಧ ಪರಿಚಯದಿಂದಾಗಿ ಅವರು ಪರ್ಪಸ್, ಫುಲ್ಫಿಲ್ಮೆಂಟ್, ಬರ್ಡನ್, ಕರ್ಣ, ಕೀಚಕ ಇತ್ಯಾದಿ ನಾಟಕಗಳನ್ನು ಸೃಷ್ಟಿಸಿ ಹೋಗಿದ್ದಾರೆ. ಇದಲ್ಲದೆ ಅವರು ಇಂಗ್ಲಿಷಿನಲ್ಲಿ ಹಲವಾರು ಸುಂದರವಾದ ಕವನಗಳನ್ನೂ ರಚಿಸಿದ್ದಾರೆ. ಪೌರಾಣಿಕ ನಾಟಕಗಳಲ್ಲಂತೂ ಮಹಾಭಾರತ, ರಾಮಾಯಣಗಳಲ್ಲಿ ಕಾಣಬಂದ ವ್ಯಕ್ತಿಗಳನ್ನೆತ್ತಿಕೊಂಡು, ಅವರಿಗೆ ವಿನೂತನ ದೃಷ್ಟಿ ಮತ್ತು ಸಂದರ್ಭಗಳನ್ನು ಕಲ್ಪಿಸಿಕೊಂಡು ಚಿರಸ್ಮರಣೀಯ ಪಾತ್ರಗಳನ್ನು ಹೆಣೆದಿದ್ದಾರೆ. ಎಷ್ಟು ಬಗೆಯ ಶೃತಿಗಳು, ತಿರುವುಗಳು, ಮರ್ಮಗಳು, ಕ್ಷಣ ಕ್ಷಣಕ್ಕೂ ಎಷ್ಟು ಬಗೆಯ ಬದಲಾವಣೆಗಳು!

ಏಕಲವ್ಯ ಎಂಬ ನಿಷಾಧನು ದ್ರೋಣರು ಅರ್ಜುನನಿಗೆ ಹೇಳಿಕೊಡುತ್ತಿರುವ ಬಿಲ್ಲುವಿದ್ಯೆಯನ್ನು ಮರೆಯಲ್ಲಿ ನಿಂತು ಕಲಿಯುತ್ತಾನೆ. ದ್ರೋಣರು ಅವನ ಮಾನಸಿಕ ಗುರು. ಆದರೇನು ಅವನ ಮುಂದೆ ಅರ್ಜುನ ಒಬ್ಬ ಪೋರನೆನ್ನಬೇಕು. ಅರ್ಜುನ ಬಿಲ್ಲುವಿದ್ಯೆ ಕಲಿಯುವುದು ವಿಶ್ವದ ಅದ್ವಿತೀಯ ಬಿಲ್ಲುಗಾರನಾಗಲೆಂದು. ಇವನ ಧ್ಯೇಯ ಅಹಂಕಾರ ಮಿಶ್ರಿತವಾದುದು. ಇದು ರಾಜಸಗುಣದ ಪ್ರತೀಕ. ಆದರೆ ಏಕಲವ್ಯ ಕಲಿಯುವ ಧ್ಯೇಯ ತನ್ನ ಜಿಂಕೆಗಳನ್ನು ತೋಳಗಳಿಂದ ರಕ್ಷಿಸಲು. ಧ್ಯೇಯ ಅತ್ಯುಚ್ಚವಾದುದು. ಇದರಿಂದಾಗಿ ಏಕಲವ್ಯನ ಮುಂದೆ ಅರ್ಜುನ ಬೀಳಾಗಿ ಕಾಣುತ್ತಾನೆ. ಬಾಯಿಬಡುಕ, ಬಡಾಯಿಗಾರ, ಸ್ವಾರ್ಥಿ, ಅಹಂಕಾರಿ. ಇವನ ಮಾತುಗಳು ತೂಕವಿಲ್ಲದವು. ತದ್ವಿರುದ್ದವಾಗಿ ಏಕಲವ್ಯನ ವ್ಯಕ್ತಿತ್ವ ಅತ್ಯುನ್ನತವಾಗಿ ಕಂಗೊಳಿಸುತ್ತದೆ. ಕಡೆಗೆ ಬಲಗೈ ಹೆಬ್ಬೆಟ್ಟನ್ನು ಗುರುದಕ್ಷಿಣೆಯಾಗಿತ್ತೂ, ಮತ್ತೆ ಎಡಗೈನಲ್ಲಿ ಈಗ ಅದ್ವಿತೀಯ ಬಿಲ್ಲುಗಾರನಾಗುತ್ತಾನೆ. ಗೀತೆಯ ನಿಷ್ಕಾಮಕರ್ಮದ ಶ್ರೇಷ್ಠ ಬೋಧೆಯ ಪ್ರತೀಕ ಈ ನಾಟಕದಲ್ಲಿ ಅಭಿವ್ಯಕ್ತವಾಗಿದೆ. 

ಡಾ . ಸಿ. ಆರ್. ರೆಡ್ಡಿಯವರು ಮನಸಾರೆ ಹೊಗಳಿ ಕೈಲಾಸಂರನ್ನು “ಒಂದು ಅತಿ ಶ್ರೇಷ್ಠ ವಜ್ರ” ಎಂದು ಬಣ್ಣಿಸಿದುದು ಕರ್ಣ ನಾಟಕದ್ದ ಮುನ್ನುಡಿಯಲ್ಲಿದೆ. ಇಲ್ಲಿ ಕರ್ಣನ ಧೈರ್ಯ, ಸ್ಥೈರ್ಯ, ಶಕ್ತಿಸಾಮರ್ಥ್ಯ, ಸ್ವಾಮಿಭಕ್ತಿ, ನಿಷ್ಠೆ ಹಾಗೂ ಔದಾರ್ಯಗಳು ಆತನನ್ನು ಮುಗಿಲೆತ್ತರಕ್ಕೆ ಏರಿಸಿವೆ. ಆದರೆ ಎಡೆಬಿಡದೆ ಬೆನ್ನು ಹತ್ತಿದ ವಿಪ್ರಶಾಪ ಆತನನ್ನು ವಿನಾಶಕ್ಕೊಳಗಾಗಿಸುತ್ತದೆ. ಈ ದುರಂತ ನಾಟಕ ಶ್ರೇಷ್ಠ ಗ್ರೀಕ್ ದುರಂತ ನಾಟಕಕಾರರಾದ ಸೋಫಕ್ಲಿಸ್ ಮತ್ತು ಯುರಿಪಿಡಿಸರನ್ನು ಸ್ಮರಣೆಗೆ ತರುತ್ತದೆ. ಈ ಇಂಗ್ಲಿಷ್ ನಾಟಕಗಳಲ್ಲಿ ಕೈಲಾಸಂ ನಮ್ಮ ವೇದೋಪನಿಷತ್ತು, ಪುರಾಣಗಳಲ್ಲಿರುವ ಸಿದ್ಧಾಂತ, ತತ್ವಗಳನ್ನು ವಿಫುಲವಾಗಿ ಬಳಸಿಕೊಂಡು ಭಾರತೀಯ ಪರಂಪರೆಯ ಅಂತರಾರ್ಥವನ್ನು ಅತ್ಯಂತ ರಮ್ಯವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ವಿಪರೀತ ಆಡಂಬರ, ಅಲಂಕಾರಗಳ ಲೇಪ ಹೊಂದಿದ್ದರೂ ಕೈಲಾಸಂರಿಗೆ ಇಂಗ್ಲಿಷಿನ ಮೇಲಿದ್ದ ಪ್ರಭುತ್ವ ಅಗಾಧ ಎನ್ನಬೇಕು.

ಎಂತೂ ಪುರಾಣದ ಮಬ್ಬಿನಲ್ಲಿ ಮೈಮರೆತು, ಸತ್ಯದಿಂದ ದೂರ ಸಾಗಿ ಪುರಾಣಗಳಲ್ಲಿನ ಅದ್ಭುತಗಳನ್ನು ವಿಕೃತಗೊಳಿಸಿ ಇಂದಿನ ಸಮಾಜವನ್ನೇ ರಂಗಮಂಟಪಪದಿಂದ ದೂರತಳ್ಳಿದ್ದ ಜನತೆಗೆ, ಹೊಸ ಬಗೆಯ ಪ್ರತಿಭಾನ್ವಿತವಾದ, ಪ್ರಚಲಿತ ಸಮಸ್ಯೆಗಳತ್ತ ಕಣ್ಣು ಹೊರಳಿಸಿ ಸತ್ಯ ದರ್ಶನ ಮಾಡಿಸಿದ ಇಂದಿನ ಸಾಮಾಜಿಕ ನಾಟಕದ ‘ಪ್ರಪಿತಾಮಹ’ನಾದ ಕೈಲಾಸಂ ಇಡೀ ಜೀವನವನ್ನೇ ಇದಕ್ಕಾಗಿ ತೇದು ಹೋಗಿದ್ದಾರೆ. ಅವರ ಹಾಸ್ಯ ಪ್ರವೃತ್ತಿ, ಕುಚೋದ್ಯ ಕಚಗುಳಿ ಇಡುವ ಅಸಾಧಾರಣ ಪ್ರತಿಭೆ ಮೇಲ್ಮುಖ ಮಾತ್ರ. ಆದರ ಹಿಂದೆ ಅಡಗಿರುವ ದಾರುಣ ಪರಿಸ್ಥಿತಿಗೆ ಅವರು ಕನ್ನಡಿ ಹಿಡಿಯಲು ಮರೆಯಲಿಲ್ಲ. ಅವರ ಪ್ರತಿಭೆ ಬಹುಮುಖವಾದುದು, ಅಗಾಧವಾದುದು. 

ಕೈಲಾಸಂ 1945ರಲ್ಲಿ ಮದರಾಸಿನಲ್ಲಿ ನಡೆದ 29ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಅವರು ನಿಧನರಾದದ್ದು 23 ನವೆಂಬರ್ 1946ರಲ್ಲಿ. ಈ ಮಹಾನ್ ಪ್ರತಿಭೆಗೆ ಅವರ ಜನ್ಮದಿನ ಸಂದರ್ಭದಲ್ಲಿ ಶಿರಬಾಗೋಣ.

(ಆಧಾರ: ಇ. ಆರ್. ಸೇತೂರಾಮ್ ಅವರ ಕೈಲಾಸಂ ಕುರಿತ ಬರಹ ಮತ್ತು ಇಂಥವರೂ ಇದ್ದರಲ್ಲ ಎಂಬ ಬಿ. ಎಸ್. ಕೇಶವರಾವ್ ಅವರ ಕೃತಿಯ ಕೈಲಾಸಂ ಕುರಿತ ವಿಷಯಗಳನ್ನು ಈ ಲೇಖನ ಆಧರಿಸಿದೆ).

ಉಪಯುಕ್ತ

No comments:

Post a Comment