Translate in your Language

Friday, July 4, 2014

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹುಟ್ಟು ಹಬ್ಬದ ನೆನಪಿನಲ್ಲಿ

Goruru Ramaswamy Ayyengar
ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್  ಅವರು 1904ರ ಜುಲೈ 4ರಂದು ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಜನಿಸಿದರು.  ಅವರ ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷಮ್ಮನವರು.  ತಮ್ಮ ಹಳ್ಳಿಯಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಗೊರೂರರು ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧೀಜಿಯ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು.

 ಅನಂತರ ಅವರು ಗಾಂಧೀಜಿಯ ಆಶ್ರಮವನ್ನು ಸೇರಿ, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾದರು.  ಬಳಿಕ ಮದ್ರಾಸಿನ "ಲೋಕಮಿತ್ರ" ಮತ್ತು "ಭಾರತಿ" ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು.  ಹರಿಜನೋದ್ಧಾರ ಅದರ ಮುಖ್ಯ ಕಾರ್ಯವಾಗಿತ್ತು.   ಅದನ್ನು ಗೊರೂರರು ಶ್ರದ್ಧೆಯಿಂದ ನಿರ್ವಹಿಸಿದರು.  ಆಮೇಲೆ ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದ ಸಂಚಾಲಕರಾದರು.  ಅಲ್ಲಿಯೇ ಅವರ ಸಾಹಿತ್ಯ ಸೇವೆ ಮೊದಲಾಯಿತು.  1933ರಲ್ಲಿ ಗೊರೂರರು ತಮ್ಮ ಗ್ರಾಮಕ್ಕೆ ಮರಳಿ, ಮೈಸೂರು ಗ್ರಾಮ ಸೇವಾಸಂಘವನ್ನು ಸ್ಥಾಪಿಸಿ, ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರು.  1942ರ "ಚಲೇ ಜಾವ್" ಚಳವಳಿಯಲ್ಲಿ ಅವರು ಭಾಗವಹಿಸಿ, ತುರಂಗವಾಸವನ್ನು ಅನುಭವಿಸಿದರು.  ಸ್ವಾತಂತ್ರ್ಯ ಬಂದ ಮೇಲೆ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು.  ಅದು ಸ್ಥಾಪಿತವಾದ ಮೇಲೆ ಸುಮಾರು ಹನ್ನೆರಡು ವರ್ಷ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.  ಈ ಅವಧಿಯಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಅವರು ದುಡಿದರು.

ಗೊರೂರರು ಅನೇಕ ಗೌರವಗಳನ್ನು, ಪ್ರಶಸ್ತಿಗಳನ್ನು ಪಡೆದಿದ್ದಾರೆ.  ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ 1974ರಲ್ಲಿ ಗೌರವ ಡಿ.ಲಿಟ್ ಪದವಿಯನ್ನು ನೀಡಿತು.  ಅವರು 1982ರಲ್ಲಿ ಸಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.  ಅವರ "ಅಮೆರಿಕದಲ್ಲಿ ಗೊರೂರು" ಗ್ರಂಥಕ್ಕೆ 1980ರ ಕೆಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.

ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ಸೃಷ್ಟಿ ಸಮೃದ್ಧವಾದುದು.  ಪ್ರಬಂಧ, ಕಥೆ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಜೀವನ ಚಿತ್ರ, ಭಾಷಾಂತರ – ಹೀಗೆ ಅನೇಕ ಪ್ರಕಾರಗಳಿಗೆ ಅವರ ಕೊಡುಗೆ ಸಂದಿದೆ.  ಆದರೂ ಗೊರೂರರ ಸಿದ್ಧಿ, ಪ್ರಸಿದ್ಧಿಗಳಿಗೆ ಮುಖ್ಯವಾದ ಆಧಾರ, ಅವರ ಪ್ರಬಂಧಗಳು.  ಅವು ಹಲವು ದಶಕಗಳಿಂದ ಕನ್ನಡಿಗರಿಗೆ ಶುದ್ಧ ಸಂತೋಷವನ್ನೀಯುತ್ತಿವೆ.  ಇಂದಿಗೂ ಅವುಗಳ ಸ್ವಾರಸ್ಯ ಬತ್ತಿಲ್ಲ.  ತಮ್ಮ ಪ್ರಬಂಧ ಸಾಹಿತ್ಯದಿಂದ ನಾಡನ್ನು ನಗಿಸಿ ನಲಿಸಿದ್ದಾರೆ ಗೊರೂರರು.  ಹಾಗೆ ನೋಡಿದರೆ ನಮ್ಮ ಜನತೆಗೆ ನಗೆಯನ್ನು ಕಲಿಸಿದವರಲ್ಲಿ ಅವರು ಪ್ರಮುಖರು ಎನ್ನಬಹುದು. 

ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು.  "ಹೇಮಾವತಿ", ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ.  ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ.  ಇದರಿಂದ ಗೊರೂರರ ವಾಙ್ಮಯಕ್ಕೆ ಪ್ರಾದೇಶಿಕ ಸ್ವರೂಪ ಪ್ರಾಪ್ತವಾಗಿದ್ದರೂ ಅವರು ಕೊಡುವ ಜೀವನ ಚಿತ್ರಣ ಪ್ರಾದೇಶಿಕವಾಗಿರುವಂತೆ ಪ್ರಾತಿನಿಧಿಕವೂ ಆಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ.
Young Goruru

ಗಾಂಧೀವಾದಿ ಗೊರೂರರ ಜಾನಪದ ಪ್ರಜ್ಞೆ ಅದ್ಭುತವಾದುದು.  ಅವರು ಹೇಳುತ್ತಾರೆ:  "ನಾನು ಸಾಹಿತಿಗಿಂತ ಹೆಚ್ಚಾಗಿ ಜನಸಾಮಾನ್ಯರ ಮನುಷ್ಯ", ಇದು ಅವರ ನಂಬಿಕೆ:  "ಜಾನಪದ ಗುಣಗಳನ್ನೂ, ಶಕ್ತಿಯನ್ನೂ ಹೆಚ್ಚು ಹೆಚ್ಚು ನೋಡಿದಂತೆ, ಭಾರತವನ್ನು ಆಧುನಿಕ ನಾಗರೀಕತೆಯ ಸರ್ವನಾಶದಿಂದ ತಪ್ಪಿಸಬಲ್ಲಂತದ್ದು  ಜಾನಪದವೊಂದೆ ಎಂಬ ನಂಬಿಕೆ ದೃಢವಾಗುತ್ತದೆ". ಈ ಜಾನಪದ ಮತ್ತು ಜನಪರ ದೃಷ್ಟಿಯ ಹಿನ್ನೆಲೆಯಲ್ಲಿ ಗೊರೂರರ ಹಾಸ್ಯಪ್ರಜ್ಞೆ ಯಶಸ್ವಿಯಾಗಿ ಕೆಲಸ ಮಾಡಿದೆ.

ಗೊರೂರರ ಬರವಣಿಗೆಯಲ್ಲಿ ಕಲೆಯ ಪ್ರಯತ್ನ ಕಾಣುವುದಿಲ್ಲ.  ಯಾವುದೇ ತಂತ್ರದ ಪ್ರಯೋಗವಾಗಲಿ, ಸಂಕೇತ ಪ್ರತೀಕ ಪ್ರತಿಮೆಗಳ ನಿರ್ಮಾಣವಾಗಲಿ ಅವರ ಕೃತಿಗಳಲ್ಲಿ ಗೋಚರಿಸುವುದಿಲ್ಲ.  ತಾವು ಕಂಡುಂಡದನ್ನು ಗೊರೂರರು ಸಹಜವಾಗಿ, ಸಲೀಸಾಗಿ ಆಕರ್ಷಕವಾಗಿ ಹೇಳಿಕೊಂಡು ಹೋಗುತ್ತಾರೆ. 

ಗೊರೂರರ ಪ್ರಬಂಧಗಳನ್ನು ಮೊದಲು ಲಕ್ಷಿಸಬಹುದು.  "ಹಳ್ಳಿಯ ಚಿತ್ರಗಳು", "ಗರುಡಗಂಬದ ದಾಸಯ್ಯ", "ನಮ್ಮ ಊರಿನ ರಸಿಕರು", "ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು", "ಕಥೆಗಳು ಮತ್ತು ವಿನೋದ ಚಿತ್ರಗಳು", "ಬೆಸ್ತರ ಕರಿಯ", "ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು" – ಈ ಸಂಕಲನಗಳಲ್ಲಿನ  ಗೊರೂರರ ಪ್ರಬಂಧಗಳಲ್ಲಿ ಕಥಾಂಶ ದಟ್ಟವಾಗಿ ಸೇರಿಕೊಂಡಿವೆ.  ಆದ್ದರಿಂದ ಗೊರೂರರ ಪ್ರಬಂಧಗಳು, "ಪ್ರಬಂಧ" ಎಂಬ  ಶಬ್ದದ  ಸೀಮಿತ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿಯುಳ್ಳದ್ದು ಎಂಬುದು ಗಮನಾರ್ಹ.

ಗೊರೂರರು ತಮ್ಮ ಬರಹಗಳಲ್ಲಿ ಈಗ ಕಾಣಸಿಗದ ಅಥವಾ ತ್ವರಿತವಾಗಿ ಮರೆಯಾಗುತ್ತಿರುವ ಹಳ್ಳಿಯ ಬದುಕನ್ನು ಅದರ ಎಲ್ಲ ಮುಖಗಳೊಡನೆ ಚಿತ್ರಿಸುವಲ್ಲಿ ಸಫಲರಾಗಿದ್ದಾರೆ.  ಗ್ರಾಮೀಣ ಜೀವನದಲ್ಲಿ ಅವರು ಒಂದಾಗಿ ಬಾಳಿದ್ದರಿಂದ ಇದು ಸಾಧ್ಯವಾಗಿದೆ.  ಅವರ ಕೃತಿಗಳಲ್ಲಿ ಕಂಡುಬರುವ ಪಾತ್ರ ವೈವಿಧ್ಯ ಅಪಾರವಾದುದು; ಅಲ್ಲಿ ಗ್ರಾಮದ ಎಲ್ಲ ವೃತ್ತಿಗಳ, ಎಲ್ಲ ಜಾತಿಗಳ ಜನರೂ ಇದ್ದಾರೆ – ಹಾರುವರಿಂದ ಹರಿಜನರತನಕ.  ("ನಮ್ಮ ಎಮ್ಮೆಗೆ ಮಾತು ತಿಳಿಯುವುದೇ?" ಎಂಬ ಪ್ರಬಂಧದಲ್ಲಿ ಪ್ರಾಣಿ ಪಾತ್ರವೂ ಉಂಟು.)  ಆದರೆ ಜಾತಿ-ಮತ-ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಕೆಲವು ಸೂತ್ರಗಳನ್ನು ಗೊರೂರರು ಗುರುತಿಸಿ, ಅವುಗಳಿಗೆ ಒತ್ತುಕೊಡುವುದರ ಮೂಲಕ ಸಾಮರಸ್ಯಯುತವಾದ ಒಂದು ಸಮಷ್ಟಿಯ ಚಿತ್ರವನ್ನು ಮೂಡಿಸುತ್ತಾರೆ.  ಅವರ ಲೆಕ್ಕಣಿ ಚಲನ ಛಾಯ ಬಿಂಬಗ್ರಾಹಿಯೂ ಆಗಿ, ಗ್ರಾಮಜೀವನದಲ್ಲಿ ಮಹತ್ವದ ಪಾತ್ರವಹಿಸುವ ಉತ್ಸವಗಳು, ಹಬ್ಬ ಹರಿದಿನಗಳು, ಜನಪದ ಕಲೆಗಳು, ಜನತೆಯಲ್ಲಿ ರೂಢವಾಗಿರುವ ಆಚಾರ ವಿಚಾರ, ನಂಬಿಕೆ ನಡಾವಳಿಗಳು ಎಲ್ಲವನ್ನೂ ಯಥಾವತ್ತಾಗಿ, ಸಜೀವವಾಗಿ ಸೆರೆಹಿಡಿದಿವೆ.  ಗ್ರಾಮೀಣ ಸಂಸ್ಕೃತಿಯ ವಿಶ್ವರೂಪವನ್ನೇ ಅಲ್ಲಿ ಕಾಣಬಹುದು.  "ಗೊರೂರರ ಕೃತಿಗಳು ಬರಬರುತ್ತ ಹಳ್ಳಿಗಳ ಮಹಾ ಭಾರತಗಳೇ ಆಗುತ್ತಿವೆ" ಎಂಬ ವಿ.ಕೃ. ಗೋಕಾಕರ ಮಾತೊಂದು ಉಲ್ಲೇಖನೀಯವಾಗಿದೆ.

ನಾಗರಿಕರು ಶುಷ್ಕವೆಂದು ಭಾವಿಸುವ ಜನಪದ ಜೀವನದಲ್ಲಿ ಎಂತಹ ಸ್ವಾರಸ್ಯವಿದೆ, ಚೆಲುವಿದೆ ಎಂಬುದನ್ನು, ಸಾಮಾನ್ಯ ಜನ ಎಂತಹ ರಸಿಕರೆಂಬುದನ್ನು ಗೊರೂರರು ತಮ್ಮ ಬರಹಗಳಲ್ಲಿ ಎತ್ತಿ ತೋರಿಸಿದ್ದಾರೆ.  ದೈನಂದಿನ ಬದುಕಿನ ಸಾಮಾನ್ಯ ಘಟನೆಗಳಲ್ಲಿ ಮತ್ತು ಸಂಗತಿಗಳಲ್ಲಿ ಹುದುಗಿರುವ ವಿಶೇಷತೆಯನ್ನು ಬಣ್ಣಿಸಿದ್ದಾರೆ.  ಅವರು ಎಲ್ಲವನ್ನೂ, ಎಲ್ಲರನ್ನೂ ಅವಲೋಕಿಸುವುದು ಹಾಸ್ಯ ಕಣ್ಣಿನಿಂದ. 

ಗೊರೂರರ ಹಾಸ್ಯ ಹೇಗೆ ನಿರರ್ಗಳವೋ ಹಾಗೆ ನಿರ್ಮಲವೂ ಹೌದು.  ಅದರ ಹಿಂದೆ ಆಕ್ರೋಶವಿಲ್ಲ, ಸಿನಿಕತನವಿಲ್ಲ, ಸಹಾನುಭೂತಿಯಿದೆ, ಮಾನವೀಯ ಅಂತಃಕರಣವಿದೆ.   ಜೀವನವನ್ನೂ, ಜನವನ್ನೂ ಪ್ರೀತಿಸುವ ಪ್ರವೃತ್ತಿ ಗೊರೂರರದು.  ಆದರೆ ಎಲ್ಲ ವರ್ಗದ ಜನರಲ್ಲೂ ಮನೆ ಮಾಡಿಕೊಂಡಿರುವ ಲೋಪದೋಷಗಳನ್ನೂ, ಅವಗುಣಗಳನ್ನೂ ಅವರು ವಸ್ತುನಿಷ್ಟವಾಗಿ ನೋಡಿ, ಯಾರ ಮನಸ್ಸಿಗೂ ನೋವಾಗದಂತೆ ಹಾಸ್ಯ ವಿಡಂಭನೆಗಳಿಗೆ ಗುರಿಮಾಡಬಲ್ಲರು; ತನ್ಮೂಲಕ ಆ ಅಂಕುಡೊಂಕುಗಳ ತಿದ್ದುಪಡಿಗೆ ನೆರವಾಗಬಲ್ಲರು.  ಗೊರೂರರ ಗೇಲಿಗೆ ಅವರ ಜಾತಿಯ ಜನ ಕೂಡ ಹೊರಗಲ್ಲ ಎಂಬುದು ಮಹತ್ವದ ಸಂಗತಿ.  ಉದಾಹರಣೆಗೆ "ನಮ್ಮಲ್ಲಿ ಒಬ್ಬೊಬ್ಬರು ಒಂದೊಂದು ಕಸುಬನ್ನು ಆರಿಸಿಕೊಳ್ಳುವಂತೆ ಕೆಲವರು ಮಡಿಯನ್ನೇ ಕಸುಬಾಗಿ ಆರಿಸಿಕೊಂಡಿದ್ದಾರೆ", ಎಂಬ ಕರ್ಮಠ ವಿಡಂಬನವನ್ನು ಗಮನಿಸಬಹುದು.  ನಾಮಧಾರಣ ಪ್ರಕರಣವನ್ನು ಕುರಿತು "ಇದು ಅಯ್ಯಂಗಾರಿಗಳಿಗೆ ಮೊಹರಂ" ಎಂಬ ಟೀಕೆ.  ಅಷ್ಟೇಕೆ ಗೊರೂರರು ತಮ್ಮನ್ನು ತಾವೇ ಗೇಲಿಗೆ ಒಳಗುಮಾಡಿಕೊಳ್ಳಬಲ್ಲರು.  "ನಾನು ಗರುಡಗಂಬವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದುದನ್ನು ಜನರು ಕಂಡು, ಈ ಚಿತ್ರವನ್ನು ನೋಡಿ:  "ಇವನಿಗೆ ಜೋಳಿಗೆ, ಜಾಗಟೆ ಇಲ್ಲ.  ಆದರೂ ಇವನೂ ದಾಸಯ್ಯನೇ ಸಂದೇಹವಿಲ್ಲ" ಎಂದು ಯೋಚಿಸಿದ್ದರು.    ಈ ಬಗೆಯ ನಿರ್ಲಿಪ್ತತೆ ಎಲ್ಲರಲ್ಲೂ ಇರುವುದಿಲ್ಲ.  "ಆಚಾರ ಕೆಟ್ಟರೂ ಆಕಾರ ಕೆಡಬಾರದು",  "ಹಾರುವಯ್ಯ ಹಜಾಮನಾದುದು" ಮುಂತಾದ ಪ್ರಬಂಧಗಳು ಯಾರನ್ನೂ ಗಹಗಹಿಸುವಂತೆ ಮಾಡಬಲ್ಲುವು.

ಗೊರೂರರ ಹಾಸ್ಯಮನೋಧರ್ಮದ ವ್ಯಕ್ತಿತ್ವದಲ್ಲಿ ಬಾಳಿನ ಬಗೆಗೆ ಉತ್ಸಾಹವಿದೆ, ನಿಷ್ಠೆಯಿದೆ;  ಅವರ ಬರಹಗಳು ಈ ಗುಣಗಳನ್ನು ಓದುಗರಲ್ಲೂ ಪ್ರೇರಿಸುತ್ತವೆ.  "ಬೈಲಹಳ್ಳಿ ಸರ್ವೆ"ಯ ಕಥೆಯಲ್ಲಿ, ಸರ್ವೆ ಮುಗಿದ ಮೇಲೆ ಊರಿಗೆ ಹೋದ ಮೋಜಿನಿದಾರರು ನಾಣಿಗೆ ಬರೆದ ಪತ್ರದಲ್ಲಿ ಕೊನೆಯಲ್ಲಿ ಹೀಗೆನ್ನುತ್ತಾರೆ:  "ನನ್ನ ಇಷ್ಟು ವರ್ಷದ ಅನುಭವದಲ್ಲಿ ನೂರಾರು ಹಳ್ಳಿಗಳನ್ನು ನೋಡಿದ್ದೇನೆ, ಅಳೆದಿದ್ದೇನೆ.  ಎಲ್ಲಾ ಕಡೆಯೂ ಒಂದೇ ಸಮ, ಒಂದೇ ಗೋಳು, ಒಂದೇ ದಾರಿದ್ರ್ಯ, ಒಂದೇ ಕೊಳಕು, ಅಜ್ಞಾನ, ಬೈಲಹಳ್ಳಿಯಲ್ಲೂ ಅದೇ ಅಜ್ಞಾನ, ಅದೇ ಗೋಳು.  ಆದರೆ ನಿಮ್ಮ ಉತ್ಸಾಹದಿಂದ ಆ ಗೋಳು ತಲೆ ತಗ್ಗಿಸಿತು.  ಅಳುವುದಕ್ಕೆ ಸಾವಿರ ಕಾರಣವಿದ್ದೂ ನಗುವುದಕ್ಕೆ ಒಂದು ಕಾರಣವಿದ್ದರೆ ಆ ಕಾರಣವನ್ನೇ ನೀವು ಬಲಪಡಿಸಿ ನಗುತ್ತಿದ್ದೀರಿ.  ನೋವು ಗೋಳುಗಳ ಹಿಂದೆ ಹೊಂಚುಹಾಕುತ್ತಿರುವ ನಗೆಯನ್ನು ಹಿಡಿಯುವುದೇ ಜೀವನದ ತಿರುಳು.  ಅದೇ ನಮ್ಮ ಮುಂದಲ ಉತ್ಸಾಹಕ್ಕೆ ಕಾರಣ."  ಇದು ಗೊರೂರರ ನಿಲುವೂ ಹೌದು. 

"ನಮ್ಮ ಊರಿನ ರಸಿಕರು" ಗೊರೂರರ ಪ್ರಬಂಧ ಸಮುದಾಯದಲ್ಲಿ ಒಂದು ವಿಶಿಷ್ಟ ಕೃತಿ.  ಇದನ್ನು "ಚಿತ್ರ ಕಾದಂಬರಿ" ಎಂದು ಕರೆಯಲಾಗಿದೆ.  "ಈ ಕೃತಿಯಲ್ಲಿ ಬರುವ ವ್ಯಕ್ತಿಗಳು ಬಿಡಿಬಿಡಿಯಾಗಿ ಕಂಡರೂ ಅವರೆಲ್ಲರೂ ವಿಶಿಷ್ಟ ಜೀವನದ ಪರಸ್ಪರ ಸಂಬಂಧವುಳ್ಳ ಗ್ರಾಮ ಸಮಾಜದ ಅವಯವಗಳಾಗಿ" ಚಿತ್ರಿತರಾಗಿದ್ದಾರೆ.  ಇದರಲ್ಲಿ ಬರುವ ಶಾಲು ಸಾಬಿಯ ಪಾತ್ರ ಮರೆಯಲಾಗದ್ದು. 

"ಹೇಮಾವತಿಯ ತೀರದಲ್ಲಿ" ಗೊರೂರರ ಅತ್ಯುತ್ತಮ ಪ್ರಬಂಧಗಳಲ್ಲೊಂದು.  ಇದು "ರಮ್ಯ ಚಿತ್ರಗಳ ಒಂದು ಚಿತ್ರಶಾಲೆ".  ಅದರ ಪ್ರಾರಂಭವಿದು:  "ಹೇಮಾವತಿ ನದಿಯು ನಮ್ಮೂರ ಉಸಿರು.  ನದಿಯ ದಡದಲ್ಲಿ ನಿಂತುಕೊಂಡು ನೋಡಿದರೆ ನದಿ ನಮ್ಮೂರ ಬಳಿ ಇರುವಷ್ಟು ಸುಂದರವಾಗಿ, ಸೊಗಸಾಗಿ ಮತ್ತೆಲ್ಲೂ ಇಲ್ಲವೆಂದು ಯಾರಿಗಾದರೂ ತೋರುವುದು.  ನರಸಿಂಹಸ್ವಾಮಿ ದೇವಸ್ಥಾನದ ಮುಂದುಗಡೆಯಿಂದ ಎಡಗಡೆಯೂ, ಬಲಗಡೆಯೂ ನೋಡಿದರೆ ನೂರಾರು ತೋಪುಗಳ ಗೊಂಚಲುಗಳು ಕಣ್ಣಿಗೆ ವಿಶ್ರಾಂತಿಯನ್ನು ಕೊಡುವುವು.  ನದಿಯ ಎರಡು ದಡಗಳಲ್ಲೂ ಮರದ ಕೊಂಬೆಗಳು ನದಿಯ ಮೇಲೆ ಬಾಗಿದ್ದು ನೀರನ್ನು ಮುತ್ತಿಡುತ್ತಾ ನದಿಯ ರೆಪ್ಪೆಗಳಂತೆ ಕಾಣುವುವು.  ನದಿಯಿಂದ ಮೇಲೆ ಪಶ್ಚಿಮಕ್ಕೆ ಒಂದು ಮೈಲಿ ಹೋದರೆ ಈಶ್ವರನನ್ನು ತಪಸ್ಸಿಗೆ ಆಕರ್ಷಿಸುವಷ್ಟು ರಮಣೀಯವೂ, ಶಾಂತವೂ ಆದ ಸಂಗಮ ಮತ್ತು ತೋಪು.  ಹೇಮಾವತೀ ನದಿಯು ನಮ್ಮ ಪ್ರಾಂತಕ್ಕೇ ಜೀವವನ್ನು ಕೊಡುವ ಜೀವನಾಡಿ.  ಅದರ ಸ್ಪರ್ಶದಿಂದ ಪವಿತ್ರವೂ, ಚೆನ್ನೂ ಆದ ನಮ್ಮ ನಾಡು ದೇವಲೋಕದ ನಂದನವನಕ್ಕೆ ಎಣೆಯಾದುದು".  "ಹೇಮಾವತಿಯ ಬಣ್ಣನೆ ಹೀಗೆಯೇ ಕಾವ್ಯಗಂಧಿಯಾಗಿ ಮುಂಬರಿಯುತ್ತದೆ; ಒಟ್ಟಿನಲ್ಲಿ ಪ್ರಬಂಧ ಒಂದು ನೀಳ ಭಾವಗೀತೆಯಾಗಿದೆ.  ಗೊರೂರರು ಯಾವುದೇ ಒಂದು ಗ್ರಾಮೀಣ ಅಥವಾ ನಾಗರಿಕ ಪರಿಸರವನ್ನಾಗಲಿ ಒಳಗಣ್ಣಿಗೆ ಪರಿಸ್ಫುಟವಾಗುವಂತೆ ವರ್ಣಿಸಬಲ್ಲರು.  ಆ ವರ್ಣನೆಗಳಲ್ಲಿ ಎಷ್ಟೋ ಕಡೆ ಅವರ ಕವಿಮನೋವೃತ್ತಿಯ ವಿಲಾಸ ಕಾಣಿಸುತ್ತದೆ.  ಕನ್ಯಾಕುಮಾರಿಯ ಕಡಲು, ಬಿಂದಿಗಮ್ಮನ ಜಾತ್ರೆ, ಶಿವರಾತ್ರಿ ಇತ್ಯಾದಿಗಳ ವರ್ಣನೆಗಳು ಕಾವ್ಯ ಪ್ರತಿಭೆಯ ಸಮೀಚೀನ ನಿದರ್ಶನಗಳು.

ನಾಗರೀಕತೆಯ ಪ್ರಭಾವದಿಂದ ನಾವು ಅಮೂಲ್ಯವಾದುದನ್ನೆನನ್ನೋ ಕಳೆದುಕೊಂಡೆವು ಎಂಬ ವಿಷಣ್ಣತೆ ಗೊರೂರರ ಪ್ರಬಂಧಗಳಲ್ಲಿ ವ್ಯಕ್ತವಾಗುತ್ತದೆ.  ಎಂದರೆ ಹಳೆಯ ಅನಿಷ್ಟ ವ್ಯವಸ್ಥೆ ಯಥಾವತ್ತಾಗಿ ಉಳಿದು ಬರಬೇಕಿತ್ತು ಎಂಬುದು ಗೊರೂರರ ಅಭಿಪ್ರಾಯವಲ್ಲ.  ವಾಸ್ತವವಾಗಿ ಅವರದು ಪ್ರಗತಿಪರ ಧೋರಣೆ;  ಹಳತು-ಹೊಸತುಗಳ ಸಮನ್ವಯದಲ್ಲಿ ವಿಶ್ವಾಸವುಳ್ಳದ್ದು.  ನಾಗರೀಕತೆ, ವಿಜ್ಞಾನಗಳು ಮನುಕುಲಕ್ಕೆ ಲಾಭದಾಯಕವಾಗಿದ್ದರೂ – ಜನಜೀವನದ ಶಾಂತಿ, ಸಮಾಧಾನ ಸೌಮನಸ್ಯಗಳನ್ನು ಅಳಿಸಿವೆ.  ಕೆಲವು ಮೌಲ್ಯಗಳಿಗೆ ಮಾರಕವಾಗಿವೆ ಎಂಬುದನ್ನು ಯಾರೂ ಒಪ್ಪಬೇಕು.  "ಸೇತುವೆ" ಎಂಬ ಪ್ರಬಂಧದ ಅಂತ್ಯದಲ್ಲಿ ಗೊರೂರರು ತೆಗೆಯುವ ಉದ್ಗಾರ ಅರ್ಥವತ್ತಾಗಿದೆ:  "ಅದರ (ನದಿಯ) ಮೇಲೆ ಬಿದ್ದ ಸೇತುವೆ ಅದಕ್ಕೂ ನಮಗೂ ನಡುವೆ ಬಿದ್ದಂತೆ ತೋರುತ್ತಿದೆ".  "ನಮ್ಮ ಹೊಳೆಯ ಒಂದು ಅನುಭವ"ದ ಕಡೆಯಲ್ಲಿ ಬರುವ "ಈಗ ಹನುಮನು ಇಲ್ಲ" ಸೇತುವೆ ಇದೆ ಎಂಬ ಮಾತು ಕೂಡಾ ಧ್ವನಿಪೂರ್ಣ.  ಹನುಮ ಬಹಳಷ್ಟನ್ನು ಸಂಕೇತಿಸುತ್ತಾನೆ.  ಗೊರೂರರ ಕೃತಿಗಳನ್ನು ಓದಿದ ಮೇಲೆ, ವಾಚಕರಲ್ಲೂ ಒಂದು ನಷ್ಟದ ಭಾವನೆ ಹುಟ್ಟದಿರುವುದಿಲ್ಲ.

"ಗರುಡಗಂಬದ ದಾಸಯ್ಯ" ಕೃತಿಯ ಮುನ್ನುಡಿಯಲ್ಲಿ ದ.ರಾ ಬೇಂದ್ರೆ ಹೀಗೆಂದಿದ್ದಾರೆ.  "ಒಬ್ಬ ಅರಸುಗಳೆ, ಹಜಾಮರೆ, ಹಾರುವರೆ, ತುರುಕರೆ, ದಾಸಯ್ಯಗಳೆ, ಬಯಲಾಟದವರೆ, ಸುಭೇಧಾರರೆ, ಶಾನುಭೋಗರೆ, ಹೊಲೆಯರೆ – ಇವರೆಲ್ಲರನ್ನೂ ಒಂದು ಮಾಲೆಯಲ್ಲಿ ಪೋಣಿಸಿದ ವಿಕಟ ಕವಿತ್ವವು ಪ್ರಶಂಸನೀಯವಾದುದೆಂದು ಯಾರು ಹೇಳಲಿಕ್ಕಿಲ್ಲ?"  ವರಕವಿಗಳ ಈ ಮಾತು ಗೊರೂರರ ಸಾಹಿತ್ಯಕ್ಕೆಲ್ಲಾ ಅನ್ವಯಿಸಬಹುದಾದ ಹೇಳಿಕೆಯಂತಿದೆ.

ಗೊರೂರರ ಕಾದಂಬರಿಗಳು ನಾಲ್ಕು: "ಹೇಮಾವತಿ", "ಪುನರ್ಜನ್ಮ", "ಮೆರವಣಿಗೆ" ಮತ್ತು "ಊರ್ವಶಿ".  ನಾಲ್ಕೂ ಒಳ್ಳೆಯ ಕಾದಂಬರಿಗಳೇ.  ಸಂಪ್ರದಾಯ ಶರಣರಾದ ಗ್ರಾಮೀಣ ಸಮಾಜದಲ್ಲಿ ಸುಧಾರಣೆಯ ಗಾಳಿ ಬೀಸಿದ ಪರಿಯನ್ನು ಚಿತ್ರಿಸುತ್ತದೆ "ಹೇಮಾವತಿ".   ನೂತನ ವಿಚಾರಗಳಿಗೆ ಮನತೆರೆದ ಯುವಕರು ಹಳ್ಳಿಯಲ್ಲಿ ಹೇಗೆ ಹೊಸ ವಾತಾವರಣವನ್ನು ಸೃಜಿಸಿದರು ಎಂಬುದನ್ನು ಹೇಳುತ್ತದೆ.  ಪಂಚಮರನ್ನು ಉದ್ಧರಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಗೊರೂರರು ಇದರಲ್ಲಿ ಎತ್ತಿ, ಉತ್ತರವನ್ನೂ ಕೊಟ್ಟಿದ್ದಾರೆ.  ಅವರನ್ನು ಪ್ರೀತಿ, ಅನುಕಂಪಗಳಿಂದ ಕಾಣಬೇಕು, ಅವರಿಗೆ ಶಿಕ್ಷಣ ಕೊಡಬೇಕು, ಅರೋಗ್ಯ ನಿಯಮಗಳನ್ನು ಹೇಳಿಕೊಡಬೇಕು.  ಈ ಪರಿವರ್ತನೆ ಒಂದೆರಡು ದಿನಗಳಲ್ಲಿ ಆಗುವಂಥದ್ದಲ್ಲ; ಎಲ್ಲರ ಮನವೊಲಿಸಿ, ನಿಧಾನವಾಗಿ ಸಾಧಿಸಬೇಕಾದದ್ದು. 

"ಪುನರ್ಜನ್ಮ" ಸ್ವಾತಂತ್ರ್ಯ ಸಂಗ್ರಾಮ ಕಾಲದ ಒಂದು ಆದರ್ಶಪೂರ್ಣ ಕತೆಯನ್ನು ಭಿತ್ತರಿಸುತ್ತದೆ.  ನಮ್ಮ ಸ್ವಾತಂತ್ರ್ಯ ಎಂಥಹ ತಪಸ್ಸಿನ ಮತ್ತು ಶ್ರಮದ ಫಲ ಎಂಬುದನ್ನು ಮನಗಾಣಿಸುವ ಕಾದಂಬರಿ. 

"ಮೆರವಣಿಗೆ" ಒಬ್ಬ ವಿಮರ್ಶಕರ ಪ್ರಕಾರ "ಇದು ಕತೆಯಲ್ಲ, ಕಾದಂಬರಿಯಲ್ಲ, ಪ್ರಬಂಧವೂ ಅಲ್ಲ, ಸಾಚಾ ಅನುಭವಗಳ ಮೆರವಣಿಗೆ".  ಇದರಲ್ಲಿ ಈಗಿನ ಮಠಾಧಿಪತಿಗಳ ಮೇಲೆ ಗೊರೂರರು ಮಾಡಿರುವ ಆಕ್ರಮಣ ಅವಶ್ಯವಾಗಿ ಗಮನಿಸಬೇಕಾದುದು:  "ಕಾಲಾನುಕಾಲಕ್ಕೆ ಧರ್ಮವನ್ನೂ ಮತಪದ್ಧತಿಗಳನ್ನೂ ಬದಲಾಯಿಸಿ, ಸಮಾಜವನ್ನು ಆಧುನಿಕವಾಗಿ ಮಾಡುತ್ತಿದ್ದ ಆ ಪೂರ್ವದ ಋಷಿಗಳೆಲ್ಲಿ?  ಈಗಿನ ಈ ಮಠಾಧಿಪತಿಗಳಾದರೂ ಏನು ಮಾಡುತ್ತಿದ್ದಾರೆ; ಸಂಸಾರಿಕರಂತೆ ತಾವೂ ಅರಮನೆಗಳ ಮುಂದೆಯೂ ಅಧಿಕಾರಿಗಳ ಮುಂದೆಯೂ ಬಾಲ ಬಡಿಯುತ್ತಾ ಶಿಷ್ಯರೆನಿಸಿಕೊಳ್ಳುವ ಕುರಿಗಳ ತಲೆ ಒಡೆದು ಒಂದೊಂದು ಆಳು ಎತ್ತರದ ಕೊಳಗದಪ್ಪಲೆಗಳಲ್ಲಿ  ಪಾಯಸ ಜಿಲೇಬಿ ಮಾಡಿಸಿ ಮೋಟಾರಿನಲ್ಲಿ ತಿರುಗುತ್ತಾ ತಮ್ಮ ಮೆರವಣಿಗೆಗಳನ್ನು ಮಾಡಿಕೊಳ್ಳುವ ಈ ಮಠದ ಪಾಳಯಗಾರರು, ಆಧುನಿಕ ಜಗತ್ತಿನ ಬದಲಾಯಿಸಿದ ಪರಿಸ್ಥಿತಿಗಳು ಎದುರಿಗೆ ಎದ್ದು ನಿಂತಾಗ ಯಾವ ಹಳೆಯ ಓಲೆಗರಿಯ ಧೂಳನ್ನು ಕೊಡುವುತ್ತಿದ್ದಾರೆ?... ಈ ಸಮಾಜದ ಅಸ್ತಿತ್ವ ಉಳಿಯಬೇಕಾದರೆ ನಾವು ಅವಲಂಬಿಸಬೇಕಾದ ಆಧುನಿಕ ಮಾರ್ಗಗಳಾವುವು? ತ್ಯಜಿಸಬೇಕಾದ ಪ್ರಾಚೀನ ರೋಗಗಳಾವುವು?  ಧರ್ಮವನ್ನೂ ವಿಜ್ಞಾನವನ್ನೂ ಬೆರೆಸುವುದು ಹೇಗೆ?  ಇವುಗಳನ್ನೆಲ್ಲಾ ಈ ಗುರುಗಳು ಎನಿಸಿಕೊಳ್ಳುವವರು ತಮ್ಮ ಮಠಗಳನ್ನೇ ಪ್ರಯೋಗ ಕ್ಷೇತ್ರಗಳನ್ನಾಗಿ ಮಾಡಿಕೊಂಡು ತೋರಿಸಬೇಡವೆ?  ಅದು ಬಿಟ್ಟು ಏನು ಬರಲಿ ಏನು ನಡೆಯಲಿ?  ಯಾವ ಪ್ರಶ್ನೆ ಏಳಲಿ?  ಎಲ್ಲದಕ್ಕೂ ಸಾವಿರ ವರುಷದ ಕೆಳಗೆ ಹೇಳಿದ ಬುಕ್ಕಿನಲ್ಲಿ ಏನಿದೆ ಅದಕ್ಕೆ ಸರಿಹೋಗುತ್ತದೆಯೋ, ಅದಕ್ಕೆ ಸರಿ ಹೋಗದಿದ್ದರೆ ಅದಕ್ಕೆ ಜಗತ್ತಿನಲ್ಲಿ ಜಾಗವೇ ಇಲ್ಲ".  ಇಲ್ಲಿ ಪ್ರಕಟವಾಗಿರುವ ವೈಚಾರಿಕ ಮನೋಭಾವ ಮತ್ತು ವಿವೇಕಪರತೆ ಸ್ತುತ್ಯವಾಗಿವೆ.

ಕೆಟ್ಟಗಳಿಗೆಯೊಂದರಲ್ಲಿ, ತನ್ನ ತಪ್ಪೇನೂ ಇಲ್ಲದೆ, ಜಾರಿದ ಹೆಣ್ಣೊಬ್ಬಳು ಮುಂದೆ ಎಚ್ಚತ್ತು ಆತ್ಮೋದ್ಧಾರ ಮಾಡಿಕೊಂಡು ಸಮಾಜಕ್ಕೂ ಸೇವೆ ಸಲ್ಲಿಸಿದ ಕರುಣಾಜನಕ ಕಥೆ "ಊರ್ವಶಿ"ಯಲ್ಲಿದೆ.  ಇದನ್ನು ಒಬ್ಬ ವಿಮರ್ಶಕರು ಕನ್ನಡದ "ಪುನರುತ್ಥಾನ" ಎಂದು ಕರೆದಿದ್ದಾರೆ.

"ವೈಯಾರಿ", "ಶಿವರಾತ್ರಿ", "ಉಸಬು", "ಗೋಪುರದ ಬಾಗಿಲು", "ಕಮ್ಮಾರ ವೀರ ಭದ್ರಾಚಾರಿ", "ಕನ್ಯಾಕುಮಾರಿ ಮತ್ತು ಇತರ ಕಥೆಗಳು", ಇವು ಗೊರೂರರ ಕಥಾ ಸಂಗ್ರಹಗಳು.  ಹಳ್ಳಿಯ ಜೀವನ, ಪೇಟೆಯ ಜೀವನ ಎರಡಕ್ಕೂ ಸಂಬಂಧಿಸಿದ ಕತೆಗಳನ್ನು ಗೊರೂರರು ಬರೆದಿದ್ದಾರೆ.  "ಬೂತಯ್ಯನ ಮಗ ಅಯ್ಯು" ಗೊರೂರರ ಶ್ರೇಷ್ಠತಮ ಕಥೆ.  ಸಂಕೀರ್ಣವಾದ ಅನುಭವವನ್ನು ತಾಳಿಕೊಂಡದ್ದು.  ಅದರಲ್ಲಿ ಮನುಷ್ಯ ಸ್ವಭಾವವನ್ನು ಲೇಖಕರು ಸತ್ವಯುತವಾಗಿ ವಿಶ್ಲೇಷಿಸಿದ್ದಾರೆ.  ದ್ವೇಷದ ನೆಲೆಯಲ್ಲಿ ಭೀಕರವಾಗಿ ಮೊದಲಾಗುವ ಕತೆ ಸ್ನೇಹದ ನೆಲೆಗೆ ಬೆಳೆದು ತಿಳಿಯಾಗಿ ಮುಗಿಯುತ್ತದೆ.  "ಮುಗ್ಧತೆಗೆ ಸೆರೆಯಾಗದ ಆದರ್ಶತ್ವ, ಸರಳೀಕರಣಕ್ಕೇ ಸೆರೆಯಾಗದ ವಾಸ್ತವಿಕತೆ, ಅನುಕಂಪವನ್ನು ಬಿಡದ ತಿಳಿಹಾಸ್ಯ, ಮಾನವ ಸ್ವಭಾವದಲ್ಲಿ ನೈಜವಾದ ಮತ್ತು ಉದಾರವಾದ ಆಸಕ್ತಿ-ಇವು ಅವರ ಕಥಾಸಾಹಿತ್ಯಕ್ಕೇ ಜೀವವನ್ನೂ ಬೆಲೆಯನ್ನೂ ತಂದಿವೆ."

ಗೊರೂರರ ಪ್ರವಾಸ ಕಥನ, "ಅಮೆರಿಕದಲ್ಲಿ ಗೊರೂರು" ಇದು ಅವರು ಮಾತ್ರ ಕೊಡಬಹುದಾದದ್ದು.  ಅಮೆರಿಕವನ್ನು ಕುರಿತ ಪ್ರವಾಸ ಕಥನಗಳು ನಮ್ಮಲ್ಲಿ ಅನೇಕ ಇವೆ; ಗೊರೂರರದು ಅವುಗಳಂತಲ್ಲ.  ಇಲ್ಲಿಯೂ ಅವರ ಹಾಸ್ಯಪ್ರಜ್ಞೆ ಮೇಲುಗೈಯಾಗಿದೆ.  "ಅಮೆರಿಕದಲ್ಲಿ ಗೊರೂರು" ಅತ್ಯಂತ ಧ್ವನಿಪೂರ್ಣವಾದ ಶೀರ್ಷಿಕೆ.  ಅದು ಪೂರ್ವ ಪಶ್ಚಿಮಗಳನ್ನೂ ನಗರ ಗ್ರಾಮಗಳನ್ನೂ ಹಳತು ಹೊಸತನ್ನೂ ಸಂಕೇತಿಸುತ್ತದೆ.  ಅಮೆರಿಕದಲ್ಲಿ ಗೊರೂರು ಕಳೆದು ಹೋಗುವುದಿಲ್ಲ; ವಿವಿಧ ಸ್ತರಗಳಲ್ಲಿ ಮೈದೋರುತ್ತದೆ.  ಇದು ಈ ಪುಸ್ತಕದ ವಿಶೇಷ."

ಗೊರೂರರ ಸಾಹಿತ್ಯಕ್ಕೊಂದು ಗಂಭೀರವಾದ ಮುಖವೂ ಉಂಟೆಂಬುದನ್ನು ನೆನಪಿನಲ್ಲಿಡಬೇಕು.  ಇದಕ್ಕೆ ಒಂದು ಸಣ್ಣ ನಿದರ್ಶನ ಕೊಡಬಹುದು.  "ನಮ್ಮ ಊರಿನ ರಸಿಕರು" ಕೃತಿಯಲ್ಲಿ ಒಂದೆಡೆ ವೈದಿಕ ಬಾಲ ವಿಧವೆಯೊಬ್ಬಳ ವಿಷಯ ಬರುತ್ತದೆ.  ಅವಳಿಗೆ ಮನೆಯವರು ತಲೆ ಬೋಳಿಸಿ, ಕೆಂಪು ಸೀರೆ ಉಡಿಸಿ, ಮೂಲೆ ಗುಂಪು ಮಾಡಿದ ಹೀನ ಪ್ರಕ್ರಿಯೆಗೆ ಒಬ್ಬ ಶೂದ್ರ ಆಳಿನ ಪ್ರತಿಕ್ರಿಯೆಯಿದು:  "ಅದ್ಯಾಕ ಬುದ್ಧಿ ಹನ್ನೊಂದು ವರ್ಷದ ಹಸುಗೂಸ್ಗೆ ಇನ್ನೊಂದು ಮದ್ವೆ ಮಾಡೋಕಾಗ್ದಿತ್ರ?"  ಇದು  ಗೊರೂರರ ನವೀನ ದೃಷ್ಟಿ ಮಾತ್ರವಲ್ಲದೆ, ಮೇಲುವರ್ಗದ ಸಂಪ್ರದಾಯ ಶಕಠತೆಗೂ ಕೆಳವರ್ಗದವರ ಮಾನವೀಯ ಧೋರಣೆಗೂ ಇರುವ ವೈರುಧ್ಯ ಕೂಡಾ ಇಲ್ಲಿ ಧ್ವನಿತವಾಗುತ್ತದೆ.   

"ಸಾಹಿತ್ಯ ರಶ್ಮಿ" ಗೊರೂರರ ಆಲೋಚನಶೀಲತೆಗೆ ಸ್ಪಷ್ಟಸಾಕ್ಷಿಯಾಗಿದೆ.  ಇದರಲ್ಲಿನ ಲೇಖನಗಳಲ್ಲಿ ಸಾಹಿತ್ಯ ಮಾತ್ರವಲ್ಲದೆ, ಶಿಲ್ಪಕಲೆ, ಶಿಕ್ಷಣ, ವೃತ್ತಪತ್ರಿಕೆ, ಜೀವನ ತತ್ವ ಮುಂತಾದ ಹಲವಾರು ವಿಷಯಗಳು ಚರ್ಚಿತವಾಗಿವೆ.  ಗೊರೂರರ ಬಹುಮುಖದ ಅಭಿರುಚಿ, ಪಾಂಡಿತ್ಯ, ವಿಮರ್ಶನ ಶಕ್ತಿಗಳು ಇಲ್ಲಿ ಅನಾವರಣಗೊಂಡಿವೆ. 

ಒಟ್ಟಿನಲ್ಲಿ ಕನ್ನಡಕ್ಕೆ ಗೊರೂರರ ಮುಖ್ಯವಾದ ಕೊಡುಗೆಯೇನು?  ಅದನ್ನು ಕುವೆಂಪು ಅವರ ನುಡಿಗಳಲ್ಲಿ ಹೀಗೆ ಸಂಗ್ರಹಿಸಬಹುದು: "ಚಾರ್ಲ್ಸ್ ಡಿಕನ್ಸ್, ಆಲಿವರ್ ಗೋಲ್ಡ್ ಸ್ಮಿತ್, ಎ.ಜಿ. ಗಾರ್ಡಿನರ್ ಮುಂತಾದ ಇಂಗ್ಲಿಷ್ ಲೇಖಕರ ಬರವಣಿಗೆಯನ್ನು ಓದಿ, ಅಲ್ಲಿನ ವಿವಿಧ ರೀತಿಯ ಹಾಸ್ಯವನ್ನು ಚಪ್ಪರಿಸಿದ್ದ ನಮಗೆ ಕನ್ನಡದಲ್ಲಿ ಅಂಥ ಹಾಸ್ಯದ ಅರಕೆ ದೊಡ್ಡ ಕೊರಗನ್ನೇ ಉಂಟುಮಾಡಿತ್ತು.  ಆ ಅರಕೆಯನ್ನು ಹೋಗಲಾಡಿಸಿದ ಕೆಲವೇ ಲೇಖಕರಲ್ಲಿ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರರು ನಿಶ್ಚಯವಾಗಿಯೂ ಅಗ್ರಸ್ಥಾನದಲ್ಲಿದ್ದಾರೆ..."

ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.  ಮತ್ತೊಬ್ಬ ಗೊರೂರರು ನಮ್ಮಲ್ಲಿಲ್ಲ; ಅವರು ಚಿತ್ರಿಸಿದಂಥ ಸಮಾಜವೂ ಈಗ ಉಳಿದಿಲ್ಲ.   ಆದರೆ ಅವರು ಉಳಿಸಿ ಹೋಗಿರುವ ಅನುಭವ ಶ್ರೇಷ್ಠತೆ ನಮಗೆ ಆಸ್ತಿಯಾಗಿ ಉಳಿದಿದೆ.    ಈ ಕನ್ನಡ ಶ್ರೇಷ್ಠರಿಗೆ ನಮ್ಮ ಗೌರವಪೂರ್ಣ ನಮನ.

(ಆಧಾರ:  ಸಿ. ಪಿ. ಕೃಷ್ಣಕುಮಾರ್ ಅವರ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕುರಿತ ಲೇಖನ)

No comments:

Post a Comment