Translate in your Language

Tuesday, July 29, 2014

ಅಮರಶಿಲ್ಪಿ ಜಕ್ಕಣಚಾರ್ಯ

ಬೇಲೂರು, ಹಳೆಬೀಡು ಮತ್ತು ಸೋಮನಾಥಪುರಗಳ ವಾಸ್ತು ಶಿಲ್ಪ, ಮೂರ್ತಿಶಿಲ್ಪಗಳು ಎಷ್ಟು ಆಶ್ಚರ್ಯಕರವಾಗಿರುವವೋ, ಅಷ್ಟೇ ಆಶ್ಚರ್ಯಕರ ಶಿಲ್ಪಿ ಜಕ್ಕಣಚಾರ್ಯರ ಜೀವನ ಸಂಗತಿಗಳು. ಭಾರತದ ಶಿಲ್ಪಿಗಳು ವೈಯುಕ್ತಿಕ ಅಭಿವೃದ್ದಿ, ಹಣ ಮತ್ತು ಕೀರ್ತಿಗಳಾಸೆಗೆ ಎಂದೂ ಒಳಗಾಗಿಲ್ಲ. ಹಾಗಂತಲೇ ಬಹಳ ಶಿಲ್ಪಿಗಳು ತಾವು ನಿರ್ಮಿಸಿದ ಶಿಲ್ಪಕೃತಿಗಳ ಮೇಲೆ ತಮ್ಮ ನಾಮ ಲಿಖಿತ ಬಳಸಿಕೊಂಡಿಲ್ಲ, ಕಾರಣವಿಷ್ಟೆ " ಮಾಡುವುದನ್ನು ಮಾಡಿಬಿಟ್ಟೆ" ಎಂಬ ತೃಪ್ತ ಮನೋಭಾವದ ಜೀವನವೇ ಅವರಿಗೆ ಬೇಕಾಗಿದ್ದಿತು. ಹೆಸರಿನ ಭ್ರಮೆ, ಕೀರ್ತಿ ಇವು ಅವರಿಗೆ ಅಮುಖ್ಯ.


ಶಿಲ್ಪದಲ್ಲಿ ಚಾರಿತ್ರಿಕ ಅಂಶವಿದೆ ಮತ್ತು ತಾದಾತ್ಮೆಯ ತಪಸ್ಸೂ ಇರುತ್ತದೆ ಶೀಲ+ಸಮಾಧೌ = ಶಿಲ್ಪ, ಕಾಯಾ, ವಾಚಾ, ಮನಸಾ ಪರಿಶುದ್ದತೆಯನ್ನು ಕಾಯ್ದುಕೊಂಡು ಶಿಲ್ಪ-ಕೆತ್ತನೆಯಲ್ಲಿ ತೊಡಗಿದಾಗ ಸಮಾಧಿ ಸ್ತಿತಿಯನ್ನ ತಲುಪಿಬಿಡುವ ಸಾಧ್ಯತೆಯ ಕಾರಣ ಶಿಲ್ಪಿ ಆಧ್ಯಾತ್ಮ ಸಾಧಕನಾಗಿಬಿಡುತ್ತಾನೆ. ಶಿಲ್ಪಿಯು ತನ್ನ ತಪ್ಪಸ್ಸಿನ ಶಕ್ತಿಯನ್ನೆಲ್ಲಾ ತಾನು ಕೆತ್ತುವ ಮೂರ್ತಿಯಲ್ಲಿ ಧಾರೆಯೆರೆದಿರುತ್ತಾನೆ, ಹಾಗಂತ ಆ ಮೂರ್ತಿ ವರ ನೀಡುವ ಶಕ್ತಿಯನ್ನು ಪಡೆದಿರುತ್ತದೆ ಅಂತಲೇ ಅರ್ಥ.

ಕರ್ನಾಟಕವು ದೇವಾಲಯಗಳ, ಲಿಪಿಗಳ, ಶಿಲ್ಪಗಳ ನೆಲೆಬೀಡಾಗಿದೆ, ಪ್ರತಿಯೊಂದು ದೇವಾಲಯವೂ ಭಿನ್ನ ಭಿನ್ನ ಕಲಾವೈಖರಿಯನ್ನು ಹೊಂದಿರುತ್ತದೆ. ಇಲ್ಲಿಯೇ ಶಿಲ್ಪಗಳ ಕಲಾಕುಸುರು ಮತ್ತು ತಪಸ್ಸುಗಳ ತ್ಯಾಗದ ಫಲವೇ ಆಗಿದೆ. ರಾಜ ಮಹಾರಾಜರ ಆಸ್ಥಾನಗಳಲ್ಲಿ ಸುಮಾರು ೪೦೦-೫೦೦ ಶಿಲ್ಪಿಗಳಿದ್ದು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಇವತ್ತು ಕರ್ನಾಟಕಕ್ಕೆ ಹಾಗೆಯೇ ಇಡೀ ಭಾರತಕ್ಕೆ ಹೆಮ್ಮೆಯನ್ನೂ, ಕೀರ್ತಿಯನ್ನು ತಂದುಕೊಟ್ಟುದ್ದು ಇಲ್ಲಿಯ ದೇವಾಲಗಳು. ಪರದೇಸಿ ಪ್ರವಾಸಿಗರನ್ನು ಆಕರ್ಷಿಸಿ, ಅವರನ್ನು ದಿಗ್ಮೂಡ್ರನ್ನಾಗಿ ಮಾಡುತ್ತಿರುವವು  ನಮ್ಮ ದೆವಾಲಯಗಳ ಶಿಲ್ಪಗಳು. ಜಗತ್ತಿನ ಬೇರೆ ಬೇರೆ ದೇಶಗಳ ಪ್ರತಿಭಾವಂತ ಪ್ರವಾಸಿಗರು ಭಾರತಕ್ಕೆ ಆಗಮಿಸಿ ಇಲ್ಲಿಯ ವಾಸ್ತುಶಿಲ್ಪ, ಮೂರ್ತಿಶಿಲ್ಪಗಳ ಬಗ್ಗೆ ಆಳವಾದ ಅಭ್ಯಾಸ ಮಾಡಿ ಮಹಾ-ಮಹಾ ಹೊತ್ತಿಗೆಗಳನ್ನು ಬರೆದಿರುವರು.

ಕರ್ನಾಟಕದ ಅನಂತಾನಂತ ಶಿಲ್ಪಿಗಳಲ್ಲಿ ಶ್ರೇಷ್ಟನಾಗಿ ಅಮರಶಿಲ್ಪಿಯಾಗಿ ಬದುಕಿದವನು ಶ್ರೀ ಜಕ್ಕಣಾಚಾರ್ಯ ಮಹಾಶಿಲ್ಪಿ.ಆದರೆ ಅನೇಕ ಕುಹಕಿಗಳು  ಜಕ್ಕಣಾಚಾರ್ಯ ನೆಂಬ ವ್ಯಕ್ತಿಯೇ ಇತಿಹಾಸದಲ್ಲಿ ಇಲ್ಲ, ಅವನೊಬ್ಬ ಕಾಲ್ಪನಿಕ ವ್ಯಕ್ತಿ ಎನ್ನುವವರೂ ಇದ್ದಾರೆ.

ಬೇಲೂರು, ಹಳೆಬೀಡು ಮತ್ತು ಸೋಮನಾಥಪುರ ದೇವಾಲಗಳ ನಿರ್ಮಾಣ ಶಿಲ್ಪಿಜಕ್ಕಣಾಚಾರ್ಯ ನೆಂದೂ, ಇವನ ಸಾಮಿಪ್ಯ, ಸಂಪರ್ಕ ಹೊಂದಿದ ವಿಷ್ಣುವರ್ಧನ-ಶಾಂತಲಾದೇವಿಯವರೂ ಕಾಲ್ಪನಿಕ ವ್ಯಕ್ತಿಗಳೆಂದು ಹೇಳಬೇಕಾಗುತ್ತದೆ. ವಶಿಷ್ಟ ಮಹಾಋಷಿಗಳು ಮಹಾಜ್ನಾನಿಗಳಾಗಿದ್ದರೂ ಶಿಲ್ಪರಹಿತ ಬ್ರಾಹ್ಮಣ್ಯ ಪೂರ್ಣ  ಬ್ರಾಹ್ಮಣ್ಯ ವಾಗಲಾರದೆಂದು ಸ್ವತಹಃ ಸಿಲ್ಪಶಾಸ್ತ್ರವನ್ನು ಬರೆದು  ಪೂರ್ಣ  ಬ್ರಾಹ್ಮಣ್ಯವನ್ನು ಪಡೆದರು.

ಸೃಷ್ಟಿ ವಿಶ್ವಬ್ರಹ್ಮ ಕಲೆಯಾದರೆ, ಕಲಾಸೃಷ್ಟಿ ಶಿಲ್ಪಬ್ರಹ್ಮನ ಸೃಷ್ಟಿಯಾಗಿದೆ. "ಸತ್ಯಂ ಶಿವಂ ಸುಂದರಂ" ಪಾತಳಿಯ ಮೇಲೆ ನಿಂತು ಶಿಲ್ಪಿಯೂ ಪ್ರತಿಸೃಷ್ಟಿಯನ್ನು ನಿರ್ಮಿಸುವನು. ಇಂತಹ ಶಕ್ತಿಯ ಮೂಲವನ್ನು ಕಂಡುಕೊಂಡ ಮಹಾಶಿಲ್ಪಿ ಜಕ್ಕಣಾಚಾರ್ಯನ ಇತಿಹಾಸವನ್ನು ಅರಿತುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ.

ಸುಮಾರು ೧೧ನೇ ಶತಮಾನದ ಆದಿಯಲ್ಲಿ, ತುಮಕೂರು ಜಿಲ್ಲೆಯ ಕೈದಾಳ ಗ್ರಾಮದ ನಾಗಲಿಂಗ ಸ್ತಪತಿ ಎಂಬ  ಪ್ರತ್ನಶ ಗೋತ್ರದ  ವೈಶ್ವಕರ್ಮಣ ವಂಶೀಯ ಶಿಲ್ಪಿ ಇದ್ದನು. ಅವನ ಏಕಮಾತ್ರ ಪುತ್ರನೇ ಜಕ್ಕಣಾಚಾರ್ಯ. ಇವನ ಪತ್ನಿಯ ಹೆಸರು ಸೌಪರ್ಣಾದೇವಿ.ಸೌಪರ್ಣಾದೇವಿಗೆ ಮೂವತ್ತು ವರ್ಷ ವಯಸಾಗಿದ್ದರೂ ಮಕ್ಕಳಾಗಿರಲಿಲ್ಲ. ಒಂದು ದಿನ ರಾಜಾ ವಿಷ್ನುವರ್ಧನನು ಜಕ್ಕಣಾಚಾರ್ಯನನ್ನು ದಂಡಯಾತ್ರೆಯಲ್ಲಿ ವ್ಯೂಹರಚನಾ ಸಲಹಾಕಾರನನ್ನಾಗಿ ಜೊತೆಗೆ  ಕರೆದುಕೊಂಡು ಹೋದರು. ವಿಜಯಿಗಳಾಗಿ ಹಿಂತಿರುವಾಗ ಮಾರ್ಗದಲ್ಲಿ ಆನೆಗೊಂದಿ ಸರಸ್ವತಿ ಪೀಠಾಧಿಕಾರಿಗಳಾದ ಸಾನಗ ಋಷಿ ಗೋತ್ರಜರಾದ ಬ್ರಹ್ಮಾನಂದ ಸ್ವಾಮಿಗಳ ದರ್ಶನವಾಯಿತು. ಜಕ್ಕಣಾಚಾರ್ಯನು ತನಗೆ ಸಮ್ತಾನಪ್ರಾಪ್ತಿಗಾಗಿ ಅನುಗ್ರಹಿಸಲು ಪ್ರಾರ್ಥಿಸಿಕೊಂಡನು. ಆಗ ಪೂಜ್ಯರು "ನಿನಗೆ ಶ್ರೀಘ್ರದಲ್ಲಿಯೇ ಪುತ್ರ ಸಂತಾನ ಪ್ರಾಪ್ತಿಯಾಗುವುದು ಚಿಂತಿಸಬೇಡ" ಎಂದು ಹೇಳಿ ಆಶಿರ್ವದಿಸಿದರು.

ಇದೇ ಸಮಯಕ್ಕೆ ಚೋಳರಾಜ್ಯ(ಈಗಿನ ತಮಿಳುನಾಡು) ದ ಪೆರಂಬೂರಿನಲ್ಲಿ ಶ್ರೀ ರಾಮಾನುಜಾಚಾರ್ಯರು ವಿಶಿಷ್ಟದ್ವೈತ ವೈಶ್ಣ್ವ ತತ್ಚಗಳ ಪ್ರಸರಣ ಕಾರ್ಯವನ್ನು ಭರದಿಂದ ಕೈಗೊಂಡಿದ್ದರು. ಶೈವ ಪರಂಪರೆಯ ಚೋಳರಾಜನು ವೈಷ್ಣವ ಪ್ರಾಭಲ್ಲ್ಯವನ್ನು ತಡೆಯುವುದಕ್ಕಾಗಿ ರಾಜ್ಯದಲ್ಲಿ ತುಂಬಾ ಶಿವ ದೇವಾಲಯಗಳನ್ನು ನಿರ್ಮಿಸಲು ದಕ್ಷ ಶಿಲ್ಪಿಗಳ ಅವಶ್ಯವಾಗಿತ್ತು. ಹೊಯ್ಸಳ ರಾಜ  ವಿಷ್ನುವರ್ಧನನ ಆಶ್ರಯದಲ್ಲಿ  ಜಕ್ಕಣಾಚಾರ್ಯನೆಂಬ ಅರ್ಹ ಶಿಲ್ಪಿಯೊಬ್ಬ ಇದ್ದುದನ್ನು ತನ್ನ  ಗೂಢಚಾರಿಗಳಿಂದ ಅರಿತುಕೊಂಡನು. ಚೋಳರಾಜನು  ಹೊಯ್ಸಳ ರಾಜ  ವಿಷ್ನುವರ್ಧನನ್ನು ಭಿನ್ನವಸಿ ಜಕ್ಕಣಾಚಾರ್ಯನನ್ನು ತನ್ನ ರಾಜ್ಯಕ್ಕೆ ಕರೆಯಿಸಿಕೊಂಡನು. ಜಕ್ಕಣಾಚಾರ್ಯನ ಶಿಲ್ಪಜ್ನಾನ ಘನವ್ಯಕ್ತ್ವಿತ್ವಗಳನ್ನು ಕಂಡು ಮೆಚ್ಚಿಕೊಂಡನು. ಚೋಳರಾಜನು ಅಂದಿನಿಂದ ಜಕ್ಕಣಾಚಾರ್ಯನನ್ನು ತನ್ನ ಆತ್ಮೀಯ ಸ್ನೇಹಿತನನ್ನಾಗಿ ಮಾಡಿಕೊಂಡನು.

ಇದೇ ಸಮಯದಲ್ಲಿ ವಿಶಿಷ್ಟದ್ವೈತ ವೈಶ್ಣ್ವ ತತ್ಚಗಳ ಪ್ರಸರಣದ ವಿಷಯವಾಗಿ ಶ್ರೀ  ರಾಮಾನುಜಾಚಾರ್ಯರ  ಮತ್ತು   ಚೋಳರಾಜನಲ್ಲಿ ವೈಷಮ್ಯಕ್ಕಿಟ್ಟುಕೊಂಡಿತು. ಚೋಳರಾಜನ ರಾಜ್ಯದಲ್ಲಿ ಶ್ರೀ  ರಾಮಾನುಜಾಚಾರ್ಯರನ್ನು ಕೊಲ್ಲಿಸುವ ಒಳ-ಸಂಚನ್ನು ಕೂಡ ನೆಡೆದಿದ್ದಿತು. ಇದನ್ನರಿತ ಜಕ್ಕಣಾಚಾರ್ಯನು ಮಧ್ಯ ಪ್ರವೇಶಿಸಿ ರಾಜನಿಗೆ ಸಲಹೆ ನೀಡಿ ಮಹಾತ್ಮರಾದ   ಶ್ರೀ  ರಾಮಾನುಜಾಚಾರ್ಯರನ್ನು ಕೊಲ್ಲಿಸುವುದು ಅಚಾತುರ್ಯದ ಕೆಲಸ, ಬೇಡವಾದರೆ ಅಚಾರ್ಯರನ್ನು ನಿಮ್ಮ ರಾಜ್ಯದಿಂದ ಹೊರಹಾಕುವುದು ಉಚಿತವೆಂದು ರಾಜನ ಮನವೊಲಿಸಿದನು. ಈ ಮಾತು  ಚೋಳರಾಜನಿಗೂ ಸರಿ ಅನ್ನಿಸಿತು. ಅಂತೆಯೇ  ರಾಮಾನುಜಾಚಾರ್ಯರನ್ನು ತನ್ನ ರಾಜ್ಯದಿಂದ ಉಚ್ಚಾಟಿಸಿದರು, ಹೊಯ್ಸಳ ಬಿಟ್ಟಿದೇವ( ವಿಷ್ನುದೇವ) ರಾಜನು ತನ್ನ ರಾಜ್ಯದತ್ತ ಆಗಮಿಸುತ್ತಿರುವ ಶ್ರೀ  ರಾಮಾನುಜಾಚಾರ್ಯರನ್ನು    ಬಹು ಆದರದಿಂದ ಬರಮಾಡಿಕೊಂಡನು.

ಈ ವೇಳೆಗೆ ಜಕ್ಕಣಾಚಾರ್ಯನು ಚೋಳರಾಜ್ಯದಲ್ಲಿ ನಾನಾ ಬಗೆಯ ಶಿವದೇವಾಲಯಗಳ ಶಿಲ್ಪ-ಕೆತ್ತನೆ ಕಾರ್ಯ ನೆಡೆಸಿದ್ದನು. ಕೆಲ ಸಮಯದ ನಂತರ ಜಕ್ಕಣಾಚಾರ್ಯನು ತನ್ನೂರಾದ ಕೈದಾಳಕ್ಕೆ ಬಂದು ಪರಿವಾರದೊಂದಿಗೆ  ನೆಲೆಸಿದ್ದನು. ತನ್ನ  ಗುರುಗಳಾದ ಪೆದೋಸ್ತಪತಿಗಳನ್ನು ನೋಡಲೆಂದು ಹಾಸನಕ್ಕೆ ಬಂದು ಗುರುವಿನ ಸೇವಾಕಾರ್ಯದಲ್ಲಿ ತೊಡಗಿದ್ದನು. 
ಈ ಸಮಯದಲ್ಲಿ ಗರ್ಭಿಣಿಯಾಗಿದ್ದ ಜಕ್ಕಣಾಚಾರ್ಯನ ಪತ್ನಿ ಸೌಪರ್ಣಾದೇವಿ ಗಂಡುಮಗುವಿಗೆ ಜನ್ಮವಿತ್ತಳು ಮಗುವಿನ ಜನನ ವೇಳೆಯನ್ನು ತಪ್ಪಾಗಿ ಗ್ರಹಿಸಿ ತಾನು ಹಾಕಿದ ಜನ್ಮಕುಂಡಲಿಯ ಲೆಕ್ಕಾಚಾರದಂತೆ ಆ ಮಗು ವ್ಯಭಿಚಾರದಿಂದ ಜನಿಸಿದಂತೆ ಕಂಡುಬಂದಿತು. ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ನಂಬಿಕೆಇಟ್ಟಿದ್ದ ಜಕ್ಕಣಾಚಾರ್ಯನಿಗೆ ಆಕಾಶವೇ ಕಳಚಿ ತಲೆಯಮೇಲೆ ಬಿದ್ದಂತಾಯಿತು. ಇದನ್ನು ಸಹಿಸಿಲಾರದೆ ಜಕ್ಕಣಾಚಾರ್ಯನು ಯಾರಿಗೂ ತಿಳಸದೇ ಏಕಾಂಗಿಯಾಗಿ ದೇಶಾಂತರ ಹೊರಟುಬಿಟ್ಟನು
ಅತ್ತ ಹೊಯ್ಸಳ ರಾಜ ಬಿಟ್ಟಿದೇವನು  ಶ್ರೀ  ರಾಮಾನುಜಾಚಾರ್ಯರ ಅನುಗ್ರದಿಂದ ನೆಮ್ಮದಿಯಿಂದ ರಾಜ್ಯಭಾರ ಮಾಡುತಿದ್ದನು. ರಾಜ-ಕುಮಾರ ನರಸಿಂಹದೇವನಿಗೆ ಅಂಟಿಕೊಂಡಿದ್ದ ಮನೋರೋಗವನ್ನು ಶ್ರೀ  ರಾಮಾನುಜಾಚಾರ್ಯರು ತಮ್ಮ ವೇದ-ಪಾಂಡಿತ್ಯ ಕಲೆಗಳಿಂದ ದೂರಮಾಡಿದ್ದರು. ಇದರಿಂದ ಸನ್ತಸಗೊಂಡ ರಾಜ ಬಿಟ್ಟಿದೇವನು ಆಚಾರ್ಯರ ಪೊಡಮೊಟ್ಟು " ನೀವು ಮಾಡಿದ ಉಪಕಾರಕ್ಕೆ ನಾನೇನು ಮಾಡಲೆಂದು" ಕೇಳಿಕೊಂಡಾಗ ಆಚಾರ್ಯರು "ನೀವು ಜೈನ-ಮತವನ್ನು ತ್ಯಜಿಸಿ ವೈಷ್ಣವ ಧರ್ಮವನ್ನು ಸ್ವೀಕರಿಸಬೇಕು, ನಿಮ್ಮ ರಾಜ್ಯದಲ್ಲಿಉ ವೈಷ್ಣವ ದೇವಾಲಯಗಳನ್ನು ನಿರ್ಮಿಸಿ, ಹಾಗೂ ನಿಮ್ಮ ಹೆಸರನ್ನು "ಬಿಟ್ಟಿದೇವ"  ಬದಲಾಗಿ "ವಿಷ್ಣುದೇವ" ಎಂದು ಬದಲಿಸಲು ಸೂಚಿಸಿ, ನೀವು ಹೀಗೆ ಮಾಡಿದಾದಲ್ಲಿ ಕೀರ್ತಿವಂತರಾಗುವಿರಿ ಎಂದು ಹರಸಿ ಆಶೀರ್ವದಿಸಿ. ಅಲ್ಲಿಂದ ಕಪಿಲ ತೀರ್ಥ ಪ್ರದೇಶದ ಕಡೆಗೆ ಪ್ರಯಾಣ ಬೆಳೆಸಿದರು.

ಈಗಿನ ತಿರುಪತಿಯು ಕಪಿಲ ತೀರ್ಥ ಪ್ರದೇಶವಾಗಿತ್ತು. ಅಲ್ಲಿ ವೈಶ್ವಕರ್ಮಣ ವಂಶೀಯ ಸ್ತಪತಿ ಮಲ್ಲಿಯಾಚಾರ್ಯನೆಂಬ ವವರು ವಾಸವಾಗಿದ್ದರು. ಅದಾಗಲೇ  ಅವರು ಶ್ರೀ ಆಂಜನೇಯ ಸ್ವಾಮಿ, ಗ್ರಾಮದೇವತಾ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದರು. ಶ್ರೀ ಪಾರ್ಥಸಾರಥಿ ದೇವಾಲಯದ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆ ಮಾಡಿದ್ದರು, ಆದರೆ ಕೆಲದಿನಗಳಲ್ಲಿಯೇ ತೀರಿಕೊಂಡರು,  ದೇವಾಲಯದ ನಿರ್ಮಾಣ ಕಾರ್ಯ ಅಲ್ಲಿಗೇ ನಿಂತಿದ್ದಿತು. ದೇಶ-ಸಂಚಾರ ಹೊರಟಿದ್ದ ಜಕ್ಕಣಾಚಾರ್ಯನು ತನ್ನ ಹೆಸರನ್ನು "ವಿಶ್ವರೂಪಚಾರ್ಯ" ನೆಂದು ಬದಲಾಯಿಸಿ ಕೊಂಡು ಕಪಿಲ ತೀರ್ಥಕ್ಕೆ ಆಗಮಿಸಿದ್ದನು. ಮುಂದೆ ಅಲ್ಲಿಯೇ ಇದ್ದುಕೊಂಡು ಮಲ್ಲಿಯಾಚಾರ್ಯರಿಂದ ಶಂಕುಸ್ಥಾಪನೆಗೊಂಡು ನಿಂತಿದ್ದ  ಶ್ರೀ ಪಾರ್ಥಸಾರಥಿ ಮೂರ್ತಿ ಮತ್ತು  ದೇವಾಲಯದ ನಿರ್ಮಾಣಕಾರ್ಯವನ್ನು ಪೂರೈಸಿದನು. 

ಶ್ರೀ  ರಾಮಾನುಜಾಚಾರ್ಯರ ಸಂಕಲ್ಪದಂತೆ ಕಪಿಲ ತೀರ್ಥ ಪ್ರದೇಶದಲ್ಲಿ (ಈಗಿನ ತಿರುಪತಿ) ವೈಶ್ಣವ ದೇವಾಲಯಗಳ ನಿರ್ಮಾಣಕಾರ್ಯ ಆರಂಭವಾದವು. ಈ ಕಾರ್ಯದಲ್ಲಿ ಬಲ್ಲೋಜ, ನಾಡೋಜ ಹಾಗೂ ವಿಶ್ವರೂಪಚಾರ್ಯ ( ಜಕ್ಕಣಾಚಾರ್ಯ) ಹೀಗೆ ಈ ಮೂವರೂ ಶಿಲ್ಪಿಗಳು ತೊಡಗಿಕೊಂಡಿದ್ದರು. ಈ ಎಲ್ಲ ದೇವಾಲಯಗಳ ಶಿಲ್ಪಗಳು ವಿಶ್ವರೂಪಚಾರ್ಯರ ಮಾರ್ಗದರ್ಶನದಲ್ಲಿ ರೂಪಗೊಂಡವು. ಯತ್ರಾರ್ಥಿಗಳಿಂದ ದೇವಾಲಯಗಳ ಶಿಲ್ಪಗಳು ಹಾಗೂ ವಿಶ್ವರೂಪ ಸ್ತಪತಿಯ ಹೆಸರು ಅಕ್ಕ-ಪಕ್ಕ ರಾಜ್ಯಗಳಿಗೂ ಹರಡಿತು.

ಕೆಲ ವರ್ಷಗಳ ನಂತರ ದ್ವಾರಸಮುದ್ರದ ದೇವೋಜ ಸ್ತಪತಿಯು  ವಿಶ್ವರೂಪಚಾರ್ಯರ ಕೀರ್ತಿಯನ್ನು ಕೇಳಿ ಕುತೂಹಲದಿಂದ ತಿರುಪತಿಗೆ ಬಂದಾಗ  ವಿಶ್ವರೂಪಚಾರ್ಯರ ದರ್ಶನವಾದ ಬಳಿಕ ಆಶ್ಚರ್ಯ ಗೊಂಡು "ತಾವು ನನ್ನ ಗುರುಗಳಾದ ಶ್ರೀ ಜಕ್ಕಣಾಚಾರ್ಯರಲ್ಲವೇ" ಎಂದು ಕೇಳಿದಾಗ ಅದಕ್ಕೆ ಜಕ್ಕಣಾಚಾರ್ಯನು "ಅಲ್ಲ ನಾನು ವಿಶ್ವರೂಪ ಸ್ತಪತಿ" ಎಂದನು. ಆದರೆ ಪೂರ್ವಾಪರ ಸಂಗತಿ ತಿಳಿದಿದ್ದ ದೇವೋಜನು "ತಾವು ಯಾರಾದರಾಗಲಿ, ಬೇಲೂರಿನಲ್ಲಿ ಪ್ರಸಿದ್ದವಾದ ಶ್ರೀ ಚನ್ನಕೇಶವ ದೇವಾಲವನ್ನು ನಿರ್ಮಿಸಲು ನಮ್ಮ ವಿಷ್ಣುವರ್ಧನ ಮಹಾರಾಜರು ನಿರ್ಧರಿಸಿದ್ದಾರೆ, ತಾವು ಅಲ್ಲಿಗೆ ದಯಮಾಡಿಸಿ ಶಿಲ್ಪಕಾರ್ಯವನ್ನು ಕೈಗೊಳ್ಳಬೇಕು, ನಾವಾರೂ  ನಿಮ್ಮ ಇಚ್ಚೆಯ ವಿರುದ್ಧ ನೆಡೆದುಕೊಳ್ಳುವುದಿಲ್ಲ" ಎಂದು ಬಲವಂತದಿಂದ ಜಕ್ಕಣಾಚಾರ್ಯನನ್ನು ಒಪ್ಪಿಸಿ ಬೇಲೂರಿಗೆ ಕರೆದುಕೊಂಡು ಬಂದನು. ಆ ವೇಳೆಗಾಗಲೇ ಜಕ್ಕಣಾಚಾರ್ಯರ  ದೇಹದಲ್ಲಿ ಬಹಳ ಬದಲಾವಣೆಗಳಾಗಿದ್ದವು, ಬೆಳ್ಳನೆ ತಲೆಗೂದಲು, ಉದ್ದುದ್ದ ಗಡ್ಡ-ಮೀಸೆಗಳೂ ಬೆಳೆದು ಮುಖವನ್ನು ಆವರಿಸಿದ್ದವು. ಇದರಿಂದ ಮೊದಲಿದ್ದ(ದೇಶಾಂತರಕ್ಕೆ ಮುನ್ನ) ಆಕಾರ ಮರೆಯಾಗಿದ್ದಿತು. ವಿಶ್ವರೂಪ ಸ್ತಪತಿ ಎಂತಲೇ ಅವರು ಬೇಲೂರಿಗೆ ದೇವೋಜ ಸ್ತಪತಿಯೊಂದಿಗೆ ಆಗಮಿಸಿ ಶ್ರೀ ಚನ್ನಕೇಶವ ದೇವಾಲಯ ನಿರ್ಮಾಣಕಾರ್ಯದಲ್ಲಿ ತೊಡಗಿದರು.

ವಿಶ್ವರೂಪ ಸ್ತಪತಿಯ ನೇತೃತ್ವದಲ್ಲಿ ಸುಮಾರು ಮುನ್ನೂರು ತಜ್ನ ಶಿಲ್ಪಿಗಳ ಹಲವು ವರ್ಷಗಳ ಸುಧೀರ್ಘ ನಿರ್ಮಾಣಕಾರ್ಯದ ನಂತರ ಶ್ರೀ ಚನ್ನಕೇಶವ ದೇವಾಲಯವು ಅತ್ಯಂತ ಸುಂದರ ಮತ್ತು ಸಂಕೀರ್ಣ ಕಲಾ-ನೈಪುಣ್ಯತೆ ಯಿಂದ ನಿರ್ಮಾಣಗೊಂಡಿತು. ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಲಿರುವ ಶ್ರೀ ಚನ್ನಕೇಶವನ ವಿಗ್ರಹವನ್ನು ಸ್ವತಹಃ ವಿಶ್ವರೂಪ ಸ್ತಪತಿಯೇ ಕಡೆದು ನಿರ್ಮಿಸಿದ್ದರು. ವಿಗ್ರಹ ಪ್ರತಿಷ್ಟಾಪನಾ ಕಾರ್ಯದ ಪೂರ್ವ-ತಯಾರಿಯನ್ನು ಸ್ವತಹಃ ರಾಜರೇ ಮುಂದಾಗಿ ಅದ್ದೂರಿಯಿಂದ ನೆರವೇರಿಸುವರಿದ್ದರು. ಬೇಲೂರಿನ ಕಲಾ-ವೈಭವವನ್ನು ನೋದಲು ಹೊಯ್ಸಳ ರಾಜ್ಯದ ಒಳ-ಹೊರ ಪ್ರೆದೇಶಗಳಿಂದಲೂ ಅಸಂಖ್ಯಾತ ಜನಸ್ತೋಮವು ತಂಡೊಪ-ತಂಡವಾಗಿ ಬರತೊಡಗಿತು. ಪ್ರತಿಷ್ಟಾಪನೋತ್ಸವ ದಿನ ಬೇಲೂರು ಒಂದು ಭ್ರುಹತ್-ಯಾತ್ರಾಸ್ಥಳವಾಗಿ, ಪುಣ್ಯಕ್ಷೇತ್ರವಾಗಿ ಅಲಂಕಾರ ಗೊಂಡು ಸಿದ್ದವಾಯಿತು.ಹಿರಿಯ ಸಿಲ್ಪಿ ವಿಶ್ವರೂಪಚಾರ್ಯರ ಅಪೇಕ್ಷೆಯಂತೆ ವಿಷ್ನುವರ್ಧನ ಮಹಾರಾಜರು ನೂರಾರು ವೇದಶಾಸ್ತ್ರ ಪಂಡಿತರು, ಪುರೊಹಿತರೂ, ಗುರುಗಳೂ, ಋಷಿ-ಮುನಿಗಳೂ ಆಗಮಿಸಿದ್ದರು,  ಸೇನಾ-ನಾಯಕರೂ ತಮ್ಮ ಅಶ್ವದಳ-ಸೇನೆಯೊಂದಿಗೆ ಅಶ್ವಾರೂಢರಾಗಿ ಪ್ರವೇಶದ್ವಾರದ ಇಕ್ಕೆಲಗಳಲ್ಲಿಯೂ ಕಾವಾಲಾಗಿ/ಪ್ರೇಕ್ಷಕರಾಗಿ ನಿಂತಿದ್ದರು,ಕೊಂಬು-ಕಹಳೆ-ತುತ್ತೂರಿ-ಕಂಸಾಳೆ ಮೇಳದವರೂ ನಗರದ ಬೀದಿ-ಬೀದಿಗಳಲ್ಲಿ ಸದ್ದು ಮಾಡುತಿದ್ದವು. ಮಂತ್ರಿಗಳಸಮ್ಮುಖದಲ್ಲಿ ಮಂತ್ರ-ವೇದಘೋಷಗಳು ಭವ್ಯವಾದ ಶ್ರೀ ಚನ್ನಕೇಶವನ ದೇವಲಯದ ಪ್ರಾಂಗಣದಲ್ಲಿ ಪ್ರತಿಧ್ವನಿಸತೊಡಗಿದ್ದವು, ವಿಷ್ನುವರ್ಧನ ಮಹಾರಾಜರು-ಮಹಾರಾಣಿ ಶಾಂತಲಾದೇವಿಯವರು ಸುವರ್ಣ ರಥದಲ್ಲಿ ಪ್ರವೇಶ ಮಾಡಿದರು. ಇನ್ನೇನು ದೇವಾಲಯದ ಪ್ರಾಂಗಣದಲ್ಲಿಟ್ಟಿದ್ದ ಶ್ರೀ ಚನ್ನಕೇಶವನ ವಿಗ್ರಹವನ್ನು  ದೇವಾಲಯದ ಒಳಗೆ ಒಯ್ಯುವುದರಲ್ಲಿದ್ದರು ಅಷ್ಟರಲ್ಲಿ ಜನಸ್ತೋಮವನ್ನು ಭೇಧಿಸಿಕೊಂಡು ಸುಮಾರು ಹದಿನಾರು ವರ್ಷದ ಹುಡುಗನು   ಚನ್ನಕೇಶವನ ವಿಗ್ರಹದ ಎದುರಿಗೆ ಬಂದು ವಿಗ್ರಹವನ್ನು ಅಮೂಲಾಗ್ರವಾಗಿ ವೀಕ್ಷಿಸುತ್ತಾ " ಈ ಮೂರ್ತಿ ಅತ್ಯಂತ ಕಲಾಪೂರ್ಣವಾಗಿದೆ, ಚಂದಿರನ ಚೆಲ್ವಿಕೆ, ಇಂದಿರನ ಗಾಂಭೀರ್ಯ ಎರಡೂ ಮೇಳೈಸಿವೆ, ಆದರೆ.... ಇದು ಪೂಜೆಗೆ ಅನರ್ಹವಾಗಿದೆ, ದೋಷಪೂರ್ಣವಾಗಿದೆ" ಎಂದನು. 

ಆ ಬಾಲಕನ ಮಾತುಗಳನ್ನು ಕೇಳಿದ ನೆರೆದಿದ್ದ ಜನಸ್ತೋಮ-ಮಂತ್ರಿ-ಮಹೊದಯರಾದಿಯಾಗಿ ಧಿಘ್ಭ್ರಮೆ ಗೊಂಡರು. ಅಲ್ಲಿದ್ದ ವರೆಲ್ಲರೂ ಆ ಹುಡುಗನನ್ನು ತರಾಟೆಗೆ ತೆಗೆದು-ಕೊಂಡರು, ಗದ್ದಲ ವೆದ್ದಿತು.ಇದನ್ನು ಕಂಡು ಅಲ್ಲಿಗೆ ಸಮೀಪಿಸಿದ ರಾಜ ವಿಷ್ನುವರ್ಧನ ಮಹಾರಾಜರು-ರಾಣಿ ಶಾಂತಲಾದೇವಿಯವರು ವಿಷಯನ್ನು ಶಾಂತಚಿತ್ತದಿಂದ ಆಲಿಸಿ ಕೇಳಿದರು "ಈ ಮೂರ್ತಿ ದೋಷಪೂರ್ಣ ಎನ್ನುತ್ತಿರುವೆಯಲ್ಲ !! ಅದು ಹೇಗೆ ?, ಸಿದ್ದಮಾಡಿ ತೋರಿಸಬಲ್ಲೆಯಾ?" ಎಂದರು.ಪಕ್ಕದಲ್ಲಿಯೇ ನಿಂತಿದ್ದ ವಿಶ್ವರೂಪಚಾರ್ಯರು ಈ ದೋಷಪೂರ್ಣ ಎಂದು ಸಿದ್ದವಾದರೆ ನಾನು ನನ್ನ ಬಲ ಹಸ್ತವನ್ನೇ ಕಡಿದು ಚೆಲ್ಲುತ್ತೇನೆ" ಎಂದು ಉದ್ರಿಕ್ತನಾಗಿ ಶಪತ ಮಾಡಿದನು !! ಮೂರ್ತಿಯ ಸುತ್ತಲೂ ಇದ್ದ ವೇದಶಾಸ್ತ್ರ ಪಂಡಿತರು, ಪುರೊಹಿತರೂ, ಗುರುಗಳೂ, ಋಷಿ-ಮುನಿಗಳೂ ಮೂಕವಿಸ್ಮಿತರಾಗಿ ನಿಂತುಬಿಟ್ಟಿದ್ದರು. ಇಡೀ ವಾತವರಣವಲ್ಲೆವೂ ಸ್ಥಭ್ಧವಾಗಿತ್ತು, ಆಗ ಆ ಯುವಕನು ರಾಜರ ಅನುಮತಿಯೊಂದಿಗೆ ವಿಗ್ರಹದ ಮೇಲೆ ಗಂಧ ಲೇಪನ ಮಾಡಿದನು, ಸ್ವಲ್ಪ ಸಮಯದಲ್ಲಿಯೇ ಗಂಧವು ಒಣಗಿತು, ಆದರೆ ನಾಭಿಯ ಮೇಲಿದ್ದ ಗಂಧವು ಆರದೆ ಒದ್ದೆಯಾಗಿಯೇ ಉಳಿಯಿತು, ಒದ್ದೆಯಾದ ಸ್ಥಳದಲ್ಲಿ ಚಾಣವಿಟ್ಟು ಸುತ್ತಿಗೆಯಿಂದ ಏಟುಕೊಟ್ಟನು ಒಂದು ತುಣುಕು ಕಲ್ಲು ಕಳಚಿ ಬಿದ್ದಿತು, ನಾಭಿಯ ಸ್ಥಾನದಲ್ಲಿ ಒಂದಿಷ್ಟು ನೀರು, ಮರಳು ಹಾಗು ಕಪ್ಪೆಯ ಮರಿಗಳಿದ್ದವು. ಅದನ್ನು ಕಂಡು ರಾಜನು ಅವಾಕ್ಕಾದನು, ನೆರೆದವರೆಲ್ಲರೂ ಬೆರಗಾಗಿ ನಿಂತರು. ರಾಜನು ಆ ಯುವಕನ ಹಾತ್ತಿರ ಬಂದು ಬೆನ್ನು ತಟ್ಟಿ "ಭೇಷ್ ! ಮಗೂ ನೀನ್ಯಾರು !! ನನ್ನ ಸಿಲ್ಪ-ಜ್ನಾನ ಪ್ರೌಢಿಮೆಗೆ ನಾವು ಮೆಚ್ಚಿದ್ದೇವೆ" !! ಎಂದು ಹರ್ಷಭರಿತನಾಗಿ ಯುವಕನನ್ನು ಅಪ್ಪಿಕೊಂಡನು. ಆಗ ಯುವಕನು ದುಖ್ಃ ಒತ್ತರಿಸಿಬಂದು ಅತ್ತುಬಿಟ್ಟನು, ನಂತರ ದೀನವದನಾಗಿ "ನನ್ನ ಹೆಸರು ಡಕ್ಕಣಾಚಾರ್ಯ(ದಕ್ಷಿಣಾಚಾರ್ಯ) ನನ್ನ ಮೂಲಸ್ಥಳ ಕೈದಾಳ ಗ್ರಾಮ, ನನ್ನ ತಾಯಿ ಮತ್ತು ನಾನು ಹಾಸನದಲ್ಲಿದ್ದೇವೆ. ನನ್ನ ತಂದೆ ಜಕ್ಕಣಾಚರ್ಯರನ್ನು ಹುಡುಕುತ್ತಾ ಹೊರಟಿದ್ದೇನೆ. ಚನ್ನಕೇಶವ ದೇವಾಲಯದ ಮೂರ್ತಿ ಪ್ರತಿಷ್ಟಾಪನೋತ್ಸವದ ವಿಷಯ ತಿಳಿದು ಇಲ್ಲಿಗೆ ಬಂದೆನು. ಈ ಘಟನೆ ಜರುಗಿತು. ನನ್ನನ್ನು ಕ್ಷಮಿಸಿ ಮಹಾರಾಜರೇ, ನನ್ನನ್ನು ಕ್ಷಮಿಸಿ" ಎಂದು ಬಿಕ್ಕಿ ಬಿಕ್ಕಿ ಅಳಹತ್ತಿದನು.  

ಇದನ್ನು ಕೇಳಿದ ಜಕ್ಕಣಾಚಾರ್ಯನು ( ವಿಶ್ವರೂಪಚಾರ್ಯರು) ಓಡಿಬಂದು ಡಕ್ಕಣಾಚಾರ್ಯನನ್ನು ಅಪ್ಪಿಕೊಂಡು "ಮಗೂ, ನಾನೇ ನಿನ್ನ ತಂದೆ ಜಕ್ಕಣಾಚಾರ್ಯ, ನನ್ನ ತಪ್ಪನ್ನು ಮನ್ನಿಸು,  ಮಗೂ, ನನ್ನಜ್ಯೋತಿಷ್ಯ ಶಾಸ್ತ್ರ ಮತ್ತು ಶಿಲ್ಪಜ್ನಾನ ಎರಡನ್ನೂ ನೀನು ಅಭದ್ರಗೊಳಿಸಿದೆ, ನಿನ್ನ ದಿವ್ಯ ವ್ಯಕ್ತಿತ್ವದ ಎದಿರು ನಾನು ಚಿಕ್ಕವನಾದೆನು, ನಾನು ಮೂರ್ಖ, ಅಕ್ಷಮ್ಯ ಅಪರಾಧ ಮಾಡಿರುವೆನು" ಎಂದು ಹೇಳುತ್ತಾ ಸಣ್ಣ ಮಗುವಿನಂತೆ ಅತ್ತುಬಿಟ್ಟನು

ರೋಮಾಂಚಕಾರಿಯಾದ ಈ ಘಟನೆಯು ತಂದೆ ಮಗನನ್ನು ಒಂದುಗೂಡಿಸಿತು, ಹಿಂದೆಯೇ ತಿಳಿಯಿತು " ಕೂಸು ಭೂಮಿಗೆ ಬಿದ್ದೊಡನೇ ನಿಂಬೆ ಹಣ್ಣನ್ನು ನನ್ನೆಡೆಗೆ ತೂರು" ಎಂದು ಹೇಳಿದ  ಜಕ್ಕಣಾಚಾರ್ಯ ಕಡೆಗೆ ಸೂಲಗಿತ್ತಿಯು ತಡವಾಗಿ ನಿಂಬೆಹಣ್ಣನ್ನು ತೂರಿದ ತಪ್ಪಿಗಾಗಿ ಹಾಕಿದ ಜನ್ಮ-ಕುಂಡಲಿ ತಪ್ಪು ಮಾಹಿತಿಯನ್ನು ಒದಗಿಸಿ "ಕೂಸು ವ್ಯಭಿಚಾರದ ಫಲ" ಎಂದು. ಇದರಲ್ಲಿ ಯಾರದೂ ತಪ್ಪಿಲ್ಲ, ದೈವಲೀಲೆ.ಜಕ್ಕಣಾಚಾರ್ಯರು ತನ್ನ ಬಲ ಹಸ್ಥ ಕಡಿದು ಚೆಲ್ಲುವ ಪ್ರಸಂಗ ಅದೃಷ್ಟವಶಾತ್ ತಪ್ಪಿತು. 

ತಂದೆ ಮಗ ಕೂಡಿ ಮತ್ತೊಂದು ಚನ್ನಕೇಶವನ ಮೂರ್ತಿಯನ್ನು ಕೆತ್ತಿದರು. ಅದನ್ನೇ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಿದರು. ದೊಷ ಪೂರಿತ  ಚನ್ನಕೇಶವನ ಮೂರ್ತಿಯನ್ನು  ಹೊರಗಡೆ ಇರಿಸಲಾಯಿತು. ಬೇಲೂರಿನಲ್ಲಿ ಈಗಲೂ ಈ ಮೂರ್ತಿಯು ಕಪ್ಪೆ-ಚನ್ನಿಗರಾಯ ಎಂದು ಕರೆಯಲ್ಪಟ್ಟು, ಪ್ರವಾಸಿಗರಿಗೆ ನೋಡಲು ಸಿಗುತ್ತದೆ.

ಇಂಥ ಅದೆಷ್ಟೋ ಶಿಲ್ಪಿಗಳು ತಮ್ಮ ಕಲಾಕೌಶಲದಿಂದ, ಪರಿಶ್ರಮದಿಂದ ಕಡೆದ ನಮ್ಮ ಭಾರತದ ದೇವಾಲಯಗಳ ಶಿಲ್ಪ-ಕಲಾಕೃತಿಗಳು ಮೊಘಲರ/ಪರದೇಶಿಯರ ದಾಳಿಗೆ ತುತ್ತಾಗಿ ಶಿಲ್ಪಗಳ ಹಿಂದಿರುವ ಇಂಥಾ ಅದೆಷ್ಟೋ ಧೀಮಂತ ಕಲಾವಿದರ ಸಂಗತಿಗಳು ಇತಿಹಾಸದಿಂದ ಮರೆ-ಮಾಚುತ್ತಾ ಸಾಗಿವೆ. ನಮ್ಮ ಸರ್ಕಾರಗಳು ಇನ್ನು ಮುಂದಾದರು ಇಂಥ ಕಲಾಕೃತಿಗಳ ರಕ್ಷಣೆಗೆ ಮುಂದಾಗಲಿ ಎಂದು ವಿನಂತಿ ಮಾಡಿಕೊಳ್ಳುತ್ತೇವೆ. (ಸಂಗ್ರಹ)

No comments:

Post a Comment