Translate in your Language

Sunday, December 29, 2013

ಕುವೆಂಪು-ಅವರ 111ನೇ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಕುವೆಂಪುರವರು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ
Kuvempu
ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು. 



ರಸಋಷಿ ಕುವೆಂಪು 
ಮಲೆನಾಡಿನ ಹಿಂದುಳಿದ ವರ್ಗದಿಂದ ಹುಟ್ಟಿ ಬಂದಂತ ಕುವೆಂಪುರವರು ತಾವೆ ಹೇಳಿಕೊಂಡಂತೆ ಮಲೆನಾಡಿನ ಕವಿ. ಕುವೆಂಪುರವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ನಿಜವಾದ ಪ್ರತಿನಿಧಿಯಾಗಿದ್ದಾರೆ. ಅವರ ಸಾಹಿತ್ಯದ ಹರಹು,ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ "ಪರ್ವತಾರಣ್ಯ ಪ್ರಪಂಚ"ದಂತೆ ಬೆರಗು ಹುಟ್ಟಿಸುತ್ತದೆ. ಅವರ ಮಹಾಕಾವ್ಯ ,ಕಾದಂಬರಿ,ನಾಟಕ,ಕವಿತೆ ಈ ಅರಣ್ಯಾನುಭವಗಳೇ ಮೂಲದ್ರವ್ಯದಂತೆ ಸರ್ವವ್ಯಾಪಿಯಾಗಿದೆ. ಅವರ ಬಹುತೇಕ ಎಲ್ಲ ಪಾತ್ರಗಳು ಈ ಅರಣ್ಯ ಸಂಸ್ಕೃತಿಯ ಪ್ರತೀಕಗಳೇ. ಕುವೆಂಪು ಅವರಲ್ಲಿ ಪ್ರಕಟವಾಗುವ ಅದಮ್ಯವಾದ ನಿಸರ್ಗ ಪ್ರೀತಿ ಮೂಲತಃ ಜೀವನಪ್ರೀತಿಯ ವಿಸ್ತರಣೆ. ಈ ನಿಸರ್ಗದ ಕುರಿತ ಉತ್ಕಟವಾದ ಹಂಬಲ ಕೇವಲ ಸೌಂದರ್ಯನಿಷ್ಠವಾದುದು ಮಾತ್ರವಲ್ಲ,ಅದನ್ನು ಮೀರಿದ ಆಧ್ಯಾತ್ಮಿಕ ಅನ್ವೇಷಣೆಯ ಪರಿಣಾಮ ಕೂಡ ಆಗಿದೆ. ಮಲೆನಾಡಿನ ನಿಸರ್ಗದ ಚೆಲುವಿನ ಜೊತೆಗೆ ಅದರ ಒಡಲಿನ ಸಾಮಾಜಿಕ ಬದುಕನ್ನು,ಅದರ ಸಾಮಾಜಿಕ ಸ್ಥಿತ್ಯಂತರಗಳನ್ನು ದಾಕಲಿಸುತ್ತ ಬಂದಿದ್ದಾರೆ. ಈ ಅರಣ್ಯ ಕೇಂದ್ರಿತ ಸಾಮಾಜಿಕ ಬದುಕಿನ ಮೂಲಕ ಇಡೀ ಭಾರತೀಯ ಸಾಮಾಜಿಕ ಹಾಗು ಸಾಂಸ್ಕೃತಿಕ ಜೀವನದ ಪಲ್ಲಟಗಳನ್ನು ತಲ್ಲಣಗಳನ್ನೂ ಅವರ ಗ್ರಹನಾ ಶಕ್ತಿಯಿಂದ ವ್ಯಕ್ತವಾಗಿದೆ. 
Kuvempu when Young

ಅವರ ಸೃಜನಶೀಲ ಪ್ರತಿಭೆ ಪೂರ್ವ ಪಶ್ಚಿಮಗಳ ಚಿಂತನಗಳಿಂದ ಶ್ರೀಮಂತವಾಗಿದೆ. ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಗೌರವ ಸ್ಥಾನವನ್ನು ತಂದುಕೊಟ್ಟಿದೆ. ರಸಋಷಿಯ ಸಾಹಿತ್ಯವೆಲ್ಲವೂ ಒಂದರ್ಥದಲ್ಲಿ ಸ್ವಾತಂತ್ರ ಪೂರ್ವದ ಆಶೋತ್ತರಗಳ ಅಭಿವ್ಯಕ್ತಿಯಾಗಿ ಮತ್ತು ಸ್ವಾತಂತ್ರ್ಯ ಭಾರತದ ವಾಸ್ಥವವನ್ನು ಕುರಿತ ವಿಮರ್ಷೆಯಾಗಿ ತೋರುತ್ತದೆ. ಹಾಗೆಯೇ ಸಾಹಿತ್ಯ ನಿರ್ಮಿತಿಯ ನೆಲೆಯಲ್ಲಿ ಈ ದೇಶದ ಪರಂಪರಗೆ ಅವರು ತೋರಿದ ಸೃಜನಾತ್ಮಕ ಪ್ರತಿಕ್ರಿಯೆಗಳು ಮತ್ತು ಜಾಗತಿಕ ಪ್ರಜ್ಞೆಯನ್ನು ಅವರನ್ನು ಅರಗಿಸಿ ಕೊಂಡ ಕ್ರಮಗಳು ಹಾಗು ಯುಗ ಪರಿವರ್ತನೆಯ ಸೂಕ್ಷ್ಮತೆಗಳಿಗೆ ಸ್ಪಂದಿಸುತ್ತ ಅವುಗಳನ್ನು ಗುರುತಿಸಿ ತಮ್ಮ ಬರಹದ ಮೂಲಕ ಅದಕ್ಕೆ ಹೊಂದುವಂತೆ ಜನಮನವನ್ನು ಸಜ್ಜುಗೊಳಿಸಿದ ಪ್ರಯತ್ನಗಳು ಕುವೆಂಪುರವರನ್ನು ಈ ಯುಗಮಾನದ ಮಹತ್ವದ ಲೇಖಕರನ್ನಾಗಿ ಮಾಡಿವೆ. 

ಆಧ್ಯಾತ್ಮ, ವ್ಯೆಚಾರಿಕತೆ, ಗಾಢವಾದ ನಿಸರ್ಗ ಪ್ರೀತಿಗಳಲ್ಲಿ ಬೇರೂರಿರುವ ಅವರ ಸಾಹಿತ್ಯ ನಮ್ಮ ಪರಂಪರೆಯನ್ನು,ಸಾಮಾನ್ಯ ಜನರ ಬದುಕನ್ನು ನಿರ್ಧೇಶಿಸಿದಂತೆಯೇ ಶೋಷಣೆಗೂ ಒಳಗು ಮಾಡಿದ ಪರಂಪರೆಯನ್ನು ತೀಕ್ಷ್ಣ ಹಾಗು ಚಿಕಿತ್ಸಕ ದೃಷ್ಠಿಯಿಂದ ಕಂಡಿದೆ. ಅಲ್ಲದೆ, ಸರ್ವೊದಯ, ಸಮನ್ವಯ ಮತ್ತು ಪೂರ್ಣ ದೃಷ್ಠಿಯ ಬೆಳಕಿನಲ್ಲಿ ಮನುಷ್ಯನ ವ್ಯಕ್ತಿತ್ವದ ಮುಕ್ತ ಬೆಳವಣಿಗೆಯ ಕಾಳಜಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಕುವೆಂಪು ಅವರ ಚಿಂತನೆ, ಅವರ ಕೊನೆಯ ವರ್ಷದಲ್ಲಿ, ದ್ವೇಷ, ಭಾಷೆ, ಜಾತಿ, ಮತ ಸಿದ್ಧಾಂತಗಳ ಹಾಗು ತಮಗೆ ಅತ್ಯಂತ ಪ್ರಿಯವಾದ ಸಾಹಿತ್ಯದ ಮೇರಯನ್ನು ದಾಟಿತ್ತು. ವಿಶ್ವದೃಷ್ಟಿಯನ್ನು ಹೊಂದಿತ್ತು. ಅದರ ಫಲವೆ ವಿಶ್ವಮಾನವ ಸಂದೇಶ ,ಇದರ ಗೌರವಾರ್ಥವಾಗಿ ಕುವೆಂಪುರವರಿಗೆ 'ವಿಶ್ವಮಾನವ' ಎಂಬ ಬಿರುದಿದೆ.

ಸಾಹಿತ್ಯ ಕೃತಿಗಳು
ಶ್ರೀ ರಾಮಾಯಣದರ್ಶನಂ-ಮಹಕಾವ್ಯ.(ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
ಕಾನೂರು ಹೆಗ್ಗಡಿತಿ-ಕಾದಂಬರಿ.
ಮಲೆಗಳಲ್ಲಿ ಮದುಮಗಳು-ಕಾದಂಬರಿ.


ನೆನಪಿನ ದೋಣಿಯಲ್ಲಿ-ಆತ್ಮಚರಿತ್ರೆ.
ಕವನಸಂಗ್ರಹಗಳು.
ನಾಟಕಗಳು.
ಕಾವ್ಯ ಮೀಮಾಂಸೆ ಹಾಗು ವಿಮರ್ಶಾಕೃತಿಗಳು.
ವೈಚಾರಿಕ ಲೇಖನಗಳು.
ಮಲೆನಾಡಿನ ಚಿತ್ರಗಳು-ಲಲಿತ ಪ್ರಬಂಧ.
ಕಥಾಸಂಕಲನಗಳು.
ಜೀವನ ಚರಿತ್ರೆಗಳು.

ಕುವೆಂಪುರವರಿಗೆ ಸಂದ ಗೌರವ ಪ್ರಶಸ್ತಿಗಳು
1956-ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕ.
1957-ಧಾರವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯ್ಕಕ್ಷ ಪದವಿ.
1964-ರಾಜ್ಯ ಸರ್ಕಾರದಿಂದ ರಾಷ್ಟ್ರ ಕವಿ ಬಿರುದಿನ ಗೌರವ.
1968-ಶ್ರೀ ರಾಮಾಯಣದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ.
1968-ರಾಷ್ಟ್ರಪತಿಗಳಿಂದ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ.
1988-ಕರ್ನಾಟಕ ಸರ್ಕಾರದ ಪ್ರಥಮ ಪಂಪ ಪ್ರಶಸ್ತಿ ಪ್ರದಾನ.


1992-ಕರ್ನಾಟಕ ಸರ್ಕಾರದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ.

1956ರಿಂದ95-೮ ಬೇರೆ-ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
------------------------------------------------------------------
ಉಪಯುಕ್ತ
ಎಲ್ಲಿಯೂ ನಿಲ್ಲದಿರು: ರಾಷ್ಟ್ರಕವಿ ಕುವೆಂಪು
ಕುವೆಂಪು ಅವರ ಭಾವಗೀತೆಗಳು


No comments:

Post a Comment