ಜಿಡ್ಡು ಕೃಷ್ಣಮೂರ್ತಿ:(1885-1986) |
ಹಿಂದೂ ಧರ್ಮ ಮತ್ತು ಬೌದ್ಧ ತತ್ವಗಳಿಗೆ ಪಾಶ್ಚಾತ್ಯ ಸ್ವರೂಪಗಳ ಮಿಶ್ರಣವನ್ನು ನೀಡಿದ ಥಿಯೋಸೋಫಿಕಲ್ ಸೊಸೈಟಿಯ ಅಧ್ಯಕ್ಷರಾದ ಸ್ವಯಂ ಅನ್ನಿ ಬೆಸೆಂಟ್ ಅವರೇ ಈ ಪ್ರಚಾರವನ್ನು ನೀಡಿದ್ದರು. ಕೃಷ್ಣಮೂರ್ತಿಯವರಿಗೆ ಈ ವಿಶ್ವಗುರು ಪಟ್ಟಕ್ಕೆ ಸಕಲ ತರಬೇತಿಗಳನ್ನೂ ಅನ್ನಿ ಬೆಸೆಂಟ್ ಮತ್ತವರ ಸಂಗಡಿಗರು ನೀಡಿದ್ದರಾದರೂ, ಇಪ್ಪತ್ತು ವರ್ಷಗಳ ನಂತರದಲ್ಲಿ ಅಂದರೆ 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರಾಗಿಬಿಟ್ಟರು. ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿಬಿಟ್ಟರು. ಅಲ್ಲಿಂದ ಮುಂದೆ ಏಕಾಂಗಿಯಾಗಿ ನಡೆದ ಜೆ. ಕೃಷ್ಣಮೂರ್ತಿಯವರು, ತಮ್ಮ ಮುಂದಿನ ಅರವತ್ತು ವರ್ಷಗಳ ಜೀವಿತಾವಧಿಯಲ್ಲಿ ವಿಶ್ವದಾದ್ಯಂತ ಸಂಚರಿಸಿ, ಮಾನವ ಸಮಾಜದಲ್ಲಿ ಸ್ವಯಂದಾರ್ಶನಿಕ ಬದಲಾವಣೆಯನ್ನು ತರಲು ಅಪಾರವಾದ ಕೆಲಸ ಮಾಡಿದರು.
“ನಮ್ಮ ಕಾಲದಲ್ಲಿ ಜೀವಂತವಿರುವ ವ್ಯಕ್ತಿಗಳಲ್ಲಿ ಜೆ ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡುವುದರಲ್ಲಿ ಕಂಡ ಸೌಭಾಗ್ಯಕ್ಕಿಂತ ಮಿಗಿಲಾದುದನ್ನು ಮತ್ತೆಲ್ಲೂ ಅನುಭಾವಿಸಿಲ್ಲ” ಎನ್ನುವ ಪ್ರಸಿದ್ಧ ಬರಹಗಾರ ಮತ್ತು ಚಿತ್ರಕಾರರಾದ ಹೆನ್ರಿ ಮಿಲ್ಲರ್ ಅವರ ನುಡಿ ಜೆ. ಕೃಷ್ಣಮೂರ್ತಿಯವರ ವಿಶ್ವಪ್ರಸಿದ್ಧಿಯ ಕುರಿತಾದ ಒಂದು ಸಣ್ಣ ಕುರುಹಷ್ಟೆ. ಜಗತ್ತಿನ ಇತಿಹಾಸದಲ್ಲಿನ ಮಹೋನ್ನತ ಚಿಂತಕರಲ್ಲಿ ಒಬ್ಬರೆಂದು ಜೆ. ಕೃಷ್ಣಮೂರ್ತಿ ಪ್ರಸಿದ್ಧರಾಗಿದ್ದಾರೆ. ಜೆ. ಕೃಷ್ಣಮೂರ್ತಿಯವರು ಯಾವುದೇ ವೇದಾಂತವನ್ನಾಗಲೀ, ಧರ್ಮವನ್ನಾಗಲಿ ಬೆಂಬಲಿಸಲಿಲ್ಲ. ಅವರು ಮಾತನಾಡಿದ್ದೆಲ್ಲಾ ನಮ್ಮ ಬದುಕಿಗೆ ಅವಶ್ಯಕವಾದ ಚಿಂತನೆಗಳ ಬಗ್ಗೆ, ಇಂದಿನ ಹಿಂಸೆ ಮತ್ತು ಭ್ರಷ್ಟಾವೃತ ಸಮಾಜದಲ್ಲಿ ಬದುಕಬೇಕಾದ ಅನಿವಾರ್ಯತೆಗಳ ಬಗ್ಗೆ; ನಾವು ಅರಸುವ ಭದ್ರತೆ ಮತ್ತು ಸಂತೋಷದ ಬಗ್ಗೆ; ಮನುಕುಲವನ್ನು ಭಯ, ಕ್ರೋಧ, ನೋವು ಮತ್ತು ದುಃಖಗಳ ಭಾರದಿಂದ ಮುಕ್ತಗೊಳಿಸುವ ಬಗ್ಗೆ. ಮಾನವನ ಮನಸ್ಸಿನ ನಡವಳಿಕೆಗಳ ಸೂಕ್ಷ್ಮ ತರಂಗಗಳನ್ನು ಎಳೆ ಎಳೆಯಾಗಿ ಬಿಡಿಸಿ ತೋರಿದ ಜೆ. ಕೃಷ್ಣಮೂರ್ತಿಯವರು ನಮ್ಮ ದೈನಂದಿನ ಬದುಕಿಗೆ ಬೇಕಾದ ಸುದೀರ್ಘ ಉಪಾಸನೆಯ ಆಳ ಮತ್ತು ಆಧ್ಯಾತ್ಮದ ಶ್ರೇಷ್ಠತೆಯ ಅವಶ್ಯಕತೆಗಳ ಬಗೆಗೆ ಬೆಳಕು ಚೆಲ್ಲಿದರು.
ಜೆ. ಕೃಷ್ಣಮೂರ್ತಿಯವರು ಹೀಗೆ ವಿವೇಚಿಸುತ್ತಾರೆ. “ನನ್ನ ಪ್ರಕಾರ ಮನಸ್ಸೇ ಒಂದು ನಿಜವಾದ ಸಮಸ್ಯೆ. ಮನಸ್ಸೆಂಬ ಸಮಸ್ಯೆಯ ಮುಂದೆ, ಅದು ತಾನೇ ಸೃಷ್ಟಿಕೊಂಡು ಪರಿಹರಿಸಿಕೊಳ್ಳಬಯಸುವ ಸಮಸ್ಯೆ ಯಾವುದೇ ರೀತಿಯಲ್ಲೂ ದೊಡ್ಡದಲ್ಲ. ಮನಸ್ಸು ಕುಬ್ಜವಾಗಿದ್ದಲ್ಲಿ, ಸಣ್ಣದಾಗಿದ್ದಲ್ಲಿ, ಕಿರಿದಾಗಿದ್ದಲ್ಲಿ, ಸೀಮಿತವಾಗಿದ್ದಲ್ಲಿ ಅದರ ಮುಂದೆ ಬರುವ ಸಮಸ್ಯೆಯ ಗಾತ್ರ ಎಷ್ಟೇ ಹಿರಿದಾಗಿದ್ದರೂ ಮನಸ್ಸು ಆ ಸಮಸ್ಯೆಯನ್ನು ತನ್ನ ಸಣ್ಣತನದಲ್ಲಿಯೇ ಎದುರುಗೊಳ್ಳುತ್ತದೆ. ಮನಸ್ಸಿಗೆ ಅದ್ಭುತ ಶಕ್ತಿಯೇನೋ ಇದೆ. ಅದು ಮಹತ್ತರವಾದದ್ದನ್ನು ಅನ್ವೇಷಿಸಬಲ್ಲದು. ಸೂಕ್ಷ್ಮವಾಗಿ ಅವಲೋಕಿಸಬಲ್ಲದು. ಚತುರವಾಗಿ ಚಿಂತಿಸಲೂಬಲ್ಲದು. ಆದರೆ ಅದು ಸಣ್ಣತನದ್ದಾಗಿದ್ದರೆ! ಅದು ಮಾರ್ಕ್ಸ್, ಭಗವದ್ಗೀತೆ, ಬೈಬಲ್, ಕುರಾನ್ ಅನ್ನು ಸಮರ್ಥವಾಗಿ ಉಲ್ಲೇಖಿಸಲು ಶಕ್ತವಾಗಿದೆ ಆದರೆ ಅದು ಆಗಲೂ ಸಣ್ಣತನದಲ್ಲಿಯೇ ಇದೆ. ಹೀಗಿರುವಾಗ ಅದು ತನ್ನ ಮುಂದೆ ಬರುವ ಮಹತ್ತರವಾದ ಸಮಸ್ಯೆಯನ್ನು ಕೂಡಾ ತನ್ನ ಕ್ಷೀಣ ಪರಿಧಿಯಲ್ಲಿ ಮಾತ್ರವೇ ಕಾಣಬಲ್ಲದು ಅಥವಾ ತಾನಿರುವ ಮಟ್ಟಕ್ಕೆ ಮಾತ್ರವೇ ಅದನ್ನು ಪರಿವರ್ತಿಸಿಕೊಳ್ಳಬಲ್ಲದು. ಹೀಗಾಗಿ ಸಮಸ್ಯೆ ಮತ್ತು ಜಿಗುಪ್ಸೆ ಉಲ್ಬಣಗೊಳ್ಳುತ್ತದೆ. ಈ ಕಾರಣದಿಂದ ಈಗಿರುವ ಪ್ರಶ್ನೆಯೆಂದರೆ, ತನ್ನ ಸಮಸ್ಯೆಗಳ ಬಂಧನದಿಂದ ಮುಕ್ತವಾಗಬಲ್ಲ ಹಂತಕ್ಕೆ ಈ ಮನಸ್ಸು ಔನ್ನತ್ಯಗೊಳ್ಳಬಲ್ಲದೆ?”
“ನೀವು ಯಾವುದಾದರೂ ಧ್ಯೇಯಗಳ ಹೆಸರಿನಲ್ಲೋ, ನಂಬಿಕೆಗಳ ಹೆಸರಿನಲ್ಲೋ, ತತ್ವಗಳ ಹೆಸರಿನಲ್ಲೋ ನಿಮ್ಮ ಮನಸ್ಸನ್ನು ಯಾವಾಗಲೂ ಹೋರಾಟದ ಸ್ಥಿತಿಯಲ್ಲಿಯೇ ಇಟ್ಟುಕೊಂಡಿರುತ್ತೀರಿ. ನೀವು ಇವುಗಳೆಲ್ಲದರಿಂದ ಹೊರಬಂದು ಸಂಪೂರ್ಣವಾಗಿ ಶಾಂತಚಿತ್ತದಿಂದ ಉತ್ಸಾಹದಿಂದ ಜೀವಂತವಾಗಿರುವುದು ಸಾಧ್ಯವೆ? ಯಾವ ಮನಸ್ಸಿನ ಸ್ಥಿತಿಯು. ಇನ್ನು ಹೆಚ್ಚು ಕಾಲ ಹೋರಾಡಲಾರದೋ ಅದೇ ನಿಜವಾದ ಧರ್ಮನಿಷ್ಠವಾದ ಮನಸ್ಸು. ಮನಸ್ಸಿನ ಆ ಸ್ಥಿತಿಯಲ್ಲಿ ನೀವು ಸತ್ಯ, ವಾಸ್ತವಿಕತೆ, ಶಾಂತಿ, ದೇವರು, ಸೌಂಧರ್ಯ, ಪ್ರೇಮ ಎಂದು ಏನನ್ನು ಕರೆಯುತ್ತೀರೋ ಅದನ್ನು ಕಾಣಬಹುದು. ಇದನ್ನು ಆಹ್ವಾನಿಸಲಾಗುವುದಿಲ್ಲ. ಅದನ್ನು ಅನ್ವೇಷಣೆ ಮಾಡುವುದಕ್ಕೂ ಆಗುವುದಿಲ್ಲ. ಏಕೆಂದರೆ ಮನಸ್ಸು ಅವಿವೇಕದಿಂದ ಕೂಡಿದ್ದು ತುಂಬಾ ಕ್ಷುದ್ರವಾದದ್ದು, ನಿಮ್ಮ ರಸ ಭಾವಗಳು ಕಳಪೆಯಾದವು. ಆ ಮಹತ್ತಾದುದನ್ನು ನಿಮ್ಮ ಮನಸ್ಸೆಂಬ ಸಣ್ಣ ಮನೆಗೆ, ನೀವು ವಾಸಿಸುವ ಮನಸ್ಸೆಂಬ ಸಣ್ಣ ಮೂಲೆಗೆ, ಜನ ತುಳಿದಾಡಿ ಉಗುಳಿರುವ ಜಾಗಕ್ಕೆ ಆಹ್ವಾನಿಸಲಾಗುವುದಿಲ್ಲ. ಅದನ್ನು ಗೊತ್ತುಮಾಡಿಕೊಳ್ಳಲಾರಿರಿ. ಯಾರೇ ಆಗಲಿ, ‘ನನಗೆ ಗೊತ್ತಿದೆ’ ಎಂದು ಹೇಳಿದೊಡನೆಯೇ ನಮಗೆ ತಿಳಿಯುತ್ತದೆ - ಅವನಿಗೆ ಗೊತ್ತಿಲ್ಲವೆಂಬುದು. ಹಾಗೆ ಹೇಳುವುದು ಮತ್ತೊಬ್ಬನನ್ನು ಶೋಷಣೆ ಮಾಡುವುದಕ್ಕೆ ಸೃಷ್ಟಿಸಲ್ಪಟ್ಟ ಮಾರ್ಗಗಳು ಮಾತ್ರ. ನಿಮ್ಮ ಹೃದಯ ಏಕೆ ಶೂನ್ಯವಾಗಿದೆ ಎಂದರೆ ನಿಮ್ಮಲ್ಲಿ ಉತ್ಸಾಹವಿಲ್ಲ. ಉತ್ಸಾಹದ ಉನ್ನತ ಸ್ವರೂಪವಾದ ನಿರಾಕರಣೆಯಲ್ಲಿ ಪ್ರೇಮವೆನ್ನುವ ವಸ್ತು ಉಂಟಾಗುತ್ತದೆ. ನಿಮ್ಮ ಹೃದಯ, ನಿಮ್ಮ ನರನಾಡಿಗಳು, ನಿಮ್ಮ ಕಣ್ಣುಗಳು, ನಿಮ್ಮೆಲ್ಲ ಇರುವಿಕೆ ಇಷ್ಟನ್ನೂ ಕೊಟ್ಟು ಜೀವನ ಮಾರ್ಗವನ್ನು ಕಾಣಲು, ಏನಿದೆಯೆಂದು ನೋಡಲು, ಅದನ್ನು ಮೀರಿ ಕಾಣಲು ಪ್ರಯತ್ನಿಸಿದರೆ ನೀವಿರುವ ಬಾಳನ್ನು ಸಮಗ್ರವಾಗಿ ನಿರಾಕರಿಸಿದರೆ - ಆ ವಿಕಾರದ ಪಾಶವೀಯತೆಯ ನಿರಾಕರಣೆಯಲ್ಲಿ ಆ ಮತ್ತೊಂದು ಉದ್ಭವವಾಗುತ್ತದೆ. ಅದು ನಿಮಗೆ ಗೊತ್ತಾಗುವುದೂ ಇಲ್ಲ. ನಮ್ಮಲ್ಲಿ ತುಂಬಿಕೊಂಡಿರುವುದೆಲ್ಲಾ ಕೇವಲ ಮಾತಿನ ರೂಪದಲ್ಲಿ ತುಂಬಿಕೊಂಡ ತಿಳಿವು. ತಾನು ಮೌನವಾಗಿದ್ದೇನೆಂದು ತಿಳಿದ, ತಾನು ಪ್ರೀತಿಸುತ್ತೇನೆಂದು ತಿಳಿದ ಮಾನವನು ಪ್ರೇಮವೆನ್ನುವುದನ್ನು ಕಾಣ, ಮೌನವೆನ್ನುವುದನ್ನೂ ಕಾಣ.” ಇದು ಜೆ ಕೃಷ್ಣಮೂರ್ತಿಯವರ ವಿಶ್ಲೇಷಣೆಯ ಪರಿ.
ಜೆ. ಕೃಷ್ಣಮೂರ್ತಿಯವರು ಎಲ್ಲಾ ಧಾರ್ಮಿಕ ಸಂಸ್ಥೆಗಳ ಪರಿಧಿಯಾಚೆಗೆ ನಿಂತವರು, ಯಾವುದೇ ವರ್ಗ ಮತ್ತು ದೇಶಗಳಿಗೂ ಅತೀತರಾಗಿದ್ದವರು ಮತ್ತು ಎಲ್ಲ ರಾಜಕೀಯ ಸೈದ್ಧಾಂತಿಕ ನಿಲುವುಗಳಿಗೂ ಸಿಲುಕದವರು. ಈ ಸೀಮಿತ ರೇಖೆಗಳೇ ಮಾನವ ಸಮಾಜವನ್ನು ಒಡೆದಿರುವುದನ್ನು ಗುರುತಿಸುವ ಅವರು ಮನುಷ್ಯ ತಾನು ಪ್ರತಿನಿತ್ಯ ನಿರತನಾಗಿರುವ ಒಡಕು ಮತ್ತು ಯುದ್ಧಗಳನ್ನು ಕಂಡುಕೊಳ್ಳುವಂತೆ ಮಾಡುತ್ತಾರೆ. ನಾವುಗಳೆಲ್ಲಾ ಮೊದಲು ಮಾನವರು, ಹಿಂದೂ, ಮುಸ್ಲಿಂ, ಕ್ರಿಸ್ಚಿಯನ್ನರಲ್ಲ ಎಂದು ನೆನಪಿಸುವ ಕೃಷ್ಣಮೂರ್ತಿಯವರು ನಾವು ಕೂಡಾ ಇತರ ಮಾನವರಂತೆಯೇ ಸೃಷ್ಟಿಗೊಂಡಿದ್ದು, ಪಾರಸ್ಪರಿಕವಾಗಿ ವಿಭಿನ್ನರಲ್ಲ ಎನ್ನುತ್ತಾರೆ.
ಈ ಜಗತ್ತಿನಲ್ಲಿ ನಾವು ನಮ್ಮನ್ನಾಗಲಿ ನಮ್ಮ ಪರಿಸರವನ್ನಾಗಲಿ ನಾಶಗೊಳಿಸಿಕೊಳ್ಳದೆ ನವುರಾಗಿ ನಡೆಯಬೇಕಾದ ಅವಶ್ಯಕತೆಗಳ ಬಗ್ಗೆ ಕೃಷ್ಣಮೂರ್ತಿ ನಮ್ಮ ಗಮನ ಸೆಳೆಯುತ್ತಾರೆ. ಅವರ ಬೋಧನೆಗಳ ಆಳದಲ್ಲಿ ಪ್ರಕೃತಿಗೆ ಪರಮ ಗೌರವವಿದೆ. ಮಾನವ ನಿರ್ಮಿತ ನಂಬಿಕೆಗಳ ವ್ಯವಸ್ಥೆಗಳು, ರಾಷ್ಟ್ರೀಯ ಭಾವನೆಗಳು, ವರ್ಗೀಕೃತ ಸಮಾಜದ ಚಿಂತನೆಗಳ ಪರಿಮಿತಿಗಳಾಚೆಗೆ ಕೃಷ್ಣಮೂರ್ತಿಯವರ ಗಮನ ಹೊರಚಾಚುತ್ತದೆ. ಮಾನವನ ಸತ್ಯಾನ್ವೇಷಣೆಗೆ ಹೊಸ ಅರ್ಥಗಳನ್ನು ಅವರ ಬೋಧನೆಗಳು ಕಲ್ಪಿಸುತ್ತವೆ. ಅವರ ಚಿಂತನೆಗಳು ಆಧುನಿಕ ಯುಗಕ್ಕೆ ಸಾಂದರ್ಭಿಕವಾಗಿರುವುದರ ಜೊತೆಗೆ ಸಾರ್ವಕಾಲಿಕವೂ ಆಗಿವೆ.
ಕೃಷ್ಣಮೂರ್ತಿಯವರು ಒಬ್ಬ ಗುರುವಾಗಿ ಮಾತನಾಡಲು ತೊಡಗದೆ ಒಬ್ಬ ಗೆಳೆಯರಾಗಿ ಕೆಳುಗನೊಡನೆ ಬೆರೆಯುತ್ತಾರೆ. ಅವರೊಡನೆ ನಡೆಯುವ ಮಾತುಕತೆಗಳೆಲ್ಲವೂ ಪಾರಂಪರಿಕ ಜ್ಞಾನವನ್ನು ಆಧರಿಸದೆ ಅವರ ಸ್ವಯಂ ಅಂತರ್ದರ್ಶನದ ಹೊಳಹುಗಳನ್ನು ಪ್ರತಿಫಲಿಸುತ್ತವೆ. ಈ ಕಾರಣದಿಂದಾಗಿ ಅವರ ಮಾತುಕತೆಗಳಲ್ಲೆಲ್ಲಾ ಹೊಸತನ ತುಂಬಿದೆ. ಅವರು ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಕೂಡಾ ಅಲ್ಲಿ ಉಪಸ್ಥಿತರಿದ್ದ ಪ್ರತಿಯೋರ್ವರೂ ಓ ಇವರು ನನ್ನೊಡನೆಯೇ ಸಂಭಾಷಿಸುತ್ತಿದ್ದಾರೆ ಎಂಬಂತಹ ವಾತಾವರಣ ಸೃಷ್ಟಿಯಿರುತ್ತಿತ್ತು ಎಂಬುದು ಅವರನ್ನು ಆಲಿಸಿದ ವಿಶ್ವದನೇಕ ಅನುಭಾವಿಗಳ ಅಭಿಪ್ರಾಯವಾಗಿದೆ.
ಜೆ ಕೃಷ್ಣಮೂರ್ತಿಯವರ ಬಳಿ ವೈಯಕ್ತಿಕವಾಗಿ ತಮ್ಮ ದುಃಖಗಳನ್ನು ಒಪ್ಪಿಸುತ್ತಿದ್ದ ಸಹೃದಯರಿಗೆ ಅವರೊಬ್ಬ ಕರುಣಾವೇತ್ತ ಮಿತ್ರರಾಗಿದ್ದು, ಅತ್ಯಂತ ಶ್ರದ್ಧಾಪೂರ್ವಕ ಆತ್ಮೀಯತೆಯಿಂದ ಬಂದವರ ಮಾತುಗಳನ್ನು ಕೇಳುತ್ತಾ ತಾವಾಗಿಯೇ ಯಾವುದೇ ಸೂಚನೆಗಳನ್ನು ಕೊಡದೆ, ಸ್ವಯಂ ಕೆಳುಗನೇ ತಾವು ಆಡುತ್ತಿರುವ ವಿಷಯದ ಬಗೆಗೆ ಅರಿತುಕೊಳ್ಳುವುದನ್ನು ಪ್ರೋತ್ಸಾಹಿಸುತ್ತಿದ್ದರು. ಬಹಳಷ್ಟು ಧಾರ್ಮಿಕ ವಿದ್ವಾಂಸರು ಜೆ. ಕೃಷ್ಣಮೂರ್ತಿಯವರ ಮಾತುಗಳು ಪಾರಂಪರಿಕ ಚಿಂತನೆಗಳ ಮೇಲೆ ಹೊಸ ಹೊಳಹು ಚೆಲ್ಲಿದೆ ಎಂಬ ಮೆಚ್ಚುಗೆಯನ್ನು ಹೊಂದಿದ್ದರು.
ಬಹಳಷ್ಟು ವಿಜ್ಞಾನಿಗಳು ಮತ್ತು ಮಾನವಶಾಸ್ತ್ರಜ್ಞರ ಸಿದ್ಧಾಂತಗಳನ್ನು ಒರೆಗಲ್ಲಿಗೆ ಹಚ್ಚಿದ ಕೃಷ್ಣಮೂರ್ತಿ ಆ ಮಹನೀಯರೊಡನೆ ಎಳೆ ಎಳೆಯಾಗಿ ವಿಚಾರ ಮಂಡನೆ ನಡೆಸಿ, ಅವರುಗಳು ತಮ್ಮ ಸಿದ್ಧಾಂತಗಳ ಪ್ರತಿಪಾದನೆಯ ಭರದಲ್ಲಿ ಆ ಸಿದ್ಧಾಂತಗಳಲ್ಲಿರುವ ಮಿತಿಗಳನ್ನು ಕಡೆಗಾಣಿಸಿರುವುದರ ಬಗೆಗೆ ಮನವರಿಕೆ ಮಾಡಿಕೊಡುವುದರಲ್ಲಿ ಯಶಸ್ವಿ ಎನಿಸುವುದರ ಜೊತೆಗೆ ಅವರುಗಳ ಗೌರವವನ್ನು ಕೂಡಾ ಸಂಪಾದಿಸಿದ್ದರು.
ಜೆ. ಕೃಷ್ಣಮೂರ್ತಿಯವರು 17ನೇ ಫೆಬ್ರವರಿ 1986ರಲ್ಲಿ ಈ ಲೋಕವನ್ನಗಲಿದರು. ಕೃಷ್ಣಮೂರ್ತಿಯವರ ಚಿಂತನೆಗಳು ಸಾಹಿತ್ಯರೂಪಕವಾಗಿ ಅವರ ವಿದಾರ್ಥಿ, ಶಿಕ್ಷಕ, ವಿಜ್ಞಾನಿ, ಧಾರ್ಮಿಕವರ್ಗದ ವಿವಿಧ ಜನರೊಡನೆ ನಡೆಸಿದ ಚರ್ಚೆಗಳಲ್ಲಿ, ಬರಹಗಳಲ್ಲಿ, ರೇಡಿಯೋ ದೂರದರ್ಶನ ರೂಪಕಗಳಲ್ಲಿ, ಪತ್ರಗಳಲ್ಲಿ ವಿಶ್ವದಾದ್ಯಂತ ಸಂಚಲಿತದಲ್ಲಿವೆ.
ಈ ಮಹಾನ್ ತತ್ವಜ್ಞಾನಿಗಳ ಚೇತನಕ್ಕೆ ನಮ್ಮ ನಮನ.
No comments:
Post a Comment